ಚೆನ್ನೈ:- ಚೆನ್ನೈ-ಬೆಂಗಳೂರು ಹೈವೇಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ವೊಂದಕ್ಕೆ ಕಂಟೈನರ್ ಲಾರಿ ಭಯಾನಕವಾಗಿ ಡಿಕ್ಕಿ ಹೊಡೆದಿದೆ.
ಈ ಘಟನೆ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಜರುಗಿದೆ. ಘಟನೆ ಪರಿಣಾಮ 10ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ ಗೆ ವೇಗವಾಗಿ ಬಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದು 20 ಮೀಟರ್ನಷ್ಟು ದೂರ ಹಾಗೇ ಮುಂದೆ ಹೋಗಿದೆ. ಈ ವೇಳೆ ಚೆಂಡು ಪುಟಿದಂತೆ ಬಸ್ ಒಮ್ಮೆ ಪುಟಿದಿದ್ದು ರಸ್ತೆ ಮಧ್ಯೆದಲ್ಲಿ ಕರೆಂಟ್ ಕಂಬ ಇದ್ದಿದ್ದರಿಂದ ಬಸ್ ಅನ್ನು ತಡೆದಿದೆ. ಗುದ್ದುವಾಗ ಬಸ್ ಪಕ್ಕ ಓರ್ವ ವ್ಯಕ್ತಿ ನಡೆದು ಹೋಗುತ್ತಿರುತ್ತಾರೆ. ಅವರು ಜೀವ ಸಹಿತ ಇಲ್ಲ ಎಂದು ಹೇಳಲಾಗುತ್ತಿದೆ. ಲಾರಿ ಗುದ್ದಿದ ರಭಸಕ್ಕೆ ಬಸ್ ಪಲ್ಟಿಯಾಗಿ ಬಿದ್ದಿದ್ದರಿಂದ ಒಳಗಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸದ್ಯ ಗಾಯಗೊಂಡ ಎಲ್ಲ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಈ ಸಂಬಂಧ ಕೇಸ್ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.