Homecultureಸತ್ಯ ಶುದ್ಧ ಕಾಯಕದಿಂದ ಬದುಕು ಸಾರ್ಥಕ

ಸತ್ಯ ಶುದ್ಧ ಕಾಯಕದಿಂದ ಬದುಕು ಸಾರ್ಥಕ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಮನುಷ್ಯ ಜೀವನದಲ್ಲಿ ಸುಖ, ಶಾಂತಿ ಯಾವಾಗಲೂ ಬಯಸುತ್ತಾನೆ. ಆ ಸುಖದ ದಾರಿ ಪ್ರಾಪ್ತವಾಗಲು ಆದರ್ಶಗಳನ್ನು ಪರಿಪಾಲಿಸಬೇಕು. ಸುಖ ಸಾಮರಸ್ಯ ಬಾಳಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನೆಗಳು ಸರ್ವರಿಗೂ ದಾರಿದೀಪವಾಗಿವೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸತ್ಕಾರ್ಯಗಳಿಂದ ಮನುಷ್ಯನ ಅಂತರಂಗ ಪರಿಶುದ್ಧವಾಗುತ್ತದೆ. ಸತ್ಯ ಶುದ್ಧ ಕಾಯಕದಿಂದ ಬದುಕು ಉನ್ನತಿಯಾಗುತ್ತದೆ ಎಂಬ ಅವರ ವಿಚಾರ ಧಾರೆ ಎಂದೆಂದಿಗೂ ಸತ್ಯ. ವೀರಶೈವ ಧರ್ಮವೃಕ್ಷದ ತಾಯ್ಬೇರು ಶ್ರೀ ಜಗದ್ಗುರು ರೇಣುಕಾಚಾರ್ಯರು. ನೊಂದವರ, ಬೆಂದವರ ಬಾಳಿಗೆ ಬೆಳಕು ತೋರಿದ ಪರಮಾಚಾರ್ಯರು. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ ಬಹು ದೊಡ್ಡ ಆಸ್ತಿಯೆಂದು ಅರುಹಿ ಸಕಲ ಸಮುದಾಯದ ಉನ್ನತಿಗಾಗಿ ಸದಾ ಶ್ರಮಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.
 ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಮಹಾಜಬೀನ, ನನ್ನ ಜೀವನದ ಇತಿಹಾಸದಲ್ಲಿ ಅವಿಸ್ಮರಣೀಯವಾಗಿ ಉಳಿಯುವ ಪುಣ್ಯ ದಿನ. ವೈದ್ಯಕೀಯ ಕ್ಷೇತ್ರದಲ್ಲಿ ಶ್ರಮಿಸಿದ ಪ್ರತಿಫಲವಾಗಿ ಗುರು ಪೀಠದಿಂದ ಅತ್ಯುನ್ನತ ಪ್ರಶಸ್ತಿ ಪ್ರಾಪ್ತವಾಗಿರುವುದು ಸಂತೋಷ ತಂದಿದೆ. ಅಂಗವಿಕಲರ ಬಾಳಿನ ಉಜ್ವಲತೆಗಾಗಿ ಸದಾ ಶ್ರಮಿಸುವ ಸಂಕಲ್ಪ ಕೈಕೊಂಡು ಕಾರ್ಯ ಮಾಡುವೆ ಎಂದರು.
ಗೌರಿಗದ್ದೆ ಅವಧೂತ ಆಶ್ರಮದ ವಿನಯ ಗುರೂಜಿ ಮಾತನಾಡಿ, ರಂಭಾಪುರಿ ಪೀಠದ ಧರ್ಮ ಆದರ್ಶ ಮತ್ತು ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಶ್ವ ಬಂಧುತ್ವದ ವಿಚಾರ ಧಾರೆಗಳು ನಮ್ಮೆಲ್ಲರ ಬಾಳಿಗೆ ಬೆಳಕು ನೀಡುತ್ತವೆ ಎಂದರು. ಅಮ್ಮಿನಭಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರು ಸಮಾರಂಭವನ್ನು ಉದ್ಘಾಟಿಸಿದರು.
ಎಮ್ಮಿಗನೂರು ವಾಮದೇವ ಮಹಂತ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಂಗಮೇಶ ಉತ್ತಂಗಿ ವಿರಚಿತ ‘ನಾದಲೀಲೆ’ ಕೃತಿ ಬಿಡುಗಡೆ ಮಾಡಿದರು.
ಲೆಕ್ಕ ಪರಿಶೋಧಕ ಎಂ.ಸದಾಶಿವಪ್ಪ, ಮಮತಾ ನಾಗರಾಜ್ ಕೂಡ್ಲಿಗೆರೆ, ಚಿಕ್ಕಮಗಳೂರಿನ ಹೆಚ್.ಎಂ. ಲೋಕೇಶ, ಕೆ.ಆರ್. ಪ್ರಕಾಶ ಕೋಣಂದೂರು ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಶಿವಮೊಗ್ಗದ ಜಿ.ಜಿ. ರಕ್ಷಿತಾ ಭರತ ನಾಟ್ಯ ಪ್ರದರ್ಶಿಸಿದರು. ಹುಬ್ಬಳ್ಳಿಯ ಪ್ರಕಾಶ ಬೆಂಡಿಗೇರಿ ಸ್ವಾಗತಿಸಿದರು. ಗದಗಿನ ಸಂಗಮೇಶ ಉತ್ತಂಗಿ ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.
ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಮರೆಯಬಾರದು. ಮೂಲ ಮರೆತರೆ ಬದುಕಿನಲ್ಲಿ ಸೋಲು ನಿಶ್ಚಿತ. ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ. ಸುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯೊಳಗೆ ಪ್ರೀತಿ ವಾತ್ಸಲ್ಯದ ದೀಪ ಹಚ್ಚಬೇಕು. ಮೌಢ್ಯ ಎಂಬ ಅಂಧಕಾರ ತೊಲಗಿಸಿ ಜ್ಞಾನ ಎಂಬ ದೀಪ ಬೆಳಗಿಸಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ರಂಭಾಪುರಿ ಶ್ರೀಗಳು ನುಡಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img