Home Blog

ಹಾಸನದಲ್ಲಿ ಹಾರ್ಟ್ ಅಟ್ಯಾಕ್ ಗೆ ಮತ್ತೊಂದು ಬಲಿ: ಕುಳಿತಲ್ಲೇ ಪ್ರಾಣಬಿಟ್ಟ ವ್ಯಕ್ತಿ!

ಹಾಸನ:- ಜಿಲ್ಲೆಯ ಬೇಲೂರು ತಾಲ್ಲೂಕಿನ ಹಗರೆ ಗ್ರಾಮದಲ್ಲಿ ಹೃದಯಾಘಾತದಿಂದ ಕುಳಿತಲ್ಲೇ ವ್ಯಕ್ತಿಯೋರ್ವ ಪ್ರಾಣಬಿಟ್ಟ ಘಟನೆ ಜರುಗಿದೆ.

ನಿರ್ವಾಣಿಗೌಡ (63) ಮೃತಪಟ್ಟ ವ್ಯಕ್ತಿ. ಇವರು ಅಡವಿಬಂಟೇನಹಳ್ಳಿ ಗ್ರಾಮದ ನಿವಾಸಿ. ಇಂದು ಮನೆಗೆ ದಿನಸಿ ಸಾಮಾಗ್ರಿಗಳನ್ನು ತರಲು ಬೈಕ್‌ನಲ್ಲಿ ಹಗರೆಗೆ ಮೃತ ನಿರ್ವಾಣಿಗೌಡ ಬಂದಿದ್ದರು. ನ್ಯಾಯಬೆಲೆ ಅಂಗಡಿ ಬಳಿ ಕುಳಿತಿದ್ದಾಗ ಇದ್ದಕಿದ್ದ ಹಾಗೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಈ ಮೂಲಕ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಸಾವಿನ ಪ್ರಕರಣ ಮುಂದುವರಿದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ವೇತನ ಪಾವತಿಗೆ ನರೇಗಾ ಸಿಬ್ಬಂದಿಗಳ ಮನವಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿರುವ ನರೇಗಾ ಸಿಬ್ಬಂದಿಗಳಿಗೆ ಕಳೆದ 6-7 ತಿಂಗಳ ವೇತನ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನ ನರೇಗಾ ಸಿಬ್ಬಂದಿಗಳು ಶನಿವಾರ ತಾ.ಪಂ ಇ.ಓ ಕೃಷ್ಣಪ್ಪ ಧರ್ಮರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಫಕ್ಕೀರೇಶ ಮತ್ತು ಮಂಜುನಾಥ ತಳವಾರ ಮಾತನಾಡಿ, ತಾಲೂಕಿನಲ್ಲಿ ಜಿ.ಪಂ ಮತ್ತು ತಾ.ಪಂ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲ ಸಿಬ್ಬಂದಿಗಳಿಗೆ ಕಳೆದ ಜನವರಿ-2025ರ ಮಾಹೆಯಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಬರುವ ತಿಂಗಳಲ್ಲಿ ವೇತನ ಪಾವತಿಯಾಗದೇ ಇದ್ದಲ್ಲಿ ನೌಕರರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯಲಿದೆ. ಕೂಡಲೇ ಸಿಬ್ಬಂದಿಗಳ ಸಂಬಳಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಇನ್ನು ಎರಡು ದಿನಗಳಲ್ಲಿ ವೇತನ ವಾವತಿಯಾಗದಿದ್ದರೆ ಜುಲೈ 7ರಿಂದ ವೇತನ ಪಾವತಿಯಾಗುವವರೆಗೂ ಅಸಹಕಾರ ಚಳುವಳಿ ಮಾಡಬೇಕೆಂದು ಉಲ್ಲೇಖಿತ ರಾಜ್ಯ ಸಂಘದ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್.ಕೆ. ಕರನಗೌಡ್ರು, ಎಂ.ಎಚ್. ಪಾಟೀಲ್, ಎಸ್.ಎಸ್. ಪಾಟೀಲ್, ಎಸ್.ವಿ. ಕುಲಕರ್ಣಿ, ಹರೀಶ, ಭಾರತಿ, ಶಿಲ್ಪಾ ಲಮಾಣಿ, ಗಂಗಮ್ಮ ಹರಿಜನ, ಶಿವಕ್ಕ ಮಾದರ, ಪರಮೇಶ ಲಮಾಣಿ, ವಿನೋದಕುಮಾರ ಲಮಾಣಿ, ಗೌರಮ್ಮ ಲಮಾಣಿ, ಭೀಮಪ್ಪ ರಾಠೋಡ ಮಂಜುಳಾ ಕಟ್ಟಿಮನಿ ಇದ್ದರು. ಮನವಿ ಸ್ವೀಕರಿಸಿದ ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವದಾಗಿ ಹೇಳಿದರು.

