Home Blog

ಮೃತ ಯುವತಿಯ ಕುಟುಂಬಕ್ಕೆ ಪರಿಹಾರ ನೀಡಲು ಮನವಿ

ವಿಜಯಸಾಕ್ಷಿ ಸುದ್ದಿ, ಗದಗ : ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿ ವೀರಾಪುರ ಓಣಿಯ ಅಂಜಲಿ ಹತ್ಯೆಯು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

ಅಂಜಲಿ ಅಂಬಿಗೇರ ಕೊಲೆ ಖಂಡನೀಯವಾಗಿದ್ದು, ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ಯುವತಿಯ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಗದುಗಿನ ದಲಿತ ಮಿತ್ರ ಮೇಳದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕುಮಾರ್ ನಡಗೇರಿ, ಉಪಾಧ್ಯಕ್ಷರು ವೆಂಕಟೇಶ್ ದೊಡಮನಿ, ಹುಲುಗಪ್ಪ ವಾಲ್ಮೀಕಿ, ಪ್ರದೀಪ್ ನಡಿಗೇರಿ, ಅಭಿಷೇಕ್ ಹಾದಿಮನಿ, ಮಣಿಕಂಠ ಅಕ್ಷಿಮನಿ, ಸಚ್ಚಿದಾನಂದ ನಡಿಗೇರಿ, ಪರಶುರಾಮ್ ಆಡಿನ, ಬಸವರಾಜ್ ಬನ್ನಿಮರ್ ಅನಿಲ್ ಮುಳ್ಳಾಲ್ ಮುಂತಾದವರಿದ್ದರು.

ವಿವಿಧ ಕಳ್ಳತನದ ಪ್ರಕರಣಗಳಲ್ಲಿ ಪೋಲೀಸರ ಬಲೆಗೆ ಬಿದ್ದ ಕಳ್ಳರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವಿವಿಧ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಕಳ್ಳರನ್ನು ಬಂಧಿಸುವಲ್ಲಿ ಪಟ್ಟಣದ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಎಸ್‌ಪಿ, ಸಿಪಿಐ ಇವರ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕಳ್ಳರನ್ನು ಬಲೆಗೆ ಬೀಳಿಸಿದ್ದಾರೆ.

ತಾಲೂಕಿನ ಶಿಗ್ಲಿ ಗ್ರಾಮದ ಮನೆಯ ಬಾಗಿಲು ಮುರಿದು ಅಂದಾಜು 1.80 ಲಕ್ಷ ರೂ ಬೆಲೆಯ ಬಂಗಾರದ ಆಭರಣ ಹಾಗೂ ಒಂದು ಲಕ್ಷ ರೂ ನಗದು ಹಣವನ್ನು ಕಳ್ಳರು ದೋಚಿದ್ದರು. ಹಾವೇರಿ ಜಿಲ್ಲೆಯ ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯ ನೀರಲಗಿ ಗ್ರಾಮದಲ್ಲಿ ಬೈಕ್ ಕಳ್ಳತನ, ಶಿಗ್ಗಾಂವ ತಾಲೂಕಿನ ಮಂಡಿಗನಾಳ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿದ್ದರ ಬಗ್ಗೆ ಖಚಿತ ಮಾಹಿತಿ ಪಡೆದು, ವಿಶೇಷ ತಂಡ ರಚಿಸಿ ಬಸವರಾಜ ಮೋಡಿಕೇರ, ಶೇಖಪ್ಪ ಮೋಡಿಕೇರ, ಮಂಜುನಾಥ ಮೋಡಿಕೇರ, ನಾಗರಾಜ ಮೋಡಿಕೇರ ಎಂಬ ನಾಲ್ವರು ಕಳ್ಳರನ್ನು ಪತ್ತೆ ಮಾಡಿ ಬಂಧಿಸಿ ಅವರಿಂದ ಕಳುವು ಮಾಡಿದ ಹಣ, ಒಡವೆ, ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಸದರಿ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಶಿರಹಟ್ಟಿ ಸಿಪಿಐ ನಾಗರಾಜ ಮಾಡಳ್ಳಿ, ಲಕ್ಷ್ಮೇಶ್ವರ ಪಿಎಸ್‌ಐ ಈರಪ್ಪ ರಿತ್ತಿ, ಅಪರಾಧ ವಿಭಾಗದ ಪಿಎಸ್‌ಐ ಚನ್ನಬಸವ ಬಬಲಿ, ಎಎಸ್‌ಐ ಎಮ್.ಎ. ಮೌಲ್ವಿ, ಗುರು ಬೂದಿಹಾಳ, ಸಿಬ್ಬಂದಿಗಳಾದ ಆರ್.ಎಸ್. ಯರಗಟ್ಟಿ, ಎಮ್.ಎ. ಶೇಖ, ಎಮ್.ಎಸ್. ಬಳ್ಳಾರಿ, ಗಣೇಶ ಗ್ರಾಮಪುರೋಹಿತ, ಎಚ್.ಐ. ಕಲ್ಲಣ್ಣನವರ, ಪಾಂಡುರಂಗರಾವ್, ಮಧುಚಂದ್ರ ಧಾರವಾಡ, ಸಂಜು ಕೊರಡೂರ, ಅಪ್ಪಣ್ಣ ರಾಠೋಡ, ಹನುಮರೆಡ್ಡಿ ತಾರಿಕೊಪ್ಪ ಮುಂತಾದವರಿದ್ದರು. ಸಿಬ್ಬಂದಿಗಳ ಕಾರ್ಯಕ್ಕೆ ಎಸ್‌ಪಿ ಬಿ.ಎಸ್. ನೇಮಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಳಿನ ಭಾಗ್ಯೋದಯಕ್ಕೆ ಧರ್ಮವೇ ದಿಕ್ಸೂಚಿ:ಶ್ರೀರಂಭಾಪುರಿ ಜಗದ್ಗುರು

