Home Blog Page 7

ಗುರುವಿನ ಕೃಪೆಯೇ ಬದುಕಿನ ಶ್ರೇಷ್ಠ ಸಂಪತ್ತು: ಫಕ್ಕೀರಯ್ಯ ಸ್ವಾಮೀಜಿ

0

ವಿಜಯಸಾಕ್ಷಿ ಸುದ್ದಿ, ಗದಗ: ಹರ್ಲಾಪೂರದ ಬಸವಾನಂದ ಶಿವಯೋಗಿಗಳ ಶ್ರೀಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಠದ ಪೂಜ್ಯ ಫಕ್ಕೀರಯ್ಯ ಸ್ವಾಮೀಜಿ ಇಷ್ಟಲಿಂಗ ಪೂಜೆ ಹಾಗೂ ಪಾದಪೂಜೆ ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಗುರುವಿನ ಚರಣದಿಂದಲೇ ಜಗತ್ತು ಜಯಂಕರಿಸಿದೆ. ಅಜ್ಞಾನವನ್ನು ದೂರ ಮಾಡಿ ಜ್ಞಾನದೆಡೆಗೆ ಕರೆದೊಯ್ಯುವವರೇ ಗುರು. ಆದ್ದರಿಂದ ಗುರುವಿನ ಸ್ಥಾನ ಜಗತ್ತಿನಲ್ಲಿ ಶ್ರೇಷ್ಠ” ಎಂದು ಹೇಳಿದರು.

ಹಿಂದೂ ಸಂಪ್ರದಾಯದಲ್ಲಿ ಆಷಾಢ ಹುಣ್ಣಿಮೆಯನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಈ ದಿನ ಗುರುಗಳಿಗೆ ಪೂಜೆ ಸಲ್ಲಿಸುವುದರೊಂದಿಗೆ ಅವರ ಮಾರ್ಗದರ್ಶನವನ್ನು ಸ್ಮರಿಸಲಾಗುತ್ತದೆ. ಗುರು ಎನ್ನುವ ಪದದ ಅರ್ಥವೇ ಅಜ್ಞಾನವೆಂಬ ಅಂಧಕಾರವನ್ನು ದೂರ ಮಾಡಿ ಜ್ಞಾನ ನೀಡುವವನು ಎಂಬುದಾಗಿದೆ ಎಂದು ವಿವರಿಸಿದರು.

ಭಾರತದ ಇತಿಹಾಸದಲ್ಲಿ ಗುರು-ಶಿಷ್ಯ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು. ಗುರು ಗೋವಿಂದ ಭಟ್ಟರು–ಶರೀಫ ಸಾಹೇಬರು, ಅಡವಿ ಸಿದ್ದೇಶ್ವರರು–ನಾಗಲಿಂಗಪ್ಪ, ಗಜದಂಡ ಶಿವಯೋಗಿಗಳು–ಸಿದ್ಧಾರೂಢರು, ಪಂಚಾಕ್ಷರಿ ಗವಾಯಿಗಳು–ಪುಟ್ಟರಾಜ ಗವಾಯಿಗಳು ಸೇರಿದಂತೆ ಅನೇಕ ಮಹನೀಯರ ಗುರು-ಶಿಷ್ಯ ಸಂಬಂಧ ಸಮಾಜಕ್ಕೆ ಆದರ್ಶವಾಗಿದೆ ಎಂದು ತಿಳಿಸಿದರು.

ವೇದವ್ಯಾಸ ಮಹರ್ಷಿಗಳ ಜನ್ಮದಿನವಾಗಿಯೂ ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಯೋಗ ಸಂಪ್ರದಾಯದಲ್ಲಿ ಶಿವನು ಸಪ್ತರ್ಷಿಗಳಿಗೆ ಯೋಗವಿದ್ಯೆ ಬೋಧಿಸಿದ ದಿನವೆಂಬ ನಂಬಿಕೆಯೂ ಇದೆ. ಆದ್ದರಿಂದ ಈ ಹಬ್ಬಕ್ಕೆ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿಯೂ ವಿಶೇಷ ಮಹತ್ವವಿದೆ ಎಂದು ಹೇಳಿದರು.

ಚಾತುರ್ಮಾಸದ ಅವಧಿಯಲ್ಲಿ ಸನ್ಯಾಸಿಗಳು ಒಂದೇ ಸ್ಥಳದಲ್ಲಿ ತಂಗಿ ಧರ್ಮಪ್ರವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ. ಗುರು-ಶಿಷ್ಯರ ಸಂಬಂಧವು ಸಮಾಜದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಗಟ್ಟಿಗೊಳಿಸುವ ಶಕ್ತಿಯಾಗಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶ್ರೀ ಬಸವಾನಂದ ಸಾಂಸ್ಕೃತಿಕ ಸೇವಾ ಸಂಸ್ಥೆಯ ಸಹ ಕಾರ್ಯದರ್ಶಿ ಕಿಡಿಗಣ್ಣಸ್ವಾಮಿ ವಂದಿಸಿದರು. ಸಂಸ್ಥೆಯ ಕಾರ್ಯದರ್ಶಿ ಸದಾನಂದ ಶಾಸ್ತ್ರಿಗಳು ಕಾರ್ಯಕ್ರಮದ ಮಾಹಿತಿ ನೀಡಿದರು.