ಹುಲಿ ವೇಷದ ಗಮ್ಮತ್ತು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜಿಟಿಜಿಟಿ ಮಳೆಯ ನಡುವೆಯೂ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಮೊಹರಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಲು ಜನತೆ ಸನ್ನದ್ಧರಾಗಿದ್ದಾರೆ. ಮೊಹರಂ ಹಿಂದೂ-ಮುಸ್ಲಿಂ ಭಾವೈಕ್ಯದ ಹಬ್ಬವಾಗಿ ಇಂದಿಗೂ ತನ್ನ ಆಚರಣೆ, ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಉಳಿಸಿಕೊಂಡು ಬಂದಿದೆ.

ಈ ಹಬ್ಬದ ಆಚರಣೆಗೆ ಒಂದು ವಾರ ಮೊದಲಿಂದಲೇ ಎಲ್ಲೆಡೆ ಮೊಹರಂ ಹುಲಿಗಳದ್ದೇ ಅಬ್ಬರ ಕಂಡು ಬರುತ್ತಿದೆ. ಹಸೇನ-ಹುಸೇನರು ವೀರ ಸ್ವರ್ಗವನ್ನಪ್ಪಿದ ಹಿನ್ನೆಲೆಯಲ್ಲಿ ಆಚರಿಸುವ ಮೊಹರಂ ಹಬ್ಬದ ಸಂದರ್ಭದಲ್ಲಿ ನಂಬಿಕೆಯಂತೆ ಪ್ರಾಯಶ್ಚಿತ್ತ ಮತ್ತು ಹರಕೆಗಾಗಿ ಮೈತುಂಬ ಹುಲಿ ವೇಷ ಬರೆಯಿಸಿಕೊಂಡು ಹಲಗೆ ಬಾರಿಸುತ್ತಾ ನಾದಕ್ಕೆ ತಕ್ಕಂತೆ ಹುಲಿ ಕುಣಿಯುತ್ತಾರೆ. ಅಳ್ಳೊಳ್ಳಿ ಬವ್ವಾ ವೇಷದೊಂದಿಗೆ ಜನರನ್ನು ಆಕರ್ಷಿಸುತ್ತಾ ಕಾಣಿಕೆ ಸ್ವೀಕರಿಸುತ್ತಾರೆ.

ತಮ್ಮ ಮಕ್ಕಳು ಹುಲಿಯಂತೆ ಶಕ್ತಿವಂತ, ಆರೋಗ್ಯವಂತ, ಉಜ್ವಲ ಭವಿಷ್ಯಕ್ಕಾಗಿ ಮತ್ತು ಇಷ್ಟಾರ್ಥ ಸಿದ್ದಿಗಾಗಿ ಅಲೈ ದೇವರಿಗೆ 5, 11, 21 ವರ್ಷ ಅಥವಾ ಜೀವಹುಲಿವೇಷದ ಹರಕೆ ಕಟ್ಟಿಕೊಳ್ಳುತ್ತಾರೆ. ಅದಕ್ಕಾಗಿ ಮೊಹರಂ ಹಬ್ಬದ ವೇಳೆ ಹುಲಿವೇಷ ಬರೆಸಿಕೊಳ್ಳುವ ಸಂಪ್ರದಾಯವಿದೆ. ಹುಲಿ ವೇಷ ಬರೆಯುವಾಗ ಹಳದಿ ಬಣ್ಣದ ಮೇಲೆ ನವಿಲಿನ ಚಿತ್ರ, ಹುಲಿಯ ಚಿತ್ರ, ಕುದುರೆಯ ಚಿತ್ರ, ಹಸ್ತ, ದೇವರ ಛತ್ರಿ, ಮೀನು, ಹಾವಿನ ಚಿತ್ರಗಳನ್ನು ಸೊಗಸಾಗಿ ಬಿಡಿಸಲಾಗುತ್ತದೆ.

ಕೊನೆಯಲ್ಲಿ ವೇಷಕ್ಕೆ ದೃಷ್ಟಿಯಾಗಬಾರದು ಎಂಬ ಉದ್ದೇಶದಿಂದ ಕೈಗೆ ನವಿಲುಗರಿ ಕಟ್ಟಲಾಗುತ್ತದೆ. ಈ ಒಂದೊಂದು ಚಿತ್ರಗಳೂ ಕೂಡ ಅನೇಕ ಸಂದೇಶಗಳನ್ನು ಸಾರುತ್ತವೆ. ಹಬ್ಬದ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಪಟ್ಟಣದಲ್ಲಿ ಹೊಸ ಬಟ್ಟೆ, ದಿನಸಿ ಸೇರಿ ಹಬ್ಬದ ವಸ್ತುಗಳ ಖರೀದಿ ಸಂಭ್ರಮ ಕಂಡುಬಂದಿತು. ಪಟ್ಟಣ ಸೇರಿ ಲಕ್ಷ್ಮೇಶ್ವರ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ 52 ಕಡೆ ನಿಗದಿತ ಸ್ಥಳದಲ್ಲಿ ಪಾಂಜಾಗಳ ಪ್ರತಿಷ್ಠಾನೆ ಮಾಡಲಾಗಿದ್ದು, ಭಾನುವಾರ ಪಾಂಜಾಗಳ ಮೆರವಣಿಗೆ ನಡೆದು ಸಂಜೆ ಹೊಳೆಗೆ ಸಾಗಿಸುವ ಸಂಪ್ರದಾಯ ನೆರವೇರಿಸಲಾಗುತ್ತದೆ.

