Home Blog Page 3

ಲೇಡಿ PSIಗೆ ಕಪಾಳಮೋಕ್ಷ ಪ್ರಕರಣ; ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಗೌಡರಿಂದ ಕ್ಷಮೆಯಾಚನೆ

0

ಮಂಡ್ಯ: ಲೇಡಿ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯಗೌಡ ಅವರು ಪಿಎಸ್‌ಐ ಸವಿತಾ ಪಾಟೀಲ್ ಅವರಿಗೆ ವೀಡಿಯೋ ಮೂಲಕ ಬೇಷರತ್ ಕ್ಷಮೆಯಾಚಿಸಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಉಕ್ಕಡಮ್ಮ ದೇವಾಲಯಕ್ಕೆ ಐಶ್ವರ್ಯಗೌಡ ಅವರು ತೆರಳಿದ್ದ ವೇಳೆ ಗರ್ಭಗುಡಿಗೆ ತೆರಳಿ ದೇವರ ದರ್ಶನ ಪಡೆಯುವ ವಿಚಾರದಲ್ಲಿ ಗಲಾಟೆ ನಡೆದಿತ್ತು. ದೇವಾಲಯದ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್‌ಐ ಸವಿತಾ ಪಾಟೀಲ್ ಅವರೊಂದಿಗೆ ಐಶ್ವರ್ಯಗೌಡ ವಾಗ್ವಾದ ನಡೆಸಿದ್ದರು. ಈ ವೇಳೆ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿರುವ ಆರೋಪ ಕೇಳಿಬಂದಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನ್ಯಾಯಾಲಯದ ಸೂಚನೆಯ ಹಿನ್ನೆಲೆಯಲ್ಲಿ ಐಶ್ವರ್ಯಗೌಡ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ವೀಡಿಯೋ ಮೂಲಕ ಮಾತನಾಡಿರುವ ಐಶ್ವರ್ಯಗೌಡ, “ಆಗಸ್ಟ್ 12ರಂದು ಭೀಮನ ಅಮಾವಾಸ್ಯೆಯಂದು ನಾನು ಮತ್ತು ನನ್ನ ಇಬ್ಬರು ಮಕ್ಕಳು ಪಾಂಡವಪುರದ ಉಕ್ಕಡಮ್ಮ ದೇವಸ್ಥಾನಕ್ಕೆ ತೆರಳಿದ್ದೆವು. ಅಂದು ದೇವಾಲಯದಲ್ಲಿ ಹೆಚ್ಚಿನ ಜನಸಂದಣಿ ಇತ್ತು. ನನ್ನ ಮಕ್ಕಳಿಗೆ ‘ಅಮ್ಮ’ ಆಗಿದ್ದ ಕಾರಣ ದೇವರ ದರ್ಶನ ಪಡೆಯುವ ಸಂದರ್ಭದಲ್ಲಿ ನನ್ನ ಮತ್ತು ಮಹಿಳಾ ಪಿಎಸ್‌ಐ ನಡುವೆ ಸಣ್ಣ ಮಾತಿನ ಚಕಮಕಿ ನಡೆಯಿತು. ಉದ್ವೇಗದಿಂದ ಅಹಿತಕರ ಘಟನೆ ನಡೆದಿದೆ” ಎಂದು ಹೇಳಿದ್ದಾರೆ.

“ಈ ಘಟನೆ ನಡೆಯಬಾರದಿತ್ತು. ನಡೆದಿರುವ ಘಟನೆ ಬಗ್ಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಈ ಘಟನೆಯಿಂದ ಕರ್ತವ್ಯದಲ್ಲಿದ್ದ ಪಿಎಸ್‌ಐ ಸವಿತಾ ಪಾಟೀಲ್ ಅವರಿಗೆ ನೋವಾಗಿದ್ದರೆ, ನಾನು ಬೇಷರತ್ ಕ್ಷಮೆಯಾಚಿಸುತ್ತೇನೆ” ಎಂದು ಐಶ್ವರ್ಯಗೌಡ ತಿಳಿಸಿದ್ದಾರೆ.

ಈ ಮೂಲಕ ಪಿಎಸ್‌ಐ ಸವಿತಾ ಪಾಟೀಲ್ ಅವರೊಂದಿಗೆ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಗೌಡ ಅವರು ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ.

