22.2 C
Gadag
Wednesday, September 28, 2022
Home Blog

ಅಗ್ನಿಶಾಮಕ ಠಾಣೆ ಮೇಲೆ ಲೋಕಾಯುಕ್ತರ ದಾಳಿ; ಲಂಚ ಪಡೆಯುತ್ತಿದ್ದ ಅಧಿಕಾರಿ ಬಲೆಗೆ

0

ವಿಜಯಸಾಕ್ಷಿ ಸುದ್ದಿ, ಗದಗ

ಶಾಲೆಯ ಕಟ್ಟಡದ ಫಿಟ್ನೆಸ್ ಕುರಿತು ಸುರಕ್ಷತಾ ಸರ್ಟಿಫಿಕೇಟ್ ಕೊಡಲು ಲಂಚ ಕೇಳಿದ್ದ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಗದಗ ನಗರದ ಎಪಿಎಮ್ ಸಿ ಆವರಣದಲ್ಲಿ ಇರುವ ಅಗ್ನಿಶಾಮಕ ದಳ ಕಛೇರಿಯಲ್ಲಿ ನಡೆದಿದೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಎಸ್ ಎಸ್ ಕೂಡ್ಲಮಠ ಶಾಲೆಯ ಕಟ್ಟಡದ ಗುಣಮಟ್ಟದ ಸುರಕ್ಷತಾ ಪ್ರಮಾಣ ಪತ್ರ ಕೊಡಲು ಏಳು ಸಾವಿರ ಲಂಚ ಕೇಳಿದ ಆರೋಪದಲ್ಲಿ ಅಧಿಕಾರಿ ಎನ್ ಎಸ್ ಕಗ್ಗಲಗೌಡರ ಎಂಬುವವರು ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಶಾಲೆಯ ಮುಖ್ಯೋಪಾಧ್ಯಾಯ ಸಿ. ಬಿ ಮೊಗಲಿ ಎಂಬುವವರು ಲೋಕಾಯುಕ್ತರ ಕಚೇರಿಗೆ ದೂರು ನೀಡಿದ್ದರು.

ಅಗ್ನಿಶಾಮಕ ದಳದ ಜಿಲ್ಲಾ ಮಟ್ಟದ ಅಧಿಕಾರಿ ಎನ್ ಎಸ್ ಕಗ್ಗಲಗೌಡರ ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಪ್ಪಿ, ಡಿವೈಎಸ್ಪಿ ಶಂಕರ ಎಮ್ ರಾಗಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರಗಳಾದ ರವಿ ಪುರುಷೋತ್ತಮ್ ಹಾಗೂ ಆಜೀಜ್ ಕಲಾದಗಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಸಿಬ್ಬಂದಿಗಳಾದ ವಿರೂಪಾಕ್ಷ ಅರಿಷಿಣದ, ಎಸ್ ಎಸ್ ಅಮರಶೆಟ್ಟಿ, ಮಂಜುನಾಥ್ ಗಾರ್ಗಿ, ಲಕ್ಕನಗೌಡರ್, ಗುಬ್ಬಿ, ವಾಹನ ಚಾಲಕರಾದ ನೈನಾಪೂರ ಹಾಗೂ ಹೆಬ್ಬಳ್ಳಿ ಈ ಕಾರ್ಯಾಚರಣೆಯಲ್ಲಿ ಇದ್ದರು.

ಕೊಚ್ಚಿ ಹೋಗಿದ್ದ ರಸ್ತೆಯ ಕಂದಕಕ್ಕೆ‌ ಬೈಕ್ ಸಮೇತ ಬಿದ್ದ ಸವಾರರು; ಸ್ಥಳದಲ್ಲೇ ಇಬ್ಬರು ಯುವಕರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಅಕ್ಕನ ಮಗಳ ಬರ್ಥ್ ಡೇ ಆಚರಣೆಗೆ ಬೈಕ್ ನಲ್ಲಿ ಹೊರಟಿದ್ದ ಇಬ್ಬರು ಯುವಕರು ಬೈಕ್ ಸಮೇತ ರಸ್ತೆಯ ಕಂದಕಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ದುರ್ಘಟನೆ ನಿನ್ನೆ ರಾತ್ರಿ ಜರುಗಿದೆ.

ಗದಗ ತಾಲೂಕಿನ ನಾಗಾವಿ ಗ್ರಾಮದ ಬಳಿ ನಿನ್ನೆ ರಾತ್ರಿ ಈ ದುರಂತ ಸಂಭವಿಸಿದ್ದು, ಲಕ್ಕುಂಡಿ ಗ್ರಾಮದ ಮಂಜುನಾಥ್ ಹಾಗೂ ಬಸವರಾಜ್ ಎಂಬ ಇಬ್ಬರೂ ಗೆಳೆಯರು ಯಲಿಶಿರುಂದ ಗ್ರಾಮಕ್ಕೆ ಅಕ್ಕನ ಮಗಳ ಬರ್ಥಡೇ ಆಚರಣೆ ಮಾಡಲು ಗದಗನಿಂದ ಕೇಕ್ ಖರೀದಿಸಿ ಬೈಕ್ ನಲ್ಲಿ ಹೊರಟಿದ್ದರು ಎನ್ನಲಾಗಿದೆ.

