ಭಾರತೀಯ ಸೈನಿಕರು ಪಾಕಿಸ್ತಾನದ ಮೇಲೆ ನಿರಂತರ ದಾಳಿ ಮಾಡುತ್ತಿದ್ದಾರೆ. ಸೈನಿಕರ ಪರವಾಗಿ ದೇಶದೆಲ್ಲೆಡೆ ಪ್ರಾರ್ಥನೆಗಳು ಕೇಳಿ ಬರುತ್ತಿವೆ. ಯುದ್ಧದ ಪರಿಸ್ಥಿತಿ ನಿರ್ಮಾಣ ಆಗುತ್ತಿದ್ದಂತೆ ಬಿಸಿಸಿಐ, ಐಪಿಎಲ್ ಅನ್ನು ರದ್ದು ಮಾಡಿದ್ದು, ಕೆಲ ಸಿನಿಮಾಗಳ ಬಿಡುಗಡೆಯನ್ನು ಮುಂದೂಡಲಾಗಿದೆ. ಇದೀಗ ಖ್ಯಾತ ನಟ ಕಮಲ್ ಹಾಸನ್ ಸಹ ತಮ್ಮ ಸಿನಿಮಾದ ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ.
ಕಮಲ್ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಥಗ್ ಲೈಫ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಕಮಲ್ ಹಾಸನ್ ಮುಂದೂಡಿದ್ದಾರೆ. ‘ಥಗ್ ಲೈಫ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಮೇ 16ರಂದು ನಡೆಯಬೇಕಿತ್ತು. ಆದರೆ ಭಾರತದ ಗಡಿಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೇನೆಯು ವೈರಿ ದೇಶದೊಟ್ಟಿಗೆ ಯುದ್ಧದಲ್ಲಿ ನಿರತವಾಗಿರುವ ಕಾರಣ ಇಂಥಹಾ ಆತಂಕದ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಬೇಡವೆಂದು ನಿಶ್ಚಯಿಸಿ ಆಡಿಯೋ ಲಾಂಚ್ ಅನ್ನು ರದ್ದು ಮಾಡಿದ್ದಾರೆ.
ಈ ಬಗ್ಗೆ ಹೇಳಿಕೆ ಹೊರಡಿಸಿರುವ ಕಮಲ್ ಹಾಸನ್, ‘ದೇಶದ ಗಡಿ ಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ದೇಶದಾದ್ಯಂತ ಇರುವ ಹೈ ಅಲರ್ಟ್ ಅನ್ನು ಗಮನಿಸಿ ಮೇ 16 ರಂದು ನಿಗದಿಯಾಗಿದ್ದ ನಮ್ಮ ‘ಥಗ್ ಲೈಫ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಮುಂದೂಡುತ್ತಿದ್ದೇವೆ. ನಮ್ಮ ಸೈನಿಕರು ದೇಶದ ಗಡಿಯಲ್ಲಿ ಶೌರ್ಯದಿಂದ ನಿಂತು ತಾಯ್ನಾಡಿಗಾಗಿ ಹೋರಾಡುತ್ತಿರುವ ಈ ಸನ್ನಿವೇಶದಲ್ಲಿ ಒಗ್ಗಟ್ಟು ಮತ್ತು ಬೆಂಬಲದ ಅವಶ್ಯಕತೆ ಇದೆ. ಅಲ್ಲದೆ ಇದು ವೈಯಕ್ತಿಕ ಸಂಭ್ರಮಾಚರಣೆ ಮಾಡುವ ಸಮಯ ಅಲ್ಲ ಹಾಗಾಗಿ ಕಾರ್ಯಕ್ರಮ ಮುಂದೂಡಲಾಗಿದ್ದು, ಸೂಕ್ತ ಸಮಯ ನೋಡಿಕೊಂಡು ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
‘ಈ ಸಮಯದಲ್ಲಿ ನಮ್ಮಗಳ ರಕ್ಷಣೆಗಾಗಿ ಶೌರ್ಯದಿಂದ ಹೋರಾಡುತ್ತಿರುವ ನಮ್ಮ ಸೈನಿಕರು ಹಾಗೂ ಅವರ ಕುಟುಂಬಕ್ಕೆ ನಮ್ಮ ಪ್ರಾರ್ಥನೆಗಳು. ಇಂಥಹಾ ಸಮಯದಲ್ಲಿ ದೇಶವಾಸಿಗಳಾಗಿ ನಾವು ನಮ್ಮ ಸೈನ್ಯದ ಪರ ನಿಲ್ಲಬೇಕು ಹಾಗೂ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದಿದ್ದಾರೆ.