ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಶಿರಹಟ್ಟಿ ಕ್ಷೇತ್ರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಶಾಸಕ ಡಾ.ಚಂದ್ರು ಲಮಾಣಿ ವಿವಿಧ ಇಲಾಖೆಗಳಿಗೆ ಹಾಗೂ ಸಚಿವರನ್ನು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ ಮಾಡಿದ್ದಾರೆ. ಮುಖ್ಯವಾಗಿ, ಕ್ಷೇತ್ರದಲ್ಲಿ ಹದಗೆಟ್ಟಿರುವ ರಸ್ತೆಗಳ ಸುಧಾರಣೆಗೆ ಹೆಚ್ಚಿನ ಅನುದಾನ ಒದಗಿಸುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಶನಿವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ.ಚಂದ್ರು ಲಮಾಣಿ ಕ್ಷೇತ್ರದ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ತಾಲೂಕುಗಳಲ್ಲಿನ ಬಹುತೇಕ ರಸ್ತೆಗಳು ದುರಸ್ಥಿ ಕಾಣದೆ ಹದಗೆಟ್ಟಿವೆ. ಕಳೆದ ವರ್ಷವು ಸಹ ರಸ್ತೆ ಅಭಿವೃದ್ಧಿಗೆ ದೊರೆತ ಅನುದಾನವು ಕಡಿಮೆಯಾಗಿದ್ದು, ಕ್ಷೇತ್ರಗಳಿಗೆ ವಿವಿಧ ಇಲಾಖೆಗಳಿಗೆ ದೊರೆಯಬೇಕಾದ ಅನುದಾನವೂ ಸರಿಯಾಗಿ ದೊರಕಿಲ್ಲ. ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಆಯಾ ಇಲಾಖೆಗಳ ಸಚಿವರನ್ನು ಭೇಟಿ ಮಾಡಿ ಅನುದಾನ ನೀಡುವಂತೆ ಮನವಿ ಮಾಡಲಾಗುತ್ತಿದೆ.
ರಸ್ತೆಯ ಅಭಿವೃದ್ಧಿಯಾದರೆ ವ್ಯಾಪಾರ-ವಹಿವಾಟು ಅಭಿವೃದ್ಧಿಯಾಗುತ್ತದೆ. ಅದಕ್ಕಾಗಿ ಕ್ಷೇತ್ರದ ಸಮಸ್ತ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿ ನಿರ್ಮಿಸುವ ಕನಸು ಹೊಂದಿದ್ದೇನೆ. ಇದಕ್ಕೆ ಸರಕಾರ ಆದ್ಯತೆ ಮೇರೆಗೆ ಅನುದಾನ ಒದಗಿಸುವಂತೆ ಲೋಕೋಪಯೋಗಿ ಸಚಿವರಾದ ಸತೀಶ ಜಾರಕೀಹೊಳಿ ಅವರನ್ನು ಭೇಟಿ ಮಾಡಿ ಕ್ಷೇತ್ರದ ಬಗ್ಗೆ ಚರ್ಚಿಸಿ, ಮನವಿ ಮಾಡಲಾಗಿದೆ ಎಂದರು.
ಸಚಿವರು ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅವರಿಗೆ ಕ್ಷೇತ್ರದ ಮುಖ್ಯ ರಸ್ತೆಗಳು, ಗ್ರಾಮೀಣ ರಸ್ತೆಗಳ ಸ್ಥಿತಿಗಳ ಬಗ್ಗೆ ವಿವರಿಸಲಾಗಿದೆ. ಇಲಾಖೆಯಿಂದ ಲಭ್ಯವಿರುವ ಅನುದಾನವನ್ನು ಶಿರಹಟ್ಟಿ ಕ್ಷೇತ್ರಕ್ಕೆ ಆದ್ಯತೆಯ ಮೇಲೆ ಹಂತ ಹಂತವಾಗಿ ನೀಡುವದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಡಾ. ಲಮಾಣಿ ಮಾಹಿತಿ ನೀಡಿದ್ದಾರೆ.