ಬೆಂಗಳೂರು: ಕಾಮುಕರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಹೌದು ಸಾಕು ನಾಯಿಯೊಂದಿಗೆ ವಾಕಿಂಗ್‌ಗೆ ತೆರಳಿದ್ದ ಮಹಿಳೆಯೊಬ್ಬರನ್ನು ಹಿಂಬಾಲಿಸಿ ಹಸ್ತಮೈಥುನ ಮಾಡಿದ ಘಟನೆ ಇಂದಿರಾನಗರದಲ್ಲಿ ನಡೆದಿದೆ. ಈ ಘಟನೆ ನವೆಂಬರ್ 1ರಂದು ನಡೆದಿದ್ದು, ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವೆಂಬರ್ 1ರ ಬೆಳಗ್ಗೆ ಸುಮಾರು 11 11:57 ರ ಸುಮಾರಿಗೆ ಮಹಿಳೆಯು ಸಾಕು ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದರು. ಆಗ ಏಕಾಏಕಿ 30 ರ ಹರೆಯದ ವ್ಯಕ್ತಿಯೊಬ್ಬ ‘‘ಮೇಡಂ’’ ಎಂದು ಕರೆದು ಗಮನ ಸೆಳೆಯಲು ಯತ್ನಿಸಿದ್ದಾನೆ. ಮಹಿಳೆಯು ಆತನ ಕಡೆಗೆ ತಿರುಗಿದಾಗ ಆತ, ಖಾಸಗಿ ಅಂಗ ಪ್ರದರ್ಶಿಸಿ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ.
ಆಘಾತಕ್ಕೊಳಗಾದ ಮಹಿಳೆ ತಕ್ಷಣವೇ ನಾಯಿಯೊಂದಿಗೆ ಮನೆಗೆ ಓಡಿಹೋಗಿದ್ದಾರೆ. ನಂತರ ಸಹೋದರಿ ಮತ್ತು ಸ್ನೇಹಿತರಿಗೆ ಮಾಹಿತಿ ನೀಡಿ, ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕೃತ್ಯವು ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಪ್ರಯತ್ನವೆಂದು ತೋರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 75 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.