0
ವಿಜಯಸಾಕ್ಷಿ ಸುದ್ದಿ, ಕಾಳಗಿ (ಕಲಬುರಗಿ) : ಬದುಕು ಭಗವಂತ ಕೊಟ್ಟ ಅಮೂಲ್ಯ ಕೊಡುಗೆ. ಅರಿವು-ಆದರ್ಶಗಳ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಜೀವನ ಉನ್ನತಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನಗಳು ಸಕಲರ ಬಾಳಿಗೂ ದಾರಿದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
  ಅವರು ಶುಕ್ರವಾರ ಕಾಳಗಿ ಶ್ರೀ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
  ಬಾಳಿನ ಭಾಗ್ಯೋದಯಕ್ಕೆ ಧರ್ಮವೇ ದಿಕ್ಸೂಚಿ. ಧರ್ಮದ ದಾರಿ ಮೀರಿ ನಡೆದರೆ ಅಪಾಯ ತಪ್ಪಿದ್ದಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ, ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಅವರದು. ನೊಂದವರ, ಬೆಂದವರ ಧ್ವನಿಯಾಗಿ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾçಂತಿಗೈದು ಜನ ಕಲ್ಯಾಣವನ್ನು ಉಂಟು ಮಾಡಿದ್ದನ್ನು ಮರೆಯಲಾಗದು ಎಂದರು.
ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಧರ್ಮ ಬೇಕಾಗಿದೆ. ಅಶಾಂತಿ-ಅಜ್ಞಾನದಿಂದ ತತ್ತರಿಸುತ್ತಿರುವ ಜನ ಸಮುದಾಯಕ್ಕೆ ಧರ್ಮವೊಂದೇ ಆಶಾಕಿರಣ. ವೀರಶೈವ ಧರ್ಮ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಅನ್ವಯವಾಗುತ್ತವೆ ಎಂದರು. ನೇತೃತ್ವ ವಹಿಸಿದ ಹೊನ್ನಕಿರಣಗಿ ಚಂದ್ರಗುಂಡ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಕಾಳಗಿ ಪಟ್ಟಣದ ಇತಿಹಾಸದಲ್ಲಿ ಇದು ಅವಿಸ್ಮರಣೀವಾದ ಸಮಾರಂಭ. ಪ್ರಪ್ರಥಮವಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಆಗಮಿಸಿರುವುದು ಈ ಭಾಗದ ಭಕ್ತರ ಸೌಭಾಗ್ಯವೆಂದರು.
ಸಮಾರಂಭದಲ್ಲಿ ಭರತನೂರ ಚಿಕ್ಕಗುರುನಂಜೇಶ್ವರ ಸ್ವಾಮಿಗಳು, ಮಂಗಲಗಿ ತೆಂಗಳಿ ಶಾಂತಸೋಮನಾಥ ಶಿವಾಚಾರ್ಯರು, ಹೊಸಳ್ಳಿ ಸಿದ್ಧಲಿಂಗ ಶಿವಾಚಾರ್ಯರು, ರಟಕಲ್ ರೇವಣಸಿದ್ಧ ಶಿವಾಚಾರ್ಯರು, ಬಣಮಗಿ ರಾಚೋಟೇಶ್ವರ ಶಿವಾಚಾರ್ಯರು, ಡೊಣ್ಣೂರ ಪ್ರಶಾಂತ ದೇವರು, ಕಾಳಗಿ ನೀಲಕಂಠ ಮರಿದೇವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಶಿವರಾಜ ಪಾಟೀಲ ಗೋಣಗಿ, ಸ್ವಾಗತ ಸಮಿತಿ ಅಧ್ಯಕ್ಷ ನಾಗರಾಜ ಚಿಕ್ಕಮಠ, ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿನಾಥ ಪಾಟೀಲ, ಕಲಬುರ್ಗಿ ಶಿವಶರಣಪ್ಪ ಸೀರಿ ಮೊದಲಾದ ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಭಕ್ತ ಕುಂಬಾರ ಸಮಾರಂಭವನ್ನು ನಿರೂಪಿಸಿದರು.
ಸಮಾರಂಭಕ್ಕೂ ಮುನ್ನ ಕಾಳಗಿ ಪಟ್ಟಣದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಇತಿಹಾಸ ಪ್ರಸಿದ್ಧ ಪ್ರಾಚೀನ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಭೇಟಿಯಿತ್ತು ಪುಷ್ಪಾರ್ಚನೆ, ಪೂಜೆ ಸಲ್ಲಿಸಿದರು.
ಅಸ್ಪೃಶ್ಯರ ಉದ್ಧಾರ, ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ, ರೈತ ಸಮುದಾಯದ ಹಿತಕ್ಕಾಗಿ ಸದಾ ಶ್ರಮಿಸಿ ಜೀವ ಸಂಕುಲವನ್ನು ಸಂರಕ್ಷಿಸಿದ್ದಾರೆ. ದೇಶಕ್ಕೊಂದು ಸಂವಿಧಾನ ಇರುವಂತೆ ಧರ್ಮಕ್ಕೊಂದು ನೀತಿ ಸಂಹಿತೆಯಿದೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳು ಜೀವನದ ಉನ್ನತಿಗೆ ಅಡಿಪಾಯವಾಗಿವೆ.
ಅಂಥ ತತ್ವ ಸಿದ್ಧಾಂತಗಳನ್ನು ಅರಿತು ಬಾಳುವುದರಲ್ಲಿ ಮಾನವನ ಶ್ರೇಯಸ್ಸಿದೆ. ಕಾಳಗಿ ತಾಲೂಕಾ ಕೇಂದ್ರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಭಕ್ತಿ ಶ್ರದೆಯಿಂದ ಭವ್ಯ ಸಮಾರಂಭ ಹಮ್ಮಿಕೊಂಡಿರುವುದು ಸಂತೋಷ ತಂದಿದೆ ಎಂದು ರಂಭಾಪುರಿ ಶ್ರೀಗಳು ನುಡಿದರು.

ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬೆಸ್ಟ್ ಶಾಟ್ ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗದಗ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ವಿದ್ಯಾರ್ಥಿಗಳು ಸಾಧನೆ ಮೆರೆದಿದ್ದಾರೆ.

10 ಮೀ. ಏರ್ ರೈಫಲ್ ಸಬ್ ಯುಥ್ ವೈಯಕ್ತಿಕ ವಿಭಾಗದಲ್ಲಿ ಸಂಜನಾ ಚಿಕ್ಕನಗೌಡರ ಕಂಚಿನ ಪದಕ, ಟೀಮ್ ವಿಭಾಗದಲ್ಲಿ ಮನ್ವಿತಾ ಬಡ್ನಿ ಬಂಗಾರದ ಪದಕ, ಅಮೃತಾ ಕಬಾಡಿ ಬಂಗಾರದ ಪದಕ, ಸಂಜನಾ ಚಿಕ್ಕನಗೌಡರ ಬೆಳ್ಳಿ ಪದಕ, ವೈಯಕ್ತಿಕ ವಿಭಾಗದಲ್ಲಿ ತಹೀಮ್ ಗೋನಾಳ ಬೆಳ್ಳಿ ಪದಕ, ಬಾಲಕರ ಟೀಮ್ ಸಬ್‌ಯುಥ್ ವಿಭಾಗದಲ್ಲಿ ಆದೀಶ ಮೆಣಸಿನಕಾಯಿ ಬೆಳ್ಳಿ ಪದಕ, ಶ್ರೇಯಸ್ ಬಡಿಗೇರ ಬೆಳ್ಳಿ ಪದಕ, ತಹೀಮ್ ಗೋನಾಳ ಬೆಳ್ಳಿ ಪದಕ ಪಡೆದಿದ್ದಾರೆ.