ಫೇಕ್ ಮದುವೆ ಆಮಂತ್ರಣ ಪತ್ರದ ಹೆಸರಿನಲ್ಲಿ ವಾಟ್ಸಾಪ್ ಸೈಬರ್ ವಂಚನೆ: ‘ಲೀಗಲ್ ಪೇ’ ಸಂಪರ್ಕದ ದಾಖಲೆ ಕೇಳಿದ ಹೈಕೋರ್ಟ್

0

ಬೆಂಗಳೂರು: ವಾಟ್ಸ್ಯಾಪ್ ಮೂಲಕ ನಕಲಿ ‘ಮದುವೆ ಆಹ್ವಾನ’ದ ಸೋಗಿನಲ್ಲಿ ಎಪಿಕೆ (APK) ಫೈಲ್ ಕಳುಹಿಸಿ ಸುಮಾರು ₹12.5 ಲಕ್ಷ ಸೈಬರ್ ವಂಚನೆ ನಡೆಸಿದ ಪ್ರಕರಣಕ್ಕೆ ಲೀಗಲ್ ಪೇ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ಗೆ ಇರುವ ಸಂಬಂಧವನ್ನು ಸಾಬೀತುಪಡಿಸುವ ಪ್ರಾಥಮಿಕ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಹುಳಿಮಾವು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೂರು ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಲೀಗಲ್ ಪೇ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರ ಏಕಸದಸ್ಯ ಪೀಠ, ಸೆಪ್ಟೆಂಬರ್ 21ರಂದು ಈ ನಿರ್ದೇಶನ ನೀಡಿದೆ.

ಅರ್ಜಿದಾರ ಕಂಪನಿ ಆರೋಪಿತ ವಂಚನೆಯಲ್ಲಿ ಭಾಗಿಯಾಗಿರುವುದಕ್ಕೆ ಸಂಬಂಧಿಸಿದ ಪ್ರಾಥಮಿಕ ದಾಖಲೆಗಳನ್ನು ಹುಳಿಮಾವು ಪೊಲೀಸರು ಅಥವಾ ಸೈಬರ್ ಅಪರಾಧ ಠಾಣೆಯ ತನಿಖಾಧಿಕಾರಿಗಳು ಲಿಖಿತ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ತಿಳಿಸಿದೆ. ಅರ್ಜಿಗಳ ಕುರಿತು ಸೂಕ್ತ ಆದೇಶ ನೀಡಲು ಈ ಮಾಹಿತಿ ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಲೀಗಲ್ ಪೇ ಪರ ವಾದಿಸಿದ ಹಿರಿಯ ವಕೀಲ ಎಂ.ಎಸ್. ಶ್ಯಾಮಸುಂದರ್, ಮಧ್ಯವರ್ತಿ ಪಾವತಿ ಗೇಟ್‌ವೇ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ವಂಚನೆಯ ಸಂಪೂರ್ಣ ಹಣ ಲೀಗಲ್ ಪೇ ಖಾತೆಗೆ ಜಮೆಯಾಗಿರುವುದನ್ನು ಸರ್ಕಾರ ಸಾಬೀತುಪಡಿಸಿದರೆ ಅರ್ಜಿಗಳನ್ನು ಹಿಂಪಡೆಯುವುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಈ ವಾದವನ್ನು ಪರಿಗಣಿಸಿದ ನ್ಯಾಯಾಲಯ, ವಂಚನೆಯ ಹಣ ಸದ್ಯ ಯಾವ ಖಾತೆಯಲ್ಲಿದೆ ಎಂಬುದನ್ನು ಗುರುತಿಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.

ವಂಚನೆಯ ಹಣ ಲೀಗಲ್ ಪೇ ಖಾತೆಯಲ್ಲಿದೆ ಎಂದು ಸರ್ಕಾರ ಹೇಳುತ್ತಿರುವ ಹಿನ್ನೆಲೆಯಲ್ಲಿ, ಹಣ ವಾಸ್ತವವಾಗಿ ಯಾರ ಖಾತೆಯಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯ ಸೂಚಿಸಿದೆ. ಹಣ ಲೀಗಲ್ ಪೇ ಖಾತೆಯಲ್ಲಿದ್ದರೆ ಅರ್ಜಿಗಳ ಕುರಿತು ಕ್ರಮ ಕೈಗೊಳ್ಳಲಾಗುವುದು. ಹಣ ಕಂಪನಿಯ ಖಾತೆಯಲ್ಲಿಲ್ಲದಿದ್ದರೆ ಕಂಪನಿಗೆ ರಕ್ಷಣೆ ದೊರೆಯುವ ಸಾಧ್ಯತೆಯಿದೆ ಎಂದು ನ್ಯಾಯಮೂರ್ತಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.

ತನಿಖೆ ಸೈಬರ್ ಕ್ರೈಂ ಠಾಣೆಗೆ ವರ್ಗಾವಣೆ ಸಾಧ್ಯತೆ

ಪ್ರಕರಣದ ಸ್ವರೂಪವನ್ನು ಪರಿಗಣಿಸಿ ತನಿಖೆಯನ್ನು ಹುಳಿಮಾವು ಪೊಲೀಸ್ ಠಾಣೆಯಿಂದ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾಯಿಸುವ ಕುರಿತು ಸರ್ಕಾರ ಪರಿಶೀಲಿಸುತ್ತಿದೆ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಮೌಖಿಕ ಆದೇಶದ ಅನುಸಾರ ದೂರುಗಳನ್ನು ಸೈಬರ್ ಅಪರಾಧ ಠಾಣೆಗಳಿಗೆ ಕಳುಹಿಸಲಾಗಿದೆ ಎಂದು ಸರ್ಕಾರಿ ವಕೀಲರು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ, ‘ಮೌಖಿಕ ಆದೇಶಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ’ ಎಂದು ಸ್ಪಷ್ಟಪಡಿಸಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ನಿಗದಿಪಡಿಸಲಾಗಿದೆ.

