Home Blog Page 5

ದೇವಸ್ಥಾನದ ನಿರ್ಮಾಣ ಹಂತದ ಗೋಪುರಕ್ಕೆ ಸಿಡಿಲು; ಹಲವು ಭಾಗಗಳಿಗೆ ಹಾನಿ!

0

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿರುವ ಐತಿಹಾಸಿಕ ಬಲಭೀಮ ಆಂಜನೇಯ ದೇವಸ್ಥಾನದ ನಿರ್ಮಾಣ ಹಂತದ ಮಹಾದ್ವಾರದ ಗೋಪುರಕ್ಕೆ ಸಿಡಿಲು ಬಡಿದಿದೆ.

ಸಿಡಿಲಿನ ತೀವ್ರತೆಗೆ ಗೋಪುರದ ಹಲವು ಭಾಗಗಳಿಗೆ ಹಾನಿಯಾಗಿದ್ದು, ಭಾರಿ ಬಿರುಕುಗಳು ಕಾಣಿಸಿಕೊಂಡಿವೆ.

ಗ್ರಾಮಸ್ಥರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದ ಮಹಾಗೋಪುರದ ಕಾಮಗಾರಿ ಅಂತಿಮ ಹಂತದಲ್ಲಿತ್ತು. ಇದೇ ವೇಳೆ ಸಿಡಿಲು ಬಡಿದ ಪರಿಣಾಮ ಗೋಪುರದ ಮೇಲೆ ಹಾರಿಸಲಾಗಿದ್ದ ಭಗವಾಧ್ವಜಗಳು ಸುಟ್ಟು ಕರಕಲಾಗಿವೆ.

ಅಲ್ಲದೆ, ಗೋಪುರಕ್ಕೆ ಅಳವಡಿಸಲಾಗಿದ್ದ ಅಲಂಕಾರಿಕ ಗೊಂಬೆಗಳ ದೇಹದ ಭಾಗಗಳು ಮುರಿದುಬಿದ್ದಿವೆ. ಗೋಪುರದ ವಿವಿಧ ಭಾಗಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಘಟನೆಯಿಂದ ಭಕ್ತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.

ನಾಳೆಯಿಂದ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತ? ಸಿಬ್ಬಂದಿಯಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

0

ಬೆಂಗಳೂರು: ವಾರ್ಷಿಕ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 108 ಆ್ಯಂಬುಲೆನ್ಸ್ ಸಿಬ್ಬಂದಿ ರಾಜ್ಯ ಸರ್ಕಾರಕ್ಕೆ ನೀಡಿದ್ದ 15 ದಿನಗಳ ಗಡುವು ಮುಕ್ತಾಯಗೊಂಡಿದೆ.

ಆದರೆ ಗಡುವು ಮುಗಿದರೂ ಸರ್ಕಾರ ಅಥವಾ ಆರೋಗ್ಯ ಇಲಾಖೆಯಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಸೆಪ್ಟೆಂಬರ್ 22ರ ರಾತ್ರಿ 8 ಗಂಟೆಯಿಂದ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವುದಾಗಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಇದರ ಜತೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಪ್ರತಿ ವರ್ಷ ವೇತನ ಪರಿಷ್ಕರಣೆ ಹಾಗೂ ವಾರ್ಷಿಕ ವೇತನ ಹೆಚ್ಚಳ, ಎಲ್ಲ ಸಿಬ್ಬಂದಿಗೂ ಏಕರೂಪ ವೇತನ, ಜೇಷ್ಠತೆಯ ಆಧಾರದ ಮೇಲೆ ವೇತನ ನಿಗದಿ ಸೇರಿದಂತೆ ಹಲವು ಬೇಡಿಕೆಗಳನ್ನು ಸಿಬ್ಬಂದಿ ಮುಂದಿಟ್ಟಿದ್ದಾರೆ.

ಇದರ ಜತೆಗೆ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸೂಕ್ತ ವಾಹನಗಳ ವ್ಯವಸ್ಥೆ, ಪ್ರತಿ ತಿಂಗಳ 7ನೇ ತಾರೀಖಿನೊಳಗೆ ವೇತನ ಪಾವತಿ, ಕರ್ತವ್ಯದ ವೇಳೆ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಹಾಗೂ ವಿಶ್ರಾಂತಿ ಕೊಠಡಿಗಳ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದಾರೆ.

ಕರ್ತವ್ಯದ ಶಿಫ್ಟ್ ಸಮಯದಲ್ಲಿ ಬದಲಾವಣೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು 108 ಆ್ಯಂಬುಲೆನ್ಸ್ ಸಿಬ್ಬಂದಿ ಒತ್ತಾಯಿಸಿದ್ದಾರೆ.

ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಜಾರಿಯಾದರೆ ರಾಜ್ಯದ ತುರ್ತು ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಸಮಸ್ಯೆಯನ್ನು ಸರ್ಕಾರ ತಕ್ಷಣ ಬಗೆಹರಿಸಬೇಕು ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.

ಅಗರಬತ್ತಿ, ಸೊಳ್ಳೆ ಕಾಯಿಲ್ ಹೊಗೆಯಿಂದ ಕ್ಯಾನ್ಸರ್ ಬರುತ್ತಾ? ವೈದ್ಯರು ಹೇಳಿದ್ದೇನು?

