HomeCrime Newsಪೂಜೆ ನೆಪದಲ್ಲಿ ಬಾಬಾ ಅಪಹರಣ; ಹಲ್ಲೆ ನಡೆಸಿ ₹4.25 ಲಕ್ಷ ದೋಚಿದ ನಾಲ್ವರು ಅರೆಸ್ಟ್

ಪೂಜೆ ನೆಪದಲ್ಲಿ ಬಾಬಾ ಅಪಹರಣ; ಹಲ್ಲೆ ನಡೆಸಿ ₹4.25 ಲಕ್ಷ ದೋಚಿದ ನಾಲ್ವರು ಅರೆಸ್ಟ್

For Dai;y Updates Join Our whatsapp Group

ಬೆಂಗಳೂರು: ಮನೆಯಲ್ಲಿ ಶಾಂತಿ ಪೂಜೆ ಮಾಡಿಸುವ ನೆಪದಲ್ಲಿ ಬಾಬಾರನ್ನು ಅಪಹರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ₹4.25 ಲಕ್ಷ ದೋಚಿದ ಪ್ರಕರಣವನ್ನು ಸಂಪಿಗೆಹಳ್ಳಿ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ತುಮಕೂರು ಮೂಲದ ಆರಿಫ್ ಮತ್ತು ಆದಿಲ್, ಚಿಕ್ಕಬಾಣಾವರದ ಇಮ್ರಾನ್ ಹಾಗೂ ಆರ್‌.ಟಿ. ನಗರದ ಕಾದೀರ್ ಎಂದು ಗುರುತಿಸಲಾಗಿದೆ. ಯಲಹಂಕ ನಿವಾಸಿ ಬಾಬಾ ಮೊಹಮ್ಮದ್ ತಾರಿಕ್ ಹುಸೇನ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಕೆಲ ದಿನಗಳ ಹಿಂದೆ ಆರೋಪಿ ಆರಿಫ್, ಶಾಂತಿ ಪೂಜೆ ಮಾಡಿಸಬೇಕೆಂದು ಹೇಳಿ ಬಾಬಾ ತಾರಿಕ್ ಅವರನ್ನು ಸಂಪರ್ಕಿಸಿದ್ದ. ಮುಂಗಡವಾಗಿ ₹10 ಸಾವಿರವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದ. ಆದರೆ ಕಾರಣಾಂತರಗಳಿಂದ ಮೂರು ದಿನಗಳ ಕಾಲ ತಾರಿಕ್ ಪೂಜೆಗೆ ತೆರಳಿರಲಿಲ್ಲ.

ಜೂನ್ 29ರಂದು ಆರಿಫ್, ಬಾಬಾರನ್ನು ಕರೆತರಲು ಕಾರು ಕಳುಹಿಸುವುದಾಗಿ ತಿಳಿಸಿದ್ದ. ಕಾರು ಬಂದ ಬಳಿಕ ತಾರಿಕ್ ತೆರಳಲು ನಿರಾಕರಿಸಿದರೂ ಆರೋಪಿಗಳು ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಳಿಕ ಅವರನ್ನು ತುಮಕೂರು ಹೊರವಲಯಕ್ಕೆ ಕರೆದೊಯ್ದಾಗ ಇನ್ನೂ ಮೂವರು ಆರೋಪಿಗಳು ಅಲ್ಲೇ ಕಾಯುತ್ತಿದ್ದರು. ಈ ವೇಳೆ ಆರೋಪಿ ಆದಿಲ್, ಹಿಂದೆ ಶಾಂತಿ ಪೂಜೆಗಾಗಿ ನೀಡಿದ್ದ ಹಣದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಗಳವಾಡಿ ಹಣವನ್ನು ಮರಳಿಸುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ತಾರಿಕ್ ನಿರಾಕರಿಸಿದಾಗ ನಾಲ್ವರೂ ಸೇರಿ ಲಾಂಗ್ ಹಾಗೂ ಮಚ್ಚುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಲ್ಲೆಯ ಬಳಿಕ ಆರೋಪಿಗಳು ಬಾಬಾರ ಮೊಬೈಲ್ ಪಾಸ್‌ವರ್ಡ್ ಹಾಗೂ ಯುಪಿಐ ಪಿನ್ ಪಡೆದುಕೊಂಡು ಬ್ಯಾಂಕ್ ಖಾತೆಯಲ್ಲಿದ್ದ ಹಣದ ವಿವರ ಪರಿಶೀಲಿಸಿದ್ದಾರೆ. ಮೊದಲ ಹಂತದಲ್ಲಿ ₹13 ಸಾವಿರವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ.

ಆ ರಾತ್ರಿ ಬಾಬಾರನ್ನು ಅಜ್ಞಾತ ಸ್ಥಳದಲ್ಲಿ ಬಂಧನದಲ್ಲಿರಿಸಿದ್ದ ಆರೋಪಿಗಳು, ಮರುದಿನ ಬ್ಯಾಂಕ್ ದಾಖಲೆಗಳನ್ನು ವಾಟ್ಸಾಪ್ ಮೂಲಕ ಪಡೆದು ಖಾಸಗಿ ಬ್ಯಾಂಕ್‌ಗೆ ಕರೆದೊಯ್ದಿದ್ದಾರೆ. ಅಲ್ಲಿ ಬಾಬಾರಿಂದಲೇ ಹಣ ಹಿಂಪಡೆಯುವ ಅರ್ಜಿಗೆ ಸಹಿ ಹಾಕಿಸಿ, ಬ್ಯಾಂಕ್‌ನಿಂದ ₹4.25 ಲಕ್ಷ ನಗದು ಡ್ರಾ ಮಾಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಪಡೆದ ಬಳಿಕ ಆರೋಪಿಗಳು ತಾರಿಕ್ ಅವರನ್ನು ಕಾರಿನಲ್ಲಿ ದಾಬಸ್‌ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಹೊರವಲಯಕ್ಕೆ ಕರೆದುಕೊಂಡು ಹೋಗಿ, ಘಟನೆ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮೊಬೈಲ್ ಹಿಂತಿರುಗಿಸಿ ಪರಾರಿಯಾಗಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಸಂಪಿಗೆಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img