ಪ್ರಕರಣದ ಹಿನ್ನೆಲೆ

2026ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಮೂವರು ದೂರುದಾರರು ಸೈಬರ್ ವಂಚನೆಗೆ ಒಳಗಾಗಿರುವುದಾಗಿ ದೂರು ನೀಡಿದ್ದರು. ಬಿ.ಕೆ. ನಾಗೇಶಯ್ಯ ₹7,44,989, ಸುಭಾಷ್ ಚಂದ್ರ ಜುಜಾರ್ಥ್ ₹2,69,729 ಹಾಗೂ ವಸಿಷ್ಠ ನಾರಾಯಣ ಝಾ ₹2,34,917 ಕಳೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ದೂರುಗಳ ಆಧಾರದ ಮೇಲೆ ಹುಳಿಮಾವು ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 66(ಸಿ), 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್ 318(4), 319(2)ರ ಅಡಿಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಎಫ್‌ಐಆರ್‌ಗಳಲ್ಲಿ ಲೀಗಲ್ ಪೇ ಕಂಪನಿಯನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ. ಈ ಪ್ರಕರಣದಲ್ಲಿ ಕಂಪನಿಯ ಅಧಿಕಾರಿಗಳಿಗೆ ಹೈಕೋರ್ಟ್ ಈ ಹಿಂದೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತ್ತು.

ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ; ರಜೆಯ ಮೇಲೆ ಊರಿಗೆ ಬಂದಿದ್ದ ಐಟಿಬಿಪಿ ಯೋಧ ಸಾವು!

0

ರಾಮನಗರ: ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿ ರಜೆಯ ಮೇಲೆ ಊರಿಗೆ ಬಂದಿದ್ದ ಐಟಿಬಿಪಿ ಯೋಧ ಮೃತಪಟ್ಟ ಘಟನೆ ಕನಕಪುರ ಬೈಪಾಸ್ ರಸ್ತೆಯ ಗಡಸಳ್ಳಿ ಬಳಿ ತಡರಾತ್ರಿ ನಡೆದಿದೆ.

ಕನಕಪುರ ತಾಲೂಕಿನ ಶಿವನಹಳ್ಳಿ ನಿವಾಸಿ ಚನ್ನವೀರೇಗೌಡ (45) ಮೃತಪಟ್ಟ ಯೋಧ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿದ್ದ ಚನ್ನವೀರೇಗೌಡ, ಮೊನ್ನೆಯಷ್ಟೇ ರಜೆಯ ಮೇಲೆ ಸ್ವಗ್ರಾಮಕ್ಕೆ ಬಂದಿದ್ದರು.

ತಡರಾತ್ರಿ ಮಗನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಗಡಸಳ್ಳಿ ಬಳಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಚನ್ನವೀರೇಗೌಡ ಅವರನ್ನು ಕೂಡಲೇ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಯೋಧ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಕುರಿತು ಕನಕಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಿವೃತ್ತ ಬಿಬಿಎಂಪಿ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ!

0

ಬೆಂಗಳೂರು: ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಂಗನಾಥ್ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಅಧಿಕಾರಿಗಳು, ರಂಗನಾಥ್ ಅವರಿಗೆ ಸೇರಿದ ಮನೆ ಹಾಗೂ ಇತರ ಸ್ಥಳಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.

ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ 8 ಕಡೆಗಳ ದಾಳಿಯ ಭಾಗವಾಗಿ ಬೆಂಗಳೂರಿನಲ್ಲೂ ಈ ಕಾರ್ಯಾಚರಣೆ ನಡೆದಿದೆ.

ಸದ್ಯ ಬೆಳಗ್ಗೆಯಿಂದಲೇ ದಾಖಲೆಗಳು ಹಾಗೂ ಆಸ್ತಿ ವಿವರಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Breaking News: ಮನೆಯ ಬಾಗಿಲು ತೆರೆಯಲು ಹೋದ ಮಹಿಳೆ ವಿದ್ಯುತ್ ಸ್ಪರ್ಶಿಸಿ ಸಾವು!

0

ಬೀದರ: ಮನೆಯ ಬಾಗಿಲಿನ ಕೀಲಿ ತೆಗೆಯಲು ಮುಂದಾದಾಗ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಸವಿತಾ ಅಂಬಾದಾಸ ಮಾನೆ (35) ಎಂದು ಗುರುತಿಸಲಾಗಿದೆ. ಸವಿತಾ ಅವರು ಪತಿ ಹಾಗೂ ಮಕ್ಕಳೊಂದಿಗೆ ಗ್ರಾಮದಲ್ಲಿ ವಾಸವಾಗಿದ್ದರು.

