ಮಲಯಾಳಂನ ಖ್ಯಾತ ನಟ ನಿವಿನ್ ಪೌಲಿ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ. ನಟಿಯೊಬ್ಬರು ಈ ಆರೋಪ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ಕೇಸ್ ಕೂಡ ದಾಖಲಾಗಿದೆ.
ಹೇಮಾ ಸಮಿತಿ ವರದಿ’ ಪ್ರಕಟ ಆದ ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಮೀಟೂ ಬಿರುಗಾಳಿ ಜೋರಾಗಿದೆ. ಹೇಮಾ ಕಮಿಟಿ ವರದಿ’ಯಲ್ಲಿ ಮಲಯಾಳಂ ಚಿತ್ರರಂಗ ಕರಾಳ ಮುಖ ಬಯಲಾಗಿದೆ. ಈಗ ನಟಿಯೊಬ್ಬರು ‘ಪ್ರೇಮಂ’ ಸಿನಿಮಾದ ಖ್ಯಾತಿಯ ಹೀರೋ ನಿವಿನ್ ಪೌಲಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಿನಿಮಾದ ಮಾತುಕಥೆ ಸಲುವಾಗಿ ದುಬೈಗೆ ತೆರಳಿದ್ದಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಕೇಸ್ನಲ್ಲಿ ನಟ ನಿವಿನ್ ಪೌಲಿ 6ನೇ ಆರೋಪಿ ಆಗಿದ್ದಾರೆ. ಶ್ರೇಯಾ ಎಂಬ ಮಹಿಳೆ ಎ1 ಆಗಿದ್ದಾರೆ. ನಿರ್ಮಾಪಕ ಎ.ಕೆ. ಸುನಿಲ್ ಎ2 ಆಗಿದ್ದಾರೆ. ದೂರಿನಲ್ಲಿ ಉಲ್ಲೇಖ ಆಗಿರುವ ಪ್ರಕಾರ, ಸಿನಿಮಾದ ಮಾತುಕಥೆಗಾಗಿ ಶ್ರೇಯಾ ಎಂಬಾಕೆಯು ನಟಿಯನ್ನು ದುಬೈಗೆ ಕರೆಸಿಕೊಂಡಿದ್ದರು. ಅಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ತಿಳಿಸಲಾಗಿದೆ.
ಮಹಿಳೆ ನೀಡಿದ ದೂರಿಗೆ ಸಂಬಂಧಿಸಿದಂತೆ ನಿವಿನ್ ಪೌಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ. ‘ಯುವತಿಯೊಬ್ಬಳ ಮೇಲೆ ನಾನು ಲೈಂಗಿಕ ದೌರ್ಜನ್ಯ ಎಸಗಿದ್ದೇನೆ ಎಂದು ಆರೋಪಿಸಿರುವ ಸುಳ್ಳು ಸುದ್ದಿ ನನ್ನ ಗಮನಕ್ಕೆ ಬಂದಿದೆ. ಇದು ಸಂಪೂರ್ಣ ಸುಳ್ಳು ಅಂತ ದಯವಿಟ್ಟು ತಿಳಿಯಿರಿ ಎಂದು ಹೇಳಿದ್ದಾರೆ.