ಕಳೆದ 20ದಿನಗಳ ಹಿಂದೆ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿತ್ತು. ಆ‌ ಸಂದರ್ಭದಲ್ಲಿ ನಾಗಾವಿ ಬಳಿ ಕೆರೆ ಕೋಡಿ ಒಡೆದು ರಸ್ತೆ ಕೊಚ್ಚಿಕೊಂಡು ಹೋಗಿ ದೊಡ್ಡ ಕಂದಕ ನಿರ್ಮಾಣವಾಗಿತ್ತು.

ಸುಮಾರು 30 ಅಡಿಗೂ ಹೆಚ್ಚು ಕಂದಕ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಯಾವುದೇ ನಾಮಫಲಕ ಇದುವರೆಗೂ ಅಳವಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೈಕ್ ಸವಾರರಿಗೆ ಗೊತ್ತಾಗದೇ ಇರುವುದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತದೆ.

ಮೃತ ಯುವಕರ ಕುಟುಂಬದವರ ಆಕ್ರಂಧನ ಮುಗಿಲ‌ ಮುಟ್ಟಿದೆ.ಘಟನೆಯ ಮಾಹಿತಿ ತಿಳಿದ ಗದಗ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೀರು ಕೊಡಿ……ಇಲ್ಲವೇ ಅಧಿಕಾರ ಬಿಡಿ! ನಗರಸಭೆ ವಿರುದ್ಧ ಸಾರ್ವಜನಿಕರ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ

ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಮನವಿ ಸಲ್ಲಿಸಿದರೂ ಯಾರೂ ಇತ್ತ ಗಮನ ಹರಿಸದೇ ಇರುವುರಿಂದ ಆಕ್ರೋಶಗೊಂಡ ಬೆಟಗೇರಿ ೫ನೇ ವಾರ್ಡ್‌ನ ಸದಸ್ಯೆ ಲಕ್ಷ್ಮೀ ಖಾಕಿ ಅವರ ವಿರುದ್ಧ ಅದೇ ವಾರ್ಡಿನ ಸಾರ್ವಜನಿಕರು ಮಂಗಳವಾರ ಖಾಲಿ ಕೊಡ ಹಿಡಿದು, ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟಿಸಿದರು.

ಹು-ಧಾ ನೀರು ಸರಬರಾಜು ವಿಭಾಗದ ಪಾಲಿಕೆಯ ಗುತ್ತಿಗೆ ಕಾರ್ಮಿಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಿಂದ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ವಾರಕ್ಕೊಮ್ಮೆ ಬರುತ್ತಿದ್ದ ನೀರು ಇಂದು ತಿಂಗಳಿಗೊಮ್ಮೆ ಬರುವಂತಾಗಿದೆ. ಸಮಸ್ಯೆಯ ಗಂಭೀರತೆ ಅರಿತು ಅದನ್ನು ನಿವಾರಿಸಬೇಕಾದ ನಗರಸಭೆ ಅಧಿಕಾರಿಗಳು ಹಾಗೂ ರಾಜ್ಯ ಸರಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ನೀರು ಸರಬರಾಜು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿ, ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಕುಡಿಯುವ ನೀರು ಪೂರೈಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದ್ದು, ಸರ್ಕಾರ ಆಡಳಿತ ಮಂಡಳಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ರಸ್ತೆ ತಡೆ ಮಾಡಲು ಅಡ್ಡಿಪಡಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ ನಗರಸಭೆ ಮಾಜಿ ಸದಸ್ಯ ಮಂಜುನಾಥ ಮುಳಗುಂದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಪೊಲೀಸರು ಸಚಿವರು ಹೇಳಿದಂತೆ ಕೇಳುವ ಕೈಗೊಂಬೆಗಳಾಗಿದ್ದಾರೆ ಎಂದು ಟೀಕಿಸಿದರು.

ವಾಹನ ಸಂಚಾರಕ್ಕೆ ಅಡಚಣೆ

ಲಕ್ಷ್ಮೀಸಿಂಗನಕೆರಿ ಹಾಗೂ ಜನ್ನತ್‌ನಗರಕ್ಕೆ ಕುಡಿಯಲು ನೀರು ಸರಬರಾಜು ಮಾಡುವವರೆಗೂ ರಸ್ತೆ ತಡೆ ನಡೆಸುವುದಾಗಿ ಪ್ರತಿಭಟನಾಕಾರರು ಪಟ್ಟು ಹಿಡಿದರು. ಸಾರ್ವಜನಿಕರು ಗದಗ-ರೋಣ ರಸ್ತೆಯ ಮೇಲೆ ಕುಳಿತು ರಸ್ತೆ ತಡೆ ಮಾಡಿದ್ದರಿಂದ ರಸ್ತೆ ಸಂಚಾರಕ್ಕೆ ತಡೆ ಉಂಟಾಯಿತು. ಅದರಿಂದಾಗಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ನೂರಾರು ವಾಹನಗಳು ಕಾಯ್ದು ನಿಂತವು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರ ಹಾಗೂ ಬೆಟಗೇರಿ ಠಾಣೆಯ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಅದಕ್ಕೂ ಸ್ಪಂದಿಸದ ಪ್ರತಿಭಟನಾಕಾರರು, ನೀರು ಬಿಡುವವರೆಗೂ ರಸ್ತೆತಡೆ ಮುಂದುವರಿಸುವುದಾಗಿ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು.