ಸವಿತಾ ಅವರು ಪತಿಯೊಂದಿಗೆ ವಿಬಿ-ಜಿ ರಾಮ್ ಜಿ ಯೋಜನೆಯಡಿ ನಡೆಯುತ್ತಿದ್ದ ಕೂಲಿ ಕೆಲಸಕ್ಕೆ ತೆರಳಿದ್ದರು. ನಿನ್ನೆ ಸಂಜೆ ಸುಮಾರು 4 ಗಂಟೆಗೆ ಮನೆಗೆ ವಾಪಸ್ ಬಂದಿದ್ದರು.

ಈ ವೇಳೆ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಮನೆಯ ಬಾಗಿಲಿನ ಕೀಲಿ ತೆಗೆಯಲು ಮುಂದಾದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭಾಲ್ಕಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನೆ ಖಟಕ್ ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Mandya Breaking: ನಿವೃತ್ತ ವಾರ್ಡನ್ ಮನೆ ಮೇಲೆ ಲೋಕಾ ದಾಳಿ; ಫಾರ್ಮ್ ಹೌಸ್‌ನಲ್ಲಿ ಸಿಕ್ತು ಚಿನ್ನ, ಬೆಳ್ಳಿ, ಮದ್ಯ!

0

ಮಂಡ್ಯ: ಬೆಳ್ಳಂಬೆಳಗ್ಗೆ ಮಂಡ್ಯದಲ್ಲಿ ನಿವೃತ್ತ ಹಾಸ್ಟೆಲ್ ಅಧೀಕ್ಷಕರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮದ್ದೂರಿನ ಶಿವರಾಜ್ ಅವರ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಮದ್ದೂರು ನಗರದ ಕೊಲ್ಲಿ ವೃತ್ತದ ಬಳಿಯ ವಿನಾಯಕ ಬಡಾವಣೆಯಲ್ಲಿರುವ ಶಿವರಾಜ್ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರ ಜೊತೆಗೆ ಶಿವಪುರದಲ್ಲಿರುವ ಮನೆ ಹಾಗೂ ಅವಸರದಹಳ್ಳಿಯಲ್ಲಿರುವ ಫಾರ್ಮ್ ಹೌಸ್‌ನಲ್ಲೂ ಪರಿಶೀಲನೆ ನಡೆಸಲಾಗಿದೆ.

ಶಿವರಾಜ್ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮನಹಳ್ಳಿ ಹಾಗೂ ಬೆಸಗರಹಳ್ಳಿ ಹಾಸ್ಟೆಲ್‌ಗಳಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು. ಕಳೆದ ತಿಂಗಳಷ್ಟೇ ಶಿವರಾಜ್ ಅವರು ನಿವೃತ್ತರಾಗಿದ್ದರು. ಇನ್ನು ದಾಳಿ ವೇಳೆ ಫಾರ್ಮ್ ಹೌಸ್‌ನಲ್ಲಿ ಹಲವು ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಹಾಸ್ಟೆಲ್ ಮಕ್ಕಳಿಗೆ ನೀಡಬೇಕಿದ್ದ ಪುಸ್ತಕಗಳು ಹಾಗೂ ಬೆಡ್‌ಶೀಟ್‌ಗಳನ್ನು ಫಾರ್ಮ್ ಹೌಸ್‌ನಲ್ಲಿ ಇಡಲಾಗಿತ್ತು ಎನ್ನಲಾಗಿದೆ. ಜೊತೆಗೆ ದುಬಾರಿ ಮದ್ಯದ ಬಾಟಲಿಗಳು ಕೂಡ ಪತ್ತೆಯಾಗಿದ್ದು, ಫಾರ್ಮ್ ಹೌಸ್‌ನಲ್ಲಿ ಮಿನಿ ಬಾರ್ ನಿರ್ಮಿಸಿಕೊಂಡಿದ್ದ ವಿಚಾರವೂ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಚಿನ್ನ, ಬೆಳ್ಳಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳು ಕೂಡ ಅಧಿಕಾರಿಗಳ ಪರಿಶೀಲನೆ ವೇಳೆ ಪತ್ತೆಯಾಗಿವೆ. ಅಕ್ರಮ ಆಸ್ತಿ ಗಳಿಕೆ ಬಗ್ಗೆ ಲೋಕಾಯುಕ್ತಕ್ಕೆ ಬಂದ ದೂರಿನ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಹಾಗೂ ಲೋಕಾಯುಕ್ತ ಪೊಲೀಸ್ ಬ್ಯಾಟರಾಯಗೌಡ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸದ್ಯ ಅಧಿಕಾರಿಗಳು ದಾಖಲೆಗಳು ಹಾಗೂ ಆಸ್ತಿ ವಿವರಗಳ ಪರಿಶೀಲನೆ ಮುಂದುವರಿಸಿದ್ದು, ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪ್ರತಿದಿನ ರೋಲ್-ಆನ್ ಬಳಸುತ್ತೀರಾ? ಚರ್ಮದ ಕಿರಿಕಿರಿ ಸೇರಿದಂತೆ ಈ ಸಮಸ್ಯೆಗಳ ಬಗ್ಗೆ ತಪ್ಪದೇ ತಿಳಿದುಕೊಳ್ಳಿ