ಕಂಪನಿಯಿಂದ ಕಾರ್ಮಿಕ ಕಾನೂನು ಉಲ್ಲಂಘನೆ

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಹರಪನಹಳ್ಳಿ ನಗರದ ತಾಲೂಕು ಆಡಳಿತ ಕಚೇರಿಯ ಮುಂಭಾಗದಲ್ಲಿ ತಾಲೂಕಿನ ಕಣಿವಿಹಳ್ಳಿ ಸಮೀಪದ ಜಾಜಿಕಲ್ ಗುಡ್ಡದಲ್ಲಿ ಸುಜಲಾನ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರು ಕಾವಲುಗಾರರ ಮೇಲೆ ಅವಾಚ್ಯ ಪದಗಳಿಂದ ನಿಂದಿಸಿರುವ ಕಂಪನಿಯ ಹಿರಿಯ ಅಧಿಕಾರಿಗಳ ನಡೆಯನ್ನು ಖಂಡಿಸಿ ಶನಿವಾರ ಎಐಸಿಸಿಟಿಯು ವತಿಯಿಂದ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಐಸಿಸಿಟಿಯು ಜಿಲ್ಲಾಧ್ಯಕ್ಷ ಸಂದೇರ ಪರಶುರಾಮ, ಹಗಲು-ರಾತ್ರಿ ಎನ್ನದೆ ಸೆಕ್ಯುರಿಟಿ ಗಾರ್ಡ್‌ ಗಳು ಕಳೆದ 22 ವರ್ಷಗಳಿಂದ ಕಂಪನಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದಾರೆ. ಅವರಿಗೆ ಸರಿಯಾಗಿ ಮೂಲ ವೇತನ ನೀಡದೆ ಕಿರುಕುಳ ನೀಡುತ್ತಿದ್ದು, ಕಾರ್ಮಿಕ ಕಾನೂನು ಉಲ್ಲಂಘನೆ ಮಾಡುತ್ತಿರುವ ಕಂಪನಿಯ ನಡೆ ಖಂಡನೀಯ ಎಂದರು.

ಯಾವುದೋ ಒತ್ತಡಗಳಿಂದ ಸೆಕ್ಯುರಿಟಿ ಗಾರ್ಡ್ಗಳನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲು ನೋಟೀಸ್ ಜಾರಿ ಮಾಡಿದ್ದಾರೆ. ಇವರನ್ನೇ ನಂಬಿಕೊಂಡ ಕುಟುಂಬ ವರ್ಗದವರಿಗೆ ಕಂಪನಿಯು ಅನ್ಯಾಯ ಮಾಡುತ್ತಿದೆ. ಕಂಪನಿಯು ಕಾರ್ಮಿಕ ಕಾನೂನು ರಕ್ಷಣೆ ಮಾಡಬೇಕು ಎಂದರು.

ಮುಖಂಡರಾದ ಗುಳೇದಹಟ್ಟಿ ಸಂತೋಷ, ಹುಲಿಕಟ್ಟಿ ಮೈಲಪ್ಪ, ದ್ವಾರಕೇಶ್, ಸೆಕ್ಯುರಿಟಿ ಗಾರ್ಡ್‌ ಗಳಾದ ಬಸವರಾಜ, ಮೇಘರಾಜ, ಕೆ. ಪರಮೇಶ್ ನಾಯ್ಕ, ಪ್ರಕಾಶ್ ನಾಯ್ಕ ಇತರರಿದ್ದರು.

