Aparna Death: ಇಹಲೋಕ ತ್ಯಜಿಸಿದ ಖ್ಯಾತ ನಿರೂಪಕಿ; ಅಪರ್ಣಾ ಬಣ್ಣದ ಲೋಕದ ಪಯಣ ಹೇಗಿತ್ತು!?

0
Spread the love

ಕನ್ನಡದ ಖ್ಯಾತ ನಿರೂಪಕಿ, ಸಿನಿಮಾ ನಟಿ ಗುರುವಾರ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಭಾಷೆಯನ್ನ ಅದ್ಭುತವಾಗಿ ಮಾತನಾಡುತ್ತಿದ್ದ ಅಪರ್ಣ, ತಮ್ಮ ನಿರೂಪಣಾ ಶೈಲಿಯಿಂದಲೇ ಅಪಾರ ಅಭಿಮಾನಿ ಬಳವನ್ನ ಹೊಂದಿದ್ದರು. ಹಲವು ದಶಕಗಳ ಕಾಲ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನ ನಿರೂಪಿಸಿದ್ದರು.

Advertisement

ಕನ್ನಡ ಚಿತ್ರರಂಗಕ್ಕೆ ಆಘಾತ: ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ!

ಅಪರ್ಣಾ ವಸ್ತಾರೆ. ಇವರು ವೇದಿಕೆ ಮೇಲೆ ನಿಂತು ಕನ್ನಡ ಮಾತನಾಡುತ್ತಿದ್ದರೆ ಇಂಪಾದ ಹಾಡು ಕೇಳಿದ ಹಾಗೆ ಆಗುತ್ತಿತ್ತು. ಕನ್ನಡ ಪದಗಳ ಉಚ್ಚಾರ, ಸ್ಫುಟತೆ, ಪದಗಳ ಬಳಕೆ, ಹಾವ-ಭಾವದ ಮೂಲಕವೇ ಅವರು ಎಂತಹವರೂ ಕನ್ನಡವನ್ನು ಪ್ರೀತಿಸುವಂತೆ ಮಾಡುತ್ತಿದ್ದರು. ನಟನೆ, ನಿರೂಪಣೆ, ರೇಡಿಯೊ ಜಾಕಿ, ಹಾಸ್ಯದ ಮೂಲಕವೇ ಮನೆಮಾತಾಗಿದ್ದ ಅಪರ್ಣಾ ವಸ್ತಾರೆ (Aparna Vastarey) ಅವರು ನಿಧನರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿಯಲ್ಲಿ 1973ರ ಜನವರಿ 7ರಂದು ಜನಿಸಿದ ಅಪರ್ಣಾ ವಸ್ತಾರೆ ಅವರು ಮೊದಲು ಬೆಳ್ಳಿ ತೆರೆಯ ಮೂಲಕವೇ ಸಿನಿಮಾ ರಂಗವನ್ನು ಪ್ರವೇಶಿಸಿದರು. ಅದರಲ್ಲೂ, 1984ರಲ್ಲಿ ಬಿಡುಗಡೆಯಾದ, ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಮಸಣದ ಹೂವು ಸಿನಿಮಾದ ಮೂಲಕ ಪದಾರ್ಪಣೆ ಮಾಡಿದ ಅವರು, ಮೊದಲ ಸಿನಿಮಾದಲ್ಲಿಯೇ ಅಪಾರವಾದ ಖ್ಯಾತಿ ಗಳಿಸಿದರು. ಅಲ್ಲದೆ, ಸಂಗ್ರಾಮ (1987), ನಮ್ಮೂರ ರಾಜ (1988), ಸಾಹಸ ವೀರ (1988), ಮಾತೃ ವಾತ್ಸಲ್ಯ (1988), ಒಲವಿನ ಆಸರೆ (1989), ಇನ್ಸ್‌ಪೆಕ್ಟರ್‌ ವಿಕ್ರಮ್‌ (1989), ಒಂದಾಗಿ ಬಾಳು (1989), ಡಾಕ್ಟರ್‌ ಕೃಷ್ಣ (1989), ಒಂಟಿ ಸಲಗ (1989), ಚಕ್ರವರ್ತಿ (1990) ಸೇರಿ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ಸಾಲು ಸಾಲು ಸಿನಿಮಾಗಳ ಮೂಲಕ ಮಿಂಚಿದ ಅಪರ್ಣಾ ಅವರು ಸಿನಿಮಾ ಬಿಟ್ಟು ಕಿರುತೆರೆ, ನಿರೂಪಣೆಯಲ್ಲಿಯೇ ಹೆಚ್ಚು ತೊಡಗಿಸಿಕೊಂಡರು. ಆದರೂ, ಇತ್ತೀಚೆಗೆ ಅವರು ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಗ್ರಾಮಾಯಣ ಸಿನಿಮಾವು ಶೂಟಿಂಗ್‌ ಹಂತದಲ್ಲಿದೆ. ಈಗ ವಿಜಯ ರಾಘವೇಂದ್ರ ಅವರ ನಟನೆಯ ಗ್ರೇ ಗೇಮ್ಸ್‌ ಸಿನಿಮಾದಲ್ಲಿ ಅವರ ಕೊನೆಯ ಸಿನಿಮಾ ಆಗಿದೆ.

ಸಿನಿಮಾಗಳಿಂದ ದೂರವೇ ಉಳಿದ ಅಪರ್ಣಾ ಅವರು ನಿರೂಪಣೆಗೆ ಹೆಚ್ಚಿನ ಆದ್ಯತೆ ನೀಡಿದರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು. ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದರು

ನಟನೆ, ನಿರೂಪಣೆಯಿಂದ ಮನೆಮಾತಾಗಿದ್ದ ಅಪರ್ಣಾ ಅವರು 2013ರಲ್ಲಿ ಆರಂಭವಾದ ಬಿಗ್‌ಬಾಸ್‌ ಸೀಸನ್‌ 1ರ ಸ್ಪರ್ಧಿಯಾಗಿದ್ದರು. ಇದಾದ ನಂತರ ಹಾಸ್ಯನಟಿಯಾಗಿ ಕಾಣಿಸಿಕೊಂಡ ಅವರು, ಸೃಜನ್‌ ಲೋಕೇಶ್‌ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್‌, ಮಜಾ ಟಾಕೀಸ್‌ ಸೂಪರ್‌ ಸೀಸನ್‌ನಲ್ಲಿ ಅವರು ವರಲಕ್ಷ್ಮೀ ಪಾತ್ರದಲ್ಲಿ ನಾಡಿನ ಜನರನ್ನು ನಗಿಸಿದ್ದರು. ಮೂಡಲಮನೆ, ಮುಕ್ತ, ಇವಳು ಸುಜಾತಾ, ನನ್ನರಸಿ ರಾಧೆ ಧಾರಾವಾಹಿಗಳಲ್ಲೂ ಇವರು ನಟಿಸಿ ಸೈ ಎನಿಸಿಕೊಂಡಿದ್ದರು. ಇವರು ಹಲವು ಪತ್ರಿಕೆಗಳಿಗೆ ಅಂಕಣಗಳನ್ನೂ ಬರೆದಿದ್ದಾರೆ

 


Spread the love

LEAVE A REPLY

Please enter your comment!
Please enter your name here