ಬೆಂಗಳೂರು: ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಪತ್ತೆಗಾಗಿ ಬೆಂಗಳೂರಿನ ವೈಟ್ಫೀಲ್ಡ್ ವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 30 ಸ್ಥಳಗಳ ಮೇಲೆ ದಾಳಿ ನಡೆಸಿ, ಅನುಮಾನಾಸ್ಪದವಾಗಿ ಕಂಡುಬಂದ 40 ಮಂದಿಯನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ವರ್ತೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಶೆಡ್ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ನೂರಕ್ಕೂ ಹೆಚ್ಚು ಶೆಡ್ಗಳಿರುವ ಪ್ರದೇಶಗಳಲ್ಲೂ ಕಾರ್ಯಾಚರಣೆ ಕೈಗೊಂಡಿದ್ದು, ಅಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ಮಹಿಳೆಯರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಆಧಾರ್, ಪ್ಯಾನ್, ವೋಟರ್ ಐಡಿ ಪರಿಶೀಲನೆ:
ಪೊಲೀಸರು ವಶಕ್ಕೆ ಪಡೆದವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ದಾಖಲೆಗಳಲ್ಲಿನ ಮಾಹಿತಿ ಹಾಗೂ ವ್ಯಕ್ತಿಗಳು ನೀಡುತ್ತಿರುವ ಮಾಹಿತಿಯಲ್ಲಿ ವ್ಯತ್ಯಾಸ ಅಥವಾ ಅನುಮಾನ ಕಂಡುಬಂದವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ.
ವ್ಯಕ್ತಿಗಳ ಸ್ವಂತ ಊರು, ಪೋಸ್ಟ್ ಆಫೀಸ್ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ವಿವರಗಳನ್ನೂ ಪೊಲೀಸರು ಕೇಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ದಾಖಲೆಗಳಲ್ಲಿ ನಮೂದಿಸಿರುವ ಮಾಹಿತಿಗೂ ವ್ಯಕ್ತಿಗಳು ನೀಡುವ ವಿವರಗಳಿಗೂ ಹೊಂದಾಣಿಕೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
SIR ಮಾಹಿತಿಯೂ ಪರಿಶೀಲನೆ:
ಪೊಲೀಸರು SIRಗೆ ಸಂಬಂಧಿಸಿದ ಮಾಹಿತಿಯನ್ನೂ ಪರಿಶೀಲನೆಯ ಭಾಗವಾಗಿ ಕೇಳುತ್ತಿದ್ದಾರೆ. ಪೊಲೀಸ್ ಕಮಿಷನರ್ ಅವರ ಸೂಚನೆಯ ಮೇರೆಗೆ ಈ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ವಿದೇಶಿ ಪ್ರಜೆಗಳು ಪತ್ತೆಯಾದರೆ ಅವರ ವೀಸಾ, ಪಾಸ್ಪೋರ್ಟ್ ಹಾಗೂ ಭಾರತದಲ್ಲಿ ನೆಲೆಸಲು ಹೊಂದಿರುವ ಇತರ ಅಗತ್ಯ ದಾಖಲೆಗಳನ್ನು ಪರಿಶೀಲಿಸಲಾಗುವುದು ಎಂದು ಡಿಸಿಪಿ ಹೇಳಿದ್ದಾರೆ.
ದಾಖಲೆಗಳಲ್ಲಿ ಅನುಮಾನ ಕಂಡುಬಂದರೆ FRROಗೆ ಹಾಜರು:
ವಿದೇಶಿ ಪ್ರಜೆಗಳ ದಾಖಲೆಗಳಲ್ಲಿ ಅನುಮಾನ ಕಂಡುಬಂದರೆ ಹೆಚ್ಚಿನ ಪರಿಶೀಲನೆ ನಡೆಸಿ, ಅವರನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಬಂಧಪಟ್ಟ ವ್ಯಕ್ತಿಗಳು ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವುದು ದೃಢಪಟ್ಟರೆ, ನಿಯಮಾನುಸಾರ ಡಿಪೋರ್ಟ್ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಸೈದುಲು ಅಡಾವತ್ ಸ್ಪಷ್ಟಪಡಿಸಿದ್ದಾರೆ.