10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಸಿದ್ದಾರ್ಥ ಎಂ. ಬಡ್ನಿ ಬಂಗಾರದ ಪದಕ, ರಿಯಾನ್ ಎಂ.ಹಮ್ಮೀದ ಬೆಳ್ಳಿ ಪದಕ ಪಡೆದಿದ್ದಾರೆ. ಸಬ್‌ಯುಥ್ ಟೀಮ್ ಪಿಸ್ತೂಲ್ ವಿಭಾಗದಲ್ಲಿ ಸಿದ್ದಾರ್ಥ ಬಡ್ನಿ ಬಂಗಾರದ ಪದಕ, ಸುಶಾಂತ ಉಗಲಾಟ ಬಂಗಾರದ ಪದಕ, ರಿಯಾನ್ ಎಂ. ಹಮ್ಮೀದ ಬಂಗಾರದ ಪದಕವನ್ನು ಪಡೆದಿದ್ದಾರೆ. ಏರ್ ಪಿಸ್ತೂಲ್ ಸೀನಿಯರ್ ಟೀಮ್ ವಿಭಾಗದಲ್ಲಿ (ಕೋಚ್) ಬಸವರಾಜ ಹೊಂಬಾಳಿ, ವಿನಾಯಕ ಪವಾರ, ಹುಸೇನ ನದಾಫ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ತರಬೇತುದಾರರಾದ ಬಸವರಾಜ ಹೊಂಬಾಳಿ ವೈಯಕ್ತಿಕ ಸೀನಿಯರ್ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಕಾಡೆಮಿಯ ಅಧ್ಯಕ್ಷರಾದ ಮುರುಘರಾಜೇಂದ್ರ ಎಂ.ಬಡ್ನಿ ಹಾಗೂ ಪ್ರತಿಭಾ ಬಡ್ನಿ, ಪಾಲಕರಾದ ನಿವೃತ್ತ ಸೈನಿಕ ವಿಜಯ ಬಡಿಗೇರ ಶೂಟರ್‌ಗಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅಭಿನಂದಿಸಿದರು.

ಹಲವು ಮನೆಗಳಿಂದ ದೂರವಾದ `ಗೃಹಜ್ಯೋತಿ’

0

ವಿಜಯಸಾಕ್ಷಿ ಸುದ್ದಿ, ಗದಗ : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಈವರೆಗೂ ಲಾಭ ಪಡೆದು ಸರ್ಕಾರವನ್ನು ಹೊಗಳಿ ಬೀಗಿದ್ದರು. ಪ್ರತೀ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಉಳಿತಾಯವಾದರೆ, ಅದೇ ಹಣವನ್ನು ಬೇರೆ ಕಾರ್ಯಗಳಿಗೆ ವಿನಿಯೋಗಿಸಬಹುದು ಎಂದು ಬಡ ಕುಟುಂಬಗಳ ಮಹಿಳೆಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ, ದಿನಕಳೆದಂತೆ, `ಗೃಹಜ್ಯೋತಿ’ಯ ಬೆಳಕು ಮಂಕಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಇಷ್ಟು ದಿನ 100 ರೂ ಒಳಗೆ ಬರುತ್ತಿದ್ದ ಬಿಲ್ ಇದೀಗ ಏಕಾಏಕಿ 400-500 ರೂ ಬರತೊಡಗಿದ್ದು, ಉಚಿತ ಎಂದು ಹೇಳಿ ಸರ್ಕಾರ ನಮಗೆ ಮೋಸ ಮಾಡುತ್ತಿದೆ ಎಂದು ಕಿಡಿಕಾರತೊಡಗಿದ್ದಾರೆ.

ಹೆಸ್ಕಾಂ ನೀಡಿದ ಬಿಲ್ ನೋಡಿ ಬಡ ಮಹಿಳೆಯ ಕಂಗಾಲಾಗಿದ್ದಾರೆ. 200 ಯುನಿಟ್ ಉಚಿತ ವಿದ್ಯುತ್ ಯೋಜನೆ ವಿರುದ್ಧ ಗದಗ ನಗರದ ಗಂಗಿಮಡಿ ಬಡಾವಣೆಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

200 units free electricity scheme

ಈ ಬಾಡವಣೆಯಲ್ಲಿ ಕಡು ಬಡವರೇ ಹೆಚ್ಚಾಗಿ ವಾಸಿಸುತ್ತಿದ್ದು, ದುಡಿದರಷ್ಟೇ ಬದುಕು ಎನ್ನುವ ಸ್ಥಿತಿಯಿದೆ. 200 ಯುನಿಟ್ ಉಚಿತ ವಿದ್ಯುತ್ ಯೋಜನೆ ಆರಂಭದಲ್ಲಿ ಈ ಬಡ ಕುಟುಂಬಗಳಲ್ಲಿ ಖುಷಿ ತಂದಿತ್ತು.

