ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಕರ್ತೃ ಶ್ರೀ ಜ.ಫಕೀರೇಶ್ವರರ ತಪೋಭೂಮಿಯಾದ ಶಿರಹಟ್ಟಿ ಪಟ್ಟಣದಲ್ಲಿ ಬಹುತೇಕ ಹಬ್ಬ-ಹರಿದಿನಗಳನ್ನು ಹಿಂದಿನಿಂದಲೂ ಹಿಂದೂ-ಮುಸ್ಲಿಂ ಬಾಂಧವರು ಒಟ್ಟಾಗಿ ಆಚರಿಸಿಕೊಂಡು ಬಂದಿದ್ದಾರೆ. ಅದರಂತೆ ಬುಧವಾರ ಮೊಹರಂ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣವೂ ಸೇರಿದಂತೆ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಆಲೈ ದೇವರುಗಳನ್ನು ಪ್ರತಿಷ್ಠಾಪಿಸಿ ಸಂಪ್ರದಾಯದಂತೆ ಪದ್ಧತಿಗಳನ್ನು ಆಚರಿಸಿದರು. ದೇವರುಗಳ ಮೆರವಣಿಗೆಯುದ್ದಕ್ಕೂ ಜಾನಪದ ಶೈಲಿಯ ಹಾಡುಗಳನ್ನು ಹಾಡುತ್ತಾ, ಶಹನಾಯಿ ವಾದನವು ಜೊತೆಗೂಡಿ, ಯುವಕರು ಲೇಜಿಮ್ ಹಿಡಿದು ಹೆಜ್ಜೆ ಮೇಳಗಳಲ್ಲಿ ಪಾಲ್ಗೊಂಡರು. ಭಕ್ತರು ದೇವರುಗಳಿಗೆ ಸಕ್ಕರೆ ಓದಿಸಿಕೊಂಡು ಮೊಹರಂ ಹಬ್ಬದಲ್ಲಿ ಭಾಗಿಯಾದರು.



