ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ

0
A grand welcome to the Jyoti Rath Yatra
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಾಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ಭಾನುವಾರ ನರೇಗಲ್ಲ ಪಟ್ಟಣದಲ್ಲಿ ಸಡಗರ, ಸಂಭ್ರಮಗಳಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

Advertisement

ಪಟ್ಟಣದ ಪೊಲೀಸ್ ಠಾಣೆಯ ಹತ್ತಿರ ಜ್ಯೋತಿ ಯಾತ್ರೆಯನ್ನು ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಸ್ವಾಗತಿಸಿಕೊಂಡರು. ರೋಣ ಪುರಸಭೆ ಮಾಜಿ ಉಪಾಧ್ಯಕ್ಷ ಮಿಥುನ ಪಾಟೀಲ ದಂಪತಿಗಳು ಪೂಜೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ಪಟ್ಟಣದ ವಿವಿಧ ಶಾಲೆಗಳ ಮಕ್ಕಳು, ಕನ್ನಡ ಪರ ಸಂಘಟನೆಗಳು. ಕಸಾಪ, ಬೀಚಿ ಬಳಗ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ಸರಕಾರಿ ನಿವೃತ್ತ ನೌಕರರ ಸಂಘ ಸ್ಭೆರಿದಂತೆ ಅನೇಕ ಸಂಘ-ಸಂಸ್ಥೆಗಳ ಸದಸ್ಯರು, ಶಿಕ್ಷಕರು, ಅಂಗನವಾಡಿ ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಕನ್ನಡಪರ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಬಸ್ ನಿಲ್ದಾಣದ ಬಳಿ ರಥ ಯಾತ್ರೆಯ ಸಮಾವೇಶ ಜರುಗಿತು.

ಮಿಥುನ ಪಾಟೀಲ ಮಾತನಾಡಿ, ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಕಲ್ಪನೆಯಲ್ಲಿ ಮೂಡಿ ಬಂದಿರುವ ಭುವನೇಶ್ವರಿ ತಾಯಿಯ ಭಾವಚಿತ್ರವನ್ನೇ ಅಧಿಕೃತವಾಗಿ ಕರ್ನಾಟಕ ರಾಜ್ಯದ ಭುವನೇಶ್ವರಿಯನ್ನಾಗಿ ಮಾಡಬೇಕು. ಕನ್ನಡ ಕೇವಲ ಭಾಷೆಯಲ್ಲ. ಅದು ಒಂದು ಸಂಸ್ಕೃತಿ. ತನ್ನದೇ ಆದ ನೆಲ, ಜಲ, ಸಂಸ್ಕೃತಿಯ ಹಿರಿಮೆಯನ್ನು ಒಳಗೊಂಡಿದೆ. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಕನ್ನಡ ಭಾಷೆಗಿದೆ.

ಕನ್ನಡಕ್ಕಿರುವ ಅಗಾಧ ಶಕ್ತಿ ಮತ್ತೊಂದು ಭಾಷೆಯಲ್ಲಿ ಕಾಣಲು ಸಾಧ್ಯವಾಗುವದಿಲ್ಲ. ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ತನ್ನ ಸಮ್ಮೇಳನ ಯಶಸ್ವಿಯಾಗಲಿ, ಕನ್ನಡಿಗರೆಲ್ಲರೂ ಸೇರಿ ಇದರಲ್ಲಿ ಪಾಲ್ಗೊಳ್ಳೋಣ ಎಂದರು.

ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟಿಲ, ಕೆ.ಎಸ್. ಕಳಕಣ್ಣವರ, ಎಂ.ವಿ. ವೀರಾಪೂರ, ಅರುಣ ಕುಲಕರ್ಣಿ, ಡಿ.ಎ. ಅರವಟಗಿಮಠ, ಬಿ.ಬಿ. ಕುರಿ, ಜೆ.ಎ. ಪಾಟೀಲ, ಹನಮಂತ ಅಬ್ಬಿಗೇರಿ, ಹುಲಗಪ್ಪ ಬಂಡಿವಡ್ಡರ, ಭಾರತಿ ಶಿರ್ಸಿ, ಮಹಾದೇವಪ್ಪ ಬೇವಿನಕಟ್ಟಿ, ಕೆ.ಸಿ. ಜೋಗಿ, ಪಟ್ಟಣ ಪಂಚಾಯತಿಯ ಎಲ್ಲ ಸದಸ್ಯರು, ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಸೇರಿದಂತೆ ಸಿಬ್ಬಂದಿ ಇದ್ದರು.

ಸಭೆಯನ್ನುದ್ದೇಶಿಸಿ ಸಾಹಿತಿ ಮೃತ್ಯುಂಜಯ ಧಡೇಸೂರಮಠ ಪ್ರಾಸ್ತಾವಿಕವಾಗಿ ಮಾತನಾಡಿ, ನೂರಾರು ವರ್ಷಗಳ ಹಿಂದೆ ನಮ್ಮ ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು. ಅಷ್ಟೇ ಅಲ್ಲದೇ ರಾಜ ಇಮ್ಮಡಿ ಪುಲಿಕೇಶಿಯವರ ಅವಧಿಯಲ್ಲಿ ನರ್ಮದಾ ನದಿಯವರೆಗೂ ಹಬ್ಬಿತ್ತು ಎನ್ನಲಾಗಿದ್ದು, ನಮ್ಮ ರಾಜ್ಯಕ್ಕೆ ತನ್ನದೇ ಆದ ಪ್ರಾಚೀನ ಇತಿಹಾಸವಿದೆ ಎಂದರು.


Spread the love

LEAVE A REPLY

Please enter your comment!
Please enter your name here