“ಅಜ್ಞಾನವನ್ನು ದೂರ ಮಾಡಿ ಜ್ಞಾನದ ಬೆಳಕಿನತ್ತ ಕರೆದೊಯ್ಯುವವರೇ ಗುರು; ಗುರುವಿನ ಸ್ಥಾನ ಎಲ್ಲಕ್ಕಿಂತ ಶ್ರೇಷ್ಠ.”

– ಫಕ್ಕೀರಯ್ಯ ಸ್ವಾಮೀಜಿ

‘ನೀವು ಈ ಹುದ್ದೆಗೆ ಅನ್ಫಿಟ್’ ಎಂದ ಸಚಿವ; ಸಭೆಯಲ್ಲೇ ಗಳಗಳನೆ ಕಣ್ಣೀರಿಟ್ಟ ಮಹಿಳಾ ಅಧಿಕಾರಿ!

0

ಗದಗ: ಜಿಲ್ಲೆಯ ಬರ ಪರಿಸ್ಥಿತಿ ಕುರಿತು ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ನೀಡಿದ ಬೆಳೆ ಅಂಕಿ-ಅಂಶಗಳಲ್ಲಿನ ವ್ಯತ್ಯಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಸಭೆಯಲ್ಲಿ ಕೃಷಿ ಇಲಾಖೆಗೆ ಸೇರಿದ ಹತ್ತಿ ಬೆಳೆಯನ್ನು ತೋಟಗಾರಿಕೆ ಬೆಳೆ ವಿಭಾಗದಲ್ಲಿ ದಾಖಲಿಸಿರುವುದು, ಬೆಳೆ ವಿಮೆ ಅಂದಾಜು ಲೆಕ್ಕಾಚಾರದಲ್ಲಿ ಕಂಡುಬಂದ ಗೊಂದಲ ಸೇರಿದಂತೆ ಹಲವು ವಿಷಯಗಳನ್ನು ಸಚಿವರು ಪ್ರಶ್ನಿಸಿದರು. ಅಧಿಕಾರಿಯ ಉತ್ತರ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರಕ್ಕೆ ಸಲ್ಲಿಸುವ ವರದಿಗಳು ನಿಖರ ಮತ್ತು ವಾಸ್ತವಾಧಾರಿತವಾಗಿರಬೇಕು ಎಂದು ತಾಕೀತು ಮಾಡಿದರು.

ಇದೇ ವೇಳೆ, “ನೀವು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಹುದ್ದೆಗೆ ಅನ್ಫಿಟ್” ಎಂದು ಸಚಿವರು ತರಾಟೆಗೆ ತೆಗೆದುಕೊಂಡರು. ಸಚಿವರ ಕಠಿಣ ಮಾತುಗಳಿಂದ ಭಾವುಕರಾದ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಸಭೆಯಲ್ಲೇ ಕಣ್ಣೀರು ಹಾಕಿದರು.

ಬರ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ಸಲ್ಲಿಸುವ ಅಂಕಿ-ಅಂಶಗಳಲ್ಲಿ ಯಾವುದೇ ರೀತಿಯ ತಪ್ಪು, ನಿರ್ಲಕ್ಷ್ಯ ಅಥವಾ ಗೊಂದಲ ಇರಬಾರದು. ರೈತರ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಲೋಪಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸಚಿವ ಬಸವರಾಜ ರಾಯರಡ್ಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಚಾಲುಕ್ಯರ ನಾಡಿನಲ್ಲಿ ಅರಳಿದ ‘ಮಂದಾರ ಹೂವು’

ವಿಜಯಸಾಕ್ಷಿ ಸುದ್ದಿ, ಬಾದಾಮಿ: ಚಾಲುಕ್ಯರ ಐತಿಹಾಸಿಕ ನಾಡು ಬಾದಾಮಿಯಲ್ಲಿ ವಸಂತ ಬಸವ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಮಂದಾರ ಹೂವು’ (ಉಪಶೀರ್ಷಿಕೆ: ಇವಳು ನಮ್ಮ ಮನೆ ಮಗಳು) ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಭಕ್ತಿಭಾವದಿಂದ ನೆರವೇರಿತು.

