ವಿಜಯಸಾಕ್ಷಿ ಸುದ್ದಿ, ಗದಗ : ತೋಂಟದಾರ್ಯ ಮಠದ ಜಾತ್ರೆ ನಂತರ ರಥಬೀದಿಯಲ್ಲಿ ನಡೆಯುತ್ತಿರುವ ಅಕ್ರಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ದಲಿತ ಮಿತ್ರ ಮೇಳ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿರುವ ದಲಿತ ಮಿತ್ರ ಮೇಳದ ಸದಸ್ಯರು, ಈ ಹಿಂದೆ ತೋಂಟದಾರ್ಯ ಮಠದ ಜಾತ್ರೆ ನಂತರ 5 ದಿನ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಕೆಲ ವರ್ಷಗಳಿಂದ 10-15 ದಿನ ನಡೆಯುತ್ತಿತ್ತು. ಆದರೆ ಸದ್ಯ ರಥೋತ್ಸವ ಮುಗಿದು 2 ತಿಂಗಳು ಕಳೆದರೂ ಅಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಅಕ್ರಮ ವ್ಯಾಪಾರ ವಹಿವಾಟಿನಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರು ಬೀದಿಗೆ ಬರುವಂತಾಗಿದೆ. ಕೇವಲ 10 ದಿನ ಪರವಾನಗಿ ಪಡೆದು 2 ತಿಂಗಳಿಂದ ಭೂ ಬಾಡಿಗೆಯೂ ಇಲ್ಲದೇ ವ್ಯಾಪಾರ ನಡೆಸುತ್ತಿದ್ದಾರೆ. ಇದಕ್ಕೆಲ್ಲಾ ಜಾತ್ರಾ ಕಮಿಟಿ ಕಾರಣವಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ರಥಬೀದಿಯನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಬೇಕು. ಸ್ಥಳೀಯ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಮಿತ್ರ ಮೇಳದ ಅಧ್ಯಕ್ಷ ಕುಮಾರ ನಡಗೇರಿ, ಹುಲುಗಪ್ಪ ವಾಲ್ಮೀಕಿ, ವೆಂಕಟೇಶ ದೊಡ್ಡಮನೆ, ಶಶಿಕುಮಾರ ಹಾಕ್ರಿಕಿ, ಅನಿಲ ಮುಳ್ಳಾಳ, ಶಿವು ಬಂಗಾರಿ, ಬಸವರಾಜ ನವಲಿ, ನೂತನ ಮುರಗೋಡ, ಮಂಜು ವಾಲ್ಮೀಕಿ, ಬಸವರಾಜ ಬನ್ನಿಮರದ, ಸಂತೋಷ ಕುರಿ, ಪುಟ್ಟರಾಜ ಕಳಸಣ್ಣವರ ಉಪಸ್ಥಿತರಿದ್ದರು.