ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳ ಪ್ರಕರಣಗಳು ಮತ್ತ ಸದ್ದು ಮಾಡುತ್ತಿದೆ. ವ್ಯಕ್ತಿಯೊಬ್ಬರು ಈ ಹಿಂದೆ ಹಲವಾರು ಹೆಣ್ಣುಮಕ್ಕಳ, ಮಹಿಳೆಯರ ಶವ ಹೂತಿರುವುದಾಗಿ ಹೇಳಿಕೆ ನೀಡಿ, ಅವುಗಳನ್ನು ಹೊರತೆಗೆಯಲು ಅವಕಾಶ ಕೋರಿದ್ದಾರೆ. ಹೀಗಾಗಿ ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಈ ಬಗ್ಗೆ ಇದೀಗ ನಟಿ ರಮ್ಯಾ ಕೂಡ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ರಮ್ಯಾ ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಮತ್ತು ಮಹಿಳೆಯರು ಕಾಣೆಯಾದ ಘಟನೆಗಳ ಬಗ್ಗೆ ಕೇಳಿ ನನಗೆ ತುಂಬಾ ಆಘಾತವಾಗಿದೆ. ಧರ್ಮಸ್ಥಳ ಒಂದು ಪೂಜಾ ಸ್ಥಳವಾಗಿದ್ದು, ಕರ್ನಾಟಕದ ಜನರು ಇದನ್ನು ಹೆಚ್ಚಾಗಿ ಪೂಜಿಸುತ್ತಾರೆ. ಹಾಗಾಗಿ ಈ ಬಗ್ಗೆ ನ್ಯಾಯಯುತ ತನಿಖೆ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ಸತ್ಯವನ್ನು ತಿಳಿದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳ ಪ್ರಕರಣಗಳು ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಧರ್ಮಸ್ಥಳ ಪ್ರಕರಣದಲ್ಲಿ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವರದಿ ಬಂದ ನಂತರ ಚರ್ಚಿಸಿ ಎಸ್‌ಐಟಿ ರಚನೆ ಬಗ್ಗೆ ನಿರ್ಧರಿಸಲಾಗುವುದು. ತನಿಖೆ ವಿಷಯದಲ್ಲಿ ಯಾರ ಒತ್ತಡವೂ ನಡೆಯಲ್ಲ. ಕಾನೂನು ರೀತಿಯಲ್ಲೇ ಕ್ರಮ ಆಗಲಿದೆ ಎಂದು ಹೇಳಿದ್ದಾರೆ.