ಬಾದಾಮಿಯ ಹೃದಯಭಾಗದಲ್ಲಿರುವ ಚೌಡಿಯ ದೊಡ್ಡ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ದೇವಸ್ಥಾನದ ಪೂಜಾರಿಗಳ ಸಮ್ಮುಖದಲ್ಲಿ ಕ್ಯಾಮೆರಾಗೆ ಚಾಲನೆ ನೀಡಿ ಮೊದಲ ದೃಶ್ಯದ ಚಿತ್ರೀಕರಣ ಆರಂಭಿಸಲಾಯಿತು.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಶಿಷ್ಯ ಶಾಂತಕುಮಾರ್ ಪಾಟೀಲ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದು, ಚಿತ್ರದ ಮೂರು ಹಾಡುಗಳಿಗೆ ಅವರೇ ಸಾಹಿತ್ಯ ರಚಿಸಿದ್ದಾರೆ.

ಚಿತ್ರದ ಚಿತ್ರೀಕರಣ ಬಾದಾಮಿ, ಮುತ್ತಲಗೇರಿ ಹಾಗೂ ಬನಶಂಕರಿ ಸುತ್ತಮುತ್ತ ಸುಮಾರು 40 ದಿನಗಳ ಕಾಲ ನಡೆಯಲಿದ್ದು, ಉತ್ತರ ಕರ್ನಾಟಕದ ಸೊಗಡನ್ನು ಬೆಳ್ಳಿ ಪರದೆ ಮೇಲೆ ಕಟ್ಟಿಕೊಡುವ ಪ್ರಯತ್ನ ಇದಾಗಿದೆ ಎಂದು ನಿರ್ದೇಶಕ ಶಾಂತಕುಮಾರ್ ತಿಳಿಸಿದ್ದಾರೆ.

ಚಿತ್ರಕ್ಕೆ ಗಿರೀಶ್ ಶಿರಗನಹಳ್ಳಿ ಛಾಯಾಗ್ರಹಣ, ಹರ್ಷ ಕಾಗೋಡು ಸಂಗೀತ, ಸುನೈ ಎಸ್. ಜೈನ್ ಸಂಕಲನ, ರಾಜೇಶ್ ಎಸ್. ದೇಸಾಯಿ ಕಲಾ ನಿರ್ದೇಶನ, ಡಾ. ಪ್ರಭು ಗಂಜಿಹಾಳ ಹಾಗೂ ಡಾ. ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಸಹಾಯಕ ನಿರ್ದೇಶಕರಾಗಿ ಸುನಿಲ್ ಎಸ್. ಭಜಂತ್ರಿ, ತುಳಸಪ್ಪ ಪಾತ್ರೋಟಿ, ರವಿ ಎಚ್. ದೇಸಾಯಿ, ಸುಜಲ್ ರಾಠೋಡ ಹಾಗೂ ನವೀನ್ ರೋಡ್ಕರ್ ಕಾರ್ಯನಿರ್ವಹಿಸುತ್ತಿದ್ದು, ಪ್ರಭುರಾಜ್ ಹೂಲಗೇರಿ ಮುಖ್ಯ ಮೇಲ್ವಿಚಾರಣೆ ಮತ್ತು ಸಂಚಾಲಕರಾಗಿದ್ದಾರೆ.

ಚಿತ್ರದಲ್ಲಿ ಅಕ್ಷಯ್ ಪತ್ತಾರ ನಾಯಕನಾಗಿ ಹಾಗೂ ಸ್ವಾತಿ ತೋಟರ ನಾಯಕಿಯಾಗಿ ಅಭಿನಯಿಸುತ್ತಿದ್ದು, ಆನಂದ್ ದೇವಾಡಿಗ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿ ಎಚ್. ದೇಸಾಯಿ, ವಸಂತ ಬಡಿಗೇರ, ಮಂಜು ಬೆಳ್ಳಿಗುಂಡಿ, ಸಂಜನಾ (ತೇಜಸ್ವಿನಿ), ಕಾವೇರಿ, ಚಂದ್ರಿಕಾ, ಪ್ರೇಮಾ ತುಡಬಿನ್, ಸ್ವಾತಿ ರಾಠೋಡ, ಶೈಲಾ ರಾಠೋಡ, ಮಂಜು ಎಚ್. ದೇಸಾಯಿ, ತುಳಸಪ್ಪ ಪಾತ್ರೋಟಿ, ಪ್ರಕಾಶ್ ಗದ್ದಿಗೌಡ್ರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.

“ಉತ್ತರ ಕರ್ನಾಟಕದ ನೆಲ, ನುಡಿ, ಸಂಸ್ಕೃತಿ ಮತ್ತು ಭಾವನೆಗಳನ್ನು ಬೆಳ್ಳಿ ಪರದೆ ಮೇಲೆ ಅನಾವರಣಗೊಳಿಸುವ ಉದ್ದೇಶದಿಂದ ‘ಮಂದಾರ ಹೂವು’ ಚಿತ್ರ ನಿರ್ಮಾಣವಾಗುತ್ತಿದೆ.”

