ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಡೆದಿದೆಯೆನ್ನಲಾದ ಆದಿಲ್‌ರ ಲಾಕಪ್ ಡೆತ್ ಪ್ರಕರಣದ ಸಮಗ್ರ ತನಿಖೆ ನಡೆಸಿ ವಾಸ್ತವಾಂಶಗಳನ್ನು ಸರಕಾರ ಜನರ ಮುಂದಿಡಬೇಕಾಗಿದೆ. ಆದರೆ ಈ ಪ್ರಕರಣವನ್ನು ಸಂಘ ಪರಿವಾರ ಶಕ್ತಿಗಳು ಕೋಮು ಬಣ್ಣ ಲೇಪಿಸಿ ಸಮಾಜದ ಸ್ವಾಸ್ತ್ಯ ಕೆಡಿಸುವ ಪ್ರಯತ್ನ ಮಾಡುತ್ತಿದ್ದು, ಇದನ್ನು ಸರಕಾರ ಕೂಡಲೇ ನಿಲ್ಲಿಸಬೇಕು ಎಂದು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಅಧ್ಯಕ್ಷ ಅಡ್ವಕೇಟ್ ತಾಹೇರ್ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಕರಣವನ್ನು ತನ್ನ ದ್ವೇಷದ ಅಜೆಂಡಾ ನಡೆಸಲು ಬಳಸುತ್ತಿರುವ ಕೋಮು ಶಕ್ತಿಗಳು ಒಂದು ಸಮುದಾಯದ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಜನರನ್ನು ಮತ್ತಷ್ಟು ಕೆರಳಿಸಿ ಸಮಾಜದಲ್ಲಿ ಅಶಾಂತಿ ಹರಡಿಸುವ ಕೆಲಸ ಮಾಡುತ್ತಿವೆ.
ಯಾರೇ ಆಗಲಿ, ನೈಜ ಅರೋಪಿಗಳ ಬಂಧನವಾಗಲಿ. ಮುಸ್ಲಿಂ ಬಾಹುಳ್ಯ ಪ್ರದೇಶವನ್ನು ಹೆಸರಿಸಿ ಇಡೀ ಸಮಾಜದ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ ಕೋಮು ದ್ವೇಷದತ್ತ ಪ್ರಕರಣವನ್ನು ಹೊರಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದಿದ್ದಾರೆ.