ವಿಜಯಸಾಕ್ಷಿ ಸುದ್ದಿ, ಗದಗ : ಮಹಿಳೆ ಪ್ರಕೃತಿಯ ಅದ್ಭುತವಾದ ಸೃಷ್ಟಿ. ಜೀವನದ ವಿವಿಧ ಪಾತ್ರಗಳನ್ನು ನಿಭಾಯಿಸುವ ಸ್ತ್ರೀಗೆ ತಾಳ್ಮೆ, ಸಹನೆ, ಸಹಕಾರ ಇಂತಹ ಮೌಲ್ಯಯುತವಾದ ಗುಣಗಳು ಅವಶ್ಯಕವಾಗಿ ಬೇಕು. ಒಂದು ಕುಟುಂಬವನ್ನು ನಿರ್ವಹಿಸುವಲ್ಲಿ, ಸಮಾಜದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಮಹಿಳೆಯ ದಿಟ್ಟತನ ಮುಖ್ಯವಾದುದು ಎಂದು ಪ್ರೇಮಾ ಮೇಟಿ ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಟ್ರಸ್ಟ್ ಗದಗ ವತಿಯಿಂದ ಹಾಲಕೆರೆ ಮಠದಲ್ಲಿ ಆಚರಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಮಂಗಲಾ ಗಿರೆಡ್ಡಿ ಮಾತನಾಡುತ್ತಾ, ಮಹಿಳೆ ಅಬಲೆಯಲ್ಲ, ಸಬಲಿಯಾಗಿದ್ದಾಳೆ. ಆದರೆ ಇನ್ನು ಸಹ ಸಮಾಜದಲ್ಲಿ ಅವಳನ್ನು ನೋಡುವ ದೃಷ್ಟಿಕೋನಗಳು ಮಾತ್ರ ಬದಲಾವಣೆಯಾಗಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ ಎಂದರು.
ಟ್ರಸ್ಟಿನ ಉಪಾಧ್ಯಕ್ಷೆ ಕಸ್ತೂರಿ ಹಿರೇಗೌಡರ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡುತ್ತಾ, ಮಹಿಳೆ ಮೂಢನಂಬಿಕೆಗಳನ್ನು ಕಿತ್ತೊಗೆದು ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಮೆಕಳೆ ವಚನ ಗಾಯನ ಮಾಡಿದರು. ಡಾ. ಸೌಮ್ಯಾ ಅಬ್ಬಿಗೇರಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾಳು ಆರಿಸುವ ಸ್ಪರ್ಧೆಯಲ್ಲಿ ಮಧು ಪಾಟೀಲ ಪ್ರಥಮ, ಜ್ಯೋತಿ ಉಗಲಾಟದ ದ್ವಿತೀಯ ಸ್ಥಾನ ಪಡೆದರು. ನಂಬರ್ ಗೇಮ್‌ನಲ್ಲಿ ಜ್ಯೋತಿ ಹೋಗಲಾಟರ್, ಮಾಂತೇಶ್ವರಿ ಬಿಳಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರು. ಲಕ್ಕಿ ಮಹಿಳೆಯಾಗಿ ಮಧು ಪಾಟೀಲ ಅವರ ಹೆಸರು ಆಯ್ಕೆಯಾಯಿತು. ಕಾರ್ಯಕ್ರಮದಲ್ಲಿ ಯೋಗ ಸಾಧಕೀಯರಾದ ಸುಮಂಗಲಾ ಹದ್ಲಿ, ಸುಮಿತ್ರ ಹೊಂಬಳ್, ಅಂಬಿಕಾ ಅರಹುಣಸಿ ಅವರಿಂದ ಯೋಗ ಪ್ರದರ್ಶನ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಂಗಲಾ ಹದ್ಲಿ, ಮಾಂತೇಶ್ವರಿ, ಮೈತ್ರಿ ಬಿಳಗಿ ಅಂಬಿಕಾ ಅರಹುಣಸಿ ಅವರಿಂದ ಕೋಲಾಟ ಪ್ರದರ್ಶನ ನಡೆಯಿತು.
ಆರಾಧ್ಯ ರೆಡ್ಡಿ ಇವರಿಂದ ನೃತ್ಯ ಪ್ರದರ್ಶನ, ಸಮನ್ವಿತ ಭಾವಿಕಟ್ಟಿ ವಚನ ವಾಚನ ನೆರವೇರಿಸಿದರು. ಟ್ರಸ್ಟಿನ ಕಾರ್ಯದರ್ಶಿಗಳಾದ ಭಾಗ್ಯ ಶಿರೋಳ ಉಪಸ್ಥಿತರಿದ್ದರು. ಅಕ್ಕಮ್ಮ ರಡ್ಡೆರ ಪ್ರಸಾದ ಸೇವೆ ನೆರವೇರಿಸಿದರು.
ಕವಿತಾ ಕೊಣ್ಣೂರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವೀಣಾ ತಿರ್ಲಾಪುರ ಕಾರ್ಯಕ್ರಮ ನಿರೂಪಿಸಿದರು. ಹೇಮರೆಡ್ಡಿ ಮಲ್ಲಮ್ಮ ಟ್ರಸ್ಟಿನ ಸರ್ವ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಮಾತನಾಡಿ, ಮಹಿಳೆ ಇಂದು ಆಧುನಿಕ ಸೌಲಭ್ಯಗಳನ್ನು ಪಡೆದು ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಂಡು ತನ್ನಲ್ಲಿರುವ ಶಕ್ತಿ-ಸಾಮರ್ಥ್ಯಗಳನ್ನು ಸಮಾಜದ ಉನ್ನತಿಗೆ ಬಳಸುವಂತಿರಬೇಕು. ಮಹಿಳೆ ಮತ್ತು ಪುರುಷ ಎನ್ನುವುದು ವಿರೋಧಾಭಾಸದ ಸಂಗತಿಗಳಲ್ಲ. ಬದಲಾಗಿ ಜೀವನದ ಪಯಣದಲ್ಲಿ ಇಬ್ಬರು ತಮ್ಮದೇ ಆದ ಜವಾಬ್ದಾರಿಯನ್ನು ಹೊಂದಿದ್ದು, ಪರಸ್ಪರ ಸಹಕಾರ, ಪ್ರೀತಿ, ತಾಳ್ಮೆ ಹೊಂದಾಣಿಕೆಯಿಂದ ಬದುಕನ್ನು ಸುಂದರಗೊಳಿಸಿಕೊಳ್ಳುವ ಜಾಣ್ಮೆ ಇರಬೇಕು ಎಂದರು.