ಯೋಜನೆ ಆರಂಭದಲ್ಲಿ 20-30 ರೂಪಾಯಿ ವಿದ್ಯುತ್ ಬಿಲ್ ಬರುತ್ತಿತ್ತು. ಆದರೆ, ಈಗ ಬಹುತೇಕ ಮನೆಗಳಿಗೆ ದುಪ್ಪಟ್ಟು ವಿದ್ಯುತ್ ಬಿಲ್ ಬರತೊಡಗಿದೆ. ಕಡು ಬಡವರಾದ ನಾವು ಪ್ರತಿ ತಿಂಗಳು 400,-600 ರೂ ಬಿಲ್ ತುಂಬುವುದು ಹೇಗೆ ಎಂಬ ಚಿಂತೆ ವ್ಯಕ್ತಪಡಿಸುತ್ತಿದ್ದಾರೆ.

200 units free electricity scheme

ಸದರಿ ವಿದ್ಯುತ್ ಬಿಲ್ ನೋಡಿ ಬಡ ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಚುನಾವಣೆಯಲ್ಲಿ ಭರವಸೆ ನೀಡಿ ಕಾಂಗ್ರೆಸ್ ಮೋಸ ಮಾಡಿದೆ. ಬಡವರ ಬದುಕಿನ ಜೊತೆ ಆಟವಾಡಬಾದು ಎಂದು ಬಹುತೇಕ ಮಹಿಳೆಯರು ಅಪಸ್ವರವೆತ್ತಿದ್ದಾರೆ. ಗದುಗಿನಲ್ಲಿ 200 ಯುನಿಟ್ ಉಚಿತ ವಿದ್ಯುತ್ ಯೋಜನೆ ಹಳ್ಳ ಹಿಡಿದಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಬಡಾವಣೆಯ ಬಹುತೇಕ ಮನೆಗಳಲ್ಲಿ ಟಿವಿ, ಫ್ರಿಡ್ಜ್ಗಳಿಲ್ಲ. ಪುಟ್ಟ ಪುಟ್ಟ ಮನೆಗಳಲ್ಲಿ ಎರಡು, ಮೂರು ವಿದ್ಯುತ್ ಬಲ್ಬ್ಗಳು ಮಾತ್ರ ಬಳಕೆಯಾಗುತ್ತವೆ. ಹೀಗಿದ್ದರೂ 400ರಿಂದ 600 ರೂ ಬಿಲ್ ಬರಲಾರಂಭಿಸಿದ್ದು, ಸಹಜವಾಗಿಯೇ ಚಿಂತೆಗೀಡುಮಾಡಿದೆ.

ಹೀಗೆ ಏಕಾಏಕಿ ನಿಗದಿಗಿಂತ ಹೆಚ್ಚು ಬಿಲ್ ಬರಲು ಕಾರಣವೇನು, ಉಚಿತ ವಿದ್ಯುತ್ ಯೋಜನೆಯ ಲಾಭ ಸಿಗದಿರುವುದೇಕೆ ಎಂಬುದರ ಕುರಿತು ಹೆಸ್ಕಾಂ ಅಧಿಕಾರಿಗಳೇ ಸೂಕ್ತ ಮಾಹಿತಿ, ಪರಿಹಾರ ಸೂಚಿಸಿ, ಈ ಬಡಾವಣೆಯ ಬಡ ಮಹಿಳೆಯರ ಗೊಂದಲ, ಆತಂಕಗಳನ್ನು ದೂರ ಮಾಡುತ್ತಾರಾ ಕಾದು ನೋಡಬೇಕಿದೆ.

ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದರೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮನೆ ಮಾಲೀಕರ ಗಮನಕ್ಕೂ ತಾರದೇ ಬಿಲ್ ಕಟ್ಟಿಲ್ಲ ಎಂದು ಮನೆಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗುತ್ತಿದೆ. ಜನ ಪ್ರತಿನಿಧಿಗಳು ಬರಲಿ, ಅವರನ್ನೇ ವಿಚಾರಿಸುತ್ತೇವೆ, ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ನಡೆದುಕೊಂಡರೆ ಸುಮ್ಮನಿರುವುದಿಲ್ಲ, ಬಡವರ ಬದುಕಿನೊಂದಿಗೆ ಆಟವಾಡಿದರೆ ಸಂದರ್ಭ ಬಂದಾಗ ತಕ್ಕ ಪಾಠ ಕಲಿಸುತ್ತೇವೆ ಎಂದು ಮಹಿಳೆಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ರೋಣ: ರಥದ ಚಕ್ರಕ್ಕೆ ಸಿಲುಕಿ ಇಬ್ಬರು ಭಕ್ತರ ಸಾವು

ಕೆವಿಜಿ ಬ್ಯಾಂಕ್‌ನ ಪಿಗ್ಮಿ ಕಲೆಕ್ಟರ್ ಲಿಂಗನಗೌಡರ, ಮತ್ತೊಬ್ಬ ಭಕ್ತ ಸಾವು

ಗದಗ: ರಥೋತ್ಸವದ ವೇಳೆ ಚಕ್ರದಡಿ ಸಿಲುಕಿ ಇಬ್ಬರು ಭಕ್ತರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ದುರ್ಘಟನೆ ಶನಿವಾರ ಸಂಜೆ ಜರುಗಿದೆ.

ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಇಂದು ನಡೆದ ವೀರಭದ್ರೇಶ್ವರ ಜಾತ್ರೆಯ ರಥೋತ್ಸವದ ವೇಳೆ ಈ ಘಟನೆ ನಡೆದಿದೆ.

ಮೃತರನ್ನು ರೋಣದ ಕೆವಿಜಿ ಬ್ಯಾಂಕ್‌ನ ಪಿಗ್ಮಿ ಕಲೆಕ್ಟರ್ ಆಗಿದ್ದ ಮಲ್ಲನಗೌಡ ಲಿಂಗನಗೌಡರ (52) ಹಾಗೂ ಕೈ ಮೇಲೆ ಹಚ್ಚಿ ಹಾಕಿಸಿಕೊಂಡಿರುವ ಮತ್ತೊಬ್ಬ ಮೃತನ ಹೆಸರು ಹಾಗೂ ವಿಳಾಸವನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ಪ್ರತಿವರ್ಷದಂತೆ ಜರುಗುವ ಅದ್ಧೂರಿ ವೀರಭದ್ರೇಶ್ವರ ಜಾತ್ರೆ ಇಂದು ಕೂಡ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಜರುಗಿದೆ.

ರಥ ಎಳೆಯುವ ವೇಳೆ ಭಕ್ತರು ಎಸೆದ ಉತ್ತತ್ತಿ ಆರಿಸುವಾಗ ರಥದ ಚಕ್ರದಡಿ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಓರ್ವ ಭಕ್ತನ ತಲೆ ಮೇಲೆ ಚಕ್ರ ಹತ್ತಿಳಿದ ಪರಿಣಾಮ ತಲೆಬುರುಡೆ ಅಪ್ಪಚ್ಚಿಯಾಗಿದೆ.

ಕ್ಷಣಾರ್ಧದಲ್ಲಿ ನಡೆದ ಈ ಘಟನೆಯಿಂದ ನೆರೆದಿದ್ದ ಭಕ್ತರು ಬೆಚ್ಚಿದರು.

ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶ್ರೀ ಸಿದ್ದರಾಮ ಶ್ರೀಗಳು ಊರ್ವಿ ಸಂಕನೂರ ಅವರಿಗೆ ಸನ್ಮಾನ

0

urvi sankanur
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರ ಮೊಮ್ಮಗಳು, ಡಾ. ಪ್ರಕಾಶ ಸಂಕನೂರ-ಶ್ವೇತಾ ಸಂಕನೂರ ಅವರ ಪುತ್ರಿ ಊರ್ವಿ ಸಂಕನೂರ ಸಿಬಿಎಸ್‌ಇ ಪಠ್ಯಕ್ರಮದ 10ನೇ ವರ್ಗದಲ್ಲಿ ಶೇ 96.8 ಅಂಕ ಗಳಿಸಿ ಅನುಪಮ ಸಾಧನೆಗೈದಿದ್ದಕ್ಕಾಗಿ ತೋಂಟದಾರ್ಯ ಪೀಠದ ಜಗದ್ಗುರು ಶ್ರೀ ಸಿದ್ದರಾಮ ಶ್ರೀಗಳು ಊರ್ವಿ ಸಂಕನೂರ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.

ಆರ್.ಎಸ್. ಬುರಡಿಯವರ ನೇತೃತ್ವದಲ್ಲಿ ಪಠ್ಯಪುಸ್ತಕ ವಿತರಣೆ

ವಿಜಯಸಾಕ್ಷಿ ಸುದ್ದಿ, ಗದಗ : 2024-25ನೇ ಶೈಕ್ಷಣಿಕ ವರ್ಷ ಆರಂಭಕ್ಕೆ ಇನ್ನೂ ಕೆಲವು ದಿನಗಳು ಬಾಕಿ ಇದ್ದರೂ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗದಗ ಶಹರದಲ್ಲಿ ಪಠ್ಯಪುಸ್ತಕಗಳ ವಿತರಣಾ ಕಾರ್ಯ ಜರುಗಿತು.

ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿಯವರ ನೇತೃತ್ವದಲ್ಲಿ ಪ್ರಾಥಮಿಕ ವಿಭಾಗದ ಶಿಕ್ಷಣ ಸಂಯೋಜಕರಾದ ಈಶಪ್ಪ ಮಡಿವಾಳರ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ವಿತರಣೆ ಮಾಡುತ್ತಿದ್ದಾರೆ.