ಈ ಸಂದರ್ಭದಲ್ಲಿ ಕರ್ನಾಟಕದ ರಕ್ಷಣಾ ವೇದಿಕೆಯ ಹನಮಂತಪ್ಪ ಅಬ್ಬಿಗೇರಿ ಹಾಗೂ ನಗರಸಭೆ ಮಾಜಿ ಅಧ್ಯಕ್ಷರಾದ ಪೀರಸಾಬ ಕೌತಾಳ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ನೀಡಿದರು.

ಸೋಮನಾಥ ಬಿದರೂರ, ರಂಗಪ್ಪ ನಾರಾಯಣಕಿ, ಸುಮಾನಂದ ಶಾವಿ, ಮುತ್ತಪ್ಪ ಮೆಳಾ, ಗೋವಿಂದ ಚುಂಚಾ, ರಮೇಶ ತಳವಾರ, ವಿಜಯಲಕ್ಷ್ಮೀ ಗಟ್ಟಿ, ಬಸವ್ವ ಕೋಣಿ, ಶಂಕ್ರಮ್ಮ ಬಿದರುರ, ಸುಮಿತ್ರ ಮೇಳಾ, ಜ್ಯೋತಿ ಇಂಡಿ, ಬೂದಪ್ಪ ಮ್ಯಾಳ, ಮಂಜು ಕೋಣಿ, ಪಾಂಡು ಕೋಣಿ, ಸುಭಾಸ ಬಿದರೂರ, ಮಂಜುನಾಥ ಗೋಟೂರ, ಕವಿತಾ ಗೋಟೂರ, ಸವಿತಾ ಮ್ಯಾಳ, ನಾಜೀರಾ ಮುಲ್ಲಾ, ಶಿವಾನಂದ ಶ್ಯಾವಿ, ರಮೇಶ ಗೌಡರ, ವೆಂಕಟೇಶ ಚುಂಚಾ, ಮಂಜುನಾಥ ಹಾದಿಮನಿ, ರಾಜು ಹಾದಿಮನಿ ಮುಂತಾದವರು ಇದ್ದರು.

ಕಳೆದ ೩ ತಿಂಗಳಿಂದ ಕುಡಿಯಲು ನೀರು ಸಿಗದೇ ಸಂಕಷ್ಟವಾಗಿದೆ. ಈ ಹಿಂದೆ ಸುರಿದ ಮಳೆಗೆ ಮನೆಯ ಕಾಳು, ದವಸ ಧಾನ್ಯ, ಮನೆ ವಸ್ತುಗಳು ಸಂಪೂರ್ಣ ನಾಶವಾಗಿವೆ. ಆದರೂ ಕೂಡ ಯಾವ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಇತ್ತ ತಲೆ ಹಾಕಿಲ್ಲ. ನಗರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಗರಸಭೆಯಲ್ಲಿ ಹಣವಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನಗರಸಭೆಯಲ್ಲಿ ಕಾಮಗಾರಿ ಹೆಸರಿನಲ್ಲಿ ಹಣ ಲೂಟಿಯಾಗುತ್ತದೆ. ಹೀಗಾಗಿ ನಾವು ಕುಡಿವ ನೀರಿಗಾಗಿ ಭಿಕ್ಷಾಟನೆ ಮಾಡುವ ಮೂಲಕ ನಗರಸಭೆಗೆ ಹಣ ಕೂಡಿಸಿ ಕೊಡುತ್ತಿದ್ದೇವೆ.

ಮಂಜುನಾಥ್ ಮುಳಗುಂದ, ನಗರಸಭೆ ಮಾಜಿ ಸದಸ್ಯ

ಕುಡಿಯುವ ನೀರಿಗಾಗಿ ನಗರಸಭೆಗೆ ಮುಂದೆ ಸಾಕಷ್ಟು ಬಾರಿ ಪ್ರತಿಭಟನೆ ಮಾಡಲಾಗಿದೆ. ಆದರೂ ನಗರಸಭೆ ಅಧಿಕಾರಿಗಳು ಜನಪ್ರತಿನಿಧಿಗಳು ಕ್ಯಾರೆ ಅಂದಿಲ್ಲ. ಕೂಡಲೇ ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಆಗುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೆ ಪ್ರತಿಭಟನೆ ಮಾಡಲಾಗುವುದು.

