ವಿಜಯಸಾಕ್ಷಿ ಸುದ್ದಿ, ಗದಗ : ಪ್ರಧಾನಿ ನರೇಂದ್ರ ಮೋದಿಯವರು ಅಪ್ಪಟ ದೇಶಭಕ್ತರಾಗಿದ್ದು, ಅವರು ದೇಶಕ್ಕಾಗಿ ದಿನದ 18 ಗಂಟೆ ನಿರಂತರ ಕೆಲಸ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಗದಗ ತಾಲೂಕಿನ ಮಲ್ಲಸಂದ್ರ, ಅಸುಂಡಿ, ಬಿಂಕದಕಟ್ಟೆ, ಅಂತೂರು ಬೆಂತೂರು, ಹೊಸಳ್ಳಿ, ನೀಲಗುಂದ, ಚಿಂಚಲಿ ಹಾಗೂ ಕಲ್ಲೂರು ಗ್ರಾಮಗಳಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದರು.
ಬಲಿಷ್ಠ ದೇಶಕ್ಕೆ ಬಲಿಷ್ಠ ನಾಯಕತ್ವ ಬೇಕು. ಬಿಜೆಪಿ ಜಗತ್ತಿನ ಅತಿ ದೊಡ್ಡ ಪಕ್ಷ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಬಲಿಷ್ಠ ನಾಯಕರಾಗಿದ್ದಾರೆ. ಮೋದಿಯವರು ಏಕ ಭಾರತ ಶ್ರೇಷ್ಠ ಭಾರತ ಎಂದು ಸಾರಿದರು, ಇದು ಬಲಿಷ್ಠ ರಾಷ್ಟç ಎನ್ನುವ ಸಂದೇಶ ರವಾನಿಸಿದರು. ವಿದೇಶಗಳಿಗೆ ನಾವು ಭಿಕ್ಷೆ ಬೇಡುವವರಲ್ಲ, ದಾನ ಕೊಡುವವರು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ದೇಶದಲ್ಲಿ ದುರ್ಬಲ ನಾಯಕತ್ವ ಇದ್ದಾಗ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತವೆ. ಬಲಿಷ್ಠ ನಾಯಕತ್ವ ಇದ್ದರೆ ಎಲ್ಲರೂ ಹೆದರುತ್ತಾರೆ. ಭಯೋತ್ಪಾದಕರಿಗೂ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದು ಹೇಳಿದರು.
ಸಾಮಾಜಿಕವಾಗಿಯೂ ಮೋದಿಯವರು ಸಾಕಷ್ಟು ಸಹಾಯ ಮಾಡಿದ್ದಾರೆ. ಎಲ್ಲರಿಗೂ 10 ಕೆಜಿ ಅಕ್ಕಿ ಕೊಟ್ಟರು. ಕೋವಿಡ್ ಸಂದರ್ಭದಲ್ಲಿ ಎಲ್ಲರಿಗೂ ಮೂರು ಉಚಿತ ಲಸಿಕೆ ಹಾಕಿಸಿದರು. ಮೋದಿಯವರು ನಾಲ್ಕು ಕೋಟಿ ಮನೆ ಕಟ್ಟಿಸಿದ್ದಾರೆ, ದೇಶದಲ್ಲಿ ನೂರು ಕೋಟಿ ಮನೆಗಳಿಗೆ ಜಲ ಜೀವನ್ ಮಿಷನ್ ಮೂಲಕ ನಳದ ನೀರು ಕೊಡುತ್ತಿದ್ದಾರೆ. ಮೋದಿಯವರು ಶಾಶ್ವತ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ ಎಂದರು.
ದೇಶಕ್ಕೆ ಅನ್ನ, ಮನೆಗಳಿಗೆ ನೀರು, ಎಲ್ಲರಿಗೂ ಲಸಿಕೆ ಕೊಟ್ಟು ಜೀವ ಉಳಿಸಿದ ನರೇಂದ್ರ ಮೋದಿಯವರ ಋಣ ತೀರಿಸುವ ಸಮಯ ಬಂದಿದೆ. ಅವರ ಋಣ ತೀರಿಸಲು ಬಿಜೆಪಿಗೆ ಮತ ಹಾಕಿ, ಈ ಚುನಾವಣೆಯಲ್ಲಿ ನನ್ನನ್ನು ಈ ಕ್ಷೇತ್ರದ ಸಂಸದನನ್ನಾಗಿ ಆಯ್ಕೆ ಮಾಡಿದರೆ, ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಜನರ ತೆರಿಗೆ ಹಣವನ್ನು ತಮ್ಮ ಗ್ಯಾರಂಟಿಗಳಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ವರ್ಷ ಒಂದು ಲಕ್ಷ ಐದು ಸಾವಿರ ಕೋಟಿ ಸಾಲ ಮಾಡಿದ್ದಾರೆ. ಪ್ರತಿಯೊಬ್ಬರ ತಲೆಯ ಮೇಲೆ ಐವತ್ತು ಸಾವಿರ ರೂ. ಸಾಲ ಹೇರಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.