Home Blog Page 4

“ಇದು ಖಾಲಿ ಚೊಂಬಲ್ಲ, ತುಂಬಿದ ಕೊಡ”: ಬಜೆಟ್ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರ – ವಿರೋಧ ಪಕ್ಷದ ಟೀಕೆಗೆ ತಿರುಗೇಟು

ಬೆಂಗಳೂರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸುದೀರ್ಘ ಉತ್ತರ ನೀಡಲು ಆರಂಭಿಸಿದರು. ಈ ಬಾರಿ ಬಜೆಟ್ ಚರ್ಚೆಯಲ್ಲಿ ಒಟ್ಟು 50 ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿದ್ದು, ಒಟ್ಟಾರೆ 24 ಗಂಟೆ 45 ನಿಮಿಷಗಳ ಕಾಲ ಚರ್ಚೆ ನಡೆದಿದೆ.

‘ನಾನು ಇದುವರೆಗೆ 17 ಬಾರಿ ಬಜೆಟ್ ಮಂಡಿಸಿ ಉತ್ತರ ನೀಡಿದ್ದೇನೆ. ಆದರೆ ಇಷ್ಟು ದೊಡ್ಡ ಮಟ್ಟದ ಚರ್ಚೆ ನಡೆದಿರುವುದು ಇದೇ ಮೊದಲ ಬಾರಿ’ ಎಂದು ಸಿಎಂ ತಿಳಿಸಿ, ಚರ್ಚೆಗೆ ಅವಕಾಶ ಮಾಡಿಕೊಟ್ಟ ಸಭಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

ಚರ್ಚೆಯಲ್ಲಿ ಪಾಲ್ಗೊಂಡವರ ವಿವರ ನೀಡಿದ ಸಿಎಂ, ವಿರೋಧ ಪಕ್ಷದ 21 ಸದಸ್ಯರು ಒಟ್ಟು 12 ಗಂಟೆ 49 ನಿಮಿಷ ಮಾತನಾಡಿದ್ದಾರೆ ಎಂದು ತಿಳಿಸಿದರು. ಆಡಳಿತ ಪಕ್ಷದ ಸದಸ್ಯರು 8 ಗಂಟೆ 43 ನಿಮಿಷ ಹಾಗೂ ಜೆಡಿಎಸ್ ಸದಸ್ಯರು 2 ಗಂಟೆ 55 ನಿಮಿಷಗಳ ಕಾಲ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಒಬ್ಬರೇ 3 ಗಂಟೆ 6 ನಿಮಿಷಗಳ ಕಾಲ ಮಾತನಾಡಿದ್ದಾರೆ ಎಂದು ಅಂಕಿ-ಅಂಶ ನೀಡಿದರು.

ವಿರೋಧ ಪಕ್ಷದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ವಿಪಕ್ಷ ನಾಯಕರು ಆಳವಾದ ಅಧ್ಯಯನ ಮಾಡಿಲ್ಲ. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಶೀರ್ಷಿಕೆಗಳು ಬರಲೆಂಬ ಉದ್ದೇಶದಿಂದ ಪದಗಳನ್ನು ಬಳಸಿದ್ದಾರೆ’ ಎಂದು ವ್ಯಂಗ್ಯವಾಡಿದರು. ಟೀಕೆ ಮಾಡಿದ ಆಡಳಿತ, ವಿಪಕ್ಷ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರಾದ ಸೋಮಶೇಖರ್ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಹ ಅಭಿನಂದನೆ ಸಲ್ಲಿಸಿದರು.

‘ಯಾರು ಎಷ್ಟೇ ಟೀಕೆ ಮಾಡಿದರೂ ಮಾವಿನ ಹಣ್ಣು ಬೇವಿನ ಹಣ್ಣಾಗಲು ಸಾಧ್ಯವಿಲ್ಲ. ರಾಜ್ಯದ ಜನರು ಬುದ್ಧಿವಂತರಾಗಿದ್ದು, ಮಾವಿನ ಹಣ್ಣನ್ನು ಮಾವಿನ ಹಣ್ಣು ಎಂದೇ ಕರೆಯುತ್ತಾರೆ’ ಎಂದು ಹೇಳುವ ಮೂಲಕ ತಮ್ಮ ಬಜೆಟ್ ಜನಪರವಾಗಿದೆ ಎಂದು ಸಮರ್ಥಿಸಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ‘ನಾನು ಮಾವಿನ ಹಣ್ಣು ಎಂದೇ ಹೇಳಿದ್ದೇನೆ, ಆದರೆ ಅದು ಸ್ವಲ್ಪ ಹುಳಿಯಾಗಿದೆ ಎಂದಷ್ಟೇ’ ಎಂದು ಟಾಂಗ್ ನೀಡಿದರು.

