Home Blog Page 6

ಮೇಕೆದಾಟು ಯೋಜನೆ ತಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂಬ HDK ಹೇಳಿಕೆ ಸರಿಯಲ್ಲ: MB ಪಾಟೀಲ್!

ಬೆಂಗಳೂರು:- ಮೇಕೆದಾಟು ಯೋಜನೆಗೆ ರಾಜಕೀಯ ಬೇಡ, ಹೆಚ್‌ಡಿಕೆ ಸಹಕಾರ ಕೊಡಲಿ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮೇಕೆದಾಟು ಅಣೆಕಟ್ಟು ಯೋಜನೆಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ರಾಜಕೀಯ ಮಾಡಿಕೊಂಡು ಕೂರಬಾರದು. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕೂಡ ಇದನ್ನು ಮನಗಂಡು, ರಚನಾತ್ಮಕವಾಗಿ ಕೆಲಸ ಮಾಡಲಿ ಎಂದರು. ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಗೆ ಬಂದರೆ ಸಂಕಷ್ಟದ ಸಮಯದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಹೀಗೆ ಎರಡು ರಾಜ್ಯಗಳಿಗೂ ಅನುಕೂಲವಾಗಲಿದೆ. ಈ ಸತ್ಯ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

ಕುಮಾರಸ್ವಾಮಿಯವರು ಮೇಕೆದಾಟು ಯೋಜನೆ ತಮ್ಮ ಕುಟುಂಬದಿಂದ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಸರಿಯಲ್ಲ. ಈ ಯೋಜನೆ ಜಾರಿಯಿಂದ ಸಂಕಷ್ಟದ ಸಮಯದಲ್ಲಿ ನೀರು ಸಿಗುತ್ತದೆ ಎನ್ನುವುದು ತಮಿಳುನಾಡಿನ ರಾಜಕೀಯ ಪಕ್ಷಗಳಿಗೂ ಗೊತ್ತು. ಆದರೆ ಅವರು ಸಹ ರಾಜಕೀಯಕ್ಕಾಗಿ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಇಂತಹ ಧೋರಣೆಗಳನ್ನು ಎಲ್ಲರೂ ಬಿಟ್ಟರೆ ಜನರಿಗೆ ಒಳ್ಳೆಯದಾಗುತ್ತದೆ ಎಂದರು.

ಜೀವನದ ಉನ್ನತಿಗೆ ಸಂಸ್ಕೃತಿಯ ಅರಿವು ಮುಖ್ಯ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಪ್ರಗತಿಪರವಾದ ಧ್ಯೇಯೋದ್ದೇಶಗಳು ಮಾನವನ ಶ್ರೇಯಸ್ಸಿಗೆ ದಾರಿದೀಪ. ಸತ್ಯ, ಶಾಂತಿ ಎಲ್ಲರ ಬಾಳಿಗೂ ಅಗತ್ಯವಿದೆ. ಜೀವನದ ಉನ್ನತಿಗೆ ಸಂಸ್ಕಾರ, ಸಂಸ್ಕೃತಿಗಳ ಅರಿವು, ಆಚರಣೆ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದಿಂದ ಸಂಘಟಿಸಿದ ಧರ್ಮೋತ್ತೇಜಕ ಸಂಗಮ ಸಮಾವೇಶದ 2ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಸಾತ್ವಿಕ ಮತ್ತು ತಾತ್ವಿಕ ಹಿತ ಚಿಂತನೆಗಳನ್ನು ಬೋಧಿಸುವುದರ ಮೂಲಕ ಭಾವೈಕ್ಯತೆಗೆ ಭದ್ರ ಬುನಾದಿ ಹಾಕಿದ ಶಕ್ತಿ ವೀರಶೈವ ಧರ್ಮದಲ್ಲಿದೆ. ಶಿವ ಸಂಸ್ಕೃತಿ ಎಷ್ಟು ಪ್ರಾಚೀನವೋ ಅಷ್ಟೇ ವೀರಶೈವ ಧರ್ಮ ಸಂಸ್ಕೃತಿ ಪುರಾತನವಾಗಿದೆ. ಮಾನವ ಪರಿಪೂರ್ಣದೆಡೆಗೆ ಪಯಣಿಸುವುದೇ ನಿಜವಾದ ಧರ್ಮ. ಶ್ರೀ ಜಗದ್ಗುರು ರೇಣುಕಾಚಾದಿ ಪಂಚಾಚಾರ್ಯರ ತತ್ವ ಸಿದ್ಧಾಂತಗಳು ನೆಮ್ಮದಿಗೆ ಮೂಲ ಸೆಲೆಯಾಗಿದೆ ಎಂದರು.

ಅ.ಭಾ.ವೀ ಮಹಾಸಭಾದ ಮಹಿಳಾ ಅಧ್ಯಕ್ಷೆ ವೀಣಾ ಕಾಶಪ್ಪನವರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು.