`ತಾಯಿಯ ಹೆಸರಲ್ಲಿ ಒಂದು ವೃಕ್ಷ’ ಅಭಿಯಾನ

ವಿಜಯಸಾಕ್ಷಿ ಸುದ್ದಿ, ಗದಗ: ಮೇರಾ ಯುವ ಭಾರತ ಗದಗ, ಕೆ.ಎಚ್. ಪಾಟೀಲ್ ವಿದ್ಯಾಮಂದಿರ ಹುಲಕೋಟಿ ಹಾಗೂ ಯೂಥ್ ಫಾರ್ ಚೇಂಜ್ ಆರ್ಗನೈಜೇಷನ್ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ತಾಯಿಯ ಹೆಸರಲ್ಲಿ ಒಂದು ವೃಕ್ಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಜಿ.ಆರ್. ಪಾಟೀಲ್, ನಮ್ಮ ತಾಯಿ ನಮ್ಮನ್ನು ಪ್ರೀತಿಸುವಂತೆ ಪ್ರಕೃತಿ ಮಾತೆ ಕೂಡ ನಮ್ಮನ್ನು ಕಾಳಜಿ ವಹಿಸಿ ನಮಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ತಾಯಿಯ ಹೆಸರಲ್ಲಿ ಒಂದು ವೃಕ್ಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹವಾಮಾನ ಬದಲಾವಣೆ ಕಾರಣದಿಂದ ಕೃಷಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಈಗಾಗಲೇ ಹಲವು ಸಂಕಷ್ಟಗಳು ಆರಂಭವಾಗಿದೆ. ಇದರ ನಿಯಂತ್ರಣಕ್ಕೆ ಇಂತಹ ಅಭಿಯಾನಗಳು ನಿರಂತರವಾಗಿ ನಡೆಯಬೇಕಿದೆ. ಶಾಲೆಯ ಆವರಣಗಳಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಪೂರಕವಾದ ವಾತಾವರಣ ಸೃಷ್ಟಿಸಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರವಿ ಹೊಂಬಾಳಿ, ಪ್ರಧಾನಿ ಕೊಂಚಿಗೇರಿ ಮುಂತಾದವರು ಭಾಗವಹಿಸಿದ್ದರು.

ಮೇಕೆದಾಟು ಯೋಜನೆ ತಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂಬ HDK ಹೇಳಿಕೆ ಸರಿಯಲ್ಲ: MB ಪಾಟೀಲ್!

ಬೆಂಗಳೂರು:- ಮೇಕೆದಾಟು ಯೋಜನೆಗೆ ರಾಜಕೀಯ ಬೇಡ, ಹೆಚ್‌ಡಿಕೆ ಸಹಕಾರ ಕೊಡಲಿ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ಯೋಜನೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ರಾಜಕೀಯ ಮಾಡಿಕೊಂಡು ಕೂರಬಾರದು. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕೂಡ ಇದನ್ನು ಮನಗಂಡು, ರಚನಾತ್ಮಕವಾಗಿ ಕೆಲಸ ಮಾಡಲಿ ಎಂದರು. ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಬಂದರೆ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಹೀಗೆ ಎರಡು ರಾಜ್ಯಗಳಿಗೂ ಅನುಕೂಲವಾಗಲಿದೆ. ಈ ಸತ್ಯ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

ಕುಮಾರಸ್ವಾಮಿಯವರು ಮೇಕೆದಾಟು ಯೋಜನೆ ತಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಸರಿಯಲ್ಲ. ಈ ಯೋಜನೆ ಜಾರಿಯಿಂದ ಸಂಕಷ್ಟದ ಸಮಯದಲ್ಲಿ ನೀರು ಸಿಗುತ್ತದೆ ಎನ್ನುವುದು ತಮಿಳುನಾಡಿನ ರಾಜಕೀಯ ಪಕ್ಷಗಳಿಗೂ ಗೊತ್ತು. ಆದರೆ ಅವರು ಸಹ ರಾಜಕೀಯಕ್ಕಾಗಿ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇಂತಹ ಧೋರಣೆಗಳನ್ನು ಎಲ್ಲರೂ ಬಿಟ್ಟರೆ ಜನರಿಗೆ ಒಳ್ಳೆಯದಾಗುತ್ತದೆ ಎಂದರು.

ಜೀವನದ ಉನ್ನತಿಗೆ ಸಂಸ್ಕೃತಿಯ ಅರಿವು ಮುಖ್ಯ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಪ್ರಗತಿಪರವಾದ ಧ್ಯೇಯೋದ್ದೇಶಗಳು ಮಾನವನ ಶ್ರೇಯಸ್ಸಿಗೆ ದಾರಿದೀಪ. ಸತ್ಯ, ಶಾಂತಿ ಎಲ್ಲರ ಬಾಳಿಗೂ ಅಗತ್ಯವಿದೆ. ಜೀವನದ ಉನ್ನತಿಗೆ ಸಂಸ್ಕಾರ, ಸಂಸ್ಕೃತಿಗಳ ಅರಿವು, ಆಚರಣೆ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದಿಂದ ಸಂಘಟಿಸಿದ ಧರ್ಮೋತ್ತೇಜಕ ಸಂಗಮ ಸಮಾವೇಶದ 2ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಸಾತ್ವಿಕ ಮತ್ತು ತಾತ್ವಿಕ ಹಿತ ಚಿಂತನೆಗಳನ್ನು ಬೋಧಿಸುವುದರ ಮೂಲಕ ಭಾವೈಕ್ಯತೆಗೆ ಭದ್ರ ಬುನಾದಿ ಹಾಕಿದ ಶಕ್ತಿ ವೀರಶೈವ ಧರ್ಮದಲ್ಲಿದೆ. ಶಿವ ಸಂಸ್ಕೃತಿ ಎಷ್ಟು ಪ್ರಾಚೀನವೋ ಅಷ್ಟೇ ವೀರಶೈವ ಧರ್ಮ ಸಂಸ್ಕೃತಿ ಪುರಾತನವಾಗಿದೆ. ಮಾನವ ಪರಿಪೂರ್ಣದೆಡೆಗೆ ಪಯಣಿಸುವುದೇ ನಿಜವಾದ ಧರ್ಮ. ಶ್ರೀ ಜಗದ್ಗುರು ರೇಣುಕಾಚಾದಿ ಪಂಚಾಚಾರ್ಯರ ತತ್ವ ಸಿದ್ಧಾಂತಗಳು ನೆಮ್ಮದಿಗೆ ಮೂಲ ಸೆಲೆಯಾಗಿದೆ ಎಂದರು.

