ಬೆಳಗಾವಿ:- ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ವಸತಿ ಕಾಲೇಜಿನ ಮೊದಲನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಜರುಗಿದೆ.
17 ವರ್ಷದ ಆಫ್ರೀನ್ ಜಮಾದಾರ್ ಮೃತ ದುರ್ದೈವಿ ಎನ್ನಲಾಗಿದೆ. ಇಂದು ಪರೀಕ್ಷೆ ಇದ್ದ ಹಿನ್ನೆಲೆ ಸೋಮವಾರ ಮಧ್ಯರಾತ್ರಿ ವಸತಿ ಶಾಲೆಯ ಮೊದಲ ಮಹಡಿಯಲ್ಲಿ ಓದುತ್ತಾ ಕುಳಿತಿದ್ದ ವೇಳೆ ಘಟನೆ ನಡೆದಿದೆ.
ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