ಎಸ್.ಜೆ.ಆರ್.ಸಿ ಮಹಿಳಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪ್ರೇಮಾ ಸಿದ್ಧರಾಜು ಮಾತನಾಡಿ, ವೀರಶೈವ ಧರ್ಮ ಪರಂಪರೆ ಅತ್ಯಂತ ಪ್ರಾಚೀನವಾಗಿದ್ದು, ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದೆ. ಕಾಯಕ ಮತ್ತು ದಾಸೋಹಕ್ಕೆ ಬಹಳಷ್ಟು ಮಹತ್ವ ಕೊಟ್ಟಿದೆ. ಈ ಧರ್ಮದ ತತ್ವ ಸಿದ್ಧಾಂತಗಳಿಗೆ ತಲೆ ಬಾಗಿ ಬರುವವರೆಲ್ಲರಿಗೂ ಬಾಗಿಲು ತೆಗೆದಿದೆ ಎಂದು ತಿಳಿಸಿದರು.

ಎಡೆಯೂರು ರೇಣುಕ ಶಿವಾಚಾರ್ಯರು ನೇತೃತ್ವ ವಹಿಸಿ ಗುರುಪೀಠ ಮತ್ತು ವೀರಶೈವ ಧರ್ಮ ಪರಂಪರೆ ಬಗೆಗೆ ಸಂಕ್ಷಿಪ್ತವಾಗಿ ವಿವರಿಸಿದರು. ಧನಗೂರು ಮುಮ್ಮಡಿ ಷಡಕ್ಷರ ಶಿವಾಚಾರ್ಯರು, ಬೆಳ್ಳಾವಿ ಮಹಂತ ಶಿವಾಚಾರ್ಯರು, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಪಾಲ್ಗೊಂಡಿದ್ದರು. ಬಿಜ್ಜಳ್ಳಿ ನಂದೀಶ, ಪ್ರೇಮಾ ಕೋವಾ ರೇವಣ್ಣ, ಎಂ. ಮಾದಯ್ಯ, ನಾಗೇಂದ್ರಸ್ವಾಮಿ, ಬೀರೂರು ಶಿವಸ್ವಾಮಿ ಮೊದಲ್ಗೊಂಡು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಟಿ.ಎಸ್. ಉಮಾಶಂಕರ ಸ್ವಾಗತಿಸಿದರು. ಪಾಲನೇತ್ರ ನಿರೂಪಿಸಿದರು. ಶಿವಶಂಕರ ಶಾಸ್ತಿç ತಂಡದವರಿAದ ಭಕ್ತಿಗೀತೆ, ಪ್ರಜ್ಞಾ ಇವರಿಂದ ಭರತ ನಾಟ್ಯ ಜರುಗಿತು.

ಶ್ರೀ ಜಗದ್ಗುರು ರಂಭಾಪುರಿ ಪೀಠದ ಮುಖವಾಣಿ ‘ರಂಭಾಪುರಿ ಬೆಳಗು’ ಜುಲೈ ತಿಂಗಳ ಸಂಚಿಕೆಯನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಬಿಡುಗಡೆ ಮಾಡಿ ಮಾತನಾಡಿ, ಮನಶುದ್ಧಿಗೆ ಮತ್ತು ಜೀವನ ಪರಿವರ್ತನೆಯತ್ತ ಮುನ್ನಡೆಯಲು ಉತ್ತಮ ಸಾಹಿತ್ಯದ ಅವಶ್ಯಕತೆಯಿದೆ. ಆಧ್ಯಾತ್ಮ ಜ್ಞಾನದ ಅರಿವು ಜೀವನೋತ್ಸವಕ್ಕೆ ಸ್ಫೂರ್ತಿಯಾಗಿದೆ ಎಂದರು.

ಗೋವಾದಲ್ಲಿ ನಿಮ್ದೆ ಇದೆ.. ಮಹದಾಯಿಗೆ ಒಪ್ಪಿಗೆ ಕೊಡ್ಸಿ: HDK ವಿರುದ್ಧ ಸಚಿವ ಹೆಚ್ ಕೆ ಪಾಟೀಲ್ ಆಕ್ರೋಶ!