– ನಿರ್ದೇಶಕ ಶಾಂತಕುಮಾರ್ ಪಾಟೀಲ್

ಮನೋರಮಾ ಕಾಲೇಜಿನಲ್ಲಿ ರಂಗೋಲಿ ಸ್ಪರ್ಧೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ಪ್ರತಿಷ್ಠಿತ ಮನೋರಮಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಪ್ರತಿಭೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ರಂಗುರಂಗಿನ ರಂಗೋಲಿ ಸ್ಪರ್ಧೆ ವಿಜೃಂಭಣೆಯಿಂದ ನಡೆಯಿತು.

ಪಿಯುಸಿ ಸಂಯೋಜಕಿ ಪ್ರೊ. ಶಾಹಿದಾ ಶಿರಹಟ್ಟಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರು ವಿವಿಧ ಶೈಲಿಯ ಆಕರ್ಷಕ ರಂಗೋಲಿಗಳನ್ನು ಬಿಡಿಸಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಬಣ್ಣಬಣ್ಣದ ವಿನ್ಯಾಸಗಳು ನೋಡುಗರ ಗಮನ ಸೆಳೆಯುವುದರೊಂದಿಗೆ ಕಾಲೇಜು ಆವರಣವನ್ನು ಹಬ್ಬದ ವಾತಾವರಣಕ್ಕೆ ಸಾಕ್ಷಿಯನ್ನಾಗಿಸಿತು.

ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಭಾಗದ ಕುಮಾರಿ ತೇಜಸ್ವಿನಿ, ಭೂಮಿಕಾ ಹಾಗೂ ಸಹನಾ ಪ್ರಥಮ ಸ್ಥಾನ, ಪ್ರಥಮ ಪಿಯುಸಿ ವಿಭಾಗದ ಕುಮಾರಿ ದೀಪಾ ಹಾಗೂ ಬಸಮ್ಮ ದ್ವಿತೀಯ ಸ್ಥಾನ, ದ್ವಿತೀಯ ಪಿಯುಸಿ ವಿಭಾಗದ ಕುಮಾರಿ ಗೀತಾ ಕೆ. ಹಾಗೂ ವರ್ಷಾ ತೃತೀಯ ಸ್ಥಾನ ಪಡೆದು ಪ್ರಶಂಸೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎನ್.ಎಂ. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಪಿಯುಸಿ ಸಂಯೋಜಕಿ ಪ್ರೊ. ಶಾಹಿದಾ ಶಿರಹಟ್ಟಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆಸ್ಪತ್ರೆ–ಕ್ರೀಡಾಂಗಣಕ್ಕೆ ಉಪಲೋಕಾಯುಕ್ತರ ಸರ್ಪ್ರೈಸ್ ವಿಸಿಟ್

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆ ಹಾಗೂ ಜಿಲ್ಲಾ ಕ್ರೀಡಾಂಗಣಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಮತ್ತು ಕ್ರೀಡಾ ವಸತಿ ಶಾಲೆಯಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.

ಮೊದಲು ಮಹಿಳಾ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಹೆರಿಗೆ ವಾರ್ಡ್‌ನಲ್ಲಿ ದಾಖಲಾಗಿದ್ದ ಬಾಣಂತಿಯರೊಂದಿಗೆ ಸಂವಾದ ನಡೆಸಿ ಚಿಕಿತ್ಸೆ, ಆಹಾರ ಹಾಗೂ ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಆಸ್ಪತ್ರೆಯ ಲಿಫ್ಟ್ ಅನ್ನು ಶೀಘ್ರ ದುರಸ್ತಿಗೊಳಿಸುವಂತೆ ಸೂಚಿಸಿದ ಅವರು, ಆಸ್ಪತ್ರೆ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಸ್ಪತ್ರೆಯ ದುರಸ್ತಿಗೆ ಸಂಬಂಧಿಸಿದ ಕ್ರಿಯಾ ಯೋಜನೆಯ ಪ್ರತಿಯನ್ನು ಸಲ್ಲಿಸುವಂತೆ ಸೂಚಿಸಿದ ಅವರು, ಸಿಬ್ಬಂದಿಗಳ ಹಾಜರಾತಿ ವಹಿ, ಔಷಧ ಉಗ್ರಾಣ ಹಾಗೂ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು.

ಬಳಿಕ ಜಿಲ್ಲಾ ಕ್ರೀಡಾಂಗಣದ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿದ ಉಪಲೋಕಾಯುಕ್ತರು, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಊಟ, ಉಪಹಾರ ಮತ್ತು ಕ್ರೀಡಾ ತರಬೇತಿ ಕುರಿತು ಮಾಹಿತಿ ಪಡೆದರು.

ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.

ಮಕ್ಕಳು ತಮ್ಮ ಸಮಸ್ಯೆಗಳನ್ನು ಧೈರ್ಯವಾಗಿ ಹೇಳಿಕೊಂಡರೆ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕ್ರೀಡಾ ಕ್ಷೇತ್ರದ ಸಾಧಕರನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ಸಾಧನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ, ಸುನೀಲಕುಮಾರ್ ಆರ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೋಗೇರಿ ಉಪಸ್ಥಿತರಿದ್ದರು.