ಅ.ಭಾ.ವೀ ಮಹಾಸಭಾದ ಮಹಿಳಾ ಅಧ್ಯಕ್ಷೆ ವೀಣಾ ಕಾಶಪ್ಪನವರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

ಎಸ್.ಜೆ.ಆರ್.ಸಿ ಮಹಿಳಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪ್ರೇಮಾ ಸಿದ್ಧರಾಜು ಮಾತನಾಡಿ, ವೀರಶೈವ ಧರ್ಮ ಪರಂಪರೆ ಅತ್ಯಂತ ಪ್ರಾಚೀನವಾಗಿದ್ದು, ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದೆ. ಕಾಯಕ ಮತ್ತು ದಾಸೋಹಕ್ಕೆ ಬಹಳಷ್ಟು ಮಹತ್ವ ಕೊಟ್ಟಿದೆ. ಈ ಧರ್ಮದ ತತ್ವ ಸಿದ್ಧಾಂತಗಳಿಗೆ ತಲೆ ಬಾಗಿ ಬರುವವರೆಲ್ಲರಿಗೂ ಬಾಗಿಲು ತೆಗೆದಿದೆ ಎಂದು ತಿಳಿಸಿದರು.

ಎಡೆಯೂರು ರೇಣುಕ ಶಿವಾಚಾರ್ಯರು ನೇತೃತ್ವ ವಹಿಸಿ ಗುರುಪೀಠ ಮತ್ತು ವೀರಶೈವ ಧರ್ಮ ಪರಂಪರೆ ಬಗೆಗೆ ಸಂಕ್ಷಿಪ್ತವಾಗಿ ವಿವರಿಸಿದರು. ಧನಗೂರು ಮುಮ್ಮಡಿ ಷಡಕ್ಷರ ಶಿವಾಚಾರ್ಯರು, ಬೆಳ್ಳಾವಿ ಮಹಂತ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಪಾಲ್ಗೊಂಡಿದ್ದರು. ಬಿಜ್ಜಳ್ಳಿ ನಂದೀಶ, ಪ್ರೇಮಾ ಕೋವಾ ರೇವಣ್ಣ, ಎಂ. ಮಾದಯ್ಯ, ನಾಗೇಂದ್ರಸ್ವಾಮಿ, ಬೀರೂರು ಶಿವಸ್ವಾಮಿ ಮೊದಲ್ಗೊಂಡು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಟಿ.ಎಸ್. ಉಮಾಶಂಕರ ಸ್ವಾಗತಿಸಿದರು. ಪಾಲನೇತ್ರ ನಿರೂಪಿಸಿದರು. ಶಿವಶಂಕರ ಶಾಸ್ತಿç ತಂಡದವರಿAದ ಭಕ್ತಿಗೀತೆ, ಪ್ರಜ್ಞಾ ಇವರಿಂದ ಭರತ ನಾಟ್ಯ ಜರುಗಿತು.

ಶ್ರೀ ಜಗದ್ಗುರು ರಂಭಾಪುರಿ ಪೀಠದ ಮುಖವಾಣಿ ‘ರಂಭಾಪುರಿ ಬೆಳಗು’ ಜುಲೈ ತಿಂಗಳ ಸಂಚಿಕೆಯನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬಿಡುಗಡೆ ಮಾಡಿ ಮಾತನಾಡಿ, ಮನಶುದ್ಧಿಗೆ ಮತ್ತು ಜೀವನ ಪರಿವರ್ತನೆಯತ್ತ ಮುನ್ನಡೆಯಲು ಉತ್ತಮ ಸಾಹಿತ್ಯದ ಅವಶ್ಯಕತೆಯಿದೆ. ಆಧ್ಯಾತ್ಮ ಜ್ಞಾನದ ಅರಿವು ಜೀವನೋತ್ಸವಕ್ಕೆ ಸ್ಫೂರ್ತಿಯಾಗಿದೆ ಎಂದರು.

