ಬರ್ತಡೇ ಖುಷಿಯಲ್ಲಿ ’ಆರಾಮ್ ಅರವಿಂದ ಸ್ವಾಮಿ’..ಅನೀಶ್-ಅಭಿಷೇಕ್ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್…
‘ನಮ್ ಏರಿಯಾಲಿ ಒಂದ್ ದಿನ’, ‘ಪೊಲೀಸ್ ಕ್ವಾಟ್ರಸ್’, ‘ಅಕಿರ’, ‘ವಾಸು ನಾನ್ ಪಕ್ಕಾ ಕಮರ್ಷಿಯಲ್’, ‘ರಾಮಾರ್ಜುನ’ ಹೀಗೆ ಪ್ರತಿ ಸಿನಿಮಾದಲ್ಲೂ ವಿಭಿನ್ನ ಕಥಾಹಂದರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಅನೀಶ್ ತೇಜೇಶ್ವರ್. ಅವರಿಗಿಂದು ಜನ್ಮದಿನದ ಸಂಭ್ರಮ. ಅನೀಶ್ ಬರ್ತಡೇ ಸ್ಪೆಷಲ್ ಆಗಿ ಆರಾಮ್ ಅರವಿಂದ ಸ್ವಾಮಿ ಸಿನಿಮಾದ ಮೊದಲ ಹಾಡನ್ನು ವಿಂಕ್ ವಿಶಲ್ ಪ್ರೊಡಕ್ಷನ್ ಯೂಟ್ಯೂಬ್ ನಲ್ಲಿ ಅನಾವರಣ ಮಾಡಲಾಗಿದೆ.
ಆರಾಮ್ ಅರವಿಂದ ಸ್ವಾಮಿ ಟೈಟಲ್ ಟ್ರ್ಯಾಕ್ ಗೆ ನಾಗಾರ್ಜುನ್ ಶರ್ಮಾ ಪದಪುಂಜ ಪೊಣಿಸಿದ್ದು, ನಿಶಾನ್ ರೈ ಕಂಠ ಕುಣಿಸಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಹಾಡಿನ ಕಿಕ್ ಏರಿಸಿದೆ. ನಾಯಕನ ಗುಣವನ್ನು ವರ್ಣಿಸುವ ಈ ಟೈಟಲ್ ಟ್ರ್ಯಾಕ್ ಅನೀಶ್ ಜಬರ್ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಬಾಬಾ ಭಾಸ್ಕರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಈ ಸಿಂಗಿಂಗ್ ಮಸ್ತಿ ಮೂಡಿಬಂದಿದೆ.
ತನ್ನ ಪ್ರಮೋಷನ್ ಕಂಟೆಂಟ್ ನಿಂದಲೇ ಈಗಾಗಲೇ ಸದ್ದು ಮಾಡುತ್ತಿರುವ ’ಆರಾಮ ಅರವಿಂದ ಸ್ವಾಮಿ’ ಸಿನಿಮಾಗೆ ಅಭಿಷೇಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ನಮ್ ಗಣಿ ಬಿಕಾಂ ಪಾಸ್, ಗಜಾನನ ಅಂಡ್ ಗ್ಯಾಂಗ್ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೂರನೇ ಸಿನಿಮಾವಿದು. ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್ ಒಳಗೊಂಡ ’ಆರಾಮ ಅರವಿಂದ ಸ್ವಾಮಿ’ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದ್ದಾನೆ.
ಅನೀಶ್ ತೇಜೇಶ್ವರ್ ಗೆ ಜೋಡಿಯಾಗಿ ಮಿಲನ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ. ಅಕಿರ ಸಿನಿಮಾ ಖ್ಯಾತಿಯ ಶ್ರೀಕಾಂತ್ ಪ್ರಸನ್ನ, ‘ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ ಚಿತ್ರಕ್ಕಿದೆ.