ಮುಂಬೈ: ಹಿಂದಿ ಕಿರುತೆರೆ ನಟಿ ಸಂಚಿತಾ ಉಗಾಲೆ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. 22 ವರ್ಷದ ನಟಿ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಅವರ ವೈಯಕ್ತಿಕ ಜೀವನದ ಕುರಿತು ಹಲವು ಮಾಹಿತಿ ಹೊರಬಿದ್ದಿವೆ.
ಪ್ರಕರಣದ ಬೆನ್ನಲ್ಲೇ ಸಹನಟ ಉಜ್ವಲ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು, ತಮ್ಮ ಮತ್ತು ಸಂಚಿತಾ ನಡುವಿನ ಪ್ರೇಮ ಸಂಬಂಧದ ಸುದ್ದಿಗಳನ್ನು ಸಂಪೂರ್ಣ ತಳ್ಳಿಹಾಕಿದ್ದಾರೆ. “ನಮ್ಮ ನಡುವೆ ಯಾವುದೇ ಪ್ರೇಮ ಸಂಬಂಧ ಇರಲಿಲ್ಲ. ಸಂಚಿತಾ ಬೇರೊಬ್ಬ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಇತ್ತೀಚಿನ ದಿನಗಳಲ್ಲಿ ಆ ಸಂಬಂಧದಿಂದಾಗಿ ಅವರು ಮಾನಸಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು” ಎಂದು ಹೇಳಿದ್ದಾರೆ.
ಅವರು ಮುಂದುವರಿದು, ಕಳೆದ ಕೆಲವು ದಿನಗಳಿಂದ ಊರಿನಲ್ಲಿ ಇದ್ದ ಕಾರಣ ಸಂಚಿತಾ ಅವರೊಂದಿಗೆ ಸಂಪರ್ಕದಲ್ಲಿರಲಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ, ನಟಿಯ ಪರಿಸ್ಥಿತಿಯನ್ನು ಅರಿತಿದ್ದ ನಿರ್ಮಾಣ ಸಂಸ್ಥೆ ಕೂಡ ಅವರಿಗೆ ಮಾನಸಿಕ ಧೈರ್ಯ ತುಂಬುವ ಪ್ರಯತ್ನ ಮಾಡಿತ್ತು ಎಂದು ಹೇಳಿದ್ದಾರೆ.
ನಟಿ ಸಾವಿನ ಹಿಂದೆ ವೈಯಕ್ತಿಕ ಸಂಬಂಧಗಳ ಒತ್ತಡ ಕಾರಣವಾಗಿದೆಯೇ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಸಂಚಿತಾ ಅವರ ವೈಯಕ್ತಿಕ ಜೀವನ, ಆಪ್ತರ ಸಂಪರ್ಕ ಮತ್ತು ಮಾಜಿ ಸಂಗಾತಿಯ ಹಿನ್ನೆಲೆಯನ್ನೂ ಪರಿಶೀಲಿಸಲಾಗುತ್ತಿದೆ. ಪ್ರಕರಣದ ತನಿಖಾ ವರದಿ ಬಳಿಕವೇ ಸಾವಿನ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ.