ಜಯಮ್ಮ, ಸ್ಥಳೀಯ ಮಹಿಳೆ

ಪೈಗಂಬರರ ಕುರಿತು ಪ್ರಬಂಧ ಸ್ಪರ್ಧೆ ಆಯೋಜನೆ ಆರೋಪ; ಶ್ರೀರಾಮ ಸೇನೆಯಿಂದ ಶಾಲೆಗೆ ಮುತ್ತಿಗೆ, ಶಿಕ್ಷಕನ ಅಮಾನತ್ತಿಗೆ ಒತ್ತಾಯ

ವಿಜಯಸಾಕ್ಷಿ ಸುದ್ದಿ, ಗದಗ

ಒಂದೆಡೆ, ದೇಶದಾದ್ಯಂತ ಕೋಮುಗಲಭೆ ಪ್ರಕರಣಗಳು ಹೆಚ್ಚುತ್ತ, ಸಾರ್ವಜನಿಕರಿಗೆ, ಪೊಲೀಸ್ ಇಲಾಖೆಯವರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ರಾಜ್ಯಾದ್ಯಂತ ಪ್ರತಿನಿತ್ಯ ಒಂದಿಲ್ಲೊಂದು ಇಂಥ ಕೋಮುಸೌಹಾರ್ದತೆ ಕದಡುವ ಪ್ರಕರಣಗಳು ವರದಿಯಾಗುತ್ತಿದ್ದು, ಗದಗದಲ್ಲಿ ಮಕ್ಕಳಿಗೆ ಶಾಂತಿ-ಸಹಬಾಳ್ವೆಯ ಪಾಠ ಹೇಳಬೇಕಿದ್ದ ಶಾಲಾ ಮುಖ್ಯೋಪಾಧ್ಯಾಯ ಒಬ್ಬರು ಮಕ್ಕಳಿಗೆ ಒಂದು ಧರ್ಮದ ಕುರಿತಾಗಿ ಪ್ರಬಂಧ ಬರೆಯಿಸಲು ಮುಂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗದಗ ತಾಲೂಕಿನ ನಾಗಾವಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತ ಪುಸ್ತಕವನ್ನು ನೀಡಿ, ಇದೇ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಎ.ಎಂ. ಬಿಜಾಪುರರ ವಿರುದ್ಧ ಶ್ರೀರಾಮ ಸೇನೆಯ ಆರೋಪಿಸಿ ಶಾಲೆಗೆ ನುಗ್ಗಿ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಮ್ಮದ್ ಪೈಗಂಬರ್ ಕುರಿತು ಉತ್ತಮ ಪ್ರಬಂಧ ಬರೆದ ವಿದ್ಯಾರ್ಥಿಗಳಿಗೆ ೫ ಸಾವಿರ ರೂ. ಬಹುಮಾನ ನೀಡುವದಾಗಿ ಘೋಷಿಸಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ, ಶಾಲೆಯಲ್ಲಿ ಇಸ್ಲಾಮೀಕರಣ, ಮತಾಂತರ ಮಾಡಲು ಹೊರಟಿದ್ದೀರಿ ಎಂದು ಶ್ರೀರಾಮ ಸೇನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.

ಅಲ್ಲದೆ, ಶೈಕ್ಷಣಿಕ ಪಠ್ಯಪುಸ್ತಕದಲ್ಲಿ ಪೈಗಂಬರರ ಕುರಿತಾದ ಯಾವುದೇ ಪಠ್ಯವಿಲ್ಲ. ಸರ್ಕಾರವೂ ಇಂಥದೊಂದು ಸ್ಪರ್ಧೆ ಆಯೋಜಿಸಿ ಬಹುಮಾನ ನೀಡಿ ಎಂದು ನಿರ್ದೇಶನ ನೀಡಿಲ್ಲ. ಹೀಗಿದ್ದಾಗ, ಯಾವುದೇ ಆದೇಶವಿಲ್ಲದೇ ಕೋಮು ಸಂಘರ್ಷಕ್ಕೆ ಕಾರಣವಾಗಬಹುದಾದ ವಿಷಯದ ಬಗ್ಗೆ ಸ್ಪರ್ಧೆ ಏರ್ಪಡಿಸಿ, ಮಕ್ಕಳಲ್ಲಿ ಕೋಮು ದಳ್ಳುರಿಯ ಬೀಜ ಬಿತ್ತಲು ಹೊರಟಿದ್ದೇಕೆ ಎಂದು ಸೇನೆಯ ಕಾರ್ಯಕರ್ತರು ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ಕೂಡಲೇ ಜಿಲ್ಲಾ ಪಂಚಾಯತ ಸಿಇಓ ಹಾಗೂ ಡಿಡಿಪಿಐ ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಬೇಕೆಂದು ಪಟ್ಟು ಹಿಡಿದರು ಎನ್ನಲಾಗಿದೆ. ಗಲಾಟೆ ನಡೆಯುತ್ತಿರುವ ಸ್ಥಳಕ್ಕೆ ಗದಗ ಗ್ರಾಮೀಣ ಠಾಣೆಯ ಸಿಪಿಐ ಚಂದ್ರಶೇಖರ ಹರಿಹರ ಭೇಟಿ ನೀಡಿ ಮುಖ್ಯ ಶಿಕ್ಷಕ ಅಬ್ದುಲ್ ಮುನಾಫ್ ಬಿಜಾಪುರರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಉತ್ತರದಿಂದ ಸಮಾಧಾನಗೊಳ್ಳದ ಶ್ರೀರಾಮ ಸೇನೆಯ ಕಾರ್ಯಕರ್ತರು ತಕ್ಷಣ ಮುಖ್ಯ ಶಿಕ್ಷಕ ಅಬ್ದುಲ್ ಹನೀಫ್‌ರನ್ನು ಅಮಾನತು ಮಾಡಬೇಕು ಮತ್ತು ಶಿಕ್ಷಣ ಇಲಾಖೆ ಹಾಗೂ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು.

