ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಮಂಜಲಾಪೂರ ಗ್ರಾಮದಲ್ಲಿ ಮೆಕ್ಕೆಜೋಳದ ರಾಶಿಗಳಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ 2-3 ರಾಶಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ರೈತರಿಗೆ ಅಪಾರ ಹಾನಿ ಸಂಭವಿಸಿದೆ.
ಗ್ರಾಮದ ಸರ್ಕಾರಿ ಉರ್ದು ಶಾಲೆ ಎದುರಿನ ರೈತರ ಹೊಲಗಳಲ್ಲಿ ಮೆಕ್ಕೆಜೋಳ ಬೆಳೆದಿರುವ ಹತ್ತಾರು ರೈತರು ಒಕ್ಕಣಿಗಾಗಿ ಕಟಾವು ಮಾಡಿ ರಾಶಿ ಹಾಕಿದ್ದರು. ಆದರೆ ಆಕಸ್ಮಿಕವಾಗಿ ರಾಶಿಗಳಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಈ ಅನಾಹುತ ಸಂಭವಿಸಿದೆ. ಕಮಲವ್ವ ಹೊಸಮನಿ ಅವರಿಗೆ ಸೇರಿದ ಆರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಹಾಗೂ ಶಿರಾಜುದ್ದೀನ್ ಹೊಸಮನಿ ಅವರಿಗೆ ಸೇರಿದ 7 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳದ ರಾಶಿ ಸುಟ್ಟು ಕರಕಲಾಗಿದೆ. ಉಳಿದಂತೆ ಪರಮೇಶ ಕಿತ್ಲಿ ಮತ್ತು ದಾನಪ್ಪ ಲಮಾಣಿ ಅವರಿಗೆ ಸೇರಿದ ಮೆಕ್ಕೆಜೋಳದ ಮೇವು ಭಸ್ಮವಾಗಿದೆ.
ಸುದ್ದಿ ತಿಳಿಯುತ್ತಲೇ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ಆರಿಸಿದರು. ಜೋರಾಗಿ ಗಾಳಿ ಬೀಸುತ್ತಿರುವುದರಿಂದ ಬೆಂಕಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ವೇಗವಾಗಿ ಹರಡುತ್ತಿದ್ದರಿಂದ, ರಾಶಿ ಹಾಕಿರುವ ಉಳಿದ ರೈತರಲ್ಲಿ ಭಯ ಮೂಡಿಸಿತ್ತು.
ತಹಶೀಲ್ದಾರ ಭೇಟಿ: ವಿಷಯ ತಿಳಿಯುತ್ತಿದ್ದಂತೆ ತಹಸೀಲ್ದಾರ ಎಂ. ಧನಂಜಯ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಾದ ಎಸ್.ಕೆ. ಪಠಾಣ, ಬಸವರಾಜ ಹಳ್ಳಿಕೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.