ಇನ್ನೂ, ವಿಪಕ್ಷಗಳು ಬಜೆಟ್ ಅನ್ನು ‘ಕ್ರೆಡಿಟ್ ಕಾರ್ಡ್ ಬಜೆಟ್’ ಹಾಗೂ ‘ಖಾಲಿ ಚೊಂಬು’ ಎಂದು ಟೀಕಿಸಿದ್ದಕ್ಕೆ ಸಿಎಂ ತೀಕ್ಷ್ಣವಾಗಿ ಉತ್ತರಿಸಿದರು. ‘ಇದು ಖಾಲಿ ಚೊಂಬು ಅಲ್ಲ, ಭರ್ತಿ ಚೊಂಬು. ನಮ್ಮ ಬಜೆಟ್ ತುಂಬಿದ ಕೊಡವಿನಂತೆ ಇದ್ದು, ಅದು ಎಂದಿಗೂ ಖಾಲಿಯಾಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಕ್ಕಿಂನಲ್ಲಿ ಭೂಕುಸಿತ ದುರಂತ: ಚುಂಗ್ ಥಾಂಗ್ʼನಲ್ಲಿ ಸಿಲುಕಿದ 200 ಪ್ರವಾಸಿಗರು

0

ಗ್ಯಾಂಗ್ಟಾಕ್: ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ, ಸುಮಾರು 200ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿರುವ ಘಟನೆ ನಡೆದಿದೆ.

ಮಂಗಳವಾರ ರಾತ್ರಿ ಚುಂಗ್ಥಾಂಗ್ಲಾಚೆನ್ ಮಾರ್ಗದ ಹಲವೆಡೆ ಭೂಕುಸಿತ ಸಂಭವಿಸಿದ್ದು, ಲಾಚೆನ್ ಕಡೆಗೆ ತೆರಳುತ್ತಿದ್ದ ಪ್ರವಾಸಿಗರು ಮಧ್ಯದಲ್ಲೇ ಸಿಲುಕಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ಪ್ರವಾಸಿಗರಿಗೆ ಐಟಿಬಿಪಿ ಶಿಬಿರ ಹಾಗೂ ಸ್ಥಳೀಯ ಗುರುದ್ವಾರದಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ ಎಂದು ಮಂಗನ್ ಜಿಲ್ಲೆಯ ಕಲೆಕ್ಟರ್ ಅನಂತ್ ಜೈನ್ ತಿಳಿಸಿದ್ದಾರೆ.

ಭೂಕುಸಿತದಿಂದ ರಸ್ತೆಗಳ ಮೇಲೆ ಬಿದ್ದಿರುವ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಹವಾಮಾನ ಸ್ಥಿತಿಗತಿಗಳನ್ನು ಅವಲಂಬಿಸಿ ಮಾರ್ಗವನ್ನು ಸುರಕ್ಷಿತ ಎಂದು ಘೋಷಿಸಿದ ಬಳಿಕವೇ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸಲಾಗುತ್ತಿದೆ. ಇತ್ತೀಚಿನ ಭಾರೀ ಹಿಮಪಾತದ ಹಿನ್ನೆಲೆ ತ್ಸೊಮ್ಗೊ ಸರೋವರ ಮತ್ತು ನಾಥುಲಾ ಪಾಸ್ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

2023ರಲ್ಲಿ ಸಂಭವಿಸಿದ್ದ ಹಿಮನದಿ ಸರೋವರ ಪ್ರವಾಹದಿಂದ ಹಾನಿಗೊಂಡ ಲಾಚೆನ್ ಮಾರ್ಗವನ್ನು ಇತ್ತೀಚೆಗೆ ಮಾರ್ಚ್ 9ರಂದು ಮತ್ತೆ ತೆರೆಯಲಾಗಿತ್ತು.