0

ದೇಹದ ದುರ್ವಾಸನೆಯನ್ನು ನಿಯಂತ್ರಿಸಲು ಮತ್ತು ದಿನವಿಡೀ ತಾಜಾತನದಿಂದ ಇರಲು ಅನೇಕರು ರೋಲ್‌-ಆನ್ ಡಿಯೋಡರೆಂಟ್‌ಗಳನ್ನು ಬಳಸುತ್ತಾರೆ. ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಎಲ್ಲೆಡೆ ಕೊಂಡೊಯ್ಯಲು ಅನುಕೂಲವಾಗಿರುವುದರ ಜೊತೆಗೆ, ಬಳಸುವುದೂ ಸುಲಭ.

ಆದರೆ ಪ್ರತಿದಿನ ಅಥವಾ ದೀರ್ಘಕಾಲ ಒಂದೇ ರೀತಿಯ ರೋಲ್‌-ಆನ್ ಬಳಸುವುದು ಎಲ್ಲರ ಚರ್ಮಕ್ಕೂ ಸೂಕ್ತವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಉತ್ಪನ್ನಗಳಲ್ಲಿರುವ ಸುಗಂಧ ದ್ರವ್ಯಗಳು ಅಥವಾ ಇತರ ಅಂಶಗಳು ಸೂಕ್ಷ್ಮ ಚರ್ಮ ಹೊಂದಿರುವವರಲ್ಲಿ ಕಿರಿಕಿರಿ ಉಂಟುಮಾಡಬಹುದು. ಹಾಗಾದರೆ ರೋಲ್‌-ಆನ್ ಬಳಸುವಾಗ ಯಾವ ವಿಷಯಗಳ ಬಗ್ಗೆ ಗಮನ ಹರಿಸಬೇಕು?

ಒಣಗಲು ಸ್ವಲ್ಪ ಸಮಯ ಬೇಕಾಗಬಹುದು

ರೋಲ್‌-ಆನ್ ಹಚ್ಚಿದ ತಕ್ಷಣ ಅಂಡರ್‌ಆರ್ಮ್ ಭಾಗದಲ್ಲಿ ತೇವ ಅಥವಾ ಜಿಗುಟಾದ ಅನುಭವವಾಗುವುದು ಸಾಮಾನ್ಯ. ಉತ್ಪನ್ನ ಸಂಪೂರ್ಣವಾಗಿ ಒಣಗಲು ಕೆಲವು ನಿಮಿಷಗಳು ಬೇಕಾಗಬಹುದು.

ಹಚ್ಚಿದ ತಕ್ಷಣ ಬಟ್ಟೆ ಧರಿಸಿದರೆ ಬಟ್ಟೆಗೆ ಉತ್ಪನ್ನ ಅಂಟಿಕೊಳ್ಳುವ ಸಾಧ್ಯತೆಯಿದೆ. ಹೆಚ್ಚು ಬೆವರುವ ಸಂದರ್ಭಗಳಲ್ಲಿ ಈ ಅನುಭವ ಇನ್ನಷ್ಟು ಹೆಚ್ಚಾಗಬಹುದು. ಆದ್ದರಿಂದ ರೋಲ್‌-ಆನ್ ಹಚ್ಚಿದ ಬಳಿಕ ಕೆಲವು ನಿಮಿಷಗಳ ಕಾಲ ಒಣಗಲು ಬಿಡುವುದು ಉತ್ತಮ.

ಬಿಳಿ ಕಲೆಗಳು ಅಥವಾ ಚರ್ಮದ ಕಿರಿಕಿರಿ ಉಂಟಾಗಬಹುದು

ಕೆಲವು ರೋಲ್‌-ಆನ್ ಉತ್ಪನ್ನಗಳು ಅಂಡರ್‌ಆರ್ಮ್ ಭಾಗದಲ್ಲಿ ಬಿಳಿ ಪದರ ಅಥವಾ ಕಲೆಗಳನ್ನು ಬಿಡಬಹುದು. ಈ ಕಲೆಗಳು ಬಟ್ಟೆಗಳ ಮೇಲೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಇದಲ್ಲದೆ, ಸೂಕ್ಷ್ಮ ಚರ್ಮ ಹೊಂದಿರುವ ಕೆಲವರಲ್ಲಿ ಕೆಲವು ಪದಾರ್ಥಗಳು ಕೆಂಪಾಗುವುದು, ತುರಿಕೆ, ಉರಿ ಅಥವಾ ದದ್ದು ಉಂಟುಮಾಡಬಹುದು. ಅಂಡರ್‌ಆರ್ಮ್ ಭಾಗದ ಚರ್ಮ ಸೂಕ್ಷ್ಮವಾಗಿರುವುದರಿಂದ ಹೊಸ ಉತ್ಪನ್ನ ಬಳಸುವ ಮೊದಲು ಅದರ ಲೇಬಲ್‌ನಲ್ಲಿರುವ ಅಂಶಗಳನ್ನು ಪರಿಶೀಲಿಸುವುದು ಉತ್ತಮ.