“ಆಸ್ಪತ್ರೆ ಮತ್ತು ಕ್ರೀಡಾ ವಸತಿ ಶಾಲೆಗಳಲ್ಲಿ ಮೂಲಸೌಲಭ್ಯಗಳಿಗೆ ಆದ್ಯತೆ ನೀಡಿ, ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು.”

– ಕೆ.ಎನ್. ಫಣೀಂದ್ರ, ಉಪಲೋಕಾಯುಕ್ತ ನ್ಯಾಯಮೂರ್ತಿಗಳು

ರೈತರಿಗೆ ಅನ್ಯಾಯ ಸಹಿಸುವುದಿಲ್ಲ: ಸಚಿವ ಬಸವರಾಜ ರಾಯರಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಲ್ಲಿ ನರಗುಂದ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬರಪೀಡಿತ ಪ್ರದೇಶವೆಂದು ಘೋಷಿಸಲು ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಜಿಲ್ಲೆಯ ಪ್ರತಿ ತಾಲೂಕಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು.

ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರದೆ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಸಭೆಗಳಿಗೆ ಇಲಾಖೆಗೆ ಸಂಬಂಧಿಸಿದ ಮಾಹಿತಿ ಸ್ಪಷ್ಟ ಹಾಗೂ ನಿಖರವಾಗಿರಬೇಕು. ರೈತರಿಗೆ ಸಿಗಬೇಕಾದ ಸೌಲಭ್ಯಗಳು ಯಾವುದೇ ಕಾರಣಕ್ಕೂ ತಪ್ಪಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನರಗುಂದ ತಾಲೂಕಿನಲ್ಲಿ ಸದ್ಯ ವಾಡಿಕೆಗಿಂತ ಶೇ.18ರಷ್ಟು ಹೆಚ್ಚು ಮಳೆಯಾಗಿದೆ. ಆದರೆ ಮುಂದಿನ ಒಂದು ವಾರದಲ್ಲೂ ಮಳೆಯಾಗದಿದ್ದರೆ ನಿಯಮಾನುಸಾರ ಪರಿಶೀಲನೆ ನಡೆಸಿ ನರಗುಂದವನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸುವ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಶೇ.89.39 ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಶೇ.126.21ರಷ್ಟು ಬಿತ್ತನೆಯಾಗಿದ್ದು, ಒಟ್ಟಾರೆ ಶೇ.90.65ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಸರಿಪಡಿಸಿ, ಅರ್ಹ ರೈತರಿಗೆ ಬೆಳೆ ವಿಮೆ ಹಾಗೂ ಪರಿಹಾರ ಸೌಲಭ್ಯ ತಲುಪಿಸಬೇಕು. ರೈತರ ಹಿತಾಸಕ್ತಿಗೆ ಧಕ್ಕೆಯಾಗುವಂತಹ ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸಭೆಯಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರು ಸುಗ್ನಳ್ಳಿ ಡಿಬಿಒಟಿ ಯೋಜನೆಯ ನೀರಿನ ಗುಣಮಟ್ಟ ಪರೀಕ್ಷೆ ನಡೆಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗದಗ ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಪಿಎಂ ಫಸಲ್ ಬೀಮಾ ಯೋಜನೆಯ ಸೌಲಭ್ಯ ಎಲ್ಲ ಅರ್ಹ ರೈತರಿಗೆ ತಲುಪಬೇಕು. ಬಿತ್ತನೆ ಮಾಡಲಾಗದೆ ಬೀಜ ಹಾಗೂ ರಸಗೊಬ್ಬರ ಖರೀದಿಸಿ ನಷ್ಟ ಅನುಭವಿಸಿರುವ ರೈತರಿಗೂ ಪರಿಹಾರ ಕಲ್ಪಿಸುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾಹಿತಿ ನೀಡಿ, ಜೂನ್ 1ರಿಂದ ಆಗಸ್ಟ್ 5ರವರೆಗೆ ಜಿಲ್ಲೆಯಲ್ಲಿ ವಾಡಿಕೆ 171.3 ಮಿ.ಮೀ. ಮಳೆಯ ಬದಲಿಗೆ ಕೇವಲ 118.50 ಮಿ.ಮೀ. ಮಳೆಯಾಗಿದ್ದು, ಶೇ.31ರಷ್ಟು ಮಳೆ ಕೊರತೆಯಾಗಿದೆ ಎಂದರು. ಗದಗ, ಮುಂಡರಗಿ, ರೋಣ, ಶಿರಹಟ್ಟಿ, ಗಜೇಂದ್ರಗಡ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಬರ ಘೋಷಣೆಗೆ ಪೂರಕ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿ 164 ಕೋಟಿ ರೂ. ಮೌಲ್ಯದ ಬೆಳೆ ಹಾನಿ ಸಂಭವಿಸಿದ್ದು, 31 ಸ್ಥಳಗಳಲ್ಲಿ ಮೇವು ಬ್ಯಾಂಕ್ ತೆರೆಯಲು ಸಿದ್ಧತೆ ನಡೆಸಲಾಗಿದೆ. ಅಗತ್ಯವಿದ್ದರೆ ತಕ್ಷಣ ಮೇವು ವಿತರಣೆ ಆರಂಭಿಸಲಾಗುವುದು ಎಂದು ತಿಳಿಸಿದರು.