ಗೋವಾದಲ್ಲಿ ನಿಮ್ದೆ ಇದೆ.. ಮಹದಾಯಿಗೆ ಒಪ್ಪಿಗೆ ಕೊಡ್ಸಿ: ಸಚಿವ ಹೆಚ್ ಕೆ ಪಾಟೀಲ್ ಆಕ್ರೋಶ!

ಗದಗ:- ನಾನು ಐದೇ ನಿಮಿಷದಲ್ಲಿ ಪ್ರಧಾನ ಮಂತ್ರಿಗಳಿಂದ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸುತ್ತೇನೆ. ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಶಕ್ತಿಯಿದ್ದರೆ ತಮಿಳುನಾಡಿನ ತಮ್ಮ ಮೈತ್ರಿ ಪಕ್ಷವನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ ಎಂಬ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಆಕ್ರೋಶ ಹೊರ ಹಾಕಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿ ಅವರೇ ತಮಿಳುನಾಡಿನ ಒಪ್ಪಿಗೆ ಪಡೆಯಿರಿ ಎನ್ನುವ ನೀವು..ಮಹದಾಯಿಗೆ ಒಪ್ಪಿಗೆ ಕೊಡಿಸಬಹುದಲ್ವಾ ಗೋವಾದಲ್ಲಿ ನಿಮ್ದೆ ಸರ್ಕಾರ ಇದೆ ತಾನೆ. ಹಾಗಿದ್ರೆ ನಮ್ಗೆ ಮಹದಾಯಿಗೆ ಒಪ್ಪಿಗೆ ಕೊಡ್ಸಿ ಎಂದು ಸವಾಲ್ ಹಾಕಿದರು. ಪ್ರಧಾನಿ ಮೋದಿ ಅವರನ್ನು ನೀವೇಕೆ ಒಪ್ಪಿಸ್ತೀರಿ, ಅವರ ಕನ್ಸಂಟ್ ಬೇಕಾ ನಿಮ್ಗೆ ಅಂತ ಗರಂ ಆದರು. ನೀವು ಆದೇಶ ಮಾಡ್ರಿ. ಎಲ್ಲಾದಕ್ಕೂ ಅವ್ರ ಒಪ್ಪಿಗೆ ತಗೋತೀರಾ. ಮಿತ್ರಪಕ್ಷಕ್ಕೆ ಒತ್ತಾಯಿಸಿ ಅಂತೀರಲ್ಲಾ.. ಡಿಎಂಕೆ ಒಪ್ಪಿಗೆ ತೆಗೆದುಕೊಂಡೇ ಎಲ್ಲಾ‌ ಮಾಡ್ತೀರಾ. ನಿಮಗೆ ಆದೇಶ ಮಾಡಲು ಬರಲ್ವಾ ಅಂತ ಕಿಡಿಕಾರಿದರು.

ಅಂತರರಾಜ್ಯ ನೀರಿನ ವಿವಾದ ಕಾನೂನು ಪ್ರಕಾರ ಪಾಸ್ ಮಾಡಿ ಕೊಟ್ಟಿದ್ದೀವಿ. ಅದು ಯಾಕೇ ಕೊಟ್ಟಿದ್ದೀವಿ. ಒಪ್ಪಿಗೆ ತರಬೇಕು ಅಂತ. ಅದರಲ್ಲಿ ಪ್ರಸ್ತಾಪ ಇದೆಯಾ ಅಂತ ನೋಡಿ. ಗೋವಾದಲ್ಲಿ ನಿಮ್ದೆ ಸರ್ಕಾರ ಇದೆ. ಹಾಗಿದ್ರೆ ನಮ್ಗೆ ಮಹದಾಯಿಗೆ ಒಪ್ಪಿಗೆ ಕೊಡ್ಸಿ ಅಂತ ಸವಾಲ್ ಹಾಕಿದರು. ನಿಮಗೆ ಏನಾದರೂ ತೊಂದರೆ ಇದ್ರೆ. ಅವರದ್ದು ಒಪ್ಪಿಗೆ ತಗೊಂಡು ಬನ್ನಿ. ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ ಪತ್ರ ತೋರಿಸಿದ್ರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ರಿಕಾ ಪರಿಷತ್ ಮಾಡಿದ್ರು. ಅಮಿತಾ ಬಂದಾಗ್ ಏನೇನಾಯ್ತು ಅನ್ನೋದು ಗೊತ್ತಿದೆ. ಅಲ್ಲಿ ಒಪ್ಪಿಗೆ ತಗೊಂಡು ಬರ್ತಾರಾ. ಅಗತ್ಯ ಇದೆಯಾ ಅಂತ ಕಿಡಿಕಾರಿದರು. ಪ್ರಧಾನಿ ಮೋದಿ ಅವ್ರಿಗೆ ಗೋವಾ ಒಪ್ಪಿಗೆ ತಗೊಂಡು ಬನ್ನಿ ಅಂತ ಹೇಳಲ್ಲಾ ನಾನು. ಕುಮಾರಸ್ವಾಮಿ ಅವ್ರೇ ತಗೊಂಡು ಬನ್ನಿ ಎನ್ನಲ್ಲ. ಅದು ಅವಶ್ಯಕತೆ ಇಲ್ಲ. ಅವಶ್ಯಕತೆ ಇಲ್ಲಾ ಅಂದ್ರೆ ಯಾಕೇ ಹೋಗ್ತೀರಾ ಎಂದು ಪ್ರಶ್ನಿಸಿದರು.