ಗ್ಯಾಸ್ ಬುಕ್ಕಿಂಗ್ ನಿಯಮ ಬದಲಾವಣೆ ವರದಿ ಸುಳ್ಳು; ಕೇಂದ್ರ ಸರ್ಕಾರ ಸ್ಪಷ್ಟನೆ

0

ನವದೆಹಲಿ: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ವರದಿಗಳು ತಪ್ಪು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಈ ಕುರಿತು ಇಂಡಿಯನ್ ಆಯಿಲ್ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಎಲ್ಪಿಜಿ ರಿಫಿಲ್ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ತಿಳಿಸಿದೆ. ಸದ್ಯ ಜಾರಿಯಲ್ಲಿರುವ ನಿಯಮಗಳು ಯಥಾಸ್ಥಿತಿಯಲ್ಲೇ ಮುಂದುವರಿಯುತ್ತಿವೆ ಎಂದು ಹೇಳಿದೆ.

ದೇಶಾದ್ಯಂತ ಎಲ್ಪಿಜಿ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸಾಕಷ್ಟು ಸ್ಟಾಕ್ ಲಭ್ಯವಿದೆ. ಹೀಗಾಗಿ ಗ್ರಾಹಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.

ಪಿಎಂ ಉಜ್ವಲ ಯೋಜನೆ (PMUY) ಅಡಿಯಲ್ಲಿ 45 ದಿನ, ನಗರ ಪ್ರದೇಶಗಳಲ್ಲಿ 25 ದಿನ ಹಾಗೂ ಗ್ರಾಮೀಣ ಭಾಗಗಳಲ್ಲಿ 45 ದಿನಗಳ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಅಧಿಕೃತ ಸಂಸ್ಥೆಗಳ ಮಾಹಿತಿಯನ್ನೇ ನಂಬುವಂತೆ ಹಾಗೂ ಗಾಬರಿಯಲ್ಲಿ ಗ್ಯಾಸ್ ಬುಕ್ಕಿಂಗ್ ಮಾಡುವುದನ್ನು ತಪ್ಪಿಸುವಂತೆ ಇಂಡಿಯನ್ ಆಯಿಲ್ ಮನವಿ ಮಾಡಿದೆ.

ಪೊಲೀಸ್ ಇನ್ʼಸ್ಪೆಕ್ಟರ್ ನಿಂದಲೇ ಲೈಂಗಿಕ ಕಿರುಕುಳ? ಚಿನ್ನ, ಮುದ್ದು ಹೇಳಿ ಕೊಲೆ ಬೆದರಿಕೆ ಆರೋಪ!

0

ಬೆಂಗಳೂರು: ನಗರದ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂತ್ರಸ್ತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ದೂರುದಾರೆಯ ಪ್ರಕಾರ, ಇನ್ಸ್‌ಪೆಕ್ಟರ್ ಪಾಪಣ್ಣ ಕಚೇರಿ ಹಾಗೂ ವೈಯಕ್ತಿಕ ಮೊಬೈಲ್ ಸಂಖ್ಯೆಯಿಂದ ಹಲವಾರು ಬಾರಿ ಕರೆ ಮಾಡಿ ಕಿರುಕುಳ ನೀಡಿದ್ದಾರೆ. ‘ಚಿನ್ನ, ಮುದ್ದು, ಬಂಗಾರಿ’ ಎಂದು ಕರೆಯುವುದರ ಜೊತೆಗೆ ಅಸಭ್ಯವಾಗಿ ಮಾತನಾಡಿ, ವಾಟ್ಸಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾಗಿ ಆರೋಪಿಸಲಾಗಿದೆ.

ಇದಲ್ಲದೆ, ಪ್ರಕರಣ ಬಹಿರಂಗಪಡಿಸಿದರೆ ಸಂತ್ರಸ್ತೆ ಮತ್ತು ಅವರ ಮಕ್ಕಳನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮನೆಗೆ ಬರುವುದಾಗಿ ಹೇಳಿ ಹಲವಾರು ಬಾರಿ ಕರೆ ಮಾಡಿ ಕಿರುಕುಳ ನೀಡಿರುವುದಾಗಿ ಕೂಡ ಆರೋಪಿಸಲಾಗಿದೆ.

ಸಂತ್ರಸ್ತೆ ಈ ಆರೋಪಗಳಿಗೆ ಸಂಬಂಧಿಸಿದಂತೆ ವಾಟ್ಸಪ್ ಸಂದೇಶಗಳ ಸ್ಕ್ರೀನ್‌ಶಾಟ್‌ಗಳು, ಕರೆ ವಿವರಗಳು ಹಾಗೂ ಆಡಿಯೋ ದಾಖಲೆಗಳನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದಾರೆ.