ರೋಲ್‌-ಆನ್ ಬಳಸಿದ ಬಳಿಕ ನಿರಂತರವಾಗಿ ತುರಿಕೆ, ಉರಿ ಅಥವಾ ಕೆಂಪಾಗುವಿಕೆ ಕಂಡುಬಂದರೆ ಬಳಕೆಯನ್ನು ನಿಲ್ಲಿಸಿ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಸುಗಂಧದ ಆಯ್ಕೆಯೂ ಮುಖ್ಯ

ರೋಲ್‌-ಆನ್‌ಗಳು ವಿವಿಧ ಸುಗಂಧಗಳಲ್ಲಿ ಲಭ್ಯವಿದ್ದರೂ, ಕೆಲವು ಉತ್ಪನ್ನಗಳಲ್ಲಿ ತೀವ್ರವಾದ ಪರಿಮಳದ ಅಂಶಗಳು ಇರಬಹುದು. ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಇಂತಹ ಸುಗಂಧಗಳು ಕಿರಿಕಿರಿ ಉಂಟುಮಾಡುವ ಸಾಧ್ಯತೆಯಿದೆ.

ಹೀಗಾಗಿ ಕೇವಲ ಪರಿಮಳವನ್ನು ಆಧರಿಸಿ ಉತ್ಪನ್ನ ಆಯ್ಕೆ ಮಾಡುವ ಬದಲು, ನಿಮ್ಮ ಚರ್ಮದ ಸ್ವಭಾವಕ್ಕೆ ಹೊಂದುವ ಉತ್ಪನ್ನವನ್ನು ಆಯ್ಕೆ ಮಾಡುವುದು ಮುಖ್ಯ.

ರೋಲ್‌-ಆನ್ ಬಳಸುವುದು ಸಂಪೂರ್ಣ ತಪ್ಪೇ?

ರೋಲ್‌-ಆನ್ ಬಳಸುವುದೇ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಸೂಕ್ತ ಉತ್ಪನ್ನವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ದೇಹದ ದುರ್ವಾಸನೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು.

ಆದರೆ ಸೂಕ್ಷ್ಮ ಚರ್ಮ ಹೊಂದಿರುವವರು ತಮ್ಮ ಚರ್ಮಕ್ಕೆ ಕಿರಿಕಿರಿ ಉಂಟುಮಾಡುವ ಅಂಶಗಳಿರುವ ಉತ್ಪನ್ನಗಳನ್ನು ತಪ್ಪಿಸುವುದು ಉತ್ತಮ. ಯಾವುದೇ ಉತ್ಪನ್ನ ಬಳಕೆಯಿಂದ ನಿರಂತರ ಸಮಸ್ಯೆ ಕಂಡುಬಂದರೆ ಅದನ್ನು ಮುಂದುವರಿಸುವ ಬದಲು ವೈದ್ಯರ ಸಲಹೆ ಪಡೆಯಬೇಕು.

ರೋಲ್‌-ಆನ್ ಬಳಸುವಾಗ ಈ ಸಲಹೆಗಳನ್ನು ಪಾಲಿಸಿ

  • ಸ್ನಾನದ ಬಳಿಕ ಸ್ವಚ್ಛ ಮತ್ತು ಸಂಪೂರ್ಣ ಒಣಗಿದ ಚರ್ಮದ ಮೇಲೆ ರೋಲ್‌-ಆನ್ ಬಳಸಿ.
  • ಹಚ್ಚಿದ ತಕ್ಷಣ ಬಟ್ಟೆ ಧರಿಸದೆ ಕೆಲವು ನಿಮಿಷ ಒಣಗಲು ಬಿಡಿ.
  • ಚರ್ಮದಲ್ಲಿ ಗಾಯ, ಕಟ್ ಅಥವಾ ಶೇವಿಂಗ್ ಮಾಡಿದ ತಕ್ಷಣ ರೋಲ್‌-ಆನ್ ಬಳಸುವುದನ್ನು ತಪ್ಪಿಸಿ.
  • ತುರಿಕೆ, ಉರಿ, ಕೆಂಪಾಗುವಿಕೆ ಅಥವಾ ದದ್ದು ಕಂಡುಬಂದರೆ ಉತ್ಪನ್ನದ ಬಳಕೆಯನ್ನು ನಿಲ್ಲಿಸಿ.
  • ನಿಮ್ಮ ಚರ್ಮಕ್ಕೆ ಹೊಂದುವ ಉತ್ಪನ್ನವನ್ನು ಆಯ್ಕೆ ಮಾಡಲು ಅದರ ಲೇಬಲ್‌ನಲ್ಲಿರುವ ಅಂಶಗಳನ್ನು ಪರಿಶೀಲಿಸಿ.
  • ಡಿಯೋಡರೆಂಟ್ ಬಳಸುವುದಕ್ಕಿಂತ ಅಂಡರ್‌ಆರ್ಮ್ ಭಾಗವನ್ನು ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ಮುಖ್ಯ.