ಗದಗ:- ನಾನು ಐದೇ ನಿಮಿಷದಲ್ಲಿ ಪ್ರಧಾನ ಮಂತ್ರಿಗಳಿಂದ ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಿಸುತ್ತೇನೆ. ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಶಕ್ತಿಯಿದ್ದರೆ ತಮಿಳುನಾಡಿನ ತಮ್ಮ ಮೈತ್ರಿ ಪಕ್ಷವನ್ನು ಮೇಕೆದಾಟು ಯೋಜನೆಗೆ ಒಪ್ಪಿಸಲಿ ಎಂಬ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಆಕ್ರೋಶ ಹೊರ ಹಾಕಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿ ಅವರೇ ತಮಿಳುನಾಡಿನ ಒಪ್ಪಿಗೆ ಪಡೆಯಿರಿ ಎನ್ನುವ ನೀವು..ಮಹದಾಯಿಗೆ ಒಪ್ಪಿಗೆ ಕೊಡಿಸಬಹುದಲ್ವಾ ಗೋವಾದಲ್ಲಿ ನಿಮ್ದೆ ಸರ್ಕಾರ ಇದೆ ತಾನೆ. ಹಾಗಿದ್ರೆ ನಮ್ಗೆ ಮಹದಾಯಿಗೆ ಒಪ್ಪಿಗೆ ಕೊಡ್ಸಿ ಎಂದು ಸವಾಲ್ ಹಾಕಿದರು. ಪ್ರಧಾನಿ ಮೋದಿ ಅವರನ್ನು ನೀವೇಕೆ ಒಪ್ಪಿಸ್ತೀರಿ, ಅವರ ಕನ್ಸಂಟ್ ಬೇಕಾ ನಿಮ್ಗೆ ಅಂತ ಗರಂ ಆದರು. ನೀವು ಆದೇಶ ಮಾಡ್ರಿ. ಎಲ್ಲಾದಕ್ಕೂ ಅವ್ರ ಒಪ್ಪಿಗೆ ತಗೋತೀರಾ. ಮಿತ್ರಪಕ್ಷಕ್ಕೆ ಒತ್ತಾಯಿಸಿ ಅಂತೀರಲ್ಲಾ.. ಡಿಎಂಕೆ ಒಪ್ಪಿಗೆ ತೆಗೆದುಕೊಂಡೇ ಎಲ್ಲಾ‌ ಮಾಡ್ತೀರಾ. ನಿಮಗೆ ಆದೇಶ ಮಾಡಲು ಬರಲ್ವಾ ಅಂತ ಕಿಡಿಕಾರಿದರು.

ಅಂತರರಾಜ್ಯ ನೀರಿನ ವಿವಾದ ಕಾನೂನು ಪ್ರಕಾರ ಪಾಸ್ ಮಾಡಿ ಕೊಟ್ಟಿದ್ದೀವಿ. ಅದು ಯಾಕೇ ಕೊಟ್ಟಿದ್ದೀವಿ. ಒಪ್ಪಿಗೆ ತರಬೇಕು ಅಂತ. ಅದರಲ್ಲಿ ಪ್ರಸ್ತಾಪ ಇದೆಯಾ ಅಂತ ನೋಡಿ. ಗೋವಾದಲ್ಲಿ ನಿಮ್ದೆ ಸರ್ಕಾರ ಇದೆ. ಹಾಗಿದ್ರೆ ನಮ್ಗೆ ಮಹದಾಯಿಗೆ ಒಪ್ಪಿಗೆ ಕೊಡ್ಸಿ ಅಂತ ಸವಾಲ್ ಹಾಕಿದರು. ನಿಮಗೆ ಏನಾದರೂ ತೊಂದರೆ ಇದ್ರೆ. ಅವರದ್ದು ಒಪ್ಪಿಗೆ ತಗೊಂಡು ಬನ್ನಿ. ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ ಪತ್ರ ತೋರಿಸಿದ್ರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ರಿಕಾ ಪರಿಷತ್ ಮಾಡಿದ್ರು. ಅಮಿತಾ ಬಂದಾಗ್ ಏನೇನಾಯ್ತು ಅನ್ನೋದು ಗೊತ್ತಿದೆ. ಅಲ್ಲಿ ಒಪ್ಪಿಗೆ ತಗೊಂಡು ಬರ್ತಾರಾ. ಅಗತ್ಯ ಇದೆಯಾ ಅಂತ ಕಿಡಿಕಾರಿದರು. ಪ್ರಧಾನಿ ಮೋದಿ ಅವ್ರಿಗೆ ಗೋವಾ ಒಪ್ಪಿಗೆ ತಗೊಂಡು ಬನ್ನಿ ಅಂತ ಹೇಳಲ್ಲಾ ನಾನು. ಕುಮಾರಸ್ವಾಮಿ ಅವ್ರೇ ತಗೊಂಡು ಬನ್ನಿ ಎನ್ನಲ್ಲ. ಅದು ಅವಶ್ಯಕತೆ ಇಲ್ಲ. ಅವಶ್ಯಕತೆ ಇಲ್ಲಾ ಅಂದ್ರೆ ಯಾಕೇ ಹೋಗ್ತೀರಾ ಎಂದು ಪ್ರಶ್ನಿಸಿದರು.

