ಬಳ್ಳಾರಿ:- ನಗರದ ರೆಡಿಯೋ ಪಾರ್ಕ್ ಬಳಿಯ ಐಟಿಐ ಕಾಲೇಜು ಆವರಣದಲ್ಲಿ ಅಪ್ರಾಪ್ತ ಬಾಲಕಿಯ ಫೋಟೋ ವಾಟ್ಸ್‌ಆಪ್ ಸ್ಟೇಟಸ್ ಇಟ್ಟಿದ್ದಕ್ಕೆ ಯುವಕನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ಜರುಗಿದೆ.
19 ವರ್ಷದ ದೊಡ್ಡಬಸವ ಹಲ್ಲೆಗೊಳಗಾದ ಯುವಕ. ದೊಡ್ಟಬಸವ ಅಪ್ರಾಪ್ತ ಬಾಲಕಿಯ ಫೋಟೋವನ್ನು ತನ್ನ ವಾಟ್ಸ್‌ಆಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದನು. ಆಗ, ಬಾಲಕಿಯ ಅಣ್ಣ ದೊಡ್ಡಬಸವನನ್ನು ಪ್ರಶ್ನೆ ಮಾಡಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಸಿಟ್ಟು ಇಟ್ಟುಕೊಂಡಿದ್ದ ಬಾಲಕಿಯ ಅಣ್ಣ, ಜುಲೈ 27 ರಂದು ತನ್ನ ಸ್ನೇಹಿತರನ್ನ ಕರೆದುಕೊಂಡು ಬಂದು ಐಟಿಐ ಕಾಲೇಜು ಆವರಣದಲ್ಲಿ ದೊಡ್ಡಬಸವನಿಗೆ ಮನಸೋ ಇಚ್ಚೆ ಹೊಡೆಸಿದ್ದಾನೆ. ದೊಡ್ಡಬಸವನ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಬಾಲಕಿಯ ಅಣ್ಣ ವಿಡಿಯೋ ಮಾಡಿಕೊಂಡಿದ್ದಾನೆ.
ದೊಡ್ಡಬಸವನ ತುಟಿ, ದವಡೆ, ಬೆನ್ನು, ಎದೆ, ಪಕ್ಕೆಲಬು ಹಾಗೂ ಸೊಂಟಕ್ಕೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಕಾಲಿನಿಂದ ಒದ್ದು, ಕೈಗಳಿಂದ ಹಲ್ಲೆ ಮಾಡಿದ್ದಲ್ಲದೇ ಕ್ರಿಕೆಟ್ ಬ್ಯಾಟ್ ಹಾಗೂ ಬೆಲ್ಟ್ನಿಂದ ಹೊಡೆದಿದ್ದಾರೆ. ಕಾಲು ಬೀಳುತ್ತೇನೆ, ಕೈ ಮುಗಿಯುತ್ತೇನೆ ಅಂದ್ರೂ ಬಿಡದೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಲ್ಲೆ ಮಾಡಿದ ಆರೋಪಿಗಳಾದ ಶಶಿಕುಮಾರ್, ಸಾಯಿಕುಮಾರ್ ಸೇರಿದಂತೆ 10 ಜನರ ವಿರುದ್ಧ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಲ್ಲೆ ಮಾಡಿದ ಆರೋಪಿಗಳೆಲ್ಲರೂ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.