ಈ ದೂರಿನ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸುವ ಸಾಧ್ಯತೆ ಇದೆ. ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಆಗ್ರಹಿಸಿದ್ದಾರೆ. ಪ್ರಕರಣವು ಈಗ ಆರೋಪದ ಹಂತದಲ್ಲಿದ್ದು, ತನಿಖೆ ಪೂರ್ಣಗೊಂಡ ಬಳಿಕ ನಿಜಸ್ಥಿತಿ ಸ್ಪಷ್ಟವಾಗಲಿದೆ.

ಮೆಟ್ರೋ ಮಾರ್ಗಕ್ಕಾಗಿ ಮರ ಕಡಿಯಲು ಅನುಮತಿ ಕೋರಿ ಹೈಕೋರ್ಟ್‌ಗೆ BMRCL ಅರ್ಜಿ

ಬೆಂಗಳೂರು: ಜೆಪಿನಗರ 4ನೇ ಹಂತದಿಂದ ಮೈಸೂರು ರಸ್ತೆಯವರೆಗೆ ಪ್ರಸ್ತಾವಿತ ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮರಗಳನ್ನು ಕಡಿಯಲು ಅನುಮತಿ ಕೋರಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.

ಈ ಸಂಬಂಧ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಹಾಗೂ ಪರಿಸರವಾದಿ ದತ್ತಾತ್ರೇಯ ದೇವರು ಅವರು 2018ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ನಡುವೆ, ಬಿಎಂಆರ್‌ಸಿಎಲ್‌ ಈ ಮಧ್ಯಂತರ ಅರ್ಜಿಯನ್ನು ಸಲ್ಲಿಸಿ ಅನುಮತಿ ಕೋರಿದೆ.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಬು ಭಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ವಿಭಾಗೀಯ ಪೀಠ, ಈ ಹಿಂದೆ ನೀಡಿದ್ದ ಆದೇಶಗಳ ಅನುಷ್ಠಾನ ಕುರಿತ ವರದಿ ಸಲ್ಲಿಸಲು ಸೂಚಿಸಿದೆ. ಜೊತೆಗೆ, ಮರ ಕಡಿತ ವಿಚಾರವಾಗಿ ಅರ್ಜಿದಾರರೊಂದಿಗೆ ಸಮಾಲೋಚನೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಏಪ್ರಿಲ್‌ 10ಕ್ಕೆ ಮುಂದೂಡಲಾಗಿದೆ.

ವಿಚಾರಣೆ ವೇಳೆ ಬಿಎಂಆರ್‌ಸಿಎಲ್‌ ಪರ ವಕೀಲರು, ಈ ಮಾರ್ಗಕ್ಕೆ ಸಂಬಂಧಿಸಿದಂತೆ ಟ್ರೀ ಎಕ್ಸ್‌ಪರ್ಟ್ ಸಮಿತಿ ವರದಿ ನೀಡಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿರುವುದರಿಂದ ಮರ ಕಡಿತಕ್ಕೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು.

ಈ ಮಾರ್ಗದಲ್ಲಿ ಒಟ್ಟು 2,184 ಮರಗಳಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆ ಆಗದಂತೆ ಕೆಲವು ಮರಗಳನ್ನು ಕಡಿತಗೊಳಿಸುವುದು ಅಥವಾ ಸ್ಥಳಾಂತರಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. ಎಲ್ಲ ಮರಗಳಿಗೆ ಸಂಖ್ಯಾಕ್ರಮ ನೀಡಲಾಗಿದ್ದು, ಸ್ಥಳಾಂತರ ಸಾಧ್ಯತೆ ಕುರಿತು ಅಧ್ಯಯನ ನಡೆಸಲಾಗಿದೆ. ಸ್ಥಳಾಂತರಕ್ಕೆ ಉದ್ದೇಶಿತ ಸ್ಥಳಗಳ ವಿವರಗಳನ್ನೂ ಪೀಠಕ್ಕೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಇದಕ್ಕೆ ಪ್ರತಿಯಾಗಿ, ಮೂಲ ಅರ್ಜಿದಾರರ ಪರ ವಕೀಲರು, ಹೈಕೋರ್ಟ್‌ ನೀಡಿದ್ದ ಹಿಂದಿನ ಆದೇಶಗಳನ್ನು ಇನ್ನೂ ಅನುಷ್ಠಾನಗೊಳಿಸಿಲ್ಲ ಹಾಗೂ ಅರಣ್ಯೀಕರಣ ವರದಿಗಳನ್ನೂ ಸಲ್ಲಿಸಲಾಗಿಲ್ಲ ಎಂದು ಆಕ್ಷೇಪಿಸಿದರು. ಆದ್ದರಿಂದ ಮಧ್ಯಂತರ ಅರ್ಜಿಯನ್ನು ಪರಿಗಣಿಸಬಾರದು ಎಂದು ಕೋರಿದರು.