ಈಗಾಗಲೇ ಪಠ್ಯಪುಸ್ತಕಗಳ ವಿತರಣಾ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು, ಗದಗ ಶಹರದಲ್ಲಿ ವಿಶೇಷ ಕಾಳಜಿ ವಹಿಸಿ ಶೈಕ್ಷಣಿಕ ವರ್ಷದ ಆರಂಭಕ್ಕೆ ಶಿಕ್ಷಕರಿಗೆ ಪೂರ್ವತಯಾರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಪಠ್ಯಪುಸ್ತಕಗಳನ್ನು ವಿತರಿಸಲಾಗುತ್ತಿದೆ ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈಭವದ ಶ್ರೀ ಅನ್ನದಾನೇಶ್ವರ ಮಹಾ ರಥೋತ್ಸವ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಅಬ್ಬಿಗೇರಿಯಲ್ಲಿ ಹಾಲಕೆರೆ ಶ್ರೀ ಗುರು ಅನ್ನದಾನೇಶ್ವರರ ಶಾಖಾ ಮಠದ ಮಹಾ ರಥೋತ್ಸವವು ಸಡಗರ ಸಂಭ್ರಮದಿಂದ ವೈಭವಯುತವಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

ಸಂಜೆ 6ಕ್ಕೆ ಶ್ರೀ ಅನ್ನದಾನೇಶ್ವರ ಮಹಾರಥೋತ್ಸವಕ್ಕೆ ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿಯವರು ಚಾಲನೆ ನೀಡಿದರು. ಶಾಖಾ ಶಿವಯೋಗ ಮಂದಿರ ನಿಡಗುಂದಿಕೊಪ್ಪದ ಅಭಿನವ ಚನ್ನಬಸವ ಸ್ವಾಮೀಜಿ, ಬನವಾಸಿಯ ಶಿವಲಿಂಗ ದೇಶಿಕರು ಸಮ್ಮುಖ ವಹಿಸಿದ್ದರು. ಗ್ರಾಮದ ಸುತ್ತಮುತ್ತಲಿನ ಊರುಗಳಿಂದ ಡೊಳ್ಳು, ಭಜನೆ ಸಕಲ ವಾದ್ಯ ವೈಭವದೊಂದಿಗೆ ಭಕ್ತರು ಭಾಗವಹಿಸಿದ್ದರು.

ಮರವಣಿಗೆಯುದ್ದಕ್ಕೂ ಕರಡಿ ಮಜಲು, ಜಾಂಜ್ ಮೇಳ, ಭಜನೆ ಮುಂತಾದವುಗಳು ಜಾತ್ರೆಯ ಸಡಗರವನ್ನು ಹೆಚ್ಚಿಸಿದ್ದವು. 150ಕ್ಕೂ ಹೆಚ್ಚು ಸುಮಂಗಲೆಯರು ಆರತಿಯನ್ನು ಹಿಡಿದು ತೇರಿನ ಹಿಂದೆ ಸಾಗಿದರು.

ಸಂಜೆಯಾಗುತ್ತಿದ್ದಂತೆ ಹಾಲಕೆರೆಯ ಶ್ರೀಮಠದ ಪರಮಪೂಜ್ಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಮತ್ತು ಹರಗುರು ಚರ ಮೂರ್ತಿಗಳು, ಗಣ್ಯರು ರಥದ ಗಾಲಿಗಳಿಗೆ ಪೂಜೆ ನೆರವೇರಿಸಿದ ನಂತರ ಸೇರಿದ್ದ ಸಹಸ್ರಾರು ಭಕ್ತರು ತೇರನ್ನು ಎಳೆದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಚಲಿಸಿದ ರಥವು ಮರಳಿ ಸ್ವಸ್ಥಾನ ಸೇರಿದಾಗ ಸಂತೋಷದಿಂದ ಚಪ್ಪಾಳೆ ತಟ್ಟಿ ಭಕ್ತಿಭಾವ ಮೆರದರು.

ಜೂನ್ 1ರಿಂದ ಹಜರತ್ ರಹಿಮಾನ್ ಶ್ಯಾವಲಿ ಶರಣರ ಉರುಸು

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಜೂನ್ 1ರಿಂದ ಪಟ್ಟಣದಲ್ಲಿ ಐತಿಹಾಸಿಕ ದರಗಾದ ಹಜರತ್ ರೈಮಾನ್ ಶಾವಲಿ ಶರಣರ ಉರುಸು ಪ್ರಾರಂಭವಾಗಲಿದೆ ಎಂದು ದರಗಾದ ಶರಣರಾದ ಮಂಜುರ್ ಹುಸೇನ್ ಶಾವಲಿ ಹೇಳಿದರು.

