ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪರಾಜಯಗೊಂಡಿದ್ದರಿಂದ ಯಾವುದೇ ರೀತಿಯಲ್ಲಿ ಎದೆಗುಂದುವದಿಲ್ಲ. ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಮತ್ತು ಕ್ಷೇತ್ರದ ಜನರ ಧ್ವನಿಯಾಗಿರುತ್ತೇನೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ ಎಣಿಕೆ ಮುಕ್ತಾಯವಾದ ನಂತರ ಲಕ್ಷ್ಮೇಶ್ವರದ ಅವರ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ದೊರಕಿಸಿಕೊಟ್ಟಿರುವದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನೀಯಾ ಗಾಂಧಿ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಸೇರಿದಂತೆ ರಾಜ್ಯದ ಎಲ್ಲ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಕಳೆದ 2-3 ತಿಂಗಳಿಂದ ಕ್ಷೇತ್ರದಲ್ಲಿನ ಎಲ್ಲ ಶಾಸಕರು, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ನನ್ನ ಗೆಲುವಿಗಾಗಿ ಹಗಲಿರುವುದು ಶ್ರಮಿಸಿದ್ದಾರೆ. ಗೆಲ್ಲುವಲ್ಲಿ ವಿಫಲವಾಗಿದ್ದರೂ ಸಹ ಕ್ಷೇತ್ರದ ಜನತೆಯ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ಕೆಲವು ತಾಲೂಕುಗಳಲ್ಲಿ ನನಗೆ ನಿರೀಕ್ಷೆಗಿಂತಲೂ ಹೆಚ್ಚು ಮತ ಬಂದಿದ್ದರೆ ನೀರೀಕ್ಷಿಸಿದ ಕ್ಷೇತ್ರಗಳಲ್ಲಿ ಕಡಿಮೆ ಮತಗಳು ಬಂದಿದ್ದರೂ ಎಲ್ಲವನ್ನೂ ಪ್ರೀತಿಯಿಂದ ಸ್ವಾಗತಿಸುತ್ತೇನೆ.
ಸೋಲು-ಗೆಲುವು ಸಾಮಾನ್ಯ. ಇದನ್ನು ಸವಾಲಾಗಿ ಸ್ವೀಕರಿಸುವದರ ಜೊತೆಗೆ ಪಕ್ಷ ಸಂಘಟನೆಯಲ್ಲಿ ಮತ್ತಷ್ಟು ಉತ್ಸಾಹದಿಂದ ಕಾರ್ಯಕರ್ತರು, ಮುಖಂಡರೊಂದಿಗೆ ಕೆಲಸ ಮಾಡುತ್ತೇನೆ. ಹಾವೇರಿ ಕ್ಷೇತ್ರದ ಜನತೆ ನೀಡಿರುವ ಪ್ರೀತಿ ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮತದಾನ ಮಾಡಿದ ಎಲ್ಲರಿಗೂ ಕೃತಜ್ಞತೆ ಹೇಳಿದ ಅವರು, ವಿಜೇತ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರಿಗೆ ಶುಭ ಹಾರೈಸುವದಾಗಿ ಹೇಳಿದರು.