ಬೆಂಗಳೂರು:- ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಯುವ ನಟ ಸಂತೋಷ್ ಬಾಲರಾಜ್ ನಿಧನ ಹೊಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂತೋಷ್ ಬಾಲರಾಜ್ ಅವರು, ಬನಶಂಕರಿಯ ಸಾಗರ್ ಅಪೋಲೊ ಆಸ್ಪತ್ರೆಗೆ ಅವರು ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ, ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಂತೋಷ್ ಬಾಲರಾಜ್ ನಿಧನ ಹೊಂದಿದ್ದಾರೆ.
ಸಂತೋಷ್ ಬಾಲರಾಜ್ ಅವರಿಗೆ ಜಾಂಡೀಸ್ ಆಗಿತ್ತು. ಜಾಂಡೀಸ್ ಖಾಯಿಲೆ ಬಾಲರಾಜ್ ಅವರ ದೇಹವನ್ನೆಲ್ಲ ಆವರಿಸಿತ್ತು. ಕಳೆದ ಎರಡು ದಿನದಿಂದಲೂ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಯಕೃತ್ತು ಮತ್ತು ಕಿಡ್ನಿಯ ಸಮಸ್ಯೆಯಿಂದಾಗಿ ಅವರಿಗೆ ಜಾಂಡೀಸ್ ತಗುಲಿತ್ತು. ಈ ಮೊದಲೂ ಸಹ ಸಂತೋಷ್ ಬಾಲರಾಜ್ ಅವರು ಜಾಂಡೀಸ್ನಿಂದ ಬಳಲಿದ್ದರು. ಆಗ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಸಂತೋಷ್ ಅವರಿಗೆ ಮದುವೆ ಆಗಿರಲಿಲ್ಲ. ತಾಯಿ ಮತ್ತು ಸಹೋದರಿ ಇದ್ದರು. ಇದೀಗ ಇವರ ನಿಧನದಿಂದ ಸಿನಿ ಪ್ರಿಯರು ಕಂಬನಿ ಮಿಡಿದಿದ್ದರು.