ಶ್ರೀರಾಮ ಸೇನಾದ ವಿಭಾಗೀಯ ಸಂಚಾಲಕ ರಾಜು ಖಾನಪ್ಪನವರ, ಮುಖಂಡರಾದ ಮಹೇಶ್ ರೋಖಡೆ ಸೇರಿದಂತೆ ಹಲವು ಕಾರ್ಯಕರ್ತರಿದ್ದರು.

ದುರದ್ದೇಶ ಇಲ್ಲ

ಈ ಹಿಂದೆ ಡಾ, ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಸೇರಿದಂತೆ ಹಲವು ಮಹನೀಯರ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಇದರ ಹಿಂದೆ ಯಾವುದೇ ದುರದ್ದೇಶ ಇಲ್ಲ ಎಂದು ಮುಖ್ಯ ಶಿಕ್ಷಕ ಬಿಜಾಪುರ ಪ್ರತಿಕ್ರಿಯೆ ನೀಡಿದರು.

ಪೊಲೀಸರ ಕಾರ್ಯಾಚರಣೆ; ಗದಗನಲ್ಲಿ ಮೂವರು ಪಿಎಫ್ಐ ಕಾರ್ಯಕರ್ತರ ಬಂಧನ

0

ವಿಜಯಸಾಕ್ಷಿ ಸುದ್ದಿ, ಗದಗ

ಇತ್ತೀಚೆಗೆ ದೇಶದೆಲ್ಲೆಡೆ ಎಸ್ಡಿಪಿಐ ಹಾಗೂ ಪಿಎಫ್ಐ ಮುಖಂಡರ ಮೇಲೆ ಎನ್ಐಎ ತನಿಖಾ ತಂಡ ದಾಳಿ ಮಾಡಿ ಬಂಧಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಗದಗ ಶಹರ ಪೊಲೀಸರು ಇಬ್ಬರನ್ನು, ಬೆಟಗೇರಿ ಪೊಲೀಸರು ಓರ್ವ ಪಿಎಫ್ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ಶಹರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಜಯಂತ ಗೌಳಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಹಮತ್ ನಗರದ ನಿವಾಸಿ ರುಸ್ತುಂ, ಕಾಗದಗಾರ ಓಣಿಯ ಸರ್ಫರಾಜ್ ಹಾಗೂ ಬೆಟಗೇರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸುಬ್ಬಾಪೂರಮಠ ಅವರ ನೇತೃತ್ವದಲ್ಲಿ ಸನಾವುಲ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಈಗಾಗಲೇ ರುಸ್ತುಂ ‌ಗೌಂಡಿ ಹಾಗೂ ಸರ್ಫರಾಜ್ ದಂಡಿನ ತಹಸೀಲ್ದಾರ್ ಅವರ ಮುಂದೆ ಹಾಜರು ಪಡಿಸಿಲಾಗಿದ್ದು, ತಹಸೀಲ್ದಾರ್ ಕಿಶನ್ ಕಲಾಲ ಅವರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಬೆಟಗೇರಿಯ ಸನಾವುಲ್ಲ್ ಶಲವಡಿ ಎಂಬಾತನನ್ನು ವಶಕ್ಕೆ ಪಡೆದಿರುವ ಬೆಟಗೇರಿ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದು, ಆತನನ್ನು ತಹಸೀಲ್ದಾರ್ ಅವರ ಮುಂದೆ ಹಾಜರು ಪಡಿಸಿಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಹರ ಠಾಣೆ, ಬೆಟಗೇರಿ ಠಾಣೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ವಿಶ್ವಾಸಗಳಿಸಿ; ಜಿ ಎಸ್ ಪಾಟೀಲ್

ವಿಜಯಸಾಕ್ಷಿ ಸುದ್ದಿ, ರೋಣ

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.

ಅವರು ಸೋಮವಾರ ತಮ್ಮ ನಿವಾಸದಲ್ಲಿ ಕೊತಬಾಳ ಗ್ರಾಪಂಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದರು.