ಪ್ರಾಮಾಣಿಕವಾಗಿ ಜನಗಣತಿ ಸರ್ವೆ ನಡಿತಾಯಿದೆ:

ರಾಜ್ಯದಲ್ಲಿ ಪರಿಶಿಷ್ಟ ಜಾತಿ ಜನಗಣತಿ ವಿಚಾರವಾಗಿ ಮಾತನಾಡಿ, ನಾಗಮೋಹನ ದಾಸ್ ವರದಿ ಇನ್ನೇನು ತನ್ನ ಕೆಲಸ ಪೂರ್ಣ ಮಾಡಲು ಬಂದಿದೆ. ಅವರೇ ಹೇಳಿದ ಹಾಗೇ 10 ಲಕ್ಷ ಜನ ಇನ್ನೂ ಮಾಹಿತಿ ಕೊಟ್ಟಿಲ್ಲ. ಆ ಕುರಿತು ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದಾರೆ.

ಇಷ್ಟಾದ ಮೇಲೆ ನೀವು ಸುದ್ದಿ ಸೃಷ್ಟಿ ಮಾಡುವಂತಹದ್ದು ಏನು ಇಲ್ಲ. ಉತ್ತಮವಾಗಿ, ವೈಜ್ಞಾನಿಕವಾಗಿ, ಪ್ರಮಾಣಿಕ ಎಕ್ಸಸೈಜ್ ನಡೆದಿದೆ. ಅದು ಯಶಸ್ವಿಯಾಗಲು ಬಂದಾಗ, ಅನವಶ್ಯಕ ಪ್ರಶ್ನೆ ಕೇಳೋದು ಆರೋಗ್ಯಕರ ಅಲ್ಲ. ಸಮರ್ಪಕವಾಗಿ ಅತ್ಯಂತ ಪ್ರಾಮಾಣಿಕವಾಗಿ ಸರ್ವೆ ನಡಿತಾಯಿದೆ ಎಂದರು.

ಗುಣಮಟ್ಟದ ಕಾಮಗಾರಿಗೆ ಆದ್ಯತೆಯಿರಲಿ

ವಿಜಯಸಾಕ್ಷಿ ಸುದ್ದಿ, ಗದಗ: ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಗುಣಮಟ್ಟದ ಕಡೆಗೆ ಗಮನ ಹರಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸೂಚಿಸಿದರು.

ಅವರು ಶನಿವಾರ ಗದಗ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಮೊರಾರ್ಜಿ ವಸತಿ ಶಾಲೆ ಗ್ರಂಥಾಲಯ ಹಾಗೂ ಗಂಡು ಮಕ್ಕಳ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಮಲ್ಲಸಮುದ್ರದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಗ್ರಂಥಾಲಯ ಹಾಗೂ ಶಾಲಾ ಕಟ್ಟಡ ನಿರ್ಮಾಣಕ್ಕೆ 733 ಲಕ್ಷ ರೂ ಅನುದಾನ ಒದಗಿಸಲಾಗಿದೆ. ನೀಡುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ನೆರೆದ ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಪ್ರಭು ಬುರಬುರೆ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ರವಿ ಮೂಲಿಮನಿ, ಫಾರೂಕ್ ಹುಬ್ಬಳ್ಳಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ರವಿ ಗುಂಜೀಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಕ್ಕಳನ್ನು ನಿರಂತರ ಪ್ರೋತ್ಸಾಹಿಸಬೇಕು

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಮಕ್ಕಳನ್ನು ನಿರಂತರ ಪ್ರೋತ್ಸಾಹಿಸುವುದರೊಂದಿಗೆ ಧೈರ್ಯ ಹಾಗೂ ಪ್ರೀತಿಯನ್ನು ತುಂಬಿ ತರಗತಿಯ ಬೋಧನೆಯಲ್ಲಿ ಸ್ಪಷ್ಟ ನಿಯಮಗಳು, ನಿರಂತರ ಕ್ರಿಯೆ-ಪ್ರತಿಕ್ರಿಯೆ ಹಾಗೂ ಧನಾತ್ಮಕವಾದ ಕ್ರಿಯೆಗಳನ್ನು ಅನುಸರಿಸಿ ಮಕ್ಕಳ ವಯಕ್ತಿಕ ಅಗತ್ಯತೆಗಳನ್ನು ಗುರುತಿಸಿ, ವಿಶೇಷಚೇತನ ಮಕ್ಕಳಗೆ ಅಗತ್ಯವಿದ್ದಲ್ಲಿ ಸಹಕಾರ ಹಾಗೂ ಸಹಾಯ ಕಲ್ಪಿಸಬೇಕೆಂದು ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವ್ಹಿ. ಶೆಟ್ಟಪ್ಪನವರ ಹೇಳಿದರು.

ಅವರು ಶನಿವಾರ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಗದುಗಿನ ಹಿರಿಯ ಪ್ರಾಥಮಿಕ ಶಾಲೆ ನಂ. 15ರಲ್ಲಿ ಜರುಗಿದ ವಿಶೇಷ ದಾಖಲಾತಿ ಆಂದೋಲನದಲ್ಲಿ ವಿಶೇಷ ಮಗುವನ್ನು ಶಾಲೆಗೆ ದಾಖಲಿಸಿ ಮಾತನಾಡಿದರು.