ಅಲ್ಲದೆ, ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ, 1976 ಅಡಿಯಲ್ಲಿ ಮರ ಪ್ರಾಧಿಕಾರ ರಚಿಸಿ ನಗರದಲ್ಲಿ ಮರಗಳ ಗಣನೆ ನಡೆಸುವಂತೆ ಹೈಕೋರ್ಟ್‌ ಈ ಹಿಂದೆ ಆದೇಶಿಸಿದ್ದರೂ, ಕಳೆದ 49 ವರ್ಷಗಳಿಂದ ಯಾವುದೇ ಸಮಗ್ರ ಗಣನೆ ನಡೆದಿಲ್ಲ ಎಂದು ತಿಳಿಸಿದರು. 2019ರ ಆದೇಶದಂತೆ ನಗರದಲ್ಲಿ ಮರಗಳ ಗಣನೆ ಪೂರ್ಣಗೊಳಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ)ಕ್ಕೆ ನಿರ್ದೇಶನ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೂ ಮೇಲೆ, ಕಳೆದ ಮೂರು ವರ್ಷಗಳಿಂದ ಯಾವುದೇ ಪ್ರಗತಿ ಕಂಡುಬಂದಿಲ್ಲ. ಬಿಎಂಆರ್‌ಸಿಎಲ್‌ ಸೇರಿದಂತೆ ವಿವಿಧ ಯೋಜನಾ ಸಂಸ್ಥೆಗಳು ಪ್ರತಿಯೊಂದು ಮರ ಕಡಿತಕ್ಕೆ ಬದಲಾಗಿ ಮರಗಳನ್ನು ನೆಡುವ ಜವಾಬ್ದಾರಿ ಹೊಂದಿದ್ದರೂ, ಆ ಹೊಣೆಗಾರಿಕೆಯನ್ನು ಜಿಬಿಎಗೆ ವರ್ಗಾಯಿಸಲಾಗಿದೆ. 50 ಸಾವಿರ ಮರಗಳನ್ನು ನೆಡುವುದಾಗಿ ಹೇಳಿದ್ದರೂ, ಇದುವರೆಗೆ ಯಾವುದೇ ವಿವರಗಳನ್ನು ಒದಗಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.

Gold Rate Today: ಚಿನ್ನ ಪ್ರಿಯರಿಗೆ ಬಿಗ್‌ ಶಾಕ್‌! ಕಮ್ಮಿಯಿದ್ದ ಬಂಗಾರದ ಬೆಲೆ ದಿಢೀರ್‌ ಭಾರೀ ಏರಿಕೆ

ಬೆಂಗಳೂರು: ಒಂದು ವಾರದ ಕುಸಿತ ನಂತರ, ಚಿನ್ನದ ಬೆಲೆ ಇಂದು ಏಕಾಏಕಿ ಭಾರಿ ಏರಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 3760 ರೂಪಾಯಿ ಹೆಚ್ಚಳ ಹೊಂದಿ 1,46,670 ರೂಪಾಯಿಗೆ ತಲುಪಿದ್ದು, ಚಿನ್ನಾಭರಣ ಪ್ರಿಯರ ಲೆಕ್ಕಾಚಾರದಲ್ಲಿ ದೊಡ್ಡ ತೀವ್ರತೆ ಮೂಡಿಸಿದೆ.

ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 376 ರೂಪಾಯಿ ಏರಿಕೆಯಿಂದ 14,667 ರೂ ಆಗಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 345 ರೂಪಾಯಿ ಹೆಚ್ಚಳ ಕಂಡು 13,445 ರೂ ಆಗಿದ್ದು, 10 ಗ್ರಾಂ ಬೆಲೆಯಲ್ಲಿ 3450 ರೂ ಏರಿಕೆಯಾಗಿಯೇ 1,34,450 ರೂಪಾಯಿಗೆ ತಲುಪಿದೆ.

ಬೆಳ್ಳಿ ಬೆಲೆ ಸಹ ಇಂದು ಭಾರಿ ಏರಿಕೆಯಾಗಿದ್ದು, ಕೆಜಿ ಬೆಲೆ 2,50,000 ರೂಪಾಯಿಗೆ ತಲುಪಿದೆ. ಸೋಮವಾರ ಬೆಳ್ಳಿ ಬೆಲೆ 15,000 ರೂಪಾಯಿ ಕುಸಿತ ಕಂಡಿದ್ದರೆ, ಕಳೆದ ವಾರವೂ ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಭಾರಿ ಇಳಿಕೆ ಕಂಡಿತ್ತು. ಮಾರ್ಚ್ 2 ರಂದು 3.15 ಲಕ್ಷಕ್ಕೆ ಏರಿದ್ದ ಬೆಲೆ, 2.35 ಲಕ್ಷ ರೂಕ್ಕೆ ಇಳಿಕೆ ಕಂಡಿತ್ತು.

ಈ ತೀವ್ರ ಬೆಲೆ ಏರಿಕೆಗೆ ಇರಾನ್-ಅಮೆರಿಕ ಸಂಘರ್ಷ ಮತ್ತು ಡಾಲರ್ ಬೆಲೆ ಏರಿಳಿತ ಪ್ರಮುಖ ಕಾರಣಗಳಾಗಿವೆ. ಈ ಪರಿಣಾಮದಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಹಠಾತ್ ಏರುಪೇರು ಕಂಡುಬರುತ್ತಿದೆ.

ಬೆಂಗಳೂರು: ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಬಳಿ ಅಪಘಾತ- ಯುವಕ ಪ್ರಜ್ಞೆ ತಪ್ಪಿ ಬಿದ್ದು ಮುಕ್ಕಾಲು ಗಂಟೆಯಾದ್ರೂ ಸ್ಥಳಕ್ಕೆ ಬಾರದ ಅಂಬುಲೆನ್ಸ್

ಬೆಂಗಳೂರು: ನಗರದ ಹೃದಯ ಭಾಗದಲ್ಲೇ ನಡೆದ ರಸ್ತೆ ಅಪಘಾತವು ತುರ್ತು ಸೇವೆಗಳ ವೈಫಲ್ಯವನ್ನು ಬಯಲಿಗೆಳೆದಿದೆ. ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಸಮೀಪ ಜಲ್ಲಿಕಲ್ಲು ಚೆಲ್ಲಿಕೊಂಡಿದ್ದ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಡೆಲಿವರಿ ಬಾಯ್ ಕೆಳಗೆ ಬಿದ್ದಿದ್ದು, ತೀವ್ರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿದ್ದಾನೆ.

ಘಟನೆ ನಡೆದ ನಂತರ ಸುಮಾರು 30 ರಿಂದ 40 ನಿಮಿಷಗಳವರೆಗೆ ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಮಧ್ಯಭಾಗದಲ್ಲೇ, ಮುಖ್ಯಮಂತ್ರಿ ನಿವಾಸಕ್ಕೂ ಸಮೀಪದಲ್ಲಿದ್ದರೂ ತುರ್ತು ಸೇವೆಗಳ ಪ್ರತಿಕ್ರಿಯೆ ವಿಳಂಬವಾಗಿರುವುದು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ತಡರಾತ್ರಿ ಕಲಾಪ ಮುಗಿದು ಅದೇ ಮಾರ್ಗದಲ್ಲಿ ಸಂಚರಿಸಿದ್ದ ಶಾಸಕರು ಹಾಗೂ ಸಚಿವರು ಸಹ ಗಾಯಾಳುವಿನ ನೆರವಿಗೆ ಬರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸರ ಎದುರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗಾಯಗೊಂಡಿದ್ದ ಡೆಲಿವರಿ ಬಾಯ್‌ನ್ನು ನಂತರ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧಿಸಿದಂತೆ ಅಧಿಕಾರಿಗಳ ನಿರ್ಲಕ್ಷ್ಯ ಕುರಿತಾಗಿ ಪ್ರಶ್ನೆಗಳು ಉದ್ಭವಿಸುತ್ತಿವೆ.

ಇಂದಿನಿಂದ ಗ್ಯಾಸ್ ಬುಕ್ಕಿಂಗ್ ಹೊಸ ನಿಯಮ ಜಾರಿ: ಗಡುವಿಗೂ ಮೊದಲು ಬುಕ್ ಮಾಡಿದರೆ ಅಕೌಂಟ್ ಬ್ಲಾಕ್!

ನವದೆಹಲಿ: ಇಂದಿನಿಂದ ಎಲ್‌ಪಿಜಿ ಗ್ಯಾಸ್ ಬುಕ್ಕಿಂಗ್‌ಗೆ ಕಠಿಣ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಗ್ಯಾಸ್ ಡೆಲಿವರಿ ಆದ ನಂತರ ನಿಗದಿತ ಅವಧಿಗೂ ಮೊದಲು ಬುಕ್ಕಿಂಗ್ ಮಾಡಿದರೆ ಗ್ರಾಹಕರ ಅಕೌಂಟ್‌ಗಳನ್ನು ಬ್ಲಾಕ್ ಮಾಡುವುದಾಗಿ ಗ್ಯಾಸ್ ಕಂಪನಿಗಳು ಸ್ಪಷ್ಟಪಡಿಸಿವೆ.

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ನಿಯಮಗಳನ್ನು ಜಾರಿಗೆ ತಂದಿರುವುದಾಗಿ ತಿಳಿದುಬಂದಿದೆ. ಸಿಂಗಲ್ ಹಾಗೂ ಡಬಲ್ ಗ್ಯಾಸ್ ಕನೆಕ್ಷನ್‌ಗಳಿಗೆ ವಿಭಿನ್ನ ಅವಧಿ ನಿಗದಿಪಡಿಸಲಾಗಿದೆ.

ಸಿಂಗಲ್ ಕನೆಕ್ಷನ್‌ಗಳಿಗೆ ಈಗ ಡೆಲಿವರಿ ಆದ 25 ದಿನಗಳ ಬಳಿಕ ಮಾತ್ರ ಬುಕ್ಕಿಂಗ್ ಸಾಧ್ಯ. ಡಬಲ್ ಕನೆಕ್ಷನ್‌ಗಳಿಗೆ 35 ದಿನಗಳ ನಂತರವೇ ಬುಕ್ಕಿಂಗ್ ಅವಕಾಶ ನೀಡಲಾಗಿದೆ. 5 ಕೆಜಿ ಸಿಲಿಂಡರ್‌ಗಳಿಗೆ 16 ದಿನಗಳ ಗಡುವು ನಿಗದಿ ಮಾಡಲಾಗಿದ್ದು, 10 ಕೆಜಿ ಸಿಲಿಂಡರ್‌ಗಳಿಗೆ 32 ದಿನಗಳ ಬಳಿಕ ಬುಕ್ಕಿಂಗ್ ಮಾಡಬೇಕು.

ಉಜ್ವಲ ಯೋಜನೆಯಡಿಯಲ್ಲಿ ಸಿಲಿಂಡರ್ ಪಡೆಯುವ ಗ್ರಾಹಕರು ಈಗ 45 ದಿನಗಳ ನಂತರವೇ ಬುಕ್ಕಿಂಗ್ ಮಾಡಬೇಕಾಗಿದೆ.

ಇದೇ ವೇಳೆ ಡಿಜಿಟಲ್ ಪಾವತಿ ಆ್ಯಪ್‌ಗಳ ಮೂಲಕ ಗ್ಯಾಸ್ ಬುಕ್ಕಿಂಗ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಫೋನ್‌ಪೇ, ಗೂಗಲ್ ಪೇ, ಅಮೆಜಾನ್ ಪೇ ಸೇರಿದಂತೆ ವಿವಿಧ ಆ್ಯಪ್‌ಗಳಲ್ಲಿ ಬುಕ್ಕಿಂಗ್ ಸಾಧ್ಯವಿಲ್ಲ. ಹಣ ಕಡಿತವಾದರೂ ಬುಕ್ಕಿಂಗ್ ದೃಢವಾಗುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಇದಕ್ಕೆ ಬದಲಾಗಿ ಐವಿಆರ್‌ಎಸ್, ಮಿಸ್ಡ್ ಕಾಲ್ ಹಾಗೂ ವಾಟ್ಸಪ್ ಮೂಲಕ ಮಾತ್ರ ಗ್ಯಾಸ್ ಬುಕ್ಕಿಂಗ್ ಮಾಡಬಹುದಾಗಿದೆ.

ಪಾತಾಳಕ್ಕೆ ಇಳಿದ ಟೊಮ್ಯಾಟೋ ಬೆಲೆ: ರೈತರು ಕಂಗಾಲು

0

ವಿಜಯನಗರ: ಒಮ್ಮೆ ಲಾಭದಾಯಕ ಬೆಳೆ ಎಂದೇ ಗುರುತಿಸಿಕೊಂಡಿದ್ದ ಟೊಮ್ಯಾಟೋ ಈಗ ರೈತರಿಗೆ ಭಾರವಾದ ನಷ್ಟದ ಸಂಕೇತವಾಗಿ ಪರಿಣಮಿಸಿದೆ. ವಿಜಯನಗರ ಜಿಲ್ಲೆಯಲ್ಲಿ ಟೊಮ್ಯಾಟೋ ಬೆಲೆ ಏಕಾಏಕಿ ಕುಸಿದು, ರೈತರ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ.

1000 ರಿಂದ 1200 ರೂ.ವರೆಗೆ ಮಾರಾಟವಾಗುತ್ತಿದ್ದ ಒಂದು ಬಾಕ್ಸ್ ಟೊಮ್ಯಾಟೋ ದರ ಈಗ ಕೇವಲ 80–100 ರೂ.ಗೆ ಕುಸಿದಿದ್ದು, ಮಾರುಕಟ್ಟೆಯಲ್ಲಿ ಬೆಲೆ ಸಂಪೂರ್ಣವಾಗಿ ಧ್ವಂಸಗೊಂಡಂತಾಗಿದೆ. 20 ರೂ.ಗೆ 2ರಿಂದ 4 ಕೆಜಿ ಟೊಮ್ಯಾಟೋ ಮಾರಾಟವಾಗುತ್ತಿರುವ ದೃಶ್ಯಗಳು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿವೆ.

ಸಾಲ ಮಾಡಿ ಬೆಳೆದ ರೈತರು ಇದೀಗ ಹೂಡಿಕೆ ಸಹ ವಾಪಸು ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಕುಸಿತದಿಂದ ಕಂಗಾಲಾದ ರೈತರ ಪರಿಸ್ಥಿತಿ ಕರುಣಾಜನಕವಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಇರಾನ್–ಇಸ್ರೇಲ್ ಸಂಘರ್ಷದಿಂದ ರಫ್ತು ಕುಂಠಿತಗೊಂಡಿದ್ದು, ದೇಶೀಯವಾಗಿ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ಕುಸಿತಗೊಂಡಿರುವುದು ಬೇಡಿಕೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ. ಇದರ ನೇರ ಪರಿಣಾಮವಾಗಿ ಟೊಮ್ಯಾಟೋ ಮಾರುಕಟ್ಟೆ ಸಂಪೂರ್ಣ ಕುಸಿತ ಕಂಡಿದೆ.

ಮುಳಬಾಗಿಲು | ಮನೆ ಕುಸಿದು ಬಾಲಕಿ ಸಾವು: ನಾಲ್ವರ ಸ್ಥಿತಿ ಗಂಭೀರ

0

ಕೋಲಾರ: ಜಿಲ್ಲೆಯ ಮುಳಬಾಗಿಲು ನಗರದಲ್ಲಿ ಸಂಭವಿಸಿದ ಭೀಕರ ಮನೆ ಕುಸಿತ ದುರಂತವು ಆತಂಕ ಸೃಷ್ಟಿಸಿದೆ. ಜೀರ್ಣಾವಸ್ಥೆಯಲ್ಲಿದ್ದ ಹಳೆಯ ಕಟ್ಟಡ ಏಕಾಏಕಿ ಕುಸಿದು ಬಿದ್ದ ಪರಿಣಾಮ 15 ವರ್ಷದ ವಹಿನೂರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ತೀವ್ರತೆಯಲ್ಲಿ ಸುಹೇಲ್, ಕೌಸರ್, ಅಯಾಜ್ ಹಾಗೂ ಅಬ್ಜರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಟ್ಟಡದ ದುರ್ಬಲ ಸ್ಥಿತಿಯೇ ಅವಘಡಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದ್ದು, ಹಳೆಯ ಕಟ್ಟಡಗಳ ಸುರಕ್ಷತೆ ಕುರಿತು ಪ್ರಶ್ನೆಗಳು ಮತ್ತೆ ಉದ್ಭವಿಸಿವೆ.

ಮುಳಬಾಗಿಲು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆಯನ್ನು ವೇಗಗೊಳಿಸಿದ್ದಾರೆ.

error: Content is protected !!