“ರೈತರಿಗೆ ಸಿಗಬೇಕಾದ ಬೆಳೆ ವಿಮೆ ಹಾಗೂ ಪರಿಹಾರದಲ್ಲಿ ಯಾವುದೇ ರೀತಿಯ ಅನ್ಯಾಯವಾಗಬಾರದು. ಅಧಿಕಾರಿಗಳು ಕ್ರಿಯಾಶೀಲರಾಗಿ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು.”

– ಬಸವರಾಜ ರಾಯರಡ್ಡಿ, ಸಚಿವ

ಇದು ವಸತಿ ನಿಲಯವೋ, ಅವ್ಯವಸ್ಥೆಯ ಅಡ್ಡೆಯೋ?: ಕೆ.ಎನ್. ಪಣೀಂದ್ರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಸೂರ್ಯನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರು ಶುಕ್ರವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ವಸತಿ ನಿಲಯದ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮೊದಲು ಆಹಾರ ದಾಸ್ತಾನು ಕೊಠಡಿ, ಅಡುಗೆ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ವಿದ್ಯಾರ್ಥಿಗಳ ಕೊಠಡಿಗಳು, ಶೌಚಾಲಯ, ನೀರಿನ ಟ್ಯಾಂಕ್ ಹಾಗೂ ವಸತಿ ನಿಲಯದ ಆವರಣವನ್ನು ವೀಕ್ಷಿಸಿದ ಅವರು, ನಿರ್ವಹಣೆ ತೀರಾ ಕಳಪೆಯಾಗಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಂಬಂಧಿಸಿದ ಅಧಿಕಾರಿಗಳು ನಿಯಮಿತವಾಗಿ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೂಡಲೇ ವಸತಿ ನಿಲಯದ ಸ್ವಚ್ಛತೆ, ಕೊಠಡಿಗಳ ದುರಸ್ತಿ ಹಾಗೂ ಮೂಲಸೌಕರ್ಯ ಸುಧಾರಣೆ ಕೈಗೊಂಡು ವರದಿ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದರು.

ವಸತಿ ನಿಲಯದಲ್ಲಿ ಬಳಸುತ್ತಿರುವ ನೀರು ಕುಡಿಯಲು ಮತ್ತು ಬಳಕೆಗೆ ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಿ ತಕ್ಷಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ವೇಳೆ ವಸತಿ ನಿಲಯದಲ್ಲಿದ್ದ ಗಣಕ ಯಂತ್ರಗಳು, ಹಾಸಿಗೆಗಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ಬೇರೆ ವಸತಿ ನಿಲಯಕ್ಕೆ ಸ್ಥಳಾಂತರಿಸಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದ ಉಪಲೋಕಾಯುಕ್ತರು, ವಸತಿ ನಿಲಯದ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಈ ವೇಳೆ ವಿದ್ಯಾರ್ಥಿಗಳು ಮೇಲ್ವಿಚಾರಕರ ನಿರ್ಲಕ್ಷ್ಯ, ಗುಣಮಟ್ಟದ ಆಹಾರದ ಕೊರತೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಕಂಪ್ಯೂಟರ್ ಸ್ಥಳಾಂತರ, ಗ್ರಂಥಾಲಯದ ಕೊರತೆ, ಶೌಚಾಲಯಗಳ ದುಸ್ಥಿತಿ ಹಾಗೂ ವಸತಿ ನಿಲಯದ ಅಸ್ವಚ್ಛತೆ ಕುರಿತು ದೂರು ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ, ಸುನೀಲಕುಮಾರ್ ಆರ್., ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಹಾಗೂ ವಸತಿ ನಿಲಯದ ಮೇಲ್ವಿಚಾರಕರು ಉಪಸ್ಥಿತರಿದ್ದರು.

“ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ನಿರ್ಲಕ್ಷಿಸುವುದನ್ನು ಸಹಿಸಲಾಗುವುದಿಲ್ಲ. ಸ್ವಚ್ಛತೆ, ಸುರಕ್ಷತೆ ಮತ್ತು ಮೂಲಸೌಕರ್ಯಗಳನ್ನು ಕೂಡಲೇ ಸರಿಪಡಿಸಿ ವರದಿ ಸಲ್ಲಿಸಿ.”

– ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ

ರೈತರ ಅಹವಾಲು ಆಲಿಸಿದ ಸಚಿವ ರಾಯರಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಮುಂಗಾರು ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಶುಕ್ರವಾರ ಗದಗ ಹಾಗೂ ಮುಂಡರಗಿ ತಾಲೂಕಿನ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಿದರು. ಬೆಳೆ ನಷ್ಟದ ನೈಜ ಚಿತ್ರಣ ದಾಖಲಿಸಿ, ಯಾವುದೇ ಅರ್ಹ ರೈತ ಸರ್ಕಾರದ ಪರಿಹಾರದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮೊದಲು ಗದಗ ತಾಲೂಕಿನ ಗಂಗಿಮಡಿ ಬಳಿಯ ಜಮೀನಿಗೆ ಭೇಟಿ ನೀಡಿದ ಸಚಿವರು, ಶೇಂಗಾ, ಹೆಸರು ಹಾಗೂ ಮೆಣಸಿನಕಾಯಿ ಬೆಳೆಗಳ ಸ್ಥಿತಿಯನ್ನು ಪರಿಶೀಲಿಸಿದರು. ಮಳೆಯ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿರುವುದು, ತೇವಾಂಶದ ಅಭಾವದಿಂದ ಬೆಳೆಗಳು ಒಣಗುತ್ತಿರುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಂತರ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಜಮೀನಿಗೆ ಭೇಟಿ ನೀಡಿ ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ಮಳೆ ಅಭಾವದಿಂದ ಬೆಳೆಗಳು ಬಾಡುತ್ತಿರುವುದು ಹಾಗೂ ಇದೇ ಪರಿಸ್ಥಿತಿ ಮುಂದುವರಿದರೆ ಹೆಚ್ಚಿನ ನಷ್ಟ ಸಂಭವಿಸುವ ಸಾಧ್ಯತೆ ಕುರಿತು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.

ಪರಿಶೀಲನೆ ವೇಳೆ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದ ಸಚಿವರು, ಬಿತ್ತನೆ ವೆಚ್ಚ, ನೀರಿನ ಕೊರತೆ, ಬೆಳೆ ಹಾನಿ ಹಾಗೂ ಎದುರಾಗಿರುವ ಸಂಕಷ್ಟಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಬೆಳೆ ಹಾನಿ ಮೌಲ್ಯಮಾಪನವನ್ನು ಪಾರದರ್ಶಕವಾಗಿ ನಡೆಸಿ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ರೈತರ ಜಮೀನುಗಳಿಗೆ ತೆರಳಿ ನೈಜ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಯಾವುದೇ ಅರ್ಹ ರೈತರಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಲಿದೆ. ಜಿಲ್ಲೆಯ ಬೆಳೆ ಹಾನಿಯ ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು, ಅಗತ್ಯ ನೆರವು ಮತ್ತು ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಪರಿಶೀಲನೆ ಸಂದರ್ಭದಲ್ಲಿ ಶಾಸಕರಾದ ಎಚ್.ಕೆ. ಪಾಟೀಲ, ಡಾ. ಚಂದ್ರು ಲಮಾಣಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ರೈತರು ಉಪಸ್ಥಿತರಿದ್ದರು.

“ಬೆಳೆ ಹಾನಿಯ ನೈಜ ವರದಿ ಸಿದ್ಧಪಡಿಸಿ, ಸರ್ಕಾರದ ಪರಿಹಾರ ಪ್ರತಿಯೊಬ್ಬ ಅರ್ಹ ರೈತನಿಗೂ ತಲುಪಬೇಕು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದೆ.”

– ಬಸವರಾಜ ರಾಯರಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ

ಎಸ್‌ಪಿ ಕಚೇರಿಗೆ ಉಪಲೋಕಾಯುಕ್ತರ ಭೇಟಿ

0

ವಿಜಯಸಾಕ್ಷಿ ಸುದ್ದಿ, ಗದಗ: ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಪಣೀಂದ್ರ ಅವರು ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್‌ಪಿ) ಕಚೇರಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಅನುಷ್ಠಾನ ಹಾಗೂ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಈ ವೇಳೆ ಎಸ್‌ಪಿ ಕಚೇರಿಯಲ್ಲಿ ಜಾರಿಯಲ್ಲಿರುವ ‘ಪ್ರಭುವಿನೆಡೆಗೆ ಪ್ರಭುತ್ವ’ ಹಾಗೂ ‘ಥರ್ಡ್ ಐ’ ಯೋಜನೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಈ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಇನ್ನಷ್ಟು ಅರಿವು ಮೂಡಿಸುವ ಕೆಲಸಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು.

