ವಿಜಯಸಾಕ್ಷಿ ಸುದ್ದಿ, ಮುಂಡರಗಿ : ಸದೃಢ ರಾಷ್ಟ್ರ ನಿರ್ಮಾಣಕ್ಕೆ ಹಿರಿಯರ ಸೂಕ್ತ ಸಲಹೆ ಮಾರ್ಗದರ್ಶನ ತುಂಬಾ ಅವಶ್ಯವಾಗಿದೆ. ನಮ್ಮ ನಾಡಿನಲ್ಲಿ ಹಿರಿಯರಿಗೆ ಅಪಾರ ಗೌರವವಿದೆ. ಅವರನ್ನು ಸದಾಕಾಲ ಗೌರವಿಸಬೇಕು. ಅಂತಹ ಕೆಲಸವನ್ನು ಅಕ್ಕನ ಬಳಗದವರು, ಅವ್ವ ಸೇವಾ ಟ್ರಸ್ಟ್ ನವರು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಜಗದ್ಗುರು ಡಾ. ನಾಡೋಜ ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಅವರು ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ಗುರವ್ವ ಶಿವಲಿಂಗಪ್ಪ ಹೊರಟ್ಟಿಯವರ ಸ್ಮರಣೆಗಾಗಿ ಸ್ಥಾಪಿಸಿದ ದತ್ತಿನಿಧಿ ಕಾರ್ಯಕ್ರಮದಲ್ಲಿ ಜಂಗಮ ಪುಂಗವ ಅಲ್ಲಮ ಪ್ರಭುಗಳ, ಅಕ್ಕಮಹಾದೇವಿ ಜಯಂತಿ ಮತ್ತು ಶ್ರೀಮಠದ 9ನೇ ಪೀಠಾಧಿಪತಿಗಳ 57ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ, ಕಳೆದ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ದೇಶಕ್ಕೆ 101ನೇ ಸ್ಥಾನ ಗಳಿಸಿದ ಹಾಗೂ ರಾಜ್ಯಕ್ಕೆ 2ನೇ ಸ್ಥಾನ ಪಡೆದ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಸೌಭಾಗ್ಯ ಬೀಳಗಿಮಠ ಹಾಗೂ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಿ ಮಾತನಾಡಿದರು.
ಒಬ್ಬ ತಾಯಿ ಮನೆಯಲ್ಲಿದ್ದರೆ ನೂರು ಶಾಲೆಗಳನ್ನು ತೆರೆದಷ್ಟು ಮಕ್ಕಳು ಸಂಸ್ಕಾರವಂತರಾಗುತ್ತಾರೆ. ತಾಯಿ ದೇವರಾಗಬಹುದು. ಆದರೆ ದೇವರು ತಾಯಿಯಾಗಲು ಸಾಧ್ಯವಿಲ್ಲ. ಈ ಸ್ಥಾನಕ್ಕೆ ಯಾರೂ ಸಮನಲ್ಲ.
ನಮ್ಮನ್ನು ಹೊತ್ತು, ಹೆತ್ತು, ಸಾಕಿ, ಸಲುಹಿ ದೊಡ್ಡವರನ್ನಾಗಿ ಮಾಡಿದ ನಮ್ಮ ತಂದೆ-ತಾಯಿಗಳನ್ನು ನೋಯಿಸದೇ ಅವರ ಕೊನೆಗಾಲದಲ್ಲಿ ಪ್ರೀತಿ, ವಿಶ್ವಾಸ, ಗೌರವ ಆದರಾತಿಥ್ಯಗಳಿಂದ ನೋಡಿಕೊಳ್ಳಬೇಕು.
ಮಹಿಳೆಯರು ಸಬಲರಾದರೆ ಸದೃಢ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಅಂತಹ ಸಾಧನೆ ಮಾಡಿದ ಸೌಭಾಗ್ಯ ಬೀಳಗಿಮಠ ಹಾಗೂ ಲತಾ ಮಲ್ಲಿಕಾರ್ಜುನ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಮಾದರಿಯಾಗಿದ್ದಾರೆ.
ಇವರ ಸಾಧನೆಯನ್ನು ಗೌರವಿಸಲು ಅವ್ವ ಸೇವಾ ಟ್ರಸ್ಟ್ ಬಳಗಕ್ಕೆ ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.
12ಕ್ಕೂ ಹೆಚ್ಚು ಹಿರಿಯ ತಾಯಂದಿರಿಗೆ ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಶಶಿ ಸಾಲಿ, ನಿವೃತ್ತ ಪ್ರಾ. ಕರಿಭರಮಗೌಡರ, ಡಾ.ಬಸವರಾಜ ಧಾರವಾಡ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಳವಂಡಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಕರಬಸಪ್ಪ ಹಂಚಿನಾಳ, ಆರ್.ಬಿ. ಡಂಬಳಮಠ, ವೀರನಗೌಡ ಗುಡದಪ್ಪನವರ, ಆರ್.ಎಲ್. ಪೊಲೀಸ್‌ಪಾಟೀಲ, ಎಸ್.ಎಂ. ಅಗಡಿ, ಎಸ್.ಎಸ್. ಗಡ್ಡದ, ಎಸ್.ಪಿ. ನಿಂಬಿಮಠ, ಎಮ್.ಎಸ್. ಪೂಜಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ಬಿ.ಜಿ. ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಸ್. ಇನಾಮತಿ ನಿರೂಪಿಸಿದರು.
ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಹೆತ್ತವರಿಗೆ, ಹಿರಿಯರಿಗೆ ಎಂದೂ ನೋವಾಗದಂತೆ ನೋಡಿಕೊಳ್ಳಬೇಕು. ಅವರು ನಮ್ಮ ಜೀವಾಳ, ನಮ್ಮ ಬದುಕಿಗೆ ಸಾಕಷ್ಟು ತ್ಯಾಗ ಮಾಡಿರುತ್ತಾರೆ. ಅವರ ಇಳಿ ವಯಸ್ಸಿನಲ್ಲಿ ಮನೆಯಲ್ಲಿ ಇಟ್ಟುಕೊಂಡು ಅತ್ಯಂತ ಪ್ರೀತಿ-ಗೌರವದಿಂದ ನೋಡಿಕೊಳ್ಳಬೇಕು. ಇಂತಹ ಸಂಸ್ಕೃತಿಯನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸಬೇಕು. ವೃದ್ಧಾಶ್ರಮ ಸಂಸ್ಕೃತಿ ದೂರಾಗಬೇಕು ಅಂದಾಗ ಸಮೃದ್ಧ ಸಮಾಜ ಕಟ್ಟಲು ಸಾಧ್ಯ ಎಂದು ಹೇಳಿದರಲ್ಲದೆ, ಇಂತಹ ಕಾರ್ಯಗಳನ್ನು ಶ್ರೀಮಠ ಶತಮಾನಗಳಿಂದಲೂ ಮಾಡುತ್ತ ಬಂದಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.