`ಕೈ’ಕೊಟ್ಟ ಗ್ಯಾರಂಟಿ : ಅರಳಿದ ಕಮಲ

0
A non-conducting congress guarantees force
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾವೇರಿ-ಗದಗ ಮತಕ್ಷೇತ್ರ ಇಡೀ ರಾಜ್ಯದ ಚಿತ್ತ ಸೆಳೆದಿತ್ತು. ಒಂದೆಡೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದಾದ್ಯಂತ ಪ್ರಚಾರ ಕೈಗೊಂಡು ಭರವಸೆ ಹುಟ್ಟಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಇನ್ನೊಂದೆಡೆ, ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವವುಳ್ಳ ಹಿರಿಯ ರಾಜಕಾರಣಿ ಬಸವರಾಜ ಬೊಮ್ಮಾಯಿ ನಡುವೆ ನೇರ ಸಮರ ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು.

Advertisement

ಕಾಯುವಿಕೆಯ ತಪಸ್ಸು ಮುಗಿದು, ಜೂನ್ 4ರಂದು ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ನಿರೀಕ್ಷೆ ಹುಸಿಯಾಗಿದ್ದು, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ 10509 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿ ಹಾವೇರಿ-ಗದಗ ಕ್ಷೇತ್ರದಲ್ಲಿ ಕಮಲವನ್ನರಳಿಸಿದ್ದಾರೆ.

A non-conducting congress guarantees force

ಹಾವೇರಿ-ಗದಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಜನ ಕಾಂಗ್ರೆಸ್ ಶಾಸಕರಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಗೆಲುವು ಸಾಧಿಸಲು ವಿಫಲರಾಗಿರುವುದು, ಗದಗ ವಿಧಾನಸಭೆ ಕ್ಷೇತ್ರದಲ್ಲಿಯೇ 10 ಸಾವಿರ ಮತಗಳ ಹಿನ್ನಡೆ ಅನುಭವಿಸಿರುವುದು ಕ್ಷೇತ್ರದಾದ್ಯಂತ ಚರ್ಚೆಗೆ ಗ್ರಾಸವೊದಗಿಸಿದೆ.

ಆನಂದಸ್ವಾಮಿ ತಮ್ಮ ತವರು ಕ್ಷೇತ್ರ ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರೂ 6936 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅದೇ ರೀತಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲರ ರೋಣ ಕ್ಷೇತ್ರದಲ್ಲಿ 3309 ಮತಗಳ ಲೀಡ್ ಪಡೆದುಕೊಂಡಿದ್ದಾರೆ. ರೋಣ ಮತ್ತು ಶಿರಹಟ್ಟಿ ಮೀಸಲು ಕ್ಷೇತ್ರ ಹೊರತುಪಡಿಸಿ, ಹಾವೇರಿ ಮತ್ತು ಗದಗ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿಯೂ ಕಾಂಗ್ರೆಸ್ಸಿಗೆ ಮುನ್ನಡೆ ದಕ್ಕಿಲ್ಲ.

ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಗದಗ ಜಿಲ್ಲೆಯಲ್ಲಿ ಶೇ. 98ರಷ್ಟು ಫಲಾನುಭವಿಗಳನ್ನು ತಲುಪಿದ್ದು, ಅವು ಮತಗಳಾಗಿ ಪರಿವರ್ತನೆ ಆಗುತ್ತವೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ನಾಯಕರಲ್ಲಿತ್ತಾದರೂ, ಇದೀಗ ಆ ಲೆಕ್ಕ ತಲೆಕೆಳಗಾಗಿರುವುದು ಕಾಂಗ್ರೆಸ್ ಬೆಂಬಲಿಗರಲ್ಲಿ ನಿರಾಸೆ ಮೂಡಿಸಿದೆ.

ಇನ್ನು, ದಶಕಗಳಿಂದಲೂ ಕಾಂಗ್ರೆಸ್‌ನ ಭದ್ರ ಪಾಳಯವೆಂದೇ ಗುರುತಿಸಿಕೊಂಡಿರುವ ಗದಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೆಚ್ಚು ಮತಗಳನ್ನು ಪಡೆಯಲು ಅಭ್ಯರ್ಥಿ ಬೊಮ್ಮಾಯಿ ಬೆಂಬಲಕ್ಕೆ ನಿಂತ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲರ ಪಾತ್ರ ಮಹತ್ತರವಾಗಿದೆ. ಆಂತರಿಕ ಭಿನ್ನಮತದ ಮಧ್ಯೆಯೂ ತಮ್ಮ ಆಪ್ತ ಸ್ನೇಹಿತನ ಗೆಲುವಿಗಾಗಿ ಸಿ.ಸಿ. ಪಾಟೀಲ ಪ್ರಾಮಾಣಿಕ ಪ್ರಯತ್ನ ಮಾಡಿದರು. ಸಿ.ಸಿ. ಪಾಟೀಲ ಬಾಗಲಕೋಟ ಕ್ಷೇತ್ರದ ಉಸ್ತುವಾರಿ ಆಗಿದ್ದರೂ ಹಾವೇರಿ-ಗದಗ ಕ್ಷೇತ್ರವನ್ನು ಕಡೆಗಣಿಸದೆ ಕೆಲಸ ಮಾಡಿದ್ದು ಫಲ ನೀಡಿತು. ಹಾವೇರಿಯಲ್ಲಷ್ಟೇ ಅಲ್ಲದೆ, ಗದಗ ಕ್ಷೇತ್ರಕ್ಕೂ ಸಮನಾಗಿ ಮಹತ್ವ ನೀಡಿ ಪ್ರಚಾರ ನಡೆಸಿದ್ದೂ ಬೊಮ್ಮಾಯಿ ಗೆಲುವಿಗೆ ಕಾರಣವಾಗಿದೆ.

ಕಾಂಗ್ರೆಸ್ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ಆನಂದಸ್ವಾಮಿ ಗಡ್ಡದೇವರಮಠ ಸ್ಥಾನ ಪಡೆದಿದ್ದರು. ಇದರ ಲಾಭ ಪಡೆದ ಆನಂದಸ್ವಾಮಿ, ಸಾಕಷ್ಟು ಮುಂಚಿತವಾಗಿಯೇ ಪ್ರಚಾರ ಪ್ರಾರಂಭಿಸಿದ್ದರು. ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಭೇಟಿ ನೀಡಿ ಮತಯಾಚಿಸಿದ್ದರು. ಆದರೆ ಗದಗ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ, ಶಿರಹಟ್ಟಿ ಮತ್ತು ರೋಣ ಕ್ಷೇತ್ರದಲ್ಲಿ ಪ್ರಚಾರ ಮಾಡಿದಷ್ಟು ಗದಗ ಕ್ಷೇತ್ರಕ್ಕೆ ಆದ್ಯತೆ ಕೊಡದಿರುವುದರಿಂದ ಈಗ ಹಾನಿ ಅನುಭವಿಸಬೇಕಾಯಿತು ಎಂಬ ಮಾತುಗಳು ಕೇಳಿಬರತೊಡಗಿವೆ.

 


Spread the love

LEAVE A REPLY

Please enter your comment!
Please enter your name here