ಕಲಬುರಗಿ: “ಸರ್ಕಾರಿ ನರ್ಸಿಂಗ್ ಕೆಲಸ ಫಿಕ್ಸ್” ಎಂಬ ಮಾತಿಗೆ ಮೋಸ ಹೋಗಿ ಹತ್ತಾರು ಯುವಕರು ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಬೆಚ್ಚಿಬೀಳಿಸುವ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ. ಇಎಸ್ಐ ಆಸ್ಪತ್ರೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಭಾರೀ ವಂಚನೆ ನಡೆಸಿದ ಆರೋಪ ಹೈದರಾಬಾದ್ ಮೂಲದ ಪ್ರದೀಪ್ ಎಂಬಾತನ ವಿರುದ್ಧ ಕೇಳಿಬಂದಿದೆ.
ಸರ್ಕಾರಿ ಉದ್ಯೋಗದ ಆಸೆ ಹೊತ್ತ ಯುವಜನರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಪ್ರದೀಪ್, “ಒಳಗಡೆ ಸೆಟ್ಟಿಂಗ್ ಇದೆ, ಕೆಲಸ ಪಕ್ಕಾ” ಎಂದು ಹೇಳಿ ಲಕ್ಷ ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾನೆ. ಕೆಲವರಿಗೆ ಈಗಾಗಲೇ ಕೆಲಸ ಕೊಡಿಸಿದ್ದೇನೆ ಎಂದು ನಂಬಿಸಿ, ಅಭ್ಯರ್ಥಿಗಳ ವಿಶ್ವಾಸ ಗೆದ್ದಿದ್ದಾನೆ.
ಒಂದೊಂದು ಉದ್ಯೋಗಕ್ಕೆ 2 ಲಕ್ಷದಿಂದ 4 ಲಕ್ಷ ರೂಪಾಯಿ ತನಕ ಹಣ ಪಡೆದಿದ್ದರೂ, ತಿಂಗಳುಗಳು ಕಳೆದರೂ ಕೆಲಸ ಸಿಗಲಿಲ್ಲ. ಹಣ ವಾಪಸ್ ಕೇಳಿದವರಿಗೆ ಮಾತ್ರ “ಪ್ರಕ್ರಿಯೆ ನಡೆಯುತ್ತಿದೆ” ಎಂದು ಹೇಳಿ ತಳ್ಳಾಡಿಸುತ್ತಿದ್ದ ಎನ್ನಲಾಗಿದೆ.
ಇಂದು ಮತ್ತೆ ಕೆಲ ಅಭ್ಯರ್ಥಿಗಳಿಗೆ ಪರೀಕ್ಷೆ ಇದೆ ಎಂದು ಕರೆಸಿಕೊಂಡಿದ್ದ ವೇಳೆ, ಈಗಾಗಲೇ ಮೋಸಕ್ಕೊಳಗಾದವರು ಸ್ಥಳಕ್ಕೆ ಬಂದು ಪ್ರದೀಪ್ನನ್ನು ಪ್ರಶ್ನಿಸಿದ್ದಾರೆ. ಟಿವಿ9 ಕ್ಯಾಮೆರಾ ಎದುರು ಸಿಕ್ಕಿಬಿದ್ದ ಆತ, ಉತ್ತರ ಕೊಡುತ್ತೇನೆ ಎಂದು ಹೇಳಿ ಕ್ಷಣಾರ್ಧದಲ್ಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಈ ಪ್ರಕರಣದಲ್ಲಿ ಇಎಸ್ಐ ಆಸ್ಪತ್ರೆಯ ಕೆಲ ಸಿಬ್ಬಂದಿಯ ಪಾತ್ರದ ಮೇಲೂ ಅನುಮಾನ ಗಟ್ಟಿಯಾಗಿದ್ದು, ಆಸ್ಪತ್ರೆ ಆವರಣದಲ್ಲೇ ಹಣದ ಡೀಲ್ ನಡೆದಿರುವ ಆರೋಪ ಕೇಳಿಬಂದಿದೆ. ಇಷ್ಟೆಲ್ಲಾ ಬೆಳವಣಿಗೆಯಾದರೂ ಇನ್ನೂ ಅಧಿಕೃತ ದೂರು ದಾಖಲಾಗದಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ಒಟ್ಟಾರೆ ಸರ್ಕಾರಿ ಕೆಲಸದ ಕನಸು ಕಂಡ ಯುವಕರು ಹಣ ಕಳೆದುಕೊಂಡು ಬೀದಿಗೆ ಬಂದರೆ, ವಂಚಕರು ಮಾತ್ರ ಲಕ್ಷ ಲಕ್ಷ ಹಣ ಪಡೆದು ಮಾಯವಾಗುತ್ತಿರುವುದು ಆತಂಕ ಮೂಡಿಸಿದೆ.



