ಕೋಲಾರ:- ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಜೂನಿಯರ್ ಕಾಲೇಜು ಬಳಿ ಪಾದಚಾರಿಗಳಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಉಪನ್ಯಾಸಕ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ.
64 ವರ್ಷದ ಕೆ.ಬಿ.ಮೋಹನ್ (ನಿವೃತ್ತ ಕನ್ನಡ ಉಪನ್ಯಾಸಕ), 59 ವರ್ಷದ ಲಕ್ಷ್ಮೀ ನಾರಾಯಣ (ರಾಸಾಯನ ಶಾಸ್ತ್ರ ಉಪನ್ಯಾಸಕ) ಮೃತರು. ಭಾನುವಾರ ಸಂಜೆ ವಾಯು ವಿಹಾರ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ನಿವೃತ್ತ ಉಪನ್ಯಾಸಕರು ಗಂಭೀರ ಗಾಯಗೊಂಡಿದ್ದರು.
ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಉಪನ್ಯಾಸಕರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸದ್ಯ ಡಿಕ್ಕಿ ಹೊಡೆದ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಕ್ಕಿ ಹೊಡೆದು ಬೈಕ್ ಸವಾರ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