ಜನಸ್ನೇಹಿ ಪೊಲೀಸ್ ಸೇವೆಗಳು ಹಾಗೂ ತಂತ್ರಜ್ಞಾನ ಆಧಾರಿತ ಯೋಜನೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪರಿಶೀಲನೆ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ, ಸುನೀಲಕುಮಾರ್ ಆರ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಉಪಸ್ಥಿತರಿದ್ದರು.

ಕಚೇರಿಯಲ್ಲಿ ಕುಳಿತು ವರದಿ ಬೇಡ; ಜಮೀನಿಗೆ ಹೋಗಿ ವಾಸ್ತವ ಸ್ಥಿತಿ ತಿಳಿಯಿರಿ: ಸಚಿವ ಬಸವರಾಜ ರಾಯರೆಡ್ಡಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಕಚೇರಿಯಲ್ಲಿ ಕುಳಿತು ವರದಿ ತಯಾರಿಸುವ ಬದಲು ರೈತರ ಜಮೀನುಗಳಿಗೆ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸಿ ಮಾಹಿತಿ ಸಲ್ಲಿಸಬೇಕು. ಮುಂದಿನ ವಾರ ನಡೆಯುವ ಎರಡನೇ ಹಂತದ ಪರಿಶೀಲನಾ ಸಭೆಯೊಳಗೆ ಸಮರ್ಪಕ ವರದಿ ನೀಡದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ಕುರಿತು ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸುದೀರ್ಘ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜೂನ್ 1ರಿಂದ ಆಗಸ್ಟ್ 7ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.31ರಷ್ಟು ಮಳೆ ಕೊರತೆ ದಾಖಲಾಗಿದ್ದು, ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಅಗತ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕುವಾರು ವೈಜ್ಞಾನಿಕ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

164 ಕೋಟಿ ರೂ. ಬೆಳೆ ಹಾನಿ

ಪ್ರಾಥಮಿಕ ಅಂದಾಜಿನಂತೆ ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿ 164 ಕೋಟಿ ರೂ. ಮೌಲ್ಯದ ಬೆಳೆ ಹಾನಿ ಸಂಭವಿಸಿದೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಶೇ.75ರಷ್ಟು ರೈತರು ವಿಮೆ ಮಾಡಿಸಿದ್ದು, ಶೇ.80ರಷ್ಟು ಬೆಳೆ ಹಾನಿಯಾಗಿರುವ ಸಾಧ್ಯತೆಯಿದೆ. ವಿಮಾ ಕಂಪನಿಗಳ ಮೂಲಕ ರೈತರಿಗೆ ಶೀಘ್ರ ಪರಿಹಾರ ದೊರಕಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಮೆ ಮಾಡಿಸದ ರೈತರಿಗೆ ಎಸ್‌ಡಿಆರ್‌ಎಫ್ ನಿಯಮಾವಳಿಗಳಡಿ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಕುಡಿಯುವ ನೀರು, ಉದ್ಯೋಗಕ್ಕೂ ಆದ್ಯತೆ

ಡಿಬಿಒಟಿ ಯೋಜನೆಯಡಿ ಕುಡಿಯುವ ನೀರು ಪೂರೈಕೆಯಲ್ಲಿ ಕಂಡುಬಂದಿರುವ ಲೋಪಗಳನ್ನು ತಕ್ಷಣ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಬಿಜಿ ರಾಮ್‌ಜಿ ಯೋಜನೆಯಡಿ ಈಗಾಗಲೇ 18 ಸಾವಿರಕ್ಕೂ ಹೆಚ್ಚು ಮಾನವ ದಿನಗಳು ಸೃಷ್ಟಿಯಾಗಿದ್ದು, ಕೂಲಿ ಕಾರ್ಮಿಕರಿಗೆ ಕೆಲಸದ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಸದ್ಯ ಮೇವು ಕೊರತೆ ಇಲ್ಲ. ಅಗತ್ಯವಿದ್ದರೆ ತಕ್ಷಣ ಗೋಶಾಲೆಗಳನ್ನು ತೆರೆಯಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಚ್.ಕೆ. ಪಾಟೀಲ, ಶಾಸಕ ಡಾ. ಚಂದ್ರು ಲಮಾಣಿ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ್ ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಕಚೇರಿಯಲ್ಲಿ ಕುಳಿತು ವರದಿ ತಯಾರಿಸಬೇಡಿ; ಜಮೀನಿಗೆ ಹೋಗಿ ರೈತರ ಸಮ್ಮುಖದಲ್ಲೇ ವಾಸ್ತವ ಸ್ಥಿತಿ ಪರಿಶೀಲಿಸಿ. ನಿರ್ಲಕ್ಷ್ಯ ತೋರಿದರೆ ಶಿಸ್ತುಕ್ರಮ ಅನಿವಾರ್ಯ.”

– ಸಚಿವ ಬಸವರಾಜ ರಾಯರೆಡ್ಡಿ, ಉಸ್ತುವಾರಿ ಸಚಿವ