ಯಾದಗಿರಿ: ಬೈಚಬಾಳ್–ಜಕ್ಕಮ್ಮನ ಮುಖ್ಯರಸ್ತೆ ಬಳಿ ಟ್ರ್ಯಾಕ್ಟರ್ ಕಂದಕಕ್ಕೆ ಪಲ್ಟಿಯಾಗಿ ಯುವಕ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ನಡೆದಿದೆ. ಈ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬೈಚಬಾಳ–ಜಕಮನಳ್ಳಿ ಪ್ರದೇಶದಲ್ಲಿ ನಡೆದಿದೆ.
ಘಟನೆಯಲ್ಲಿ ಮೃತನಾಗಿರುವ ಯುವಕನನ್ನು ಪರಶುರಾಮ ವಡಗೇರಿ (24) ಎಂದು ಗುರುತಿಸಲಾಗಿದೆ. ಕಿರಿದಾದ ರಸ್ತೆಯಲ್ಲಿ ಟ್ರ್ಯಾಕ್ಟರ್ ಅನ್ನು ಚಲಾಯಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿರುವುದು ದುರಂತಕ್ಕೆ ಕಾರಣವಾಗಿದೆ.
ಮೂಲತಃ ಹುಣಸಗಿ ತಾಲೂಕಿನ ಶಾಖಾಪುರ ಗ್ರಾಮದ ನಿವಾಸಿಯಾಗಿರುವ ಪರಶುರಾಮ, ಹೊಲದಲ್ಲಿ ಕೆಲಸ ಮುಗಿಸಿ ಮನೆ ಕಡೆಗೆ ವಾಪಸ್ಸಾಗುವ ವೇಳೆ ಅವಘಡ ಸಂಭವಿಸಿದೆ. ಪಲ್ಟಿಯಾದ ಟ್ರ್ಯಾಕ್ಟರ್ ಒಳಗೆ ಸಿಲುಕಿಕೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಪರಶುರಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಹುಣಸಗಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.



