ಚಿಕ್ಕಬಳ್ಳಾಪುರ:– ನಗರದ ನಂದಿ ರಸ್ತೆಯ ವಾರ್ಡ್ ನಂ.16ರಲ್ಲಿ ಸಂಬಂಧಿಕರ ಮನೆಯಲ್ಲಿ ವೃದ್ದೆಯ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
ಸಂಬಂಧಿಕರ ಮನೆಯಲ್ಲಿದ್ದ ವೃದ್ದೆಯ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿದ ಆಸಾಮಿ, ವೃದ್ದೆಯ ಮನೆಗೆ ನುಗ್ಗಿ 3 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕದ್ದಿದ್ದ. ನಂತರ ಅದನ್ನು ಸ್ಮಶಾನದಲ್ಲಿ ಬಚ್ಚಿಟ್ಟು ಏನು ಗೊತ್ತಿಲ್ಲದಂತೆ ಮತ್ತೆ ಮನೆಗೆ ಹೋಗಿ ವೃದ್ದೆಯನ್ನು ಮಾತನಾಡಿಸಿಕೊಂಡು ಬಂದಿದ್ದಾನೆ. ಆರೋಪಿ ಚಾಪೆ ಕೆಳಗಡೆ ದೂರಿದರೆ ಪೊಲೀಸರು ರಂಗೋಲಿ ಕೆಳಗೆ ದೂರಿ ಆರೋಪಿಯನ್ನು ಬಂಧಿಸಿ, ಆತನಿಂದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ
ಇನ್ನು ವೃದ್ದೆ ರಾಧಮ್ಮ ಕುಟುಂಬ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಚೆನ್ನಾಗಿದೆ. ರಾಧಮ್ಮ ಕತ್ತಿನಲ್ಲಿ ಎರಡೆಲೆ ಬಂಗಾರದ ಮಾಂಗಲ್ಯ ಸರ ಇತ್ತು. ರಾಧಮ್ಮನ ಮನೆಗೆ ನುಗ್ಗಿದ ಅದೊಬ್ಬ ಆಸಾಮಿ, ಆಕೆಯ ಬಾಯಿಗೆ ಖರ್ಚಿಫ್ ಇಟ್ಟು, 3 ಲಕ್ಷ ರೂ. ಮೌಲ್ಯದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಬಳಿಕ ದೂರು ದಾಖಲಿಸಿ ತನಿಖೆ ನಡೆಸಿದ ಚಿಕ್ಕಬಳ್ಳಾಪುರ ನಗರಠಾಣೆ ಪೊಲೀಸರು, ಮೊಬೈಲ್ ಹಾಗೂ ಸಿಸಿ ಟಿವಿ ಜಾಡು ಹಿಡಿದು ಶಿಡ್ಲಘಟ್ಟ ನಗರದ ನಿವಾಸಿ ವರುಣ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ಕಳ್ಳತನ ಪ್ರಕರಣ ಬಯಲಾಗಿದೆ.
ಇನ್ನು ವರುಣ್ ವೃದ್ದೆ ರಾಧಮ್ಮಳ ಸಂಬಂಧಿಯಾಗಿದ್ದು, 2 ಬಾರಿ ಅವರ ಮನೆಗೆ ಬಂದು ಹೋಗಿದ್ದ. ಆಗ ರಾಧಮ್ಮಳ ಕತ್ತಲ್ಲಿದ್ದ ಸರದ ಮೇಲೆ ಕಣ್ಣು ಹಾಕಿದ್ದ. ಅದರಂತೆ ಸ್ಕೆಚ್ ಹಾಕಿ ಮೊನ್ನೆ ಜುಲೈ.24 ರಂದು ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.