ಪ್ರಾಮಾಣಿಕವಾಗಿ ಜನಗಣತಿ ಸರ್ವೆ ನಡಿತಾಯಿದೆ:

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಗಣತಿ ವಿಚಾರವಾಗಿ ಮಾತನಾಡಿ, ನಾಗಮೋಹನ ದಾಸ್ ವರದಿ ಇನ್ನೇನು ತನ್ನ ಕೆಲಸ ಪೂರ್ಣ ಮಾಡಲು ಬಂದಿದೆ. ಅವರೇ ಹೇಳಿದ ಹಾಗೇ 10 ಲಕ್ಷ ಜನ ಇನ್ನೂ ಮಾಹಿತಿ ಕೊಟ್ಟಿಲ್ಲ. ಆ ಕುರಿತು ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದಾರೆ.

ಇಷ್ಟಾದ ಮೇಲೆ ನೀವು ಸುದ್ದಿ ಸೃಷ್ಟಿ ಮಾಡುವಂತಹದ್ದು ಏನು ಇಲ್ಲ. ಉತ್ತಮವಾಗಿ, ವೈಜ್ಞಾನಿಕವಾಗಿ, ಪ್ರಮಾಣಿಕ ಎಕ್ಸಸೈಜ್ ನಡೆದಿದೆ. ಅದು ಯಶಸ್ವಿಯಾಗಲು ಬಂದಾಗ, ಅನವಶ್ಯಕ ಪ್ರಶ್ನೆ ಕೇಳೋದು ಆರೋಗ್ಯಕರ ಅಲ್ಲ. ಸಮರ್ಪಕವಾಗಿ ಅತ್ಯಂತ ಪ್ರಾಮಾಣಿಕವಾಗಿ ಸರ್ವೆ ನಡಿತಾಯಿದೆ ಎಂದರು.

ಗುಣಮಟ್ಟದ ಕಾಮಗಾರಿಗೆ ಆದ್ಯತೆಯಿರಲಿ

ವಿಜಯಸಾಕ್ಷಿ ಸುದ್ದಿ, ಗದಗ: ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಗುಣಮಟ್ಟದ ಕಡೆಗೆ ಗಮನ ಹರಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸೂಚಿಸಿದರು.

ಅವರು ಶನಿವಾರ ಗದಗ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮೊರಾರ್ಜಿ ವಸತಿ ಶಾಲೆ ಗ್ರಂಥಾಲಯ ಹಾಗೂ ಗಂಡು ಮಕ್ಕಳ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಮಲ್ಲಸಮುದ್ರದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಗ್ರಂಥಾಲಯ ಹಾಗೂ ಶಾಲಾ ಕಟ್ಟಡ ನಿರ್ಮಾಣಕ್ಕೆ 733 ಲಕ್ಷ ರೂ ಅನುದಾನ ಒದಗಿಸಲಾಗಿದೆ. ನೀಡುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ನೆರೆದ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಪ್ರಭು ಬುರಬುರೆ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ರವಿ ಮೂಲಿಮನಿ, ಫಾರೂಕ್ ಹುಬ್ಬಳ್ಳಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ರವಿ ಗುಂಜೀಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಕ್ಕಳನ್ನು ನಿರಂತರ ಪ್ರೋತ್ಸಾಹಿಸಬೇಕು

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಮಕ್ಕಳನ್ನು ನಿರಂತರ ಪ್ರೋತ್ಸಾಹಿಸುವುದರೊಂದಿಗೆ ಧೈರ್ಯ ಹಾಗೂ ಪ್ರೀತಿಯನ್ನು ತುಂಬಿ ತರಗತಿಯ ಬೋಧನೆಯಲ್ಲಿ ಸ್ಪಷ್ಟ ನಿಯಮಗಳು, ನಿರಂತರ ಕ್ರಿಯೆ-ಪ್ರತಿಕ್ರಿಯೆ ಹಾಗೂ ಧನಾತ್ಮಕವಾದ ಕ್ರಿಯೆಗಳನ್ನು ಅನುಸರಿಸಿ ಮಕ್ಕಳ ವಯಕ್ತಿಕ ಅಗತ್ಯತೆಗಳನ್ನು ಗುರುತಿಸಿ, ವಿಶೇಷಚೇತನ ಮಕ್ಕಳಗೆ ಅಗತ್ಯವಿದ್ದಲ್ಲಿ ಸಹಕಾರ ಹಾಗೂ ಸಹಾಯ ಕಲ್ಪಿಸಬೇಕೆಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವ್ಹಿ. ಶೆಟ್ಟಪ್ಪನವರ ಹೇಳಿದರು.

