HomeAgricultureಹಸಿರು ಬಿತ್ತಲು ಅರಣ್ಯ ಇಲಾಖೆ ಸಿದ್ಧ

ಹಸಿರು ಬಿತ್ತಲು ಅರಣ್ಯ ಇಲಾಖೆ ಸಿದ್ಧ

Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ಶುದ್ಧ ಹಬೆಯ ತಾಣ, ಔಷಧೀಯ ಸಸ್ಯಗಳ ತವರೂರು ಕಪ್ಪತ್ತಗುಡ್ಡದಲ್ಲಿ ಸಸ್ಯಗಳನ್ನು ನೆಡಲು ಮತ್ತು ಗದಗ ಜಿಲ್ಲೆಯನ್ನು ಆಮ್ಲಜನಕದ ಬುಗ್ಗೆಯಾಗಿಸಲು ಜಿಲ್ಲಾ ಅರಣ್ಯ ಅಧಿಕಾರಿಗಳು ಮತ್ತು ಮುಂಡರಗಿ ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಸಿದ್ಧರಾಗಿದ್ದಾರೆ. ಈ ಬಾರಿ ಕಕ್ಕುರ ನರ್ಸರಿಯಲ್ಲಿ 1 ಲಕ್ಷ ಗಿಡಗಳನ್ನು ಕಪ್ಪತ್ತಗುಡ್ಡದಲ್ಲಿ ನೆಡುವ ಹಾಗೂ 55 ಸಾವಿರ ಗಿಡಗಳನ್ನು ರೈತರಿಗೆ ವಿತರಿಸಲು ಮುಂದಾಗಿದ್ದು, ಪರಿಸರ ಉಳಿಸಿ ಬೆಳೆಸಲು ಸನ್ನದ್ಧರಾಗಿದ್ದಾರೆ.

ವಿತರಣೆಗೆ ಸಸಿಗಳನ್ನು ಸಿದ್ದಪಡಿಸಲು ಇಲಾಖೆ ತಿಂಗಳುಗಟ್ಟಲೆ ಶ್ರಮಿಸುತ್ತದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ವತಃ ಕಾಳಜಿ ವಹಿಸಿ, ಮೊದಲು ಗೊಬ್ಬರ, ಮರಳು ಮತ್ತು ಕೆಂಪು ಮಣ್ಣನ್ನು ಸಂಯೋಜಿಸಿ, ಸಸ್ಯಗಳ ಬೆಳವಣಿಗೆಗೆ ಪೂರಕ ಮಾಧ್ಯಮವನ್ನು ತಯಾರಿಸುತ್ತಾರೆ. ಈ ಪ್ರಕ್ರಿಯೆ ಒಂದು ವರ್ಷ ಸಮಯ ತೆಗೆದುಕೊಳ್ಳುತ್ತದೆ. ಬೀಜಗಳನ್ನು ಸಾಮಾನ್ಯವಾಗಿ ಜನೇವರಿ ಮತ್ತು ಮಾರ್ಚ್ ನಡುವೆ 4*6 ಇಂಚಿನ ಚೀಲಗಳಲ್ಲಿ ನೆಡಲಾಗುತ್ತದೆ. ಅವು ಮೊಳಕೆಯೊಡೆದ ನಂತರ ಸಾಮಾನ್ಯವಾಗಿ ಜೂನ್‌ನಲ್ಲಿ ಅವುಗಳನ್ನು ದೊಡ್ಡ ಚೀಲಗಳಿಗೆ ಸ್ಥಳಾಂತರಿಸಲಾಗುತ್ತದೆ. ಒಂದು ವರ್ಷದ ನಂತರ ಸಸಿಗಳು ನಾಟಿ ಮಾಡಲು ಸಿದ್ಧವಾಗಿರುತ್ತವೆ.

ರೈತರಿಗೆ ವಿತರಿಸುವ ಉದ್ದೇಶದಿಂದ 55 ಸಾವಿರ ಸಸಸಿಗಳನ್ನು ಸಿದ್ಧಪಡಿಸಲಾಗಿದ್ದು, ಸಾಗವಾನಿ, ಮಹಾಗನಿ, ಸೀತಾಫಲ, ಕರಿಬೇವು, ನುಗ್ಗೆ, ಲಿಂಬೆ, ಬಿದಿರು, ನೇರಳೆ, ನೆಲ್ಲೆ, ಮಾವು ಸಸಿಗಳನ್ನು ಒಳಗೊಂಡಿವೆ. 6*9 ಚೀಲದಲ್ಲಿ ಬೆಳೆಸಿದ ಒಂದು ಸಸಿಗೆ 3 ರೂ, 8*12 ಚೀಲದಲ್ಲಿ ಬೆಳೆಸಿದ ಒಂದು ಸಸಿಗೆ 6 ರೂ ಅರಣ್ಯ ಇಲಾಖೆಗೆ ಭರಿಸುವುದರ ಮೂಲಕ ಸಸಿಗಳನ್ನು ಪಡೆದುಕೊಳ್ಳಬೇಕಾಗುತ್ತದೆ.

