ಚಿಕ್ಕಮಗಳೂರು: ಶೃಂಗೇರಿಗೆ ಭೇಟಿ ನೀಡಿದ್ದ ಕಿರುತೆರೆ ನಟಿಯೊಬ್ಬರು ಮಠದ ಹಿರಿಯ ಸ್ವಾಮೀಜಿಗಳೊಂದಿಗೆ ಒಂದು ಗಂಟೆಗೂ ಅಧಿಕ ಸಮಯ ಮಾತುಕತೆ ನಡೆಸಿದ್ದಾರೆ ಎಂದು ಪತ್ರಿಕೆಯೊಂದು ಪ್ರಕಟಿಸಿದ ಸುದ್ದಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ನಟಿಯ ಫೋಟೋ ಸಹಿತ ಮುಖಪುಟದಲ್ಲೇ ಸುದ್ದಿ ಪ್ರಕಟವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕನ್ನಡದ ಖ್ಯಾತ ಕಿರುತೆರೆ ನಟಿ ಪಲ್ಲವಿ ಮತ್ತಿಘಟ್ಟ ಅವರು ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆಯ ಆಶೀರ್ವಾದ ಪಡೆದಿದ್ದಾರೆ ಎಂಬ ಶೀರ್ಷಿಕೆಯಡಿ ಪತ್ರಿಕೆ ವರದಿ ಪ್ರಕಟಿಸಿತ್ತು. ವರದಿಯಲ್ಲಿ, ಕಳೆದ ಒಂದು ತಿಂಗಳಲ್ಲೇ ಇದು ನಟಿಯ ಎರಡನೇ ಶೃಂಗೇರಿ ಭೇಟಿ ಆಗಿದ್ದು, ಈ ಬಾರಿ ಮಠದಲ್ಲೇ ವಾಸ್ತವ್ಯ ಮಾಡಿಕೊಂಡು ಮರುದಿನ ಶೃಂಗೇರಿ ಮಠದ ಹಿರಿಯ ಸ್ವಾಮೀಜಿಗಳನ್ನು ಭೇಟಿಯಾಗಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.
ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಶೃಂಗೇರಿ ಮಠ ಸ್ಪಷ್ಟನೆ ನೀಡಿದೆ. ಡಿಸೆಂಬರ್ 20, 2025ರಂದು ‘ಲೋಕ ಧ್ವನಿ’ ಎಂಬ ಇ-ಪತ್ರಿಕೆಯಲ್ಲಿ ಪ್ರಕಟವಾದ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ಮಠ ಪ್ರಕಟಣೆಯಲ್ಲಿ ತಿಳಿಸಿದೆ. ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿಯವರು ಇತ್ತೀಚಿನ ವರ್ಷಗಳಲ್ಲಿ ಭಕ್ತರಿಗೆ ಕೇವಲ ದರ್ಶನ ನೀಡುತ್ತಿದ್ದು, ಯಾರೊಂದಿಗೂ ದೀರ್ಘಕಾಲ ಮಾತುಕತೆ ನಡೆಸುತ್ತಿಲ್ಲ ಎಂದು ಮಠ ಸ್ಪಷ್ಟಪಡಿಸಿದೆ.
ಪಲ್ಲವಿ ಮತ್ತಿಘಟ್ಟ ಅವರು ಇತರ ಭಕ್ತರಂತೆ ದರ್ಶನ ಪಡೆದಿರಬಹುದೇ ವಿನಃ ಪತ್ರಿಕೆಯಲ್ಲಿ ಹೇಳಿರುವಂತೆ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ಸತ್ಯವಲ್ಲ ಎಂದು ಮಠ ಹೇಳಿದೆ. ಮುಂದಿನ ದಿನಗಳಲ್ಲಿ ಮಠ ಹಾಗೂ ಜಗದ್ಗುರುಗಳ ಕುರಿತು ಇಂತಹ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.
ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಶೃಂಗೇರಿಗೆ ಪ್ರತಿದಿನ ಸಾವಿರಾರು ಭಕ್ತರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಚಿತ್ರರಂಗದವರು ಭೇಟಿ ನೀಡುತ್ತಾರೆ. ಹೀಗಿರುವಾಗ ಕಿರುತೆರೆ ನಟಿಯೊಬ್ಬರ ಭೇಟಿಯನ್ನು ಮಾತ್ರ ಈ ರೀತಿ ವೈಭವೀಕರಿಸಿ ಸುದ್ದಿ ಮಾಡಿರುವುದೇಕೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಈ ಹಿಂದೆ ಯಾವುದಾದರೂ ಉದ್ದೇಶ ಅಥವಾ ಷಡ್ಯಂತ್ರ ಇರಬಹುದೇ ಎಂಬ ಅನುಮಾನಗಳೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ.



