ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತೆರೆ ಮೇಲೆ ಮಾತ್ರವಲ್ಲ ರಿಯಲ್ ಲೈಫ್ ನಲ್ಲಿ ಹಿರೋ ಆಗಿ ಅನೇಕ ಸಮಾಜಮುಖಿ ಕೆಲಸಗಳನ್ನ ಮಾಡಿದ್ದಾರೆ. ಇದೀಗ ಮತ್ತೊಂದು ಮಹತ್ವದ ಕಾರ್ಯವೊಂದನ್ನು ಧ್ರುವ ಸರ್ಜಾ ಮಾಡಿದ್ದಾರೆ.
ಧ್ರುವ ಸರ್ಜಾ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕನೊಬ್ಬನಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದು ಆ ಮೂಲಕ ಬಾಲಕನ ಕಣ್ಣಿನ ದೃಷ್ಟಿ ಸರಿ ಹೋಗುವಂತೆ ಮಾಡಿದ್ದಾರೆ. ತಾವೇ ಮುಂದೆ ನಿಂತು ಮಂಜುನಾಥ ದೃಷ್ಟಿ ಆಸ್ಪತ್ರೆಯಲ್ಲಿ ಪುಟ್ಟ ಬಾಲಕನಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಆ ಬಾಲಕನ ದೃಷ್ಟಿದೋಷ ನಿವಾರಣೆ ಆಗಿದ್ದು ಎಲ್ಲಾ ಮಕ್ಕಳಂತೆ ಬಾಲಕ ಆಡಿಕೊಂಡಿದ್ದಾನೆ.
ಬಾಲಕನ ತಂದೆ ವಿಡಿಯೋನಲ್ಲಿ ಈ ಬಗ್ಗೆ ವಿವರಣೆ ನೀಡಿದ್ದು, ‘ನನ್ನ ಪುಟ್ಟ ಮಗನಿಗೆ ಕಣ್ಣಿನ ಸಮಸ್ಯೆ ಇತ್ತು. ಅದನ್ನು ಧ್ರುವ ಸರ್ಜಾ ಅಣ್ಣನ ಬಳಿ ಹೇಳಿಕೊಂಡೆವು. ಕೂಡಲೇ ಅವರು ಆಸ್ಪತ್ರೆಗೆ ಹೇಳಿದರು. ಅವರಿಂದ ಮಗನ ಕಣ್ಣು ದೃಷ್ಟಿ ಸರಿಹೋಗಿದೆ. ಅವನು ಪ್ರಪಂಚ ನೋಡುವಂತಾಗಿದೆ’ ಎಂದಿದ್ದಾರೆ. ಇನ್ನು ಮಂಜುನಾಥ ಆಸ್ಪತ್ರೆ ವೈದ್ಯರು ಮಾತನಾಡಿ, ‘ಧ್ರುವ ಸರ್ಜಾ ಅವರು ನಮಗೆ ಆ ಬಾಲಕನ್ನು ರೆಫರ್ ಮಾಡಿದ್ದರು. ಅವನ ಪರೀಕ್ಷೆ ಮಾಡಿದಾಗ ಪೊರೆ ಇರುವುದು ಗೊತ್ತಾಯಿತು. ಕೂಡಲೇ ನಾವು ಆಪರೇಷನ್ ಮಾಡಿದೆವು. ಈ ಕಾರ್ಯವನ್ನು ನಾನು ಮಾಡಿದೆ ಎಂದು ಹೇಳುವುದು ಬೇಡ, ಪ್ರಚಾರ ಮಾಡುವುದು ಬೇಡ ಎಂದು ಧ್ರುವ ಸರ್ಜಾ ಹೇಳಿದ್ದರು’ ಎಂದು ವೈದ್ಯರು ಹೇಳಿದ್ದಾರೆ.
ಆಪರೇಷನ್ ಬಳಿಕ ಧ್ರುವ ಸರ್ಜಾ ಬಾಲಕನೊಟ್ಟಿಗೆ, ಅವರ ಪೋಷಕರೊಟ್ಟಿಗೆ ಮಾತನಾಡಿದರು. ಪೋಷಕರಿಬ್ಬರೂ ಸಹ ಧ್ರುವ ಸರ್ಜಾ ಅವರ ಸಹಾಯಕ್ಕೆ ಧನ್ಯವಾದ ಹೇಳಿದ್ದಾರೆ. ‘ಧ್ರುವ ಸರ್ಜಾ ಅಣ್ಣ ಬೈಯ್ಯುತ್ತಾರೆ, ಆದರೆ ಮಾಡಿದ ಸಹಾಯವನ್ನು ಹೇಳಿಕೊಳ್ಳದೇ ಇರಲು ಆಗುವುದಿಲ್ಲ’ ಎಂದಿದ್ದಾರೆ ಬಾಲಕನ ಪೋಷಕರು.