ಕೊತಬಾಳ ಸೇರಿದಂತೆ ಗ್ರಾಪಂಗೆ ಒಳಪಡುವ ಗ್ರಾಮಗಳ ಜನ ಸಮುದಾಯ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರನ್ನಾಗಿ ಮಾಡುವ ಮೂಲಕ ಪಕ್ಷಕ್ಕೆ ಹೆಚ್ಚಿನ ಶಕ್ತಿಯನ್ನು ತುಂಬಿದ್ದಾರೆ. ಹೀಗಾಗಿ ನೂತವಾಗಿ ಆಯ್ಕೆಗೊಂಡ ಅಧ್ಯಕ್ಷರು, ಉಪಾದ್ಯಕ್ಷರು ಹಾಗೂ ಸದಸ್ಯರು ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡ ಕಾಳಿಂಗಪ್ಪ ಉಪ್ಪಾರ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಕಮಲವ್ವ ಕೋಡಿಕೊಪ್ಪದ ಅವರನ್ನು ಸನ್ಮಾನಿಸಿದರು.

ಸೋಮವಾರ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ೮ ಸದಸ್ಯರಿಂದ ನಾಮಪತ್ರ ಸಲ್ಲಿಕೆಯಾಗಿ ಕೊನೆಗೆ ೭ ಸದಸ್ಯರು ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದುಕೊಂಡಿದ್ದರು. ಕೊನೆಗೆ ಅಧ್ಯಕ್ಷ ಸ್ಥಾನಕ್ಕೆ ಕಾಳಿಂಗಪ್ಪ ಉಪ್ಪಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಮಲವ್ವ ಕೋಡಿಕೊಪ್ಪದ ಅವಿರೋಧವಾಗಿ ಅಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ತಾಪಂ ಇಒ ಸಂತೋಷ ಪಾಟೀಲ ಘೋಷಿಸಿದರು.

ವಿ.ಆರ್.ಗುಡಿಸಾಗರ, ತಾಪಂ ಮಾಜಿ ಸದಸ್ಯ ಶಿದ್ಲಿಂಗಪ್ಪ ಯಾಳಗಿ, ಗ್ರಾಪಂ ಸದಸ್ಯರಾದ ವೀರಣ್ಣ ಯಾಳಗಿ, ಫಕ್ಕೀರಪ್ಪ ಗುಳಗುಳಿ, ಶರಣಪ್ಪ ದೊಡ್ಮನಿ, ಪಾರ್ವತಿ ಬಿಸಾಟಿ, ಸುರೇಶ ಸೇರಿದಂತೆ ಅನೇಕ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರ ದುರ್ಮರಣ

0

ವಿಜಯಸಾಕ್ಷಿ ಸುದ್ದಿ, ಬೀದರ್

ಬಟ್ಟೆ ಒಗೆಯಲೆಂದು ಕೆರೆಯ ಬಳಿ ತೆರಳಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳು ಈಜಲು ಹೋಗಿ, ಮಕ್ಕಳೂ ಸೇರಿದಂತೆ ರಕ್ಷಣೆಗೆ ಧಾವಿಸಿದ ಉಳಿದಿಬ್ಬರೂ ಸೇರಿ ಒಂದೇ ಕುಟುಂಬದ ನಾಲ್ವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಬೀದರ್ ತಾಲೂಕಿನ ಕಂಗಟಿ ಗ್ರಾಮದ ಕರೆಯಲ್ಲಿ ಸಂಭವಿಸಿದೆ.

ಮೃತಪಟ್ಟವರನ್ನು ಆನಂದ, ಪ್ರಜ್ವಲ್, ಸುನೀತಾ, ನಾಗೇಶ್ ಎಂದು ತಿಳಿದುಬಂದಿದೆ. ಎಲ್ಲರೂ ಸೇರಿ ದಸರಾ ಹಬ್ಬದ ತಯಾರಿಗಾಗಿ ಕೆರೆಯ ಬಳಿ ಹೆಚ್ಚಿನ ಬಟ್ಟೆ ಒಗೆಯಲೆಂದು ತೆರಳಿದ್ದರು.

ಈ ಸಂದರ್ಭದಲ್ಲಿ ಮಕ್ಕಳಿಬ್ಬರು ಕೆರೆಯಲ್ಲಿ ಈಜಾಟವಾಡುತ್ತಿದ್ದರು ಎನ್ನಲಾಗಿದ್ದು, ಆಯತಪ್ಪಿ ನೀರಿನಲ್ಲಿ ಬಿದ್ದಾಗ ಅವರ ರಕ್ಷಣೆಗೆ ಮುಂದಾದ ಪಾಲಕರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಜನವಾಡ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ನವರಾತ್ರಿ ಉತ್ಸವ; ದೇವಸ್ಥಾನಗಳಲ್ಲಿ ದೇವಿಗಳ ಘಟಸ್ಥಾಪನೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ


ನಾಡಹಬ್ಬವಾದ ನವರಾತ್ರಿ ಉತ್ಸವ ನಿಮಿತ್ತ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಶ್ರೀ ದೇವಿಯ ಘಟಸ್ಥಾಪನೆ ನಡೆಯಿತು. ಪಟ್ಟಣದ ಹಳೆಹುಡ ಓಣಿಯಲ್ಲಿ ಮತ್ತು ಚಿಂದಿಪೇಟಿ ಓಣಿಯ ರೇಣುಕಾ ಯಲ್ಲಮ್ಮಾ ಹಾಗೂ ಬೋಗೇರಿ ಓಣಿಯ ಸುಂಕಾಪೂರ ಮನೆತನದ ದೇವಿ ದೇವಸ್ಥಾನದಲ್ಲಿ 9ದಿನಗಳ ಕಾಲ ಪುರಾಣ ಪ್ರವಚನ ಪ್ರಾರಂಭವಾಗಿದ್ದು, ಬೆಳಿಗ್ಗೆಯಿಂದ ದೇವಸ್ಥಾನಗಳಲ್ಲಿ ದೇವಿ ಮೂರ್ತಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ, ಅಭಿಷೇಕ ನಡೆಯಿತು.

ಕೆರೆಗಳು ನಾಶವಾಗದಂತೆ ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ; ವಿಜಯಲಕ್ಷ್ಮೀ ಚಲವಾದಿ

ವಿಜಯಸಾಕ್ಷಿ ಸುದ್ದಿ, ನರೇಗಲ್

ಕೆರೆ ನೀರು ಕೃಷಿ ಜಮೀನಿನ ತೇವಾಂಶ ಉಳಿಸುತ್ತಾ ಬಂದಿದೆ. ಇಂತಹ ಅಂಶಗಳು ಇಂದಿನ ಯುವ ಪೀಳಿಗೆಗೆ ಅರಿವಾಗಬೇಕು. ಸ್ವಚ್ಛಗೊಳಿಸಿದ ಕೆರೆಯಲ್ಲಿ ಸಾರ್ವಜನಿಕರು ತ್ಯಾಜ್ಯ, ಪ್ಲಾಸ್ಟಿಕ್, ಕಸ ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಚೆಲ್ಲದಂತೆ ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದು ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಚಲವಾದಿ ಹೇಳಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ಸೋಮವಾರ ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರ ೭೨ನೇ ಜನ್ಮದಿನದ ಪ್ರಯುಕ್ತ ಪಟ್ಟಣದ ಐತಿಹಾಸಿಕ ಹಿರೇಕೆರೆ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಹಿರಿಯರು ನಿರ್ಮಿಸಿರುವ ಕೆರೆಗಳನ್ನು ನಾಶ ಮಾಡದೆ ಸಂರಕ್ಷಿಸಲು ಪಣತೊಡೋಣ. ಕೆರೆಗಳನ್ನು ನಾಶಪಡಿಸಿದರೆ ಜಲ ಸಂಪತ್ತು ನಾಶವಾದಂತೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಕೆರೆ ಸ್ವಚ್ಛತೆ ಮಾಡುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ. ಕೆರೆಗಳನ್ನು ಉಳಿಸುವುದು ಎಲ್ಲರ ಜವಾಬ್ದಾರಿಯಾಗಬೇಕು.

ನೀರನ್ನು ಅವಶ್ಯಕತೆ ಇದ್ದಷ್ಟು ಬಳಸಬೇಕು. ವ್ಯರ್ಥ ಮಾಡಿದರೆ ಮುಂದೊಂದು ದಿನ ವ್ಯಥೆ ಪಡಬೇಕಾಗುತ್ತದೆ. ಕೆರೆಗಳು ಜಲ ಮೂಲವಾಗಿ ಬಳಕೆಯಾಗುತ್ತಾ ಬಂದಿವೆ. ಇತ್ತೀಚೆಗೆ ಕೆರೆಗಳು ಕಸದ ತೊಟ್ಟಿಯಂತಾಗುತ್ತಿದೆ. ಇದನ್ನು ತಪ್ಪಿಸಲು ಕೆರೆ ಸ್ವಚ್ಛತೆಗೆ ಆದ್ಯತೆ ನೀಡುವ ಕಾರ್ಯವನ್ನು ಆರಂಭಿಸಲಾಗಿದೆ ಎಂದರು.

ಪ.ಪಂ ಮಾಜಿ ಸದಸ್ಯ ಶಶಿಧರ ಸಂಕನಗೌಡ್ರ ಮಾತನಾಡಿ, ನರೇಂದ್ರ ಮೋದಿ ಜೀ ಅವರು ಕಳೆದ ಎಂಟು ವರ್ಷಗಳಿಂದ‌ ದೇಶದಲ್ಲಿ ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಬದ್ಧವಾಗಿ ನಿಂತಿದ್ದಾರೆ ಎಂದರು.