0

ಮನೆಯ ಪೂಜಾ ಕೋಣೆಯಲ್ಲಿ ಅಗರಬತ್ತಿ ಹಚ್ಚುವುದು ಅಥವಾ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಕಾಯಿಲ್ ಬಳಸುವುದು ಸಾಮಾನ್ಯ.

ಆದರೆ ಇವುಗಳಿಂದ ಹೊರಬರುವ ಹೊಗೆಯನ್ನು ಉಸಿರಾಡುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ಮಾತು ಆಗಾಗ್ಗೆ ಕೇಳಿಬರುತ್ತದೆ. ಹಾಗಾದರೆ ಇದರಲ್ಲಿ ಎಷ್ಟು ಸತ್ಯವಿದೆ?

ವೈದ್ಯರ ಪ್ರಕಾರ, ಅಗರಬತ್ತಿ ಅಥವಾ ಸೊಳ್ಳೆ ಕಾಯಿಲ್ ಬಳಸುವುದರಿಂದಲೇ ನೇರವಾಗಿ ಕ್ಯಾನ್ಸರ್ ಬರುತ್ತದೆ ಎಂದು ಹೇಳಲು ಸ್ಪಷ್ಟವಾದ ಸಾಕ್ಷ್ಯಗಳಿಲ್ಲ. ಕ್ಯಾನ್ಸರ್‌ಗೆ ತಂಬಾಕು ಸೇವನೆ, ಮದ್ಯಪಾನ, ಅನುವಂಶಿಕ ಅಂಶಗಳು, ಕೆಲವು ಸೋಂಕುಗಳು ಹಾಗೂ ಜೀವನಶೈಲಿಗೆ ಸಂಬಂಧಿಸಿದ ಹಲವು ಕಾರಣಗಳಿರಬಹುದು. ಹೀಗಾಗಿ ಪೂಜೆಯ ವೇಳೆ ಅಗರಬತ್ತಿ ಹಚ್ಚಿದ ಮಾತ್ರಕ್ಕೆ ಕ್ಯಾನ್ಸರ್ ಬರುತ್ತದೆ ಎಂದು ಭಯಪಡುವ ಅಗತ್ಯವಿಲ್ಲ.

ಆದರೆ ಹೊಗೆ ಆರೋಗ್ಯಕ್ಕೆ ಹಾನಿಕಾರಕವಾಗಬಹುದು:

ಕ್ಯಾನ್ಸರ್‌ಗೆ ನೇರ ಕಾರಣ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ, ಅಗರಬತ್ತಿ ಮತ್ತು ಸೊಳ್ಳೆ ಕಾಯಿಲ್ ಉರಿಯುವಾಗ ಹೊಗೆಯೊಂದಿಗೆ ಸೂಕ್ಷ್ಮ ಕಣಗಳು ಹಾಗೂ ವಿವಿಧ ರಾಸಾಯನಿಕಗಳು ಗಾಳಿಗೆ ಸೇರುತ್ತವೆ. ವಿಶೇಷವಾಗಿ ಗಾಳಿ ಸರಿಯಾಗಿ ಹರಿಯದ ಸಣ್ಣ ಕೊಠಡಿಯಲ್ಲಿ ಇವುಗಳನ್ನು ಹೆಚ್ಚು ಸಮಯ ಉರಿಸಿದರೆ ಒಳಾಂಗಣ ಗಾಳಿಯ ಗುಣಮಟ್ಟ ಹದಗೆಡಬಹುದು.

ಈ ಹೊಗೆಯನ್ನು ನಿರಂತರವಾಗಿ ಉಸಿರಾಡುವುದರಿಂದ ಕೆಲವರಿಗೆ ಕೆಮ್ಮು, ಗಂಟಲು ಕಿರಿಕಿರಿ, ಕಣ್ಣು ಉರಿ, ತಲೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಈಗಾಗಲೇ ಆಸ್ತಮಾ ಅಥವಾ ಅಲರ್ಜಿ ಇರುವವರಿಗೆ ಹೊಗೆ ಹೆಚ್ಚು ಕಿರಿಕಿರಿ ಉಂಟುಮಾಡಬಹುದು. ಮಕ್ಕಳು ಮತ್ತು ವೃದ್ಧರು ಇರುವ ಮನೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಉತ್ತಮ.

ಸೊಳ್ಳೆ ಕಾಯಿಲ್ ಬಳಸುವಾಗ ಎಚ್ಚರಿಕೆ:

ಸೊಳ್ಳೆ ಕಾಯಿಲ್ ಅನ್ನು ಮುಚ್ಚಿದ ಕೊಠಡಿಯಲ್ಲಿ ಇಟ್ಟುಕೊಂಡು ರಾತ್ರಿ ಪೂರ್ತಿ ಉರಿಸುವುದನ್ನು ತಪ್ಪಿಸುವುದು ಉತ್ತಮ. ಬಳಸುವಾಗ ಕಿಟಕಿ ಅಥವಾ ಬಾಗಿಲಿನ ಮೂಲಕ ಗಾಳಿ ಸರಿಯಾಗಿ ಹರಿದಾಡುವಂತೆ ನೋಡಿಕೊಳ್ಳಿ.

ಸಾಧ್ಯವಾದಲ್ಲಿ ಸೊಳ್ಳೆ ಪರದೆ, ಕಿಟಕಿ ಜಾಲರಿ ಅಥವಾ ಇತರ ಹೊಗೆರಹಿತ ಸೊಳ್ಳೆ ನಿಯಂತ್ರಣ ವಿಧಾನಗಳನ್ನು ಬಳಸಬಹುದು.