ಕಪ್ಪತ್ತಗುಡ್ಡ, ಶಾಲೆ, ಸರಕಾರಿ ಜಾಗೆಗಳಲ್ಲಿ ಅರಳಿ, ಆಲ, ಹತ್ತಿ, ಇಲಾಚಿ, ನೆರಳೆ, ಹೊಂಗೆ, ತಪಸ್ಸಿ, ಬಿಳಿಮತ್ತಿ, ಕಮರ, ಸೋನಾಡಾ, ಬೇವು, ಸೀತಾಫಲ, ಶಿವನಿ, ಭಾಗ್ಯ ಅಲ್ಲದೆ, ತಬೆಬುಯಾ, ಅರ್ಜೆಂಟೀಯಾ, ಭಾರತೀಯ ಕಹಳೆ ಮರ, ಚಂಪಕ್ ಸಸಿಗಳೂ ಸೇರಿದಂತೆ ವಿವಿಧ ಜಾತಿಯ 1 ಲಕ್ಷ ಸಸಿಗಳು ಸಿದ್ಧವಾಗಿವೆ.
ಸರಳವಾಗಿ ಸಸಿ ನೆಡುವುದು ಪ್ರಯೋಜನಕಾರಿಯಲ್ಲ. ಮಳೆ, ಗಾಳಿ, ಮೇಯಿಸುವ ದನಕರುಗಳಿಂದ ಅಪಾಯಕ್ಕೆ ಒಳಗಾಗುತ್ತವೆ. ಹಿರಿಯ ಅರಣ್ಯ ಅಧಿಕಾರಿಗಳ ಸಲಹೆ-ಸೂಚನೆಯ ಮೇರೆಗೆ ಸಸಿಗಳನ್ನು ನಮ್ಮ ನರ್ಸರಿಯಲ್ಲಿ ಬೆಳೆಸುವ ಮೂಲಕ ಅವು ಒಂದು ನಿರ್ದಿಷ್ಟ ಎತ್ತರಕ್ಕೆ ಬೆಳೆದು ನಿಲ್ಲುವವರೆಗೆ ನಾವು ಅವುಗಳನ್ನು ನೋಡಿಕೊಳತ್ತೇವೆ. ನಂತರವಷ್ಟೇ ಅವುಗಳನ್ನು ತಮ್ಮ ಜಮೀನುಗಳಲ್ಲಿ ನೆಡಲು ಮುಂದಾಗಬೇಕು ಎಂದು ಹೇಳುತ್ತಾರೆ ಮುಂಡರಗಿ ವಲಯ ಅರಣ್ಯ ಅಧಿಕಾರಿ ವೀರೇಂದ್ರ ಮರಿಬಸಣ್ಣವರ.

ಪ್ರಸ್ತುತ ದಿನಗಳಲ್ಲಿ ನಗರವಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲಿಯೂ ಅತಿಯಾದ ಮಾಲಿನ್ಯದಿಂದ ವಾತಾವರಣದ ತಾಪಮಾನ ಹೆಚ್ಚುತ್ತಾ ಹೋಗುತ್ತಿದೆ. ಇದರ ತಡೆಗೆ ಪ್ರತಿಯೊಬ್ಬರು ಮುಂದಾಗಬೇಕಾಗಿದೆ.

ಇಲ್ಲವಾದರೆ ಗಿಡಗಳ ಪ್ರಮಾಣ ಕಡಿಮೆಯಾದಂತೆ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ.

ಇದರಿಂದ ವಾತಾವರಣದಲ್ಲಿ ಪ್ರತಿಕೂಲ ಪರಿಣಾಮ ಬೀರುವುದರ ಮೂಲಕ ವಾಯುಮಾಲಿನ್ಯ, ಮಳೆ ಪ್ರಮಾಣ ಕಡಿಮೆಯಾಗಿ ಬರಗಾಲ, ಶುದ್ಧ ನೀರಿಗಾಗಿ ಪರದಾಟ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದ್ದು, ಪ್ರತಿಯೊಬ್ಬರೂ ಎಚ್ಚೆತ್ತು ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟು ಪರಿಸರದ ಕಾಳಜಿಯನ್ನು ತೋರಿಸಲು ಸನ್ನದ್ಧವಾಗಬೇಕಾಗಿದೆ. ಸಸಿಗಳನ್ನು ಪಡೆದುಕೊಳ್ಳಲು ಅರಣ್ಯಾಧಿಕಾರಿಗಳಾದ ಸಂತೋಷ ಕಗದಾಳ (8762073359), ಕುಮಾರ ಪೂಜಾರ (8277503451) ಇವರನ್ನು ಸಂಪರ್ಕಿಸಬಹುದಾಗಿದೆ.

ಪರಿಸರ ಸಮತೋಲನ, ತಾಪಮಾನ ನಿಯಂತ್ರಿಸಲು, ಕಾಲ ಕಾಲಕ್ಕೆ ಮಳೆಯಾಗಲು ಆಮ್ಲಜನಕ ನೀಡುವ ಏಕೈಕ ಫ್ಯಾಕ್ಟರಿ ಗಿಡಗಳು. ಅವುಗಳ ಉಳಿವಿಗಾಗಿ ಪ್ರತಿಯೊಬ್ಬರೂ ಪಣ ತೊಡಬೇಕಿದೆ. ಈ ದಿಸೆಯಲ್ಲಿ ನಮ್ಮೆಲ್ಲರ ಕರ್ತವ್ಯ ಎಂದರೆ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದು, ಪರಿಸರವನ್ನು ವೃದ್ಧಿಸುವುದು, ಪರಿಸರ ಉಳಿಸುವುದು.
– ವೀರೇಂದ್ರ ಮರಿಬಸಣ್ಣವರ.
ವಲಯ ಅರಣ್ಯ ಅಧಿಕಾರಿ-ಮುಂಡರಗಿ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!