ವಿಶೇಷ ಮಕ್ಕಳ ದಿನಂಪ್ರತಿ ಕಾರ್ಯಚಟುವಟಿಕೆಗಳಿಗೆ ಪಾಲಕರು, ಶಿಕ್ಷಕರು ಹೆಚ್ಚಿನ ಗಮನ ಹರಿಸಿ ಅವರ ಬೆಂಗಾವಲಾಗಿ ನಿಲ್ಲಬೇಕು. ಸಮಯ ಪಾಲನೆ, ಮಕ್ಕಳ ಆರೋಗ್ಯ ಶೈಕ್ಷಣಿಕ ಅಭಿವೃದ್ಧಿಯು ವಿಶೇಷ ಮಕ್ಕಳಿಗೆ ಅವಶ್ಯವಿದ್ದು ಅದು ಮಕ್ಕಳಿಗೆ ಸಮರ್ಪಕವಾಗಿ ತಲುಪುವಂತೆ ನಾವೆಲ್ಲರೂ ಕಾಳಜಿ ವಹಿಸಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಮಾತನಾಡಿ, ವಿಶೇಷ ಮಕ್ಕಳ ಪಾಲನೆಯಲ್ಲಿ ಪಾಲಕರ ಜವಾಬ್ದಾರಿ ದೊಡ್ಡದು. ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ಮಕ್ಕಳ ಶೈಕ್ಷಣಿಕ ಸಾಧನೆಗಳು, ಸಾಮಾಜಿಕ ಬೆಳವಣಿಗೆಯು ಪ್ರಗತಿಯತ್ತ ಸಾಗುತ್ತದೆ. ಮಕ್ಕಳ ನೂನ್ಯತೆಗಳನ್ನು ತಿಳಿದು ಬೋಧನೆಗೆ ಇಳಿದಾಗ ಮಕ್ಕಳಲ್ಲಿ ಕಲಿಕೆ ಕಂಡು ಬರುತ್ತದೆ ಎಂದರು.

ವಿಶೇಷಚೇತನ ಮಗು ಕೃಷ್ಣಪ್ರಿಯಾ ಬದಿ ಪ್ರಾರ್ಥಿಸಿದರು. ಮುಖೋಪಾಧ್ಯಾಯೆ ವಿ.ಎನ್. ಬಸಾಪೂರ ಸ್ವಾಗತಿಸಿದರು. ಪಿ.ಎಸ್. ಬ್ಯಾಳಿ ನಿರೂಪಿಸಿದರು. ಬಿ. ಯಶೋಧಾ ವಂದಿಸಿದರು. ವ್ಹಿ.ಬಿ. ಕರಬಸಗೌಡ್ರ, ಮೀನಾಕ್ಷಿ ಕೊರವನವರ, ಗೀತಾ ಹಾಸಲಕರ್, ಪಾಲಕರು-ಪೋಷಕರು ಉಪಸ್ಥಿತರಿದ್ದರು.

ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ವಿಶೇಷ ಮಕ್ಕಳಿಗೆ ಪ್ರೋತ್ಸಾಹ ಹಾಗೂ ಪ್ರಶಂಸೆ ಬಹು ಮುಖ್ಯವಾದುದು. ಮಕ್ಕಳ ಕೆಲವೊಂದು ಅತೀರೇಕದ ಹಾಗೂ ಅನಗತ್ಯ ವರ್ತನೆಗಳನ್ನು ತಿದ್ದಲು ನಾವು ಅವರ ಧನಾತ್ಮಕ ಕೆಲಸಗಳಿಗೆ ಬೆಂಬಲ ನೀಡುವುದರ ಮೂಲಕ ಸರಿ-ತಪ್ಪು ತಿಳುವಳಿಕೆಯನ್ನು ನೀಡಬೇಕು. ಮುಖ್ಯವಾಗಿ ಈ ಮಕ್ಕಳ ಭಾವನೆಗಳನ್ನು ತಿಳಿದುಕೊಂಡು ಅವುಗಳಿಗೆ ಬೆಲೆಕೊಟ್ಟು ಸಮಸ್ಯೆಗಳನ್ನು ಅರಿತು ನಾವು ಸ್ಪಂದಿಸಬೇಕು ಎಂದರು.

ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ವಿಜಯಸಾಕ್ಷಿ ಸುದ್ದಿ, ಗದಗ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಗದಗ ಮತಕ್ಷೇತ್ರದ ಮಲ್ಲಸಮುದ್ರ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿಗೆ ರಾಜ್ಯದ ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ಮಲ್ಲಸಮುದ್ರ ಗ್ರಾಮದ ಕೆರೆ ಅಭಿವೃದ್ಧಿಗೆ ಸರ್ಕಾರ 62 ಲಕ್ಷ ರೂ. ಅನುದಾನ ಒದಗಿಸಿದೆ. ಈ ಅನುದಾನ ಸದ್ಬಳಕೆ ಮಾಡಿಕೊಂಡು ಕೆರೆ ಅಭಿವೃದ್ಧಿಪಡಿಸುವ ಮೂಲಕ ಅಂತರ್ಜಲ ವೃದ್ಧಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಪ್ರಭು ಬುರಬುರೆ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ರವಿ ಮೂಲಿಮನಿ, ಫಾರೂಕ್ ಹುಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಹಿಳೆ ಕುಟುಂಬದ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದ್ದಾಳೆ

ವಿಜಯಸಾಕ್ಷಿ ಸುದ್ದಿ, ನರಗುಂದ: ಗ್ರಾಮೀಣ ಮಹಿಳೆಯರು ಸ್ವ-ಸಹಾಯ ಗುಂಪುಗಳ ಮೂಲಕ ಸಂಘಟಿತರಾಗಿ, ವಿವಿಧ ಜೀವನೋಪಾಯ ಚವಟಿಕೆಗಳನ್ನು ಮಾಡುತ್ತಿರುವುದು ಮತ್ತು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಹೊಂದಲು ಬ್ರಾಂಡಿಂಗ್ ಮತ್ತು ಪ್ಯಾಕಿಂಗ್ ವ್ಯವಸ್ಥೆ ಕೈಗೊಂಡಿರುವುದು ಶ್ಲಾಘನೀಯ ಎಂದು ಮಾಜಿ ಸಚಿವ, ನರಗುಂದ ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ನರುಗಂದ ತಾಲೂಕಿನ ಚಿಕ್ಕ ನರಗುಂದ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಲಾದ ಮಹಿಳಾ ವರ್ಕ್ ಶೆಡ್ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುನಾಡುತ್ತಿದ್ದರು.

ಮಹಿಳೆ ಇಂದು ಎಲ್ಲಾ ರಂಗಗಳಲ್ಲಿಯೂ ಅಭಿವೃದ್ಧಿ ಹೊಂದಿದ್ದು, ಸಮಾಜಕ್ಕೆ ತನ್ನದೇ ಆದ ಕೊಡುಗೆ ನಿಡುತ್ತಿದ್ದಾಳೆ. ಮಹಿಳೆ ವಿವಿಧ ಉತ್ಪನ್ನದಾಯಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಕುಟುಂಬದ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದ್ದಾಳೆ ಎಂದರು.

ಇದೇ ಸಂದರ್ಭದಲ್ಲಿ `ಗದಗಿನ ಹಳ್ಳಿ ರುಚಿ’ ಎಂಬ ಬ್ರಾಂಡ್ ಅಡಿಯಲ್ಲಿ ಸುರಕೋಡ ಗ್ರಾಮದ ನಿಸರ್ಗ ಸ್ವ-ಸಹಾಯ ಗುಂಪಿನಿಂದ ಸಿದ್ಧಪಡಿಸಲಾದ ಶ್ಯಾವಿಗೆ ಉತ್ಪನ್ನಗಳನ್ನು ಅನಾವರಣಗೊಳಿಸಿದ ಶಾಸಕ ಸಿ.ಸಿ. ಪಾಟೀಲ, ಗ್ರಾಮೀಣ ಮಹಿಳೆಯರ ಈ ಉತ್ಪನ್ನವನ್ನು ನನ್ನಿಂದ ಅನಾವರಣಗೊಳಿಸುತ್ತಿರುವುದು ನನಗೆ ಸಂತೋಷ ತಂದಿದೆ. ಅವರ ಈ ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗಲಿ, ಲಿಜ್ಜತ್ ಪಾಪಡ್ ಉತ್ಪನ್ನದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗದಗ ಜಿಲ್ಲೆಯ ಹಳ್ಳಿ ರುಚಿ ಉತ್ಪನ್ನಗಳೂ ಸಹ ಅಭಿವೃದ್ಧಿ ಹೊಂದಲಿ. ಮುಂದಿನ ದಿನಗಳಲ್ಲಿ ಹಳ್ಳಿರುಚಿ ಉತ್ಪನ್ನಗಳ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಗ್ರಾ.ಪಂ ಮಟ್ಟದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಹಾಗೂ ಸದಸ್ಯರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮದ ಮುಖಂಡರು, ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಸ್ವ-ಸಹಾಯ ಗುಂಪಿನ ಮಹಿಳೆಯರು ಮತ್ತು ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.

ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಡುವ ಉದ್ದೇಶದಿಂದ ಗದಗ ಜಿಲ್ಲಾ ಪಂಚಾಯಿತಿಯ ಮಾರ್ಗದರ್ಶನದಲ್ಲಿ `ಗದಗಿನ ಹಳ್ಳಿ ರುಚಿ’ ಎಂಬ ವಿನೂತನ ಬ್ರಾಂಡ್‌ನ್ನು ಪರಿಚಯಿಸಲಾಗುತ್ತಿದ್ದು, ಈ ಬ್ರಾಂಡ್ ಅಡಿಯಲ್ಲಿ ಈಗಾಗಲೇ ಖಾರದ ಪುಡಿ, ಶ್ಯಾವಿಗೆ, ಶೇಂಗಾ ಎಣ್ಣೆ, ತಿಂಡಿ-ತಿನಸುಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ತಂದು ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ.

ಕರ್ನಾಟಕ ಸರ್ಕಾರ ಭ್ರಷ್ಟಾಚಾರ ಮತ್ತು ಒಳಜಗಳದ ತಾಣವಾಗಿದೆ: ಸಚಿವ ಪಿಯೂಷ್ ಗೋಯಲ್

ಬೆಂಗಳೂರು: ಕರ್ನಾಟಕ ಸರ್ಕಾರ ಭ್ರಷ್ಟಾಚಾರ ಮತ್ತು ಒಳಜಗಳದ ತಾಣವಾಗಿದೆ ಎಂದು  ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಸಹ ಭ್ರಷ್ಟಾಚಾರ ಮತ್ತು ಒಳಜಗಳದ ತಾಣವಾಗಿದೆ. ರಾಹುಲ್ ಗಾಂಧಿಯವರು ತಮ್ಮ ಸರ್ಕಾರವನ್ನು ನಿಯಂತ್ರಣ ಮಾಡಲಿ ಎಂದು ಒತ್ತಾಯಿಸಿದ್ದಾರೆ.

ದೇಶದ ಜನರು ಅವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದು, ಮೂರು ಬಾರಿ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಿದ್ದಾರೆ. ರಾಹುಲ್ ಗಾಂಧಿ ನಕಾರಾತ್ಮಕ ಮನಸ್ಥಿತಿ ಹೊಂದಿದ್ದಾರೆ. ಈಗಲೂ ಸಹ ಕಾಂಗ್ರೆಸ್ ದೇಶದ ಅಭಿವೃದ್ಧಿ ಬಗ್ಗೆ ಯಾವುದೇ ಸಕಾರಾತ್ಮಕ ಚಿಂತನೆ ಹೊಂದಿಲ್ಲ ಎಂದು ಗೋಯಲ್ ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ನನ್ನ ಭಯವಿದೆ, ಅದಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದೆ: ಹೆಚ್.ಡಿ. ಕುಮಾರಸ್ವಾಮಿ

ಮೈಸೂರು: ಕಾಂಗ್ರೆಸ್ ಪಕ್ಷಕ್ಕೆ ನನ್ನ ಭಯವಿದೆ, ಅದಕ್ಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರಿಗೆ ಜನರ ಕೆಲಸ ಮಾಡುವುದು ಬಿಟ್ಟು ರಾಜಕೀಯ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ನನ್ನನ್ನು ಕಂಡರೆ ಭಯ. ನನ್ನೊಬ್ಬನ ಮೇಲೆಯೇ ಆ ಪಕ್ಷಕ್ಕೆ ಅತಿಯಾದ ಭಯವಿದೆ.

ಈಗಾಗಿ ಪದೇಪದೇ ಕಾಂಗ್ರೆಸ್ ಮುಖಂಡರು ನನ್ನ ಹೆಸರನ್ನು ಜಪ ಮಾಡುತ್ತಿರುತ್ತಾರೆ. ಬಿಜೆಪಿ – ಜೆಡಿಎಸ್ ಜೊತೆಯಾದ ಮೇಲಂತೂ ಕಾಂಗ್ರೆಸ್ ನಾಯಕರಿಗೆ  ನಿದ್ದೆಯೇ ಬರುತ್ತಿಲ್ಲ. ಈಗಾಗಿ ನನ್ನ ಮೇಲೆ ಪದೇಪದೇ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ನೇರ ಆರೋಪ ಮಾಡಿದರು.

ಮುಂದೆ ಕೂಡ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ, ಸಂತೋಷ. ಮುಂದಿನ ಐದು ವರ್ಷ ಅಲ್ಲದಿದ್ದರೆ ಐವತ್ತು ವರ್ಷ ಅವರೇ ಆಳ್ವಿಕೆ ಮಾಡಲಿ. ಮೊದಲು ಜನರು ಹೇಳಿದ ಕೆಲಸ ಮಾಡಿ.