ಒಟ್ಟಿನಲ್ಲಿ, ರೋಲ್‌-ಆನ್‌ಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದು ಮುಖ್ಯ. ಪ್ರತಿಯೊಬ್ಬರ ಚರ್ಮವೂ ವಿಭಿನ್ನವಾಗಿರುವುದರಿಂದ, ಯಾವುದೇ ಉತ್ಪನ್ನದಿಂದ ಸಮಸ್ಯೆ ಉಂಟಾದರೆ ಅದನ್ನು ನಿರ್ಲಕ್ಷಿಸದೆ ಸೂಕ್ತ ತಜ್ಞರ ಸಲಹೆ ಪಡೆಯುವುದು ಉತ್ತಮ.

Kalaburagi: ಬೆಳಂಬೆಳಗ್ಗೆ ಜೆಸ್ಕಾಂ ಎಇಇಗೆ ಶಾಕ್; ಎರಡು ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ!

0

ಕಲಬುರಗಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ವರಿ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ರಾಜೇಶ್ವರಿ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೇ ವೇಳೆ ಖಾದ್ರಿ ಚೌಕ್‌ನಲ್ಲಿರುವ ಅವರ ಮತ್ತೊಂದು ಮನೆ ಮೇಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಅಷ್ಟೇ ಅಲ್ಲದೆ, ಜೆಸ್ಕಾಂ ಕಚೇರಿಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಒಟ್ಟು ಎರಡು ಮನೆಗಳು ಹಾಗೂ ಕಚೇರಿ ಸೇರಿದಂತೆ ಮೂರು ಕಡೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆದಿದೆ.

ರಾಜೇಶ್ವರಿ ಅವರು ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮನೆಗೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಸದ್ಯ ಲೋಕಾಯುಕ್ತ ಅಧಿಕಾರಿಗಳು ಆಸ್ತಿ ಹಾಗೂ ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ: 28 ಕೋಟಿ ಮೌಲ್ಯದ ಗಾಂಜಾ, ಚಿನ್ನ ಜಪ್ತಿ!

0

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಹಾಗೂ ಅಕ್ರಮ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಪ್ರತ್ಯೇಕ ಪ್ರಕರಣಗಳಲ್ಲಿ ಆರು ಪ್ರಯಾಣಿಕರನ್ನು ಬಂಧಿಸಲಾಗಿದೆ.

ವಿಯೆಟ್ನಾಂ ಹಾಗೂ ಬ್ಯಾಂಕಾಕ್‌ನಿಂದ ಕೆಐಎಗೆ ಆಗಮಿಸಿದ್ದ ಪ್ರಯಾಣಿಕರ ಲಗೇಜ್‌ಗಳನ್ನು ಪರಿಶೀಲಿಸಿದ ವೇಳೆ ಒಟ್ಟು 80.11 ಕೆಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಇದರ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು ₹28 ಕೋಟಿ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿರುವ ಕಸ್ಟಮ್ಸ್ ಅಧಿಕಾರಿಗಳು, ಬ್ಯಾಂಕಾಕ್‌ನಿಂದ ಬಂದಿದ್ದ ಪ್ರಯಾಣಿಕರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

1.75 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ:

ಇನ್ನು ಮತ್ತೊಂದು ಕಾರ್ಯಾಚರಣೆಯಲ್ಲಿ ಅಬುದಾಬಿ ಹಾಗೂ ಕೌಲಾಲಂಪುರದಿಂದ ಕೆಐಎಗೆ ಆಗಮಿಸಿದ್ದ ಪ್ರಯಾಣಿಕರನ್ನು ಪರಿಶೀಲಿಸಲಾಗಿದೆ. ಈ ವೇಳೆ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1.2 ಕೆಜಿ ಚಿನ್ನಾಭರಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು ₹1.75 ಕೋಟಿ ಎಂದು ಅಂದಾಜಿಸಲಾಗಿದೆ.

ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದ ಮೇಲೆ ಪ್ರಯಾಣಿಕರನ್ನು ಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ವಿಮಾನ ನಿಲ್ದಾಣದಲ್ಲಿ ನಡೆದ ಈ ಸರಣಿ ಕಾರ್ಯಾಚರಣೆಗಳ ಮೂಲಕ ಅಕ್ರಮ ಮಾದಕ ವಸ್ತು ಹಾಗೂ ಚಿನ್ನ ಸಾಗಾಟದ ಜಾಲದ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಒಟ್ಟಾರೆ, ಕೆಐಎನಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ₹28 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಮತ್ತು ₹1.75 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿಯಾಗಿದ್ದು, ಆರು ಪ್ರಯಾಣಿಕರನ್ನು ಬಂಧಿಸಲಾಗಿದೆ. ಪ್ರಕರಣಗಳ ತನಿಖೆ ಮುಂದುವರಿದಿದೆ.