ಪಟ್ಟಣದ ದರಗಾದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.

ಜೂನ್ 1ರಂದು ಸಂಜೆ ದರಗಾದಿಂದ ಮೆರವಣಿಗೆ ಮೂಲಕ ಕೊಚಲಾಪುರ ಗ್ರಾಮದಲ್ಲಿ ಇರುವ ಲಕ್ಷ್ಮಮ್ಮನ ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ನಂತರ ನರೇಗಲ್ಲಿಗೆ ಕರೆದುಕೊಂಡು ಬರಲಾಗುತ್ತಿದೆ. ಪಟ್ಟಣದ ತೆಗ್ಗಿನಕೇರಿ ಓಣಿಯ ಮುಜಾವರ ಮನೆಯಿಂದ ಗಂಧದ ಮೆರವಣಿಗೆ ಹೊರಡುವುದು, ಜೂನ್ 2ರ ಮುಂಜಾನೆ 6ರಿಂದ 10 ಗಂಟೆಯವರೆಗೆ ಸಾಧು-ಸಂತರಿಗೆ ಅನ್ನ ಸಂತರ್ಪಣೆ, ಸಂಜೆ ಮೆರವಣಿಗೆ ಮೂಲಕ ಲಕ್ಷ್ಮಮ್ಮನ ಪಲ್ಲಕ್ಕಿ ಮರಳಿ ಕೊಚಲಾಪುರ ಗ್ರಾಮಕ್ಕೆ ಕಳಿಸುವ ಜೊತೆಗೆ ಪಟ್ಟಣದಲ್ಲಿ ಮಂಜುರ್ ಹುಸೇನ್ ಶಾವಲಿ ಶರಣರ ಮೆರವಣಿಗೆ ನಡೆಯುತ್ತದೆ. ರಾತ್ರಿ ದೀಪೋತ್ಸವ, ಮದ್ದು ಹಾರಿಸುವುದು ಮತ್ತು ಧರ್ಮ ಪದ್ಧತಿಯಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜೂನ್ 3 ರಂದು ಮರಿ ಉರುಸು ನಡೆಯಲಿದೆ ಎಂದರು.

ಸಭೆಯಲ್ಲಿ ರುದ್ರಮನಿಶ ಶಿವಾಚಾರ್ಯ, ಗಂಗಾಧರ ಕೊಟಗಿ, ಎ.ಎ. ನವಲಗುಂದ, ಬಿ.ಕೆ. ಪೊಲೀಸ್‌ಪಾಟೀಲ, ನಿಂಗಪ್ಪ ಕಣವಿ, ಶರಣಪ್ಪ ಕುರಿ, ಭೀಮಣ್ಣ ಕಿಟಗೇರಿ, ಕಲ್ಮೇಶ ತೊಂಡಿಹಾಳ, ನಜೀರ್ ಸಾಬ್ ಇಟಗಿ, ಡಾ. ಶಿವರಾಜ ಗುರಿಕಾರ, ನಿಂಗಪ್ಪ ಚಲವಾದಿ, ಕಳಕಪ್ಪ ಹತ್ತಿಕಟಗಿ, ಮುತ್ತಣ್ಣ ಹಡಪದ, ಸುರೇಶ ಬಾಗಲಿ, ಶೇಕಪ್ಪ ಕೆಂಗಾರ, ಮೈಲಾರಪ್ಪ ಗೋಡಿ, ಶ್ಯಾಮಣ್ಣ ಹನುಮಸಾಗರ, ಶೇಕಪ್ಪ ಜುಟ್ಲ, ಸಂಗಪ್ಪ ಚಿಮ್ಮನಗಿ, ಸುರೇಶ ಹುನಗುಂದ, ಈರಪ್ಪ ಹುಯಿಲಗೋಳ, ಮೂಕಪ್ಪ ನವಲಗುಂದ, ಅಂದಪ್ಪ ಕುಂಬಾರ, ವೀರಭಸಪ್ಪ ಗೊಡಚಪ್ಪನವರ, ಈರಪ್ಪ ಹಾಲನ್ನವರ, ಯಮನೂರಪ್ಪ ಹುಲಕೊಟಿ ಸೇರಿದಂತೆ ನರೇಗಲ್ಲ ಸುತ್ತಮುತ್ತಲಿನ ಗ್ರಾಮಗಳ ಸರ್ವಧರ್ಮದ ಗುರು-ಹಿರಿಯರು ಹಾಗೂ ಯುವಕರು ಪಾಲ್ಗೊಂಡಿದ್ದರು.

error: Content is protected !!