ಅವರು ಶನಿವಾರ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಗದುಗಿನ ಹಿರಿಯ ಪ್ರಾಥಮಿಕ ಶಾಲೆ ನಂ. 15ರಲ್ಲಿ ಜರುಗಿದ ವಿಶೇಷ ದಾಖಲಾತಿ ಆಂದೋಲನದಲ್ಲಿ ವಿಶೇಷ ಮಗುವನ್ನು ಶಾಲೆಗೆ ದಾಖಲಿಸಿ ಮಾತನಾಡಿದರು.

ವಿಶೇಷ ಮಕ್ಕಳ ದಿನಂಪ್ರತಿ ಕಾರ್ಯಚಟುವಟಿಕೆಗಳಿಗೆ ಪಾಲಕರು, ಶಿಕ್ಷಕರು ಹೆಚ್ಚಿನ ಗಮನ ಹರಿಸಿ ಅವರ ಬೆಂಗಾವಲಾಗಿ ನಿಲ್ಲಬೇಕು. ಸಮಯ ಪಾಲನೆ, ಮಕ್ಕಳ ಆರೋಗ್ಯ ಶೈಕ್ಷಣಿಕ ಅಭಿವೃದ್ಧಿಯು ವಿಶೇಷ ಮಕ್ಕಳಿಗೆ ಅವಶ್ಯವಿದ್ದು ಅದು ಮಕ್ಕಳಿಗೆ ಸಮರ್ಪಕವಾಗಿ ತಲುಪುವಂತೆ ನಾವೆಲ್ಲರೂ ಕಾಳಜಿ ವಹಿಸಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ವಿಶೇಷ ಮಕ್ಕಳ ಪಾಲನೆಯಲ್ಲಿ ಪಾಲಕರ ಜವಾಬ್ದಾರಿ ದೊಡ್ಡದು. ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ಮಕ್ಕಳ ಶೈಕ್ಷಣಿಕ ಸಾಧನೆಗಳು, ಸಾಮಾಜಿಕ ಬೆಳವಣಿಗೆಯು ಪ್ರಗತಿಯತ್ತ ಸಾಗುತ್ತದೆ. ಮಕ್ಕಳ ನೂನ್ಯತೆಗಳನ್ನು ತಿಳಿದು ಬೋಧನೆಗೆ ಇಳಿದಾಗ ಮಕ್ಕಳಲ್ಲಿ ಕಲಿಕೆ ಕಂಡು ಬರುತ್ತದೆ ಎಂದರು.

ವಿಶೇಷಚೇತನ ಮಗು ಕೃಷ್ಣಪ್ರಿಯಾ ಬದಿ ಪ್ರಾರ್ಥಿಸಿದರು. ಮುಖೋಪಾಧ್ಯಾಯೆ ವಿ.ಎನ್. ಬಸಾಪೂರ ಸ್ವಾಗತಿಸಿದರು. ಪಿ.ಎಸ್. ಬ್ಯಾಳಿ ನಿರೂಪಿಸಿದರು. ಬಿ. ಯಶೋಧಾ ವಂದಿಸಿದರು. ವ್ಹಿ.ಬಿ. ಕರಬಸಗೌಡ್ರ, ಮೀನಾಕ್ಷಿ ಕೊರವನವರ, ಗೀತಾ ಹಾಸಲಕರ್, ಪಾಲಕರು-ಪೋಷಕರು ಉಪಸ್ಥಿತರಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ವಿಶೇಷ ಮಕ್ಕಳಿಗೆ ಪ್ರೋತ್ಸಾಹ ಹಾಗೂ ಪ್ರಶಂಸೆ ಬಹು ಮುಖ್ಯವಾದುದು. ಮಕ್ಕಳ ಕೆಲವೊಂದು ಅತೀರೇಕದ ಹಾಗೂ ಅನಗತ್ಯ ವರ್ತನೆಗಳನ್ನು ತಿದ್ದಲು ನಾವು ಅವರ ಧನಾತ್ಮಕ ಕೆಲಸಗಳಿಗೆ ಬೆಂಬಲ ನೀಡುವುದರ ಮೂಲಕ ಸರಿ-ತಪ್ಪು ತಿಳುವಳಿಕೆಯನ್ನು ನೀಡಬೇಕು. ಮುಖ್ಯವಾಗಿ ಈ ಮಕ್ಕಳ ಭಾವನೆಗಳನ್ನು ತಿಳಿದುಕೊಂಡು ಅವುಗಳಿಗೆ ಬೆಲೆಕೊಟ್ಟು ಸಮಸ್ಯೆಗಳನ್ನು ಅರಿತು ನಾವು ಸ್ಪಂದಿಸಬೇಕು ಎಂದರು.

error: Content is protected !!