‌ಲೈಂಗಿಕ ಸಮಸ್ಯೆಗೆ ಪರಿಹಾರ ಕೊಡೋ ನೆಪದಲ್ಲಿ ಲಕ್ಷ ಲಕ್ಷ ವಂಚನೆ: ಆರೋಪಿ ಅರೆಸ್ಟ್

0
Spread the love

ಬೆಂಗಳೂರು: ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ನಂಬಿಸಿ, ಸಾಫ್ಟ್‌ವೇರ್ ಇಂಜಿನಿಯರ್‌ನಿಂದ ಬರೋಬ್ಬರಿ 48 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿಜಯ್ ಗುರೂಜಿ ಎಂದು ಗುರುತಿಸಲಾಗಿದೆ. ತೇಜಸ್ ಎಂಬ ಟೆಕ್ಕಿ ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದು,

Advertisement

ಚಿಕಿತ್ಸೆಗಾಗಿ ಕೆಂಗೇರಿ ಸನೈರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆ ಪಕ್ಕದ ಟೆಂಟ್‌ನಲ್ಲಿ ‘‘ಲೈಂಗಿಕ ಸಮಸ್ಯೆಗೆ ಚಿಕಿತ್ಸೆ’’ ಎಂಬ ಬೋರ್ಡ್ ನೋಡಿ ಒಳಗೆ ಹೋಗಿದ್ದರು. ಅಲ್ಲಿ ಭೇಟಿಯಾದ ವ್ಯಕ್ತಿ ವಿಜಯ್ ಗುರೂಜಿಯನ್ನು ಪರಿಚಯಿಸಿ, ಆಯುರ್ವೇದಿಕ್ ಚಿಕಿತ್ಸೆ ಮೂಲಕ ಸಮಸ್ಯೆ ಗುಣವಾಗುತ್ತದೆ ಎಂದು ಭರವಸೆ ನೀಡಿದ್ದರು.

ತೇಜಸ್ ನಂತರ ಟೆಂಟ್‌ ಗುರೂಜಿಯನ್ನು ಭೇಟಿಯಾಗಿ ‘ದೇವರಾಜ್ ಬೂಟಿ’ ಎಂಬ 1 ಗ್ರಾಂ ಔಷಧಿಗೆ 1.60 ಲಕ್ಷ ರೂ. ದರ ಫಿಕ್ಸ್ ಮಾಡಲಾಗಿತ್ತು. ಯಶವಂತಪುರದ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್‌ಗೆ ಹೋಗಿ ಮಾತ್ರೆಗಳು ಮತ್ತು ‘ದೇವರಾಜ್ ಬೂಟಿ’ಯನ್ನು ಖರೀದಿಸುವಂತೆ ಸೂಚಿಸಲಾಗಿತ್ತು. ಆನ್‌ಲೈನ್ ಪೇಮೆಂಟ್ ಮಾಡಬಾರದು, ಯಾರನ್ನೂ ಜೊತೆಗೆ ಕರೆದುಕೊಂಡು ಬರಬಾರದು ಎಂದು ಕಟ್ಟುನಿಟ್ಟಿನ ಷರತ್ತು ಹಾಕಲಾಗಿತ್ತು. ತೇಜಸ್ ಒಂದೇ ಬಾರಿಗೆ ಅಲ್ಲ, ಹಲವಾರು ಬಾರಿ ‘ದೇವರಾಜ್ ಬೂಟಿ’ ಮತ್ತು ‘ಭವನ ಬೂಟಿ ತೈಲ’ಗಳನ್ನು ಖರೀದಿಸುತ್ತಾ ಒಟ್ಟಿನಲ್ಲಿ 48 ಲಕ್ಷ ರೂ. ಖರ್ಚು ಮಾಡಿದ್ದರು.

ಆದರೆ, ಔಷಧಿ ಸೇವಿಸಿದರೂ ಲೈಂಗಿಕ ಸಮಸ್ಯೆ ಪರಿಹಾರವಾಗದೇ, ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆ ತೇಜಸ್ ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಗಂಭೀರ ಸಮಸ್ಯೆ ಉಂಟಾಗಿದೆ ಎಂಬುದು ಪತ್ತೆಯಾಯಿತು. ಆಯುರ್ವೇದಿಕ್ ಮಿಶ್ರಣವೇ ಕಿಡ್ನಿ ಹಾನಿಗೆ ಕಾರಣ ಎಂದು ವೈದ್ಯರು ಸೂಚಿಸಿದ್ದಾರೆ.

ತೇಜಸ್ ಚಿಕಿತ್ಸೆ ಪರಿಣಾಮಕಾರಿಯಲ್ಲ ಎಂದು ಪ್ರಶ್ನಿಸಿದಾಗ ವಿಜಯ್ ಗುರೂಜಿಮ ‘ಸಮಸ್ಯೆ ಇನ್ನೂ ಹೆಚ್ಚಾಗುವಂತೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಪ್ರಸ್ತುತ ಆರೋಪಿ ವಿಜಯ್ ಗುರೂಜಿ ಮತ್ತು ಆತನ ಸಹಚರನನ್ನು ಬಂಧಿಸಿರುವ ಜ್ಞಾನ ಭಾರತಿ ಠಾಣೆಯ ಪೊಲೀಸರು, ಇತರೆ ಕಡೆಗಳಲ್ಲಿ ನಡೆದಿರುವ ವಂಚನೆಗಳ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here