ಮುಂಬೈ:- ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಥಾಣೆಯಲ್ಲಿ ಮೊಹಮ್ಮದ್ ಸರಿಫುಲ್ ಇಸ್ಲಾಂ ಶೆಹಜಾದ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಸೈಫ್ ನಿವಾಸದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಕಾಸರ್ವಾಡವಲಿಯ ಹಿರಾನಂದಾನಿ ಎಸ್ಟೇಟ್ ಬಳಿ ಬಂಧಿಸಲಾಗಿದೆ. ದುಷ್ಕರ್ಮಿ ಥಾಣೆಯ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ. ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಆತ ತನ್ನ ಹೆಸರನ್ನು ವಿಜಯ್ ದಾಸ್ ಎಂದು ಹೇಳಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಇನ್ನೂ ಗುರುವಾರ ಮುಂಜಾನೆ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿ ಆರೋಪಿ ದಾಳಿ ನಡೆಸಿದ್ದ. ಆರು ಬಾರಿ ಇರಿತಕ್ಕೊಳಗಾಗಿದ್ದ ಸೈಫ್ ಅವರನ್ನು ಆಟೋರಿಕ್ಷಾದಲ್ಲಿ ನಗರದ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಅಲ್ಲಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನೀಡಿ, ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.