ಹೇಮಾ ಕಮಿಟಿ ಸಲ್ಲಿಸಿದ ವರದಿ ಈಗ ಮಾಲಿವುಡ್ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಕೆಲವು ದಿನಗಳ ಹಿಂದಷ್ಟೇ ಸರ್ಕಾರಕ್ಕೆ ಸಲ್ಲಿಕೆಯಾದ ಜಸ್ಟಿಸ್ ಹೇಮಾ ಕಮಿಟಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಹಾಗೂ ದೇಶದ ತುಂಬಾ ದೊಡ್ಡ ಚರ್ಚೆಗೆ ಗುರಿಯಾಗಿದೆ. ನಟರು ಹಾಗೂ ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ (ಅಮ್ಮ) ಅಧ್ಯಕ್ಷ ಸ್ಥಾನಕ್ಕೆ ನಟ ಮೋಹನ್ ಲಾಲ್ ರಾಜೀನಾಮೆ ನೀಡಿದ್ದಾರೆ. ಅಮ್ಮ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.
ಮಲಯಾಳಂ ಉದ್ಯಮದಲ್ಲಿ ಮಹಿಳಾ ವೃತ್ತಿಪರರಿಗೆ ಲೈಂಗಿಕ ಕಿರುಕುಳ ಮತ್ತು ನಿಂದನೆ ಬಗ್ಗೆ ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿ ಬೆಳಕು ಚೆಲ್ಲಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲಾಗಿದೆ. ವರದಿ ಬೆಳಕಿಗೆ ಬಂದ ಬೆನ್ನಲ್ಲೇ ಚಿತ್ರರಂಗದಲ್ಲಿ ಆಕ್ರೋಶದ ಕಟ್ಟೆಯೊಡೆದಿದೆ. ಆರೋಪಗಳಲ್ಲಿ ಭಾಗಿಯಾದವರ ವಿರುದ್ಧ ಕ್ರಮಕ್ಕಾಗಿ ಒತ್ತಡ ಕೇಳಿಬಂದಿದೆ.
‘ಅಮ್ಮ’ ಆಡಳಿತ ಸಮಿತಿಯು ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಲಾಗಿದೆ ಎಂದು ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದೆ. “ಹೇಮಾ ಸಮಿತಿಯ ವರದಿ ಬಿಡುಗಡೆಯಾದ ನಂತರ ಸಾಮಾಜಿಕ-ದೃಶ್ಯ-ಮುದ್ರಿತ ಮಾಧ್ಯಮಗಳಲ್ಲಿ ‘ಅಮ್ಮ’ ಸಂಸ್ಥೆಯ ಆಡಳಿತ ಸಮಿತಿಯ ಕೆಲವು ಪದಾಧಿಕಾರಿಗಳು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ, ‘ಅಮ್ಮ’ ಆಡಳಿತ ಸಮಿತಿ ನೈತಿಕ ಹೊಣೆಗಾರಿಕೆಯ ಆಧಾರದಲ್ಲಿ ರಾಜೀನಾಮೆ ನೀಡಿದೆ ಎಂದು ತಿಳಿಸಿದೆ.
ಮಾಲಿವುಡ್ ಅಂಗಳದಲ್ಲಿ ದೊಡ್ಡ ದೊಡ್ಡ ನಟ, ನಿರ್ದೇಶಕರಿಂದಲೇ ಉದಯೋನ್ಮುಖ ಹಾಗೂ ಈಗಾಗಲೇ ಚಾಲ್ತಿಯಲ್ಲಿರುವ ನಟಿಯರಿಗೆ ಲೈಂಗಿಕ ಕಿರುಕುಳಗಳು ನಡೆಯುತ್ತಿವೆ ಅನ್ನೋ ಸಂಶಯದ ಜಾಡು ಹಿಡಿದು ಹೊರಟಿದ್ದ ಕೇರಳ ಸರ್ಕಾರ, ಜಸ್ಟಿಸ್ ಹೇಮಾ ಅವರ ನೇತೃತ್ವದಲ್ಲಿ ಒಂದು ಕಮಿಟಿ ರಚನೆ ಮಾಡಿ ವರದಿ ಸಲ್ಲಿಸುವಂತೆ ಹೇಳಿತ್ತು. ಅದರನ್ವಯ ಜಸ್ಟಿಸ್ ಹೇಮಾ ಹಾಗೂ ತಂಡ ವಿವರವಾದ ಮಾಹಿತಿ ಕಲೆ ಹಾಕಿ, ಕೇಳಿ ಬಂದಿರುವ ಆರೋಪ ನೂರಕ್ಕೆ ನೂರು ಸತ್ಯ ಎಂಬ ಅಂಶವನ್ನೊಳಗೊಂಡ 290 ಪುಟಗಳ ವರದಿಯನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಸಲ್ಲಿಕೆ ಮಾಡಿತ್ತು.