ಇಪ್ಪತ್ತು ವರ್ಷ ನಮ್ಮದೇ ಸರ್ಕಾರ ಎಂದವರು ಏನೇನಾದರೂ ಎನ್ನುವುದು ನನಗೆ ಗೊತ್ತಿದೆ. ಮುಂದೆ ಯಾರದ್ದು ಸರ್ಕಾರ ಎಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗಾಗಿ ಗಲಾಟೆಗಳೇ ನಡೆಯುತ್ತಿದೆ. ಗಲಾಟೆಯಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷವನ್ನು ಜನ ಹೇಗೆ ಒಪ್ಪುತ್ತಾರೆ? ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವರು ಟೀಕಾಪ್ರಹಾರ ನಡೆಸಿದರು.

ಲವ್-ಸೆಕ್ಸ್-ದೋಖಾ ಪ್ರಕರಣ: ತಲೆಮರೆಸಿಕೊಂಡಿದ್ದ ಪುತ್ತೂರು ಬಿಜೆಪಿ ಮುಖಂಡನ ಪುತ್ರ ಅರೆಸ್ಟ್.!

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿ ಮಾಡಿ ಬಳಿಕ ಮದುವೆಯಾಗಲು ನಿರಾಕರಿಸಿ ಬಿಜೆಪಿ ಮುಖಂಡನ ಪುತ್ರನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮುಖಂಡನ ಮಗ ಕೃಷ್ಣ ಜೆ.ರಾವ್​ನನ್ನು ಕೊನೆಗೂ ಬಂಧಿಸಲಾಗಿದೆ. ಯುವತಿ ನೀಡಿದ್ದ ದೂರಿನ ಮೇರೆಗೆ ಕ್ರಮ ಕೈಗೊಂಡ ಪುತ್ತೂರು ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಮೈಸೂರಿನಿಂದ ವಶಕ್ಕೆ ಪಡೆದಿದ್ದಾರೆ.

ಆರೋಪಿ ಕೃಷ್ಣ ಜೆ.ರಾವ್ ಪುತ್ತೂರಿನ ಹೈಸ್ಕೂಲ್‌ವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಹುಡುಗಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಅದೇ ಪ್ರೀತಿ ಹಾಗೆಯೇ ಮುಂದುವರಿದಿತ್ತು. ಬಳಿಕ 2024ರ ಅ.11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯನ್ನ ಕರೆದುಕೊಂಡು ಹೋಗಿದ್ದ. ಈ ವೇಳೆ ಮದುವೆಯಾಗುತ್ತೇನೆ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ.

ಅದಾದ ಬಳಿಕ 2025ರ ಜನವರಿಂದಲೂ ಬಲವಂತವಾಗಿ ಯುವತಿ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ. ಕೆಲವು ಸಮಯದ ನಂತರ ಯುವತಿ ಗರ್ಭಿಣಿಯಾದ ವಿಚಾರ ಬೆಳಕಿಗೆ ಬಂದಿತ್ತು. ಆದ್ರೆ ಕೃಷ್ಣ ಮದುವೆಯಾಗಲು ನಿರಾಕರಿಸಿದ್ದ. ಇದಾದ ಬಳಿಕ ಇಬ್ಬರ ನಡುವೆ ರಾಜಿ ಪಂಚಾಯಿತಿ ನಡೆದಿತ್ತು. ಸಂಧಾನ ನಡೆದಿದ್ದ ಹಿನ್ನೆಲೆ ಆರೋಪಿ ವಿರುದ್ಧ ಎಫ್‌ಐಆರ್‌ ಸಹ ದಾಖಲಾಗಿರಲಿಲ್ಲ. ಯುವಕನಿಗೆ 21 ವರ್ಷ ತುಂಬದ ಹಿನ್ನಲೆ ಮದುವೆಗೆ ಅಡ್ಡಿಪಡಿಸಲಾಗಿತ್ತು.

ಆದ್ರೆ ಕಳೆದ ಜೂನ್‌ 23ಕ್ಕೆ 21 ವರ್ಷ ತುಂಬಿತ್ತು. ಆದಾಗ್ಯೂ ಮದುವೆಗೆ ಯುವಕ ಹಿಂದೇಟು ಹಾಕಿದ್ದ. ಹೀಗಾಗಿ ಮಂಗಳೂರಿನ ಖಾಸಗಿ ಕಾಲೇಜಿನ ಬಿ.ಎಸ್ಸಿ ಫಾರೆನ್ಸಿಕ್ ಸೈನ್ಸ್ ವಿದ್ಯಾರ್ಥಿನಿ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರು ದಾಖಲಿಸುತ್ತಿದ್ದಂತೆ ಆರೋಪಿ ಎಸ್ಕೇಪ್‌ ಆಗಿದ್ದ. ಆದ್ರೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಸದ್ಯ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನಲ್ಲಿ ಆರೋಪಿಯನ್ನ ಬಂಧಿಸಿ, ಮೆಡಿಕಲ್ ಟೆಸ್ಟ್ ಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.

 

error: Content is protected !!