ಪ.ಪಂ ಉಪಾಧ್ಯಕ್ಷ ಶ್ರೀಶೈಲಪ್ಪ ಬಂಡಿಹಾಳ, ಕುಮಾರಸ್ವಾಮಿ ಕೋರಧ್ಯಾನಮಠ, ಮಲ್ಲಿಕಸಾಬ ರೋಣದ, ಈರಪ್ಪ ಜೋಗಿ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಫಕೀರಪ್ಪ ಮಳ್ಳಿ, ಫಕೀರಪ್ಪ ಬಂಬ್ಲಾಪೂರ, ಅಕ್ಕಮ್ಮ ಮಣ್ಣೊಡ್ಡರ, ಜ್ಯೋತಿ ಪಾಯಪ್ಪಗೌಡ್ರ, ವಿಶಾಲಾಕ್ಷಿ ಹೊಸಮನಿ, ಸುಮಿತ್ರಾ ಕಮಲಾಪೂರ, ಮಂಜುಳಾ ಹುರಳಿ, ಆರ್.ಜಿ. ಪಾಟೀಲ, ಯಲ್ಲಪ್ಪ ಮಣ್ಣೊಡ್ಡರ, ನಿಂಗಪ್ಪ ಚಲವಾದಿ, ಮೌನೇಶ ಹೊಸಮನಿ, ಮಹೇಶ ಶಿವಶಿಂಪರ, ಸಂತೋಷ ಕಡೆತೋಟದ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

`ನಿಮ್ಮ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಹೇಳುವುದು ಡರ್ಟಿ ಪಾಲಿಟಿಕ್ಸಾ?’

ವಿಜಯಸಾಕ್ಷಿ ಸುದ್ದಿ, ಮೈಸೂರು

ಪ್ರಧಾನಿ ನರೇಂದ್ರ ಮೋದಿ ಹೋದ ಕಡೆಯಲ್ಲೆಲ್ಲಾ ಬಿಜೆಪಿ ಸೋತಿದೆ. ಪಂಜಾಬ್, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಬಿಜೆಪಿ ಸೋತಿಲ್ವೇನ್ರೀ? ಅವರು ಕೂಡ ಸೋಲ್ತಾರೆ. ಇದು ಕೇವಲ ರಾಜಕಾರಣಕ್ಕಾಗಿ ಹೇಳಿಕೆ ಕೊಡುತ್ತಿರುವದು. ಮುಖ್ಯಮಂತ್ರಿಗಳ `ರಾಜಕಾರಣದಲ್ಲಿ ನಾನು ಕರ್ಣನಿದ್ದಂತೆ’ ಎಂಬ ಮಾತುಗಳು ಅವರ ಭಂಡತನವನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಟುವಾಗಿ ಪ್ರತ್ಯುತ್ತರ ನೀಡಿದರು.

ಅವರು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಡರ್ಟಿ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡುತ್ತ, ರಾಜ್ಯಕ್ಕೆ ರಾಹುಲ್ ಗಾಂಧಿ ಬಂದರೆ ಬಿಜೆಪಿಗೇ ಲಾಭವಿದೆ ಎನ್ನುವ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಕೇವಲ ಭಂಡರು ಮಾತ್ರ ಆ ರೀತಿ ಮಾತನಾಡುವುದು. ಟೀಕೆಗಳಿಗೂ, ನಮಗೂ ಸಂಬಂಧವಿಲ್ಲ ಎನ್ನುವ ಭಾವನೆಯಿರುವವರು ಹಾಗೆ ಮಾತನಾಡುತ್ತಾರೆ. ನಾವು ಎಂದಿಗೂ ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಬಿಜೆಪಿ ಸರ್ಕಾರದವರು ರಾಜಕಾರಣ ಮಾಡುವ ಉದ್ದೇಶದಿಂದಲೇ ಮಾತನಾಡುತ್ತಾರೆ. ಡರ್ಟಿ ಪಾಲಿಟಿಕ್ಸ್ ಮಾಡುವುದು ಸಂಘ ಪರಿವಾರದವರು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ನವರು ಹೋರಾಟ ಮಾಡಿ ಸ್ವಾತಂತ್ರ‍್ಯ ತಂದುಕೊಟ್ಟಿದ್ದಾರೆ. ಮಹಾತ್ಮ ಗಾಂಧೀಜಿಯನ್ನು ಕೊಂದವರನ್ನು ಇವರು ಆರಾಧಿಸುತ್ತಾರೆ. ಗಣೇಶನ ಮೆರವಣಿಗೆಯಲ್ಲಿ ನಾಥೂರಾಂ ಗೋಡ್ಸೆಯ ಫೋಟೊ ಇಟ್ಟುಕೊಂಡು ಓಡಾಡುತ್ತಾರೆ. ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ? ಈಗ ಇವರಿಗೆ ಡರ್ಟಿ ಪಾಲಿಟಿಕ್ಸ್ ಅಂದರೆ ಏನೆಂದೇ ಗೊತ್ತಿಲ್ಲದವರಂತೆ ಮಾತನಾಡುತ್ತಾರೆ. ನಿಮ್ಮ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಹೇಳುವುದು ಡರ್ಟಿ ಪಾಲಿಟಿಕ್ಸಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.

error: Content is protected !!