ಆನೇಕಲ್‌ನಲ್ಲಿ ಅಕ್ರಮ ಪಿಸ್ತೂಲ್ ಮಾರಾಟ; ಏಳು ಮಂದಿ ಬಂಧನ!

0

ಆನೇಕಲ್: ಅಕ್ರಮವಾಗಿ ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆನೇಕಲ್ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ ಐದು ಕಂಟ್ರಿಮೇಡ್ ಪಿಸ್ತೂಲ್ ಹಾಗೂ 10 ಗುಂಡುಗಳನ್ನು ಜಪ್ತಿ ಮಾಡಲಾಗಿದೆ.

ಬಂಧಿತರನ್ನು ಪ್ರದೀಪ್ ರಮೇಶ್, ಮನೋಜ್ ಅಲಿಯಾಸ್ ಜಾಕಿ, ರಿಜ್ವಾನ್ ಪಾಷಾ, ನಂಜಪ್ಪ, ವೆಂಕಟರಾಜು, ಸುಣವಾರ ಗೋಪಿ ಹಾಗೂ ಶಿವರಾಜ್ ಎಂದು ಗುರುತಿಸಲಾಗಿದೆ.

ಆಗಸ್ಟ್ 14ರಂದು ಗಸ್ತಿನಲ್ಲಿದ್ದ ಪೊಲೀಸರಿಗೆ ಹಾಲ್ದೇನಹಳ್ಳಿ ರೈಲ್ವೆ ಗೇಟ್ ಬಳಿ ಬ್ಯಾಗ್‌ನೊಂದಿಗೆ ನಿಂತಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದ. ಪರಿಶೀಲನೆ ನಡೆಸಿದಾಗ ಆತನ ಬಳಿಯಿಂದ ಮೂರು ಕಂಟ್ರಿಮೇಡ್ ಪಿಸ್ತೂಲ್ ಹಾಗೂ 10 ಗುಂಡುಗಳು ಪತ್ತೆಯಾಗಿದ್ದವು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಪಿಸ್ತೂಲ್ ಮಾರಾಟದ ಜಾಲದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮಧ್ಯಪ್ರದೇಶದ ಕಿಂಗ್‌ಪಿನ್‌ನಿಂದ ಪಿಸ್ತೂಲ್ ಪೂರೈಕೆ?

ತನಿಖೆ ವೇಳೆ ಮಧ್ಯಪ್ರದೇಶದ ಬೇಡಘಾಟ್‌ನ ದಾವೂದ್ ಎಂಬಾತ ದಂಧೆಯ ಕಿಂಗ್‌ಪಿನ್ ಎಂದು ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾವೂದ್‌ನಿಂದ ಪ್ರದೀಪ್ ರಮೇಶ್ ಮೂಲಕ ರೈಲಿನಲ್ಲಿ ಆನೇಕಲ್‌ಗೆ ಪಿಸ್ತೂಲ್‌ಗಳನ್ನು ರವಾನೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಗನ್‌ಗಳ ಡೆಲಿವರಿಗಾಗಿ ಕಾಯುತ್ತಿದ್ದ ವೇಳೆ ಪ್ರದೀಪ್ ರಮೇಶ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.

ಮುಂದಿನ ತನಿಖೆಯಲ್ಲಿ ಕೆ.ಜಿ.ಹಳ್ಳಿಯ ರೌಡಿಶೀಟರ್ ಕುಳ್ಳ ರಿಜ್ವಾನ್‌ಗೆ ಒಂದು ಪಿಸ್ತೂಲ್ ಹಾಗೂ ರೌಡಿಶೀಟರ್ ಮನೋಜ್ ಅಲಿಯಾಸ್ ಜಾಕಿಗೆ ಮತ್ತೊಂದು ಪಿಸ್ತೂಲ್ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೋಕಾ ಕಾಯ್ದೆಯಡಿ ಪ್ರಕರಣ:

ಉಳಿದ ಆರೋಪಿಗಳು ಗನ್ ಸಪ್ಲೈಯರ್‌ಗಳೊಂದಿಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದ್ದು, ಬಂಧಿತ ಏಳು ಮಂದಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಡಿವೈಎಸ್ಪಿ ಗೋಪಾಲ್ ನಾಯಕ್ ಹಾಗೂ ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಪರ್ಕ ಇರುವ ಶಂಕೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾರೆ, ಆನೇಕಲ್‌ನಲ್ಲಿ ಅಕ್ರಮ ಪಿಸ್ತೂಲ್ ಮಾರಾಟದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು, ಏಳು ಮಂದಿಯನ್ನು ಬಂಧಿಸಿ ಐದು ಪಿಸ್ತೂಲ್ ಹಾಗೂ 10 ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಜಾಲದ ಹಿಂದೆ ಇರುವ ಇತರರ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.