HomeGadag Newsಸುಸಂಸ್ಕೃತ ಮಕ್ಕಳಿಂದ ಸುಂದರ ಸಮಾಜ

ಸುಸಂಸ್ಕೃತ ಮಕ್ಕಳಿಂದ ಸುಂದರ ಸಮಾಜ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಮಕ್ಕಳ ಬದುಕು ಒತ್ತಡಗಳಿಂದ ಕೂಡಿದೆ. ಮನೆ, ಶಾಲೆ, ಕಾಲೇಜುಗಳ ಪರಿಸರ ಮಕ್ಕಳ ಬದುಕಿಗೆ ಹೆಚ್ಚು ಪೂರಕವಾಗಿಲ್ಲ. ತಂದೆ-ತಾಯಿ ತಮ್ಮ ತಮ್ಮ ಆಕಾಂಕ್ಷೆ, ಆಗು-ಹೋಗುಗಳಲ್ಲಿ ಮಗ್ನರಾಗಿದ್ದಾರೆ. ಹೀಗಾಗಿ ಮಕ್ಕಳು ಟಿ.ವಿ., ಮೊಬೈಲ್‌ಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಮಕ್ಕಳು ಚಾರಿತ್ರ‍್ಯ ನಿರ್ಮಾಣ ಕುರಿತು ಗಮನ ಹರಿಸುತ್ತಿಲ್ಲ. ಇಂಥಹ ಸಂದರ್ಭದಲ್ಲಿ ನಾವು ನಮ್ಮ ಭಾರತೀಯ ಸಂಸ್ಕೃತಿ, ಸಾಹಿತ್ಯ, ಕಲೆ, ಕ್ರೀಡೆಗಳ ಅರಿವು ಮೂಡಿಸಿದರೆ ಅವರು ಸುಸಂಸ್ಕೃತರಾಗಿ ಬೆಳೆದು ಮುಂದೊಂದು ದಿನ ಉತ್ತಮ ಸಮಾಜ ನಿರ್ಮಿಸುತ್ತಾರೆ ಎಂದು ಖ್ಯಾತ ಮಕ್ಕಳ ಸಾಹಿತಿ, ಸಂಶೋಧಕ, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಂದ್ರ ಎಸ್.ಗಡಾದ ಹೇಳಿದರು.

ಅವರು ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯವು ಶ್ರೀ ಜದ್ಗುರು ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ-2025ರ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ 20ನೇ ಸಂಸ್ಕೃತಿ-ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಒಂದು ರಾಷ್ಟ್ರದ ಭವಿಷ್ಯ ಮತ್ತು ಆಗುಹೋಗುಗಳು ಪ್ರಜೆಗಳ ಬಾಲ್ಯವನ್ನು ಅವಲಂಬಿಸಿರುತ್ತವೆ. ಮಕ್ಕಳ ಸರ್ವೋತೋಮುಖ ಪ್ರಗತಿಗೆ ತಂದೆ-ತಾಯಿ-ಗುರುಗಳ ಪರಿಶ್ರಮ ಜೊತೆಗೆ ಬಾಹ್ಯ ಪ್ರಪಂಚದ ಅರಿವು ಕೂಡ ಮುಖ್ಯವಾಗಿದೆ. ಈ ಕಾರ್ಯವನ್ನು ಶಿಬಿರಗಳು ಪೂರೈಸುತ್ತವೆ. ಈ ಸಂಸ್ಕೃತಿ-ಸಂಸ್ಕಾರ ಶಿಬಿರ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ರೂಪಿಸುತ್ತದೆ. ಇಂಥಹ ಶಿಬಿರಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪಾಲಕರು ಪ್ರೋತ್ಸಾಹಿಸಬೇಕೆಂದು ಸೂಚಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕಿ ಶಾಂತಾ ಕುಂದಗೋಳ ಮಾತನಾಡಿ, ಇತ್ತೀಚಿಗೆ ಪಾಲಕರು ಸಾವಿರಾರು ರೂಪಾಯಿಗಳನ್ನು ನೀಡಿ ಬೇಸಿಗೆ ಶಿಬಿರಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಉಚಿತ ಶಿಬಿರ ಎಂದರೆ ನಿಷ್ಕಾಳಜಿ ವಹಿಸುತ್ತಾರೆ. ಉಚಿತ ಇರುವಲ್ಲಿ ಖಚಿತತೆ ಇರುವದೆಂದು ಊಹಿಸುವುದಿಲ್ಲ. ಈ ದಿಸೆಯಲ್ಲಿ ಪಾಲಕರು ಮಕ್ಕಳ ಏಳ್ಗೆಗೆ ಪೂರಕವಾದ ಮಾರ್ಗದರ್ಶನ ನೀಡುವ ಶಿಬಿರಗಳ ಪ್ರಯೋಜನ ಪಡೆಯಬೇಕೆಂದು ಹೇಳಿದರು.

ಶಿಬಿರದ ಸಂಗೀತ ಶಿಕ್ಷಕಿ ಸುನಂದಾ ಜ್ಯಾನೋಪಂತರ ವಚನ ಪ್ರಾರ್ಥನೆ ಹೇಳಿದರು. ಬಸವ ಯೋಗ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಮತ್ತು ಶಿಬಿರ ಶಿಕ್ಷಕಿ ಚೇತನ ಚುಂಚಾ ಸ್ವಾಗತ ಕೋರಿದರು. ಪ್ರಾಚಾರ್ಯರು ಮತ್ತು ಶಿಬಿರ ಸಂಯೋಜಕರಾದ ಕೆ.ಎಸ್. ಪಲ್ಲಾದ ಪ್ರಾಸ್ತಾವಿಕ ನುಡಿಗಳನ್ನಾಡಿ ಶಿಬಿರ ನೀತಿ-ನಿಯಮ, ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು. ಇನ್ನೋರ್ವ ಶಿಬಿರ ಶಿಕ್ಷಕ ಬಸವೇಶ್ವರ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್.ಎಂ. ಬುರಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಿ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಧ್ಯಾಪಕರಾದ ಡಾ. ಎಂ.ವ್ಹಿ. ಐಹೊಳ್ಳಿ ಮಾತನಾಡಿ, ಮಕ್ಕಳು ದೇವರು ಸಮಾನ ಮತ್ತು ಮನುಕುಲದ ಅಮೂಲ್ಯ ನಿಧಿ ಎಂದು ನಾವೆಲ್ಲರೂ ಭಾವಿಸುತ್ತೇವೆ. ಇಂಥಹ ಮಕ್ಕಳಿಗೆ ಈ ಶಿಬಿರದಲ್ಲಿ ಯೋಗಾಭ್ಯಾಸ, ಭಾರತೀಯ ಕ್ರೀಡೆಗಳ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸೃಜನಾತ್ಮಕ ಚಟುವಟಿಕೆಗಳ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!