ಮಲಯಾಳಂ ಚಿತ್ರರಂಗದ ಖ್ಯಾತ ನಟ ವಿನಾಯಕನ್ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ಪುಂಡಾಟಿಕೆ ನಡೆಸಿದ ವಿನಾಯಕನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಜನಿಕಾಂತ್ ಜೊತೆಗಿನ ಜೈಲರ್ ಸೇರಿದಂತೆ ಇನ್ನೂ ಹಲವು ಹಿಟ್ ಸಿನಿಮಾಗಳಲ್ಲಿ ವಿನಾಯಕನ್ ನಟಿಸಿದ್ದರು. ವಿಲನ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ವಿನಾಯಕನ್ ಇತ್ತೀಚೆಗೆ ಕಿರಿಗಳ ಮೂಲಕವೂ ಸುದ್ದಿಯಾಗುತ್ತಿದ್ದಾರೆ.
ವಿನಾಯಕನ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ರಜನಿಕಾಂತ್, ಶಿವರಾಜ್ಕುಮಾರ್ ಮೊದಲಾದವರು ನಟಿಸಿದ ‘ಜೈಲರ್’ ಚಿತ್ರದಲ್ಲಿ ಅವರು ಮಾಡಿದ ವರ್ಮ ಹೆಸರಿನ ಪಾತ್ರ ಸಾಕಷ್ಟು ಗಮನ ಸೆಳೆಯಿತು. ಈಗ ಅವರು ಬಂಧನಕ್ಕೆ ಒಳಗಾಗಿ ಸುದ್ದಿ ಆಗಿದ್ದಾರೆ.
ಮೇ 2ರಿಂದ ವಿನಾಯಕನ್ ಅವರು ಅಂಚಲುಮ್ಮೂಡು ಭಾಗದ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾರೆ. ಸಿನಿಮಾ ಶೂಟ್ ಹಿನ್ನೆಲೆಯಲ್ಲಿ ಅವರು ಇಲ್ಲಿ ವಾಸವಿದ್ದಾರೆ. ಗುರುವಾರ ಹೋಟೆಲ್ನಿಂದ ಚೆಕ್ಔಟ್ ಆಗುವಾಗ ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಅವರು ಕುಡಿದ ಮತ್ತಿನಲ್ಲಿ ಜಗಳ ಆಡಿದ್ದು ಆ ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಿನಾಯಕನ್ ಅವರನ್ನು ವೈದ್ಯಕೀಯ ಚೆಕಪ್ಗೆ ಕರೆದುಕೊಂಡು ಹೋಗಲಾಯಿತು. ಈ ವೇಳೆ ಅವರು ಮಿತಿ ಮೀರಿ ಮದ್ಯ ಸೇವನೆ ಮಾಡಿದ್ದು ಸ್ಪಷ್ಟವಾಗಿದೆ. ಸೆಕ್ಷನ್ 118 (ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳ ಪೊಲೀಸರು ಅವರನ್ನು ಬಂಧಿಸಿದ ಬಳಿಕ ಅವರ ವಿರುದ್ಧವೂ ಕೂಗಾಡಿ, ಅವಾಜ್ ಹಾಕಿದ್ದಾರೆ. ಆ ಬಳಿಕ ಸ್ಟೇಷನ್ ಜಾಮೀನು ನೀಡಿ ಅವರನ್ನು ಕಳುಹಿಸಲಾಗಿದೆ.
ಈ ಹಿಂದೆಯೂ ಕುಡಿದು ಗಲಾಟೆ ಮಾಡಿಕೊಂಡಿದ್ದರು. ಕೊಚ್ಚಿ-ಹೈದರಾಬಾದ್-ಗೋವಾ ವಿಮಾನದಲ್ಲಿ ಅವರು ಮದ್ಯದ ಅಮಲಿನಲ್ಲಿ ಇದ್ದು ಈ ವೇಳೆ ಕ್ಯಾತೆ ತೆಗೆದಿದ್ದರು.