HomeGadag Newsಯಶಸ್ವಿಯಾದ ಲೋಕ ಅದಾಲತ್

ಯಶಸ್ವಿಯಾದ ಲೋಕ ಅದಾಲತ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸರ್ವೋಚ್ಛ ನ್ಯಾಯಾಲಯ ನವದೆಹಲಿ, ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಆದೇಶದನ್ವಯ ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಗದಗದಲ್ಲಿ ಸೆ.13 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 13 ಬೆಂಚ್‌ಗಳನ್ನು ರಚಿಸಿ ರಾಜೀ ಸಂಧಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಅದರಲ್ಲಿ ನ್ಯಾಯಾಲಯದಲ್ಲಿರುವ 3740 ಚಾಲ್ತಿ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದೆ ಹಾಗೂ 28486 ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು 32226 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.

3740 ಚಾಲ್ತಿ ಪ್ರಕರಣಗಳನ್ನು ಒಟ್ಟು ರೂ. 10,17,70,828 ಪರಿಹಾರ ಒದಗಿಸುವುದರ ಮೂಲಕ ಇತ್ಯರ್ಥಪಡಿಸಲಾಗಿದೆ. ವ್ಯಾಜ್ಯಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ 149 ವಿವಿಧ ಬ್ಯಾಂಕ್ ಪ್ರಕರಣಗಳು, 18 ಕಂದಾಯ ಅದಾಲತ್ ಪ್ರಕರಣಗಳು ಸೇರಿದಂತೆ ಒಟ್ಟು 28486 ವ್ಯಾಜ್ಯಪೂರ್ವ ಪ್ರಕರಣಗಳು ರೂ. 3,52,17,499ಕ್ಕೆ ರಾಜೀ ಸಂಧಾನವಾಗಿದೆ.

ಈ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನಾಗವೇಣಿ, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗಂಗಾಧರ ಸಿ.ಎಂ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಮತ್ತು ಸಿಜೆಎಂ ಜಿ.ಆರ್. ಶೆಟ್ಟರ, ಜೆಎಂಎಫ್‌ಸಿ 1ನೇ ನ್ಯಾಯಾಲಯದ ದಿವಾಣಿ ನ್ಯಾಯಾಧೀಶರಾದ ಶಿಲ್ಪಾ ತಿಮ್ಮಾಪುರ, ಜೆಎಂಎಫ್‌ಸಿ 2ನೇ ನ್ಯಾಯಾಲಯದ ದಿವಾಣಿ ನ್ಯಾಯಾಧೀಶರಾದ ಬೀರಪ್ಪ ಕಾಂಬಳೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್.ಜಿ. ಕಲ್ಲೂರ, ಉಪಾಧ್ಯಕ್ಷ ಎಂ.ಎ. ಸಂಗನಾಳ ಹಾಗೂ ಪದಾಧಿಕಾರಿಗಳು, ಸರ್ಕಾರಿ ಅಭಿಯೋಜಕರಾದ ಸವಿತಾ ಎಂ. ಶಿಗ್ಲಿ, ಜಿಲ್ಲಾ ಸರ್ಕಾರಿ ವಕೀಲರಾದ ಎಂ.ಎ. ಕುಕನೂರ, ಅಪರ ಜಿಲ್ಲಾ ಸರ್ಕಾರಿ ವಕೀಲರಾದ ಜಿ.ಬಿ. ನೀಲರಡ್ಡಿ ಹಾಗೂ ವಕೀಲ ವೃಂದದವರು, ಸಂಧಾನಕಾರ ವಕೀಲರು, ಪಕ್ಷಗಾರರು ಹಾಗೂ ಎಲ್ಲಾ ನ್ಯಾಯಾಲಯಗಳ ಸಿಬ್ಬಂದಿವರ್ಗ ಉಪಸ್ಥಿತರಿದ್ದು ಲೋಕ ಅದಾಲತ್ ಯಶಸ್ವಿಗೊಳಿಸಿದರು.

ಎಲ್ಲಾ ತಾಲೂಕುಗಳ ನ್ಯಾಯಾಧೀಶರು ಹಾಗೂ ವಕೀಲ ವೃಂದದವರು, ಸಿಬ್ಬಂದಿವರ್ಗ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಆಯಾ ತಾಲೂಕು ನ್ಯಾಯಾಲಯಗಳಲ್ಲಿ ಲೋಕ ಅದಾಲತ್‌ನಲ್ಲಿ ಪಾಲ್ಗೊಂಡು ರಾಜೀ ಸಂಧಾನ ಯಶಸ್ವಿಗೊಳಿಸಿದರು.

ಅದಾಲತ್‌ಗೆ ಸಹಕಾರ ನೀಡಿದ ವಕೀಲ ವೃಂದದವರಿಗೆ, ಪಕ್ಷಗಾರರಿಗೆ, ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ, ಸಿಬ್ಬಂದಿ ವರ್ಗದವರಿಗೆ, ಜಿಲ್ಲಾ ನ್ಯಾಯಾಲಯದ ತಾಂತ್ರಿಕ ಸಿಬ್ಬಂದಿ ವರ್ಗದವರಿಗೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾ ಸರ್ಕಾರಿ ವಕೀಲರಿಗೆ, ಅಪರ ಜಿಲ್ಲಾ ಸರ್ಕಾರಿ ವಕೀಲರಿಗೆ, ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ, ಅಭಿಯೋಜನಾ ಇಲಾಖೆ, ಕಾರ್ಮಿಕ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ, ವಿಮೆ ಕಂಪನಿಯವರಿಗೆ, ಉಪವಿಭಾಗಾಧಿಕಾರಿಗಳಿಗೆ, ನಗರಸಭೆ, ನಗರಯೋಜನಾ ಕೋಶ, ಬಿಎಸ್‌ಎನ್‌ಎಲ್, ಅಬಕಾರಿ ಇಲಾಖೆ, ಬ್ಯಾಂಕ್, ವಾರ್ತಾ ಇಲಾಖೆಯವರಿಗೆ ಹಾಗೂ ಎಲ್ಲಾ ಮಾಧ್ಯಮದವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಗದಗದ 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ 1 ಪ್ರಕರಣದಲ್ಲಿ ದಂಪತಿಗಳನ್ನು ಪುನಃ ಒಂದುಗೂಡಿಸಿ ಹಾರ ಬದಲಾಯಿಸಿ ಕಳುಹಿಸಿಕೊಡಲಾಯಿತು. ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯ ಮತ್ತು ಸಿಜೆಎಂ 2, ಲಕ್ಷ್ಮೇಶ್ವರದಲ್ಲಿ 1 ಜೋಡಿ ದಂಪತಿಗಳನ್ನು ಪುನಃ ಒಂದುಗೂಡಿಸಿ ಕಳುಹಿಸಿಕೊಡಲಾಯಿತು. ಒಟ್ಟು 4 ಜೋಡಿಗಳು ಈ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪುನಃ ಒಂದುಗೂಡಿದ್ದು ವಿಶೇಷವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!