ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪುಲಿಗೆರೆ ಉತ್ಸವದ 3ನೇ ದಿನವಾದ ಭಾನುವಾರ ಸಂಧ್ಯಾರಾಗ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಲಾವಿದ ಡಾ.ರವೀಂದ್ರ ಗುರುರಾಜ ಕಾಟೋಟಿ ಅವರಿಂದ ಹೊಮ್ಮಿದ ಸೋಲೋ ಹಾರ್ಮೋನಿಯಂ ಸಂಗೀತ ಸುಧೆ ಪ್ರೇಕ್ಷಕರನ್ನು ಆಕರ್ಷಿಸಿತು. ಇವರಿಗೆ ಸುಮಿತ್ ನಾಯಕ್ ತಬಲಾ ಸಾಥ್ ನೀಡಿದರು.
ಬೆಂಗಳೂರಿನ ಅವಳಿ ಸಹೋದರಿಯರಾದ ಅರ್ಚನಾ ಹಾಗೂ ಚೇತನಾ ಅವರ ಭರತನಾಟ್ಯ ಪ್ರದರ್ಶನ ಕಲಾರಾಧಕರ ಮೆಚ್ಚುಗೆಗೆ ಪಾತ್ರವಾಯಿತು. ಗಜಸ್ತುತಿ-ಪುಷ್ಪಾಂಜಲಿ ನೃತ್ಯಗೈದ ಅವರ ಭರತನಾಟ್ಯದ ಎಲ್ಲ ಹಾವ-ಭಾವ, ಭಂಗಿಗಳಿಗೆ ಸೇರಿದ್ದ ಮಕ್ಕಳೂ ಸಹ ಚಪ್ಪಾಳೆಗೈದರು.
ಬೆಂಗಳೂರಿನ ಕಲಾವಿದೆ ಅನುಶ್ರೀ ಪದ್ಮನಾಭ ಅವರ ಶಿವತಾಂಡವ ಸ್ತೋತ್ರ, ವಿಷ್ಣುವಿನ ದಶಾವತಾರದ ಓಡಿಸ್ಸಿ ನೃತ್ಯ ಪ್ರಸ್ತುತಿ ನೆರೆದಿದ್ದ ಪ್ರೇಕ್ಷಕರ ಕಣ್ಮನ ಸೆಳೆಯಿತು. ಈ ನೃತ್ಯದೊಂದಿಗೆ ಪುಲಿಗೆರೆ ಉತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು. ಈ ವೇಳೆ ಕಲಾವಿದರು, ಸಹಕರಿಸಿದವರನ್ನು ಸನ್ಮಾನಿಸಲಾಯಿತು.