ಅಗರಬತ್ತಿಯನ್ನೂ ಅಗತ್ಯಕ್ಕಿಂತ ಹೆಚ್ಚು ಹಚ್ಚುವ ಬದಲು ಕಡಿಮೆ ಪ್ರಮಾಣದಲ್ಲಿ ಬಳಸುವುದು ಹಾಗೂ ಗಾಳಿ ಹರಿಯುವ ಸ್ಥಳದಲ್ಲಿ ಹಚ್ಚುವುದು ಉತ್ತಮ. ಒಟ್ಟಿನಲ್ಲಿ, ಅಗರಬತ್ತಿ ಅಥವಾ ಸೊಳ್ಳೆ ಕಾಯಿಲ್‌ನಿಂದಲೇ ಕ್ಯಾನ್ಸರ್ ಬರುತ್ತದೆ ಎಂದು ಭಯಪಡುವ ಅಗತ್ಯವಿಲ್ಲ; ಆದರೆ ಹೊಗೆಯನ್ನು ನಿರಂತರವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಉಸಿರಾಡುವುದನ್ನು ತಪ್ಪಿಸುವುದು ಆರೋಗ್ಯದ ದೃಷ್ಟಿಯಿಂದ ಸೂಕ್ತ.

ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ವರುಣನ ಅಬ್ಬರ: ಕಲಾಸಿಪಾಳ್ಯದಿಂದ ಮಹದೇವಪುರ, ವಿಧಾನಸೌಧದವರೆಗೆ ಹಲವೆಡೆ ಮಳೆ!

0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಸೋಮವಾರ ಸಂಜೆ ದಿಢೀರ್ ಧಾರಾಕಾರ ಮಳೆಯಾಗಿದೆ. ಮಲ್ಲೇಶ್ವರಂ, ರಾಜಾಜಿನಗರ, ಪೀಣ್ಯ, ಮಾದಾವರ, ಮಹದೇವಪುರ, ಕೆ.ಆರ್. ಸರ್ಕಲ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಸಂಜೆಯಾಗುತ್ತಿದ್ದಂತೆ ನಗರದ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮುಂಜಾನೆಯಿಂದ ಬಿಸಿಲಿನ ಬೇಗೆಗೆ ತತ್ತರಿಸಿದ್ದ ಬೆಂಗಳೂರಿನ ಜನತೆಗೆ ದಿಢೀರ್ ಸುರಿದ ಮಳೆ ಕೊಂಚ ತಂಪಿನ ಅನುಭವ ನೀಡಿದೆ.

ಕಲಾಸಿಪಾಳ್ಯ, ಕಾರ್ಪೊರೇಷನ್, ವಿಧಾನಸೌಧ, ಲಾಲ್‌ಬಾಗ್, ಜಯನಗರ, ಶಾಂತಿನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಮಳೆ ಆರಂಭವಾಗಿದೆ. ಕೆಲವೆಡೆ ಧಾರಾಕಾರ ಮಳೆಯಾಗಿದ್ದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಮುಂದುವರಿದಿದೆ.

ದಿಢೀರ್ ಮಳೆಯಿಂದಾಗಿ ರಸ್ತೆಗಳಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬೈಕ್‌ ಸವಾರರು ಮಳೆಯಿಂದಾಗಿ ಪರದಾಡುವಂತಾಗಿದೆ. ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.

ಇಂದಿರಾ ಆಹಾರ ಕಿಟ್ ಟೆಂಡರ್ ರದ್ದು; 45 ದಿನಗಳಲ್ಲಿ ಪರಿಷ್ಕೃತ ಯೋಜನೆ ಜಾರಿಗೆ ಸರ್ಕಾರ ಸಿದ್ಧತೆ

0

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪ್ರಸ್ತಾಪಿಸಲಾಗಿದ್ದ ಇಂದಿರಾ ಆಹಾರ ಕಿಟ್‌ ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರ, ಇದೀಗ ಪರಿಷ್ಕೃತ ಖರೀದಿ ಮತ್ತು ವಿತರಣಾ ಮಾದರಿಯನ್ನು ರೂಪಿಸಲು ಮುಂದಾಗಿದೆ.

ಈ ಕುರಿತು ಮಾತನಾಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್, ಸೆಪ್ಟೆಂಬರ್‌ನಲ್ಲಿ ಯೋಜನೆಯನ್ನು ಮರುರೂಪಿಸಲು ಸರ್ಕಾರ ಮುಂದಾಗಿದೆ. ಸುಮಾರು 45 ದಿನಗಳೊಳಗೆ ಪರಿಷ್ಕೃತ ಕಾರ್ಯಕ್ರಮವನ್ನು ಜಾರಿಗೆ ತರುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಫಲಾನುಭವಿಗಳ ಅಗತ್ಯತೆ ಹಾಗೂ ನಿರೀಕ್ಷೆಗಳ ಕುರಿತು ಇಲಾಖೆ ನಡೆಸಿದ ಮೌಲ್ಯಮಾಪನದ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಹಿಳಾ ಫಲಾನುಭವಿಗಳ ನಡುವೆ ನಡೆಸಿದ ಸಮೀಕ್ಷೆಯಲ್ಲಿ ಕೇವಲ ಅಕ್ಕಿಯನ್ನೇ ಅವಲಂಬಿಸುವ ಬದಲು ಉತ್ತಮ ಗುಣಮಟ್ಟದ ಹಾಗೂ ವೈವಿಧ್ಯಮಯ ಆಹಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಕಂಡುಬಂದಿದೆ ಎಂದು ಸಚಿವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಸ್ತಾವಿತ ಆಹಾರ ಕಿಟ್‌ನಲ್ಲಿ ಯಾವೆಲ್ಲ ವಸ್ತುಗಳನ್ನು ಸೇರಿಸಬೇಕು ಮತ್ತು ಅವುಗಳನ್ನು ಫಲಾನುಭವಿ ಕುಟುಂಬಗಳಿಗೆ ತಲುಪಿಸಲು ಯಾವ ರೀತಿಯ ಪೂರೈಕೆ ವ್ಯವಸ್ಥೆ ರೂಪಿಸಬೇಕು ಎಂಬುದರ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ.

ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ತೊಗರಿ ಬೇಳೆ, ಸಕ್ಕರೆ, ಉಪ್ಪು ಹಾಗೂ ಅಡುಗೆ ಎಣ್ಣೆಯನ್ನು ಒಳಗೊಂಡ ಆಹಾರ ಕಿಟ್‌ಗಳನ್ನು ವಿತರಿಸುವ ಪ್ರಸ್ತಾವನೆ ಇದೆ. ರಾಜ್ಯಮಟ್ಟದಲ್ಲಿ ಒಂದೇ ಖರೀದಿ ಪ್ರಕ್ರಿಯೆಯನ್ನು ನಡೆಸುವ ಬದಲು, ಜಿಲ್ಲಾ ಮಟ್ಟದಲ್ಲಿ ಟೆಂಡರ್‌ಗಳ ಮೂಲಕ ಅಗತ್ಯ ವಸ್ತುಗಳನ್ನು ಖರೀದಿಸುವ ಸಾಧ್ಯತೆಯ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ.

ರಾಜ್ಯ ಖಾತರಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಅವರ ಪ್ರಕಾರ, ವಿಕೇಂದ್ರೀಕೃತ ಖರೀದಿ ವ್ಯವಸ್ಥೆಯು ಸೋರಿಕೆ ಮತ್ತು ದುರ್ಬಳಕೆಯ ಸಾಧ್ಯತೆಯನ್ನು ಕಡಿಮೆ ಮಾಡುವುದರ ಜೊತೆಗೆ, ಆಹಾರ ಪದಾರ್ಥಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶ ಹೊಂದಿದೆ.

ಗುಣಮಟ್ಟ ಮತ್ತು ವಿತರಣೆಗೆ ಆದ್ಯತೆ

ಇಂದಿರಾ ಆಹಾರ ಕಿಟ್ ಯೋಜನೆಯನ್ನು ಮರುರೂಪಿಸುವ ಸಂದರ್ಭದಲ್ಲಿ ಆಹಾರ ಪದಾರ್ಥಗಳ ಗುಣಮಟ್ಟ, ವೆಚ್ಚ, ಸಂಗ್ರಹಣೆ, ಪ್ಯಾಕೇಜಿಂಗ್, ಸಾರಿಗೆ ಹಾಗೂ ವಿತರಣೆಯಂತಹ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಚರ್ಚೆಯಲ್ಲಿರುವ ಪರ್ಯಾಯ ವ್ಯವಸ್ಥೆಗಳಲ್ಲಿ ಇ-ವೋಚರ್ ಮಾದರಿಯೂ ಒಂದಾಗಿದೆ. ಈ ವ್ಯವಸ್ಥೆಯ ಮೂಲಕ ಸರ್ಕಾರವೇ ನೇರವಾಗಿ ಸರಕುಗಳ ಖರೀದಿ ಮತ್ತು ವಿತರಣೆಯ ಪ್ರತಿಯೊಂದು ಹಂತವನ್ನು ನಿರ್ವಹಿಸದೆ, ಫಲಾನುಭವಿಗಳು ಅಗತ್ಯ ವಸ್ತುಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಸಾಧ್ಯತೆಯಿದೆ. ಆದರೆ ಇ-ವೋಚರ್ ವ್ಯವಸ್ಥೆಯನ್ನು ಜಾರಿಗೆ ತರುವ ಕುರಿತು ಸರ್ಕಾರ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

ಭೌತಿಕ ಆಹಾರ ಕಿಟ್ ವ್ಯವಸ್ಥೆಯನ್ನು ಜಾರಿಗೆ ತಂದರೆ ರಾಜ್ಯಾದ್ಯಂತ ಸರಕುಗಳ ಸಂಗ್ರಹಣೆ, ಗುಣಮಟ್ಟ ಪರೀಕ್ಷೆ, ಪ್ಯಾಕೇಜಿಂಗ್, ಸಾರಿಗೆ, ದಾಸ್ತಾನು ಹಾಗೂ ವಿತರಣೆಯಂತಹ ಹಲವು ಹಂತಗಳನ್ನು ನಿರ್ವಹಿಸಬೇಕಾಗುತ್ತದೆ. ಯಾವುದೇ ಪರ್ಯಾಯ ವ್ಯವಸ್ಥೆ ಜಾರಿಯಾದರೂ ಫಲಾನುಭವಿಗಳಿಗೆ ಉದ್ದೇಶಿತ ಆಹಾರ ಪದಾರ್ಥಗಳು ಸಮರ್ಪಕವಾಗಿ ತಲುಪುವಂತೆ ಹಾಗೂ ಯೋಜನೆಯ ಪೌಷ್ಟಿಕಾಂಶದ ಉದ್ದೇಶ ಕಾಪಾಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ.

