ಕೊಪ್ಪಳ: ರಾಮಾಯಣ ಕಾಲದ ಐತಿಹಾಸಿಕ ಮಹತ್ವ ಹೊಂದಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಇಂದು ನಟ ರಿಷಬ್ ಶೆಟ್ಟಿ ದಂಪತಿ ಭೇಟಿ ನೀಡಿದರು.
ಕಾಂತಾರ ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ದಂಪತಿ ಸಮೇತರಾಗಿ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ ನಟ ರಿಷಬ್ ಶೆಟ್ಟಿ ಅವರು ಸುಮಾರು 575 ಮೆಟ್ಟಿಲುಗಳನ್ನು ಏರಿ ಮೂಲ ದೇವರ ದರ್ಶನ ಪಡೆದುಕೊಂಡರು. ಈ ವೇಳೆ ಹನುಮಂತನಿಗೆ ಮಹಾಮಂಗಳಾರತಿ ಸೇರಿದಂತೆ ವಿಶೇಷ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ನಂತರ ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಅವರು ರಿಷಬ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಿದರು. ಬಳಿಕ ಬೆಟ್ಟದ ಮೇಲಿಂದ ತುಂಗಭದ್ರಾ ನದಿ, ವಿಜಯನಗರದ ಹಂಪಿ ಹಾಗೂ ಕಿಷ್ಕಿಂದ ಪ್ರದೇಶದ ಸುತ್ತಲಿನ ಬೆಟ್ಟಗಳ ಮನಮೋಹಕ ನೋಟವನ್ನು ರಿಷಬ್ ಶೆಟ್ಟಿ ವೀಕ್ಷಿಸಿದರು.



