ವಿಜಯಸಾಕ್ಷಿ ಸುದ್ದಿ, ನರೇಗಲ್ : ಪಟ್ಟಣದ ದರಗಾದ ಉರುಸು ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮಗಳಿಂದ ನಡೆಯಿತು. ಈ ಸಂದರ್ಭದಲ್ಲಿ ನರೇಗಲ್ಲ ಅಷ್ಟೇ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಗಳ ಜನತೆ ಪಾಲ್ಗೊಂಡು ತಮ್ಮ ಭಕ್ತಿ ಪರಾಕಾಷ್ಠೆಯನ್ನು ಮೆರೆದರು.
ರವಿವಾರ ಸಂಜೆ ಉರುಸಿನ ಅಂಗವಾಗಿ ಬೃಹತ್ ಮೆರವಣಿಗೆ ನಡೆಯಿತು. ಪಲ್ಲಕ್ಕಿಯಲ್ಲಿ ಶ್ರೀ ಲಕ್ಷ್ಮಿ ದೇವಿಯ ಪಾದುಕೆಗಳನ್ನು ಇರಿಸಲಾಗಿತ್ತು. ಹಿಂದೆ ದರಗಾದ ಈಗಿನ ಪೀಠಾಧಿಪತಿಗಳಾದ, ಅಬ್ದುಲ್ ರಹಿಮಾನ್ ಶ್ಯಾವಲಿಯವರ ಕರ ಸಂಜಾತರಾದ ಮಂಜೂರ ಹುಸೇನ್ ಶ್ಯಾವಲಿಯವರು ಅಲಂಕೃತಗೊಂಡ ಡಮಣಿಯಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡಿದರು.
ಸಂಜೆ 4 ಗಂಟೆಗೆ ಪಟ್ಟಣದ ರಾಜಬೀದಿಗಳ ಮೂಲಕ ಮೆರವಣಿಗೆ ಸಾಗುತ್ತಿದ್ದಂತೆ ಭಕ್ತಾದಿಗಳು ಹಣ್ಣು, ಕಾಯಿಗಳನ್ನು ಅರ್ಪಿಸಿ ಅಜ್ಜನವರ ಆಶಿರ್ವಾದ ಪಡೆದರು. ಮೆರವಣಿಗೆಯುದ್ದಕ್ಕೂ ಸಾಗಿದ ಡೊಳ್ಳು, ಕರಡಿ ಮಜಲು, ಜಾಂಜ್ ಮೇಳ ಹಾಗೂ ಅಂಬೇಡ್ಕರ ನಗರದ ಯುವಕರ ಕೋಲಾಟ ನೋಡುಗರ ಗಮನ ಸೆಳೆಯಿತು. ಪಟ್ಟಣದ ರಾಜಬೀದಿಗಳಲ್ಲಿ ಸಂಚರಿಸಿದ ಮೆರವಣೆಗೆಯು ಮರಳಿ ರಾತ್ರಿ ನರೇಗಲ್ ದರಗಾಕ್ಕೆ ಸಾಗಿಬಂತು.