ಹೆಚ್ಚುವರಿ 5 ಕೆಜಿ ಅಕ್ಕಿ ಮುಂದುವರಿಕೆ

ಪರಿಷ್ಕೃತ ಇಂದಿರಾ ಆಹಾರ ಕಿಟ್ ಯೋಜನೆ ಅನುಷ್ಠಾನಕ್ಕೆ ಸಿದ್ಧವಾಗುವವರೆಗೆ, ಅನ್ನಭಾಗ್ಯ ಯೋಜನೆಯಡಿ ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ನೀಡುವ ವ್ಯವಸ್ಥೆ ಮುಂದುವರಿಯುವ ನಿರೀಕ್ಷೆಯಿದೆ.

ಮುಂದಿನ ಹಂತದಲ್ಲಿ ಆಹಾರ ಕಿಟ್‌ನ ಅಂತಿಮ ಸಂಯೋಜನೆ, ಖರೀದಿ ವಿಧಾನ, ಗುಣಮಟ್ಟ ನಿಯಂತ್ರಣ, ವಿತರಣಾ ವ್ಯವಸ್ಥೆ ಹಾಗೂ ಫಲಾನುಭವಿಗಳಿಗೆ ಅಗತ್ಯ ವಸ್ತುಗಳನ್ನು ಸುಲಭವಾಗಿ ತಲುಪಿಸುವ ಮಾರ್ಗಗಳ ಕುರಿತು ಸರ್ಕಾರ ಅಂತಿಮ ರೂಪುರೇಷೆ ಸಿದ್ಧಪಡಿಸಲಿದೆ.

KPSC ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ತನಿಖೆಗೆ SIT ರಚಿಸಿ ಹೈಕೋರ್ಟ್ ಆದೇಶ

0

ಬೆಂಗಳೂರು:ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಹೈಕೋರ್ಟ್ ಆದೇಶ ನೀಡಿದೆ. ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾಗಿದ್ದು, ದಿವ್ಯಾ ಗೋಪಿನಾಥ್, ಅನೂಪ್ ಶೆಟ್ಟಿ, ಕುಶಾಲ್ ಚೌಕ್ಸೆ ಹಾಗೂ ಕ್ಷಮಾ ಮಿಶ್ರಾ ಅವರನ್ನೊಳಗೊಂಡ ತಂಡ ಇದರಲ್ಲಿದೆ. ಹಿರಿಯ ಹಾಗೂ ಅನುಭವಿ ಅಧಿಕಾರಿಗಳ ತಂಡವನ್ನೇ ರಚಿಸುವಂತೆ ಕೋರ್ಟ್ ಆದೇಶದಲ್ಲಿ ಸೂಚಿಸಿದೆ.

ಜಾರಿ ನಿರ್ದೇಶನಾಲಯಕ್ಕೆ (ಇಡಿ) ಅಗತ್ಯ ಸಹಕಾರ ನೀಡುವಂತೆಯೂ ಎಸ್‌ಐಟಿಗೆ ಹೈಕೋರ್ಟ್ ಸೂಚನೆ ನೀಡಿದೆ. ನೂರು ದಿನಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ಗಡುವು ವಿಧಿಸಿರುವ ಕೋರ್ಟ್, ಪ್ರತಿ ಮೂವತ್ತು ದಿನಗಳಿಗೊಮ್ಮೆ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸುವಂತೆಯೂ ನಿರ್ದೇಶನ ನೀಡಿದೆ.

ಒಂದು ವಾರದೊಳಗೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎಸ್‌ಐಟಿಗೆ ವರ್ಗಾಯಿಸುವಂತೆ ಸಿಐಡಿಗೆ ಕೋರ್ಟ್ ನಿರ್ದೇಶಿಸಿದೆ. ಜೊತೆಗೆ, ಎಸ್‌ಐಟಿಯನ್ನು ಪ್ರತ್ಯೇಕ ಪೊಲೀಸ್ ಠಾಣೆಯನ್ನಾಗಿ ಪರಿಗಣಿಸಿ ಅಗತ್ಯ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೂ ಹೈಕೋರ್ಟ್ ಸೂಚನೆ ನೀಡಿದೆ.

ವಂದೇ ಮಾತರಂ’ ಕೇವಲ ಎರಡು ಚರಣ ಹಾಡಿದ್ದು ರಾಷ್ಟ್ರಗೀತೆಗೆ ಅಪಮಾನ: ರಾಜ್ಯ ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ವಿಶೇಷ ಅಧಿವೇಶನದ ವೇಳೆ ‘ವಂದೇ ಮಾತರಂ’ ಗೀತೆಯನ್ನು ಕೇವಲ ಎರಡು ಚರಣಗಳಿಗೆ ಸೀಮಿತಗೊಳಿಸಿದ ವಿಚಾರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಪ್ರಲ್ಹಾದ್ ಜೋಶಿ, ‘ವಂದೇ ಮಾತರಂ’ ಗೀತೆಯನ್ನು ಕಾನೂನುಬಾಹಿರವಾಗಿ ಕತ್ತರಿಸಿ ಕೇವಲ ಎರಡು ಚರಣಗಳನ್ನು ಹಾಡುವ ಮೂಲಕ ರಾಜ್ಯ ಸರ್ಕಾರ ತನ್ನದೇ ಆದೇಶ ಹೊರಡಿಸಿದೆ ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರ ರಾಷ್ಟ್ರಗೀತೆಗೆ ಅಪಮಾನ ಮಾಡಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ‘ನಕಲಿ ದೇಶಭಕ್ತಿಯ ಮುಖವಾಡ’ ಕಳಚಿದೆ ಎಂದು ಟೀಕಿಸಿರುವ ಅವರು, ಈ ಬೆಳವಣಿಗೆ ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

‘ಕಾಂಗ್ರೆಸ್‌ಗೆ ನಮ್ಮ ರಾಷ್ಟ್ರಗೀತೆಯನ್ನು ಕಂಡರೆ ಏಕೆ ಇಷ್ಟೊಂದು ದ್ವೇಷ?’ ಎಂದು ಪ್ರಶ್ನಿಸಿರುವ ಪ್ರಲ್ಹಾದ್ ಜೋಶಿ, ರಾಷ್ಟ್ರೀಯ ಗೌರವದ ರಕ್ಷಣೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ 2026ರಲ್ಲಿ ತರಲಾದ ಕಾಯ್ದೆಯ ಆಶಯಕ್ಕೆ ರಾಜ್ಯ ಸರ್ಕಾರದ ಆದೇಶ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿರುವ ಅವರು, ದೆಹಲಿಯಲ್ಲಿರುವ ಒಂದು ಕುಟುಂಬವನ್ನು ಓಲೈಸಲು ಕಾಂಗ್ರೆಸ್ ದೇಶದ ಹೆಮ್ಮೆಯನ್ನೇ ಬಲಿಕೊಡಲು ಮುಂದಾಗಿದೆ ಎಂದು ಟೀಕಿಸಿದ್ದಾರೆ. ಸರ್ಕಾರದ ಆದೇಶಗಳಿಂದ ಭಾರತಾಂಬೆಯ ಅಸ್ಮಿತೆಯನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಧ್ವನಿ ಎತ್ತುವುದಾಗಿ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕರ್ನಾಟಕದ ಜನತೆ ರಾಜಕೀಯವಾಗಿ ಪ್ರತಿಕ್ರಿಯಿಸಲಿದ್ದಾರೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

SBI ಗ್ರಾಹಕರೇ ಗಮನಿಸಿ! ಸೆಪ್ಟೆಂಬರ್‌ 28ರಿಂದ ಮೂರು ದಿನ ಬ್ಯಾಂಕ್‌ ಮುಷ್ಕರ, ಸೇವೆಗಳಲ್ಲಿ ವ್ಯತ್ಯಯ

0

ನವದೆಹಲಿ: ಸೆಪ್ಟೆಂಬರ್ 28ರಿಂದ ಮೂರು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಯಲಿರುವ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಸಲಹೆ ನೀಡಿದೆ. ಮುಷ್ಕರದ ಅವಧಿಯಲ್ಲಿ ಉಂಟಾಗಬಹುದಾದ ಅಡಚಣೆಗಳನ್ನು ತಪ್ಪಿಸಲು ಶಾಖೆಗಳಿಗೆ ಸಂಬಂಧಿಸಿದ ಪ್ರಮುಖ ಬ್ಯಾಂಕಿಂಗ್ ಕೆಲಸಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸುವಂತೆ ಗ್ರಾಹಕರಿಗೆ ಸೂಚಿಸಿದೆ.

ಸೆಪ್ಟೆಂಬರ್ 28, 29 ಮತ್ತು 30ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ನಡೆಯಲಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 26 ಮತ್ತು 27ರಂದು ವಾರಾಂತ್ಯದ ರಜೆ ಇರುವುದರಿಂದ, ಸತತ ಐದು ದಿನಗಳ ಕಾಲ ಬ್ಯಾಂಕ್ ಶಾಖೆಗಳ ಸಾಮಾನ್ಯ ಸೇವೆಗಳಿಗೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ಚೆಕ್ ಸಲ್ಲಿಕೆ, ದಾಖಲೆಗಳ ಸಲ್ಲಿಕೆ ಸೇರಿದಂತೆ ಶಾಖೆ ಆಧಾರಿತ ಸೇವೆಗಳಲ್ಲಿ ವಿಳಂಬವಾಗುವ ಸಾಧ್ಯತೆ ಇರುವುದರಿಂದ, ಗ್ರಾಹಕರು ತಮ್ಮ ಅಗತ್ಯ ಬ್ಯಾಂಕಿಂಗ್ ಕೆಲಸಗಳನ್ನು ಮುಷ್ಕರಕ್ಕೂ ಮುನ್ನವೇ ಪೂರ್ಣಗೊಳಿಸಿಕೊಳ್ಳುವಂತೆ SBI ಸಲಹೆ ನೀಡಿದೆ.

ಶಾಖೆಗೆ ತೆರಳುವ ಅಗತ್ಯವಿರುವ ಸೇವೆಗಳ ಬದಲು ATM, ADWM ಹಾಗೂ CSP ಸೇವೆಗಳನ್ನು ಬಳಸಿಕೊಳ್ಳಬಹುದು ಎಂದು ಬ್ಯಾಂಕ್ ತಿಳಿಸಿದೆ. ಅಲ್ಲದೆ, YONO, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ UPI ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುವಂತೆ ಗ್ರಾಹಕರಿಗೆ ಸೂಚಿಸಲಾಗಿದೆ.

ತುರ್ತು ವಹಿವಾಟುಗಳನ್ನು ಕೊನೆಯ ಕ್ಷಣದವರೆಗೆ ಮುಂದೂಡದೆ, ಐದು ದಿನಗಳ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿಯೇ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ SBI ಗ್ರಾಹಕರಿಗೆ ಮನವಿ ಮಾಡಿದೆ.

ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿದೆ.

ಮಾಜಿ ಸಂಸದ ನಾಲಾಯಕ್, ಅಯೋಗ್ಯ, ಮುಠ್ಠಾಳ ಒಬ್ಬ ಇದ್ದಾನೆ: ಪ್ರತಾಪ್ ಸಿಂಹ ವಿರುದ್ಧ ಪ್ರದೀಪ್ ಈಶ್ವರ್ ಆಕ್ರೋಶ

0

ಬೆಂಗಳೂರು: ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ಕುರಿತು ಏಕವಚನದಲ್ಲಿ ಮಾತನಾಡಿರುವುದನ್ನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತೀವ್ರವಾಗಿ ಖಂಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ಮೈಸೂರಿನ ಮಾಜಿ ಸಂಸದ ನಾಲಾಯಕ್, ಅಯೋಗ್ಯ, ಮುಠ್ಠಾಳ ಒಬ್ಬ ಇದ್ದಾನೆ. ಅವನು ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ಸ್ಥಳಗಳು ಹಾಗೂ ಮೆರವಣಿಗೆಗಳ ವಿಚಾರದಲ್ಲಿ ಪ್ರಚೋದನಕಾರಿ ಅಥವಾ ಜವಾಬ್ದಾರಿರಹಿತ ಹೇಳಿಕೆಗಳನ್ನು ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕರ್ತವ್ಯನಿರತ ಪೊಲೀಸ್ ಅಧಿಕಾರಿಯ ಬಗ್ಗೆ ಸಾರ್ವಜನಿಕವಾಗಿ ಅವಹೇಳನಕಾರಿ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಜನಪ್ರತಿನಿಧಿಗಳು ಹಾಗೂ ಮಾಜಿ ಜನಪ್ರತಿನಿಧಿಗಳು ಇಂತಹ ವಿಚಾರಗಳಲ್ಲಿ ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಪ್ರದೀಪ್ ಈಶ್ವರ್ ತಿಳಿಸಿದರು.

ಇದೇ ವೇಳೆ ದಲಿತ ಸಮುದಾಯ ಹಾಗೂ ನೀಲಿ ಶಾಲಿನ ಕುರಿತು ಪ್ರತಾಪ್ ಸಿಂಹ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶದ ನಿರ್ಮಾಣದಲ್ಲಿ ದಲಿತ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ. ದಲಿತ ಸಂಘರ್ಷ ಸಮಿತಿ ಸೇರಿದಂತೆ ಸಮುದಾಯದ ಸಂಕೇತಗಳ ಬಗ್ಗೆ ಮಾತನಾಡುವಾಗ ಸಂಯಮ ಹಾಗೂ ಗೌರವ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಧಾರ್ಮಿಕ ಹಾಗೂ ಸಮುದಾಯದ ಸಂಕೇತಗಳನ್ನು ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುವ ಪ್ರಯತ್ನಗಳನ್ನು ನಿಲ್ಲಿಸಬೇಕು. ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತಹ ಹೇಳಿಕೆ ನೀಡಿದ್ದರೆ, ಮಾಜಿ ಸಂಸದರು ಸಮುದಾಯದ ಕ್ಷಮೆಯಾಚಿಸಬೇಕು ಎಂದು ಪ್ರದೀಪ್ ಈಶ್ವರ್ ಒತ್ತಾಯಿಸಿದರು.

ವಿಧಾನ ಪರಿಷತ್ ಕಲಾಪದಲ್ಲಿ ‘ವಂದೇ ಮಾತರಂ’ ಗೀತೆ ಜಟಾಪಟಿ: ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ತೀವ್ರ ಆಕ್ರೋಶ

0

ಬೆಂಗಳೂರು: ವಿಧಾನ ಪರಿಷತ್ ಕಲಾಪದ ವೇಳೆ ‘ವಂದೇ ಮಾತರಂ’ ಗೀತೆ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಭಾರಿ ಜಟಾಪಟಿ ನಡೆದಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸುವ ನಿರ್ಧಾರಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಲಾಪ ಆರಂಭವಾಗುತ್ತಿದ್ದಂತೆ ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಲಾಯಿತು. ಈ ವೇಳೆ ಕಾಂಗ್ರೆಸ್ ಸದಸ್ಯರು ಎರಡು ಚರಣಗಳ ಬಳಿಕ ಗೀತೆಯನ್ನು ಸ್ಥಗಿತಗೊಳಿಸಿದರು. ಆದರೆ, ಬಿಜೆಪಿ ಸದಸ್ಯರು ಗೀತೆಯನ್ನು ಪೂರ್ಣವಾಗಿ ಹಾಡಲು ಮುಂದಾದರು. ಇದೇ ಸಂದರ್ಭದಲ್ಲಿ ಸಭಾಪತಿಗಳು ಸಂವಿಧಾನದ ಪೀಠಿಕೆಯನ್ನು ಓದಿದರು. ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿದ ಬಳಿಕ ಬಿಜೆಪಿ ಸದಸ್ಯರು ಸಂವಿಧಾನದ ಪೀಠಿಕೆಯನ್ನು ಓದಿದರು.

ಈ ವಿಚಾರವಾಗಿ ಸಚಿವ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಸರ್ಕಾರ ತೀರ್ಮಾನಿಸಿದೆ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ಮತ್ತು ರಾಷ್ಟ್ರಪತಿಗಳ ಕಾರ್ಯಕ್ರಮಗಳಲ್ಲಿ ಮಾತ್ರ ಗೀತೆಯನ್ನು ಪೂರ್ಣವಾಗಿ ಹಾಡಲಾಗುತ್ತದೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತದೆ ಎಂದು ಹೇಳಿದರು.

ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ವಂದೇ ಮಾತರಂ ಗೀತೆಗೆ ಅಪಮಾನ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಸದನದಲ್ಲಿ ಈ ಹಿಂದೆ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲಾಗಿತ್ತು. ಇದೀಗ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಿರುವುದು ಏಕೆ ಎಂದು ಪ್ರಶ್ನಿಸಿದರು.

ಈ ವೇಳೆ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಜೋರಾಯಿತು. ಮಧ್ಯಪ್ರವೇಶಿಸಿದ ಬಿ.ಕೆ. ಹರಿಪ್ರಸಾದ್, ಈ ಸದನದಲ್ಲಿ ಈ ಹಿಂದೆ ಎರಡು ಚರಣಗಳನ್ನೇ ಹಾಡಲಾಗುತ್ತಿತ್ತು. ಬಿಜೆಪಿ ಸದಸ್ಯರು ಸಭಾಪತಿಗಳು ಪೀಠಕ್ಕೆ ಬಂದಾಗ ಪೂರ್ಣ ಗೀತೆ ಹಾಡಲು ಆರಂಭಿಸಿದ್ದಾರೆ. ಎರಡು ಚರಣಗಳನ್ನು ಏಕೆ ಹಾಡಬೇಕು ಎಂಬುದರ ಕುರಿತು ಸದನದಲ್ಲಿ ಚರ್ಚೆಯಾಗಲಿ ಎಂದು ಹೇಳಿದರು.

ಹರಿಪ್ರಸಾದ್ ಅವರ ಮಾತಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ಕಚೇರಿಯಲ್ಲ, ಸದನ ಎಂದು ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು, ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಏಕೆ ಹಾಡಬಾರದು ಎಂದು ಪ್ರಶ್ನಿಸಿದರು.

ಈ ವೇಳೆ ಯತೀಂದ್ರ ಸಿದ್ದರಾಮಯ್ಯ, ಸರ್ಕಾರ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಸಭಾಪತಿಗಳು ಈ ವಿಚಾರದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಬಿಜೆಪಿ ಸದಸ್ಯ ಸಿ.ಟಿ. ರವಿ ಆಕ್ಷೇಪ ವ್ಯಕ್ತಪಡಿಸಿ, ಸಭಾಪತಿಗಳಿಗೆ ಯಾವುದೇ ಅಧಿಕಾರವಿಲ್ಲವೇ ಎಂದು ಪ್ರಶ್ನಿಸಿದರು.

ಇದೇ ವಿಚಾರವಾಗಿ ಛಲವಾದಿ ನಾರಾಯಣಸ್ವಾಮಿ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಭಾನಾಯಕರಿಗೆ ಸದನದ ನಿಯಮಗಳ ಬಗ್ಗೆ ತಿಳಿದಿದೆಯೇ ಎಂದು ಪ್ರಶ್ನಿಸಿದ ಅವರು, ಸಭಾಪತಿಗಳ ಕೈಯಲ್ಲಿ ಏನೂ ಇಲ್ಲ ಎಂದು ಸಭಾನಾಯಕರು ಹೇಳುವುದು ಹೇಗೆ ಎಂದು ಆಕ್ಷೇಪಿಸಿದರು. ಈ ಕುರಿತು ಸಭಾಪತಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸಭಾಪತಿಗಳು ಕಡತ ಪರಿಶೀಲಿಸಿ ಮಾತನಾಡುವುದಾಗಿ ತಿಳಿಸಿದರು. ಬಳಿಕ ತಮ್ಮ ಹೇಳಿಕೆ ತಪ್ಪಾಗಿ ಅರ್ಥೈಸಲ್ಪಟ್ಟಿದ್ದರೆ ಸ್ಪಷ್ಟನೆ ನೀಡುವುದಾಗಿ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಆದರೆ, ‘ನಿಮ್ಮ ಸ್ಪಷ್ಟನೆ ಬೇಡ, ಸಭಾಪತಿಗಳು ಮಾತನಾಡಲಿ’ ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಇದೇ ವೇಳೆ ಸಿ.ಟಿ. ರವಿ ಕೂಡ ಸಭಾಪತಿ ಪೀಠದ ಕುರಿತು ಪ್ರಶ್ನೆಗಳನ್ನು ಎತ್ತಿದರು. ‘ಸಭಾಪತಿ ಪೀಠ ಸಂವಿಧಾನ ಪೀಠವೋ ಅಥವಾ ಕಾಂಗ್ರೆಸ್ ಪೀಠವೋ?’ ಎಂದು ಅವರು ಪ್ರಶ್ನಿಸಿದರು. ವಂದೇ ಮಾತರಂ ಗೀತೆಯ ವಿಚಾರ ವಿಧಾನ ಪರಿಷತ್ ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು.