ಸದ್ಗುಣಗಳಿಂದ ಮನುಷ್ಯನ ಬದುಕು ಶ್ರೀಮಂತಗೊಳ್ಳಬೇಕು

0
oplus_2
Spread the love

ವಿಜಯಸಾಕ್ಷಿ ಸುದ್ದಿ, ಅರಕಲಗೂಡು: ಸತ್ಕಾರ್ಯಗಳಿಂದ ಮನುಷ್ಯನ ಅಂತರಂಗ ಪರಿಶುದ್ಧವಾಗುತ್ತದೆ. ಸತ್ಯ ಶುದ್ಧ ಕಾಯಕದಿಂದ ಬದುಕು ಉಜ್ವಲಗೊಳ್ಳುತ್ತದೆ. ಮೌಲ್ಯಾಧಾರಿತ ಸದ್ಗುಣವಂತನ ಬದುಕು ಇನ್ನಿತರರಿಗೆ ದಾರಿದೀಪವಾಗುತ್ತದೆ. ಸದ್ಗುಣ ಮತ್ತು ಸಚ್ಚಾರಿತ್ರ್ಯದಿಂದ ಮನುಷ್ಯನ ಬದುಕು ಶ್ರೀಮಂತಗೊಳ್ಳಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

Advertisement

ಅವರು ಶನಿವಾರ ತಾಲೂಕಿನ ಮುಸವತ್ತೂರು ಗ್ರಾಮದ ನೂತನ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ಶ್ರೀ ಶಂಕರಲಿಂಗೇಶ್ವರ ಜಂಪೋತ್ಸವದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಮಣ್ಣು ನೀರು ಬೆಂಕಿ ಗಾಳಿ ಮತ್ತು ಕಲ್ಲಿನಲ್ಲಿಯೂ ದೇವರನ್ನು ಕಂಡು ಪೂಜಿಸಿದವರು ಭಾರತೀಯರು. ಚಿನ್ನವಿಲ್ಲದೇ ಮನುಷ್ಯ ಬದುಕಬಹುದು. ಆದರೆ ಅನ್ನವಿಲ್ಲದೇ ಬದುಕಲು ಸಾಧ್ಯವಿಲ್ಲ. ದೇಹ, ಮನ, ಬುದ್ಧಿ, ಕೈಕಾಲು ಇವುಗಳೆಲ್ಲವೂ ನಿಜವಾದ ಸಂಪತ್ತು. ಹಣ, ಚಿನ್ನ, ಬೆಳ್ಳಿ, ಒಡವೆಗಳಿಂಗ ಬದುಕು ಕಟ್ಟಿಕೊಳ್ಳುವುದು ಒಳಿತಲ್ಲ.

ಮೌಲ್ಯಾಧಾರಿತ ಧರ್ಮದ ಪರಿಪಾಲನೆಯನ್ನು ಮಾಡಿ ಮುನ್ನಡೆದರೆ ಬದುಕು ಆದರ್ಶಗೊಳ್ಳುತ್ತದೆ. ಮನಸಿನ ಹೊಯ್ದಾಟವನ್ನು ಶಾಂತ-ಪ್ರಶಾಂತಗೊಳಿಸುವ ಮಾರ್ಗವೇ ಆಧ್ಯಾತ್ಮವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಸ್ಪಷ್ಟಪಡಿಸಿದ್ದಾರೆ. ಆಚಾರ್ಯರು ಋಷಿಮುನಿಗಳು ಸಂತ-ಮಹಾಂತರು ಭೌತಿಕ ಬದುಕಿಗೆ ಸೋಲದೇ ಆಧ್ಯಾತ್ಮ ಮಾರ್ಗದಲ್ಲಿ ಆನಂದದಿಂದ ಬಾಳಿ ಇನ್ನಿತರರ ಬಾಳಿಗೆ ದಾರಿದೀಪವಾದರು. ಮುಸವತ್ತೂರು ಗ್ರಾಮದ ಸಕಲ ಸದ್ಭಕ್ತರ ಸಹಕಾರದಿಂದ ನೂತನ ಶ್ರೀ ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿರುವುದು ತಮ್ಮೆಲ್ಲರಲ್ಲಿರುವ ಧರ್ಮಶ್ರದ್ಧೆ ದೇವರಲ್ಲಿಟ್ಟ ನಂಬಿಕೆ ಕಂಡು ಅತ್ಯಂತ ಹರುಷ ತಂದಿದೆ ಎಂದರು.

ಸಮಾರಂಭ ಉದ್ಘಾಟಿಸಿದ ಹಾಸನ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಸಿದ್ಧೇಶ ನಾಗೇಂದ್ರ ಮಾತನಾಡಿ, ವಿದ್ಯಾ-ಬುದ್ಧಿ, ಹೃದಯ-ಹೊಟ್ಟೆ, ನೆಲ-ಜಲ, ಅನ್ನ-ಗಾಳಿ, ಬೆಳಕು ಕೊಟ್ಟವನು ಭಗವಂತ. ಬದುಕಿನ ಬೆಂಗಾಡು ಸಮೃದ್ಧಗೊಳ್ಳಲು ದೇವರ ಕಾರುಣ್ಯದ ಕಿರಣ ಬೇಕು. ಸಂಸ್ಕಾರ ಸಂಸ್ಕೃತಿ ಎಂಬ ಬೀಜ ಬಿತ್ತಿ ಜೀವನದಲ್ಲಿ ಸತ್ಫಲಗಳನ್ನು ಪಡೆಯಬೇಕು. ಶ್ರೀ ರಂಭಾಪುರಿ ಜಗದ್ಗುರುಗಳು ಸಣ್ಣ ಹಳ್ಳಿಗೆ ದಯಮಾಡಿಸಿರುವುದು ತಮ್ಮೆಲ್ಲರ ಪೂರ್ವಾರ್ಜಿತ ಪುಣ್ಯದ ಫಲವಾಗಿದೆ ಎಂದರು.

ದೊಡ್ಡಬೆಮ್ಮತ್ತಿ ಅ.ಭಾ.ವೀ ಮಹಾಸಭೆಯ ಅಧ್ಯಕ್ಷ ಸುರೇಶ ನೇತೃತ್ವ ವಹಿಸಿದ್ದರು. ಹಾರಿಕಾ ಮಂಜುನಾಥ ಭಾರತೀಯ ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸವನ್ನಿತ್ತರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಾಸನದ ಅ.ಭಾ.ವೀ ಮಹಾಸಭೆ ನಿರ್ದೇಶಕ ಯೋಗೇಶ್ ರಂಗಾಪುರ, ಶ್ರೀಕಂಠಪ್ಪ, ಬಸವರಾಜು, ಮಲ್ಲೇಶಣ್ಣ ಕತ್ತಿಮಲ್ಲೇನಹಳ್ಳಿ, ಜಗದೀಶ ದಡದಹಳ್ಳಿ, ಬಸವರಾಜು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಹೆಗ್ಗಡಹಳ್ಳಿಮಠದ ಷಡ್ಭಾವರಹಿತೇಶ್ವರ ಶ್ರೀಗಳು, ಕೆಸವತ್ತೂರು ಬಸವರಾಜೇಂದ್ರ ಸ್ವಾಮಿಗಳು, ಶಿರದನಹಳ್ಳಿ ಸದಾಶಿವ ಸ್ವಾಮಿಗಳು ಉಪಸ್ಥಿತರಿದ್ದರು. ರಶ್ಮಿ ಪರಮೇಶ ನಿರೂಪಿಸಿದರು.

ಸಮ್ಮುಖ ವಹಿಸಿದ ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾನವ ಜೀವನ ಅಮೂಲ್ಯ. ದೇವರು ಕೊಟ್ಟ ಕೊಡುಗೆಗೆ ಸರಿಸಾಟಿಯಾದುದು ಇನ್ನೊಂದಿಲ್ಲ. ಅರಿತು ಬಾಳಿದರೆ ಬಾಳು ಬಂಗಾರ. ಮರೆತು ಬಾಳಿದರೆ ಬಾಳು ಬಂಧನಕಾರಿಯಾಗುತ್ತದೆ. ಮನುಷ್ಯ ಜೀವನದಲ್ಲಿ ಆಸ್ತಿ ಅಂತಸ್ತು, ಅಧಿಕಾರ ಮುಖ್ಯವಲ್ಲ. ಶಾಂತಿ ಜ್ಞಾನದ ಸಂಪತ್ತು ಮುಖ್ಯ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ವಿಚಾರ ಧಾರೆಗಳು ನಮ್ಮೆಲ್ಲರ ಬಾಳಿಗೆ ಆಶಾಕಿರಣ ಎಂದರು.


Spread the love

LEAVE A REPLY

